Friday, 3 July 2020

ಆಗಸ್ಟ್ 20, 2020 ಗುರುವಾರ

ಆಗಸ್ಟ್ 20, 2020 ಗುರುವಾರ                        [ಬಿಳಿ]
ಸಂತ ಬರ್ನಾರ್ಡ್ [ಮಠಾಧಿಪತಿ / ಧರ್ಮಪಂಡಿತ] (ಸ್ಮರಣೆ)
ಮೊದಲ ವಾಚನ: ಯೆಜೆಕಿಯೇಲ 36.23-28
ಕೀರ್ತನೆ 51:12-13, ಶ್ಲೋಕ.ಯೆಜೆಕಿಯೆಲ್ 36:25
ಹಿಸ್ಸೋಪಿನಿಂದ ನೀ ಚಿಮುಕಿಸೆ ನಾ ಶುದ್ಧನಾಗುವೆ
ಶುಭಸಂದೇಶ: ಮತ್ತಾಯ 22.1-14

ಯೆಜೆಕಿಯೇಲ 36.23-28 23 : ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ. 24 : ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು. 25 : ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. 26 : ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. 27 : ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ. 28 : ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.


ಕೀರ್ತನೆ 51:12-13, ಶ್ಲೋಕ.ಯೆಜೆಕಿಯೆಲ್ 36:25 ಹಿಸ್ಸೋಪಿನಿಂದ ನೀ ಚಿಮುಕಿಸೆ ನಾ ಶುದ್ಧನಾಗುವೆ 12 : ಜೀವೋದ್ಧಾರವನು ಮರಳಿ ಸವಿಯುವಂತೆ ಮಾಡು / ವಿಧೇಯನಾಗಿ ನಡೆವ ಸಿದ್ಧ ಮನಸ್ಸನು ನೀಡು // 13 : ಬೋಧಿಸುವೆನಾಗ ನಿನ್ನ ಮಾರ್ಗವನು ದುರುಳರಿಗೆ / ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ // 14 : ತಪ್ಪಿಸೆನ್ನನು ಸ್ವಾಮಿ ದೇವಾ, ರಕ್ತಾಪರಾಧದಿಂದ / ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತ ಕಂಠದಿಂದ // 15 : ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು / ಸಾರುವುದೆನ್ನ ಬಾಯಿ ನಿನ್ನ ನುಡಿಗಳನು // 18 : ಸಿಯೋನಿಗೆ ದೇವಾ, ಶುಭವನು ಕರುಣಿಸು / ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು // 19 : ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು / ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು //

ಮತ್ತಾಯ 22.1-14 1 : ಯೇಸುಸ್ವಾಮಿ ಮತ್ತೆ ಅವರೊಡನೆ ಸಾಮತಿಗಳಲ್ಲೇ ಮಾತನಾಡಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ; 2 : ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ. 3 : ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ. 4 : ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿ ಕಳುಹಿಸಿದ. 5 : ಆದರೂ ಆಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟು ಹೋದ. 6 : ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದು ಹಾಕಿದರು. 7 : ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ. 8 : ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು. 9 : ನೀವು ಹೆದ್ದಾರಿಗಳಿಗೆ ಹೋಗಿ ಕಂಡ ಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ. 10 : ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು. 11 : “ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ. 12 : ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ. 13 : ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ. 14 : “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ.

ಸ್ವರ್ಗವು ನಿಷ್ಕಪಟವಿಲ್ಲದ ಸರ್ವರಿಗೂ ತೆರೆದಿರುವ ಸಾಮ್ರಾಜ. ಅದರ ಪ್ರವೇಶಕ್ಕೆ ಸರ್ವರಿಗೂ ಆಮಂತ್ರಣವಿದೆ ಆದರೆ ಅದನ್ನು ಪ್ರವೇಶಿಸಿ ಅದರ ಔತಣಕೂಟದಲ್ಲಿ ಭಾಗಿಯಾಗುವ ಯೋಗ್ಯತೆಯನ್ನು ಪಡೆದಿರಬೇಕಾಗುತ್ತದೆ. ನಮ್ಮ ಯೋಗ್ಯತೆಯು ನಾವು ಜೀವಿಸುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಪ್ರತಿಯೊಂದು ಸ್ಥಳಕ್ಕೆ ಅದಕ್ಕೆ ತಕ್ಕಂತೆ ನಾವು ಉಡುಗೆಯನ್ನು ಉಡುತ್ತೇವೆ. ಅದರಂತೆ ಸ್ವರ್ಗ ಪ್ರವೇಶಿಸಲು ಅದರದ್ದೇ ಉಡುಪನ್ನು ನಾವು ತೊಟ್ಟುಕೊಳ್ಳಬೇಕಾಗುತ್ತದೆ. ಅದೇ ಪರಿಶುದ್ದತೆಯ ಉಡುಪು. ಪಾಪ-ಕಲ್ಮಶ ತುಂಬಿದ ಮನಸ್ಸಿನಿಂದ ಅದನ್ನು ಪ್ರವೇಶಿಸಲು ಸಾದ್ಯವಾಗುವುದಿಲ್ಲ. ಎಲ್ಲಾ ಪಾಪ ಕೃತ್ಯಗಳನ್ನೂ ತೊರೆದು ಪರಿಶುದ್ದತೆಯ ಉಡುಪನ್ನು ತೊಡಬೇಕು. ಪಾಪಕ್ಕೆ ಪಶ್ಚಾತ್ತಾಪವಿಲ್ಲದೆ ಪರಿಶುದ್ದತೆ ಸಾದ್ಯವಿಲ್ಲ. ಪಶ್ಚಾತ್ತಾಪ ಪಡದೆ ಗರ್ವದಿಂದ ವರ್ತಿಸುವ ವ್ಯಕ್ತಿಗಳನ್ನು ಹಿಡಿದು ಕತ್ತಲೆಯ ಕೋಣೆಗೆ ದಬ್ಬಲಾಗುವುದು. ದೇವರು ನಮ್ಮನ್ನು ಪಾಪದಿಂದ ತೊಳೆದು ಶುದ್ದ ಮಾಡಲು ಸಿದ್ದರಾಗಿದ್ದಾರೆ. ಪಶ್ಚಾತ್ತಾಪದಿಂದ ನಮ್ಮ ಮನದ ಕೊಳಕು ವಸ್ತ್ರವನ್ನು ತೊಳೆದು ಪವಿತ್ರ ಮನಸ್ಸಿನಿಂದ ಯೋಗ್ಯ ರೀತಿಯಲ್ಲಿ ಸ್ವರ್ಗ ಸಾಮ್ರಾಜ್ಯದ ಔತಣದಲ್ಲಿ ಪಾಲ್ಗೊಳ್ಳಲು ಅಣಿಯಾಗೋಣ.

No comments:

Post a Comment