Thursday, 2 July 2020

ಆಗಸ್ಟ್ 2, 2020 ಭಾನುವಾರ

ಆಗಸ್ಟ್ 2, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 18ನೇ ಭಾನುವಾರ
ಮೊದಲ ವಾಚನ: ಯೆಶಾಯ 55.1-3
ಕೀರ್ತನೆ 145: 8-9, 16-17, 18-19. ಶ್ಲೋಕ.17
ಪ್ರಭೂ, ನೀ ಕೈನೀಡಿ ಎಲ್ಲರ ಕೋರಿಕೆಗಳನ್ನು ಈಡೇರಿಸುತ್ತಿ
ಎರಡನೇ ವಾಚನ: ರೋಮನರಿಗೆ 8.35, 37-39
ಶುಭಸಂದೇಶ: ಮತ್ತಾಯ 14.13-21


ಯೆಶಾಯ 55.1-3
1 : ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದು ಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ.
2 : ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು.
3 : ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ.

ಕೀರ್ತನೆ 145: 8-9, 16-17, 18-19. ಶ್ಲೋಕ.17
ಪ್ರಭೂ, ನೀ ಕೈನೀಡಿ ಎಲ್ಲರ ಕೋರಿಕೆಗಳನ್ನು ಈಡೇರಿಸುತ್ತಿ
8 : ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
9 : ಪ್ರಭುವಿನ ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ
15 : ಎತ್ತುವನಾತ ಬಿದ್ದವರನೆಲ್ಲ / ಉದ್ಧರಿಪನು ಕುಗ್ಗಿದವರನೆಲ್ಲ
16 : ಎಲ್ಲ ಜೀವಿಗಳ ಕಣ್ಣು ಪ್ರಭು, ನಾಟಿವೆ ನಿನ್ನ ಕಡೆಗೆ / ಕಾಲಕಾಲಕೆ ಕೊಡುವೆ ಆಹಾರವನು ಅವುಗಳಿಗೆ
17 : ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು / ಎಲ್ಲರ ಕೋರಿಕೆಗಳನು ಈಡೇರಿಸುವವನು
18 : ಪ್ರಭುವಿನ ಮಾರ್ಗ ಧರ್ಮಸಮ್ಮತ / ಆತನ ಕಾರ್ಯವೆಲ್ಲ ಪುನೀತ

ರೋಮನರಿಗೆ 8.35, 37-39
35 : ಕ್ರಿಸ್ತಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ? ಕಷ್ಟ-ಸಂಕಟ, ಇಕ್ಕಟ್ಟು-ಬಿಕ್ಕಟ್ಟು, ಹಿಂಸೆ ಬಾಧೆ ಇವುಗಳಿಂದ ಸಾಧ್ಯವೆ? ಇಲ್ಲ. ಹಸಿವು ನೀರಡಿಕೆ, ನಗ್ನಸ್ಥಿತಿ, ಆಪತ್ತು-ವಿಪತ್ತು, ಖಡ್ಗ-ಕಠಾರಿಗಳಿಂದ ಸಾಧ್ಯವೆ? ಎಂದಿಗೂ ಇಲ್ಲ.
37 : ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.
38 : ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ, ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ತೋರಿಬಂದ ದೈವಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು.
39 : ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಸೃಷ್ಟಿಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದು ನಿಶ್ಚಯ.

ಮತ್ತಾಯ 14.13-21
13 : ಈ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನ ಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು.
14 : ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹ ಆಗಲೇ ಅಲ್ಲಿ ಸೇರಿತ್ತು. ಆ ಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು.
15 : ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, "ಇದು ನಿರ್ಜನ ಪ್ರದೇಶ. ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ." ಎಂದರು.
16 ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು.
17 : ಶಿಷ್ಯರು ಪ್ರತ್ಯುತ್ತರವಾಗಿ, "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ," ಎಂದರು.
18 : ಯೇಸು, "ಅವನ್ನು ಇಲ್ಲಿಗೆ ತನ್ನಿ," ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು.
19 : ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು.
20 : ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು.
21 : ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು. 

=======================
ಸಾಧಾರಣ ಕಾಲದ 18ನೇ ಭಾನುವಾರ
======================= 
ಪೀಠಿಕೆ
=======

"ಆಧ್ಯಾತ್ಮಿಕ ಹಸಿವು ನೀಗಿಸಿಕೋಳ್ಳೋಣವೇ?"

ಇತ್ತಿಚಿನ ದಿನಗಳಲ್ಲಿ ನಾವು ಬೆವರು ಸುರಿಸಿ ದುಡಿದು ತಂದ ಆಹಾರ ನಮ್ಮ ದೈಹಿಕ ಹಾಗೂ ಮಾನಸಿಕ ಜೀವನಕ್ಕೆ ತೃಪ್ತಿ ನೀಡುತ್ತಿಲ್ಲ. ಮನುಷ್ಯ ಕೇವಲ ದೈಹಿಕ ಮತ್ತು ಮಾನಸಿಕವಾಗಿ ಮಾತ್ರ ಜೀವಿಸುವುದಿಲ್ಲ. ಎಲ್ಲಕ್ಕಿಂತಲೂ ಮಿಗಿಲಾದುದು ಇನ್ನೊಂದಿದೆ ಅದೇ "ಆಧ್ಯಾತ್ಮಿಕ ಜೀವನ". ಈ ವಾರದ ದೈವಾರಾಧನಾ ವಿಧಿಯು ನಮ್ಮ "ಆಧ್ಯಾತ್ಮಿಕ" ಜೀವನವನ್ನು ನವೀಕರಿಸಿಕೋಳ್ಳಲು ನಮ್ಮನ್ನು ಆಹ್ವಾನಿಸುತ್ತದೆ. ಬಾಯಾರಿದ ಜಿಂಕೆಯಂತೆ, ಪ್ರಭು ಯೇಸು ನೀಡುವ ಈ ಆಧ್ಯಾತ್ಮಿಕ ಔತಣದಲ್ಲಿ ಭಕ್ತಿಯುತವಾಗಿ ಪಾಲ್ಗೊಳ್ಳುತ್ತ ನಮ್ಮ ಬಾಯಾರಿಕೆ ಹಾಗೂ ಹಸಿವನ್ನು ನೀಗಿಸಿಕೊಳ್ಳುವ.

ಮೊದಲನೆಯ ವಾಚನ ಯೆಶಾಯ 55:1-3
=========================

ಮಾನವರ ಜೊತೆ "ಚಿರವಾದ ಒಡಂಬಡಿಕೆ"ಯನ್ನು ಮಾಡಿಕೊಳ್ಳಲು ಇಂದಿನ ಮೊದಲನೆಯ ವಾಚನದಲ್ಲಿ ದೇವರು ಕರೆ ನೀಡುತ್ತಿದ್ದಾರೆ. ನಾವು ಈ ಒಡಂಬಡಿಕೆಯಲ್ಲಿ ಸ್ಥಿರವಾಗಿ ಬಾಳಬೇಕೆಂಬುದೇ ದೇವರ ಚಿತ್ತವಾಗಿದೆ. ಒಡಂಬಡಿಕೆಯ ಷರತ್ತು "ಆತನ ಮಾತಿಗೆ" ಕಿವಿಗೊಡುವುದು. ನಾವು ಆತನಿಗೆ ಕಿವಿಗೊಟ್ಟರೆ ಮೃಷ್ಟಾನ್ನ ಭೋಜನ ಸವಿಯುತ್ತ ಬದುಕಿ ಬಾಳುವೆವು ಆತನೊಂದಿಗೆ ಅನವರತ.

ಎರಡನೆಯ ವಾಚನ ರೋಮನರಿಗೆ 8:35, 37-39
===============================

ಕ್ರಿಸ್ತನ ಪ್ರೀತಿ ಎಷ್ಟೊಂದು ಅಗಾಧವಾದುದು ಎಂದರೆ ನಮ್ಮ ಊಹೆಗೂ ಅದು ನಿಲುಕದು. ದೇವರ ಆ ಪ್ರೀತಿಯಿಂದ ಈ ಸೃಷ್ಟಿ ಸಮಸ್ತದ ಯಾವ ಶಕ್ತಿಯೂ ಕೂಡ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನಾವು ಕ್ರಿಸ್ತನ ಪ್ರೀತಿಯಿಂದಲೇ ಸರ್ವವನ್ನು ಸಂಪೂರ್ಣವಾಗಿ ಜಯಿಸಬಹುದಾಗಿದೆ. ಆತನ ಪ್ರೀತಿ ನಮ್ಮೊಂದಿಗೆ ಇದ್ದರೆ ನಾವು ಎಲ್ಲ ಕಷ್ಟ ಸಂಕಷ್ಟಗಳಿಂದ ಪಾರಾಗಿ ಪಾವನರಾಗುವೆವು ಎಂದು ಸಂತ ಪೌಲನು ಹೇಳುತ್ತಾನೆ.

ಶುಭಸಂದೇಶ ಮತ್ತಾಯ 14: 13-21
======================

ಜನರು ಪ್ರಭುವನ್ನು ಹುಡುಕಿಕೊಂಡು ಹೊರಟ್ಟಿದ್ದರು. ಕಾರಣ ಪ್ರಾಪಂಚಿಕ ವಿಷಯಗಳಿಗಿಂತ ಮಿಗಿಲಾದುದು ಪ್ರಭುವಿನಲ್ಲಿದೆ ಎಂದು ಅವರು ಅರಿತಿದ್ದರು. ಆತನೇ ನಮ್ಮ ಜೊತೆಗಿದ್ದರೆ ಸಾಕು ನಮಗೆ ಮತ್ತೆನೂ ಬೇಕಿಲ್ಲ ಎನ್ನುತ್ತ ಪ್ರಭುವನ್ನು ಹುಡುಕುತ್ತ ಅವರು ಬಂದಿದ್ದರು. "ಹುಡುಕಿರಿ, ನಿಮಗೆ ಸಿಗುವುದು" ಎಂಬ ಮಾತಿಗಣುಗುಣವಾಗಿ ಜನರು ಯೇಸುವನ್ನು ಹುಡುಕಿ "ಅವರೇ ನಮ್ಮ ಆಧ್ಯಾತ್ಮಿಕ ಆಹಾರ" ಎಂದು ಮನಗಾಣುವುದನ್ನು ಇಂದಿನ ಶುಭಸಂದೇಶದಲ್ಲಿ ನಾವು ಕೇಳುತ್ತೇವೆ. ಪ್ರಭು ಯೇಸು ಅಂದು ನೀಡಿದ ಈ ಆಧ್ಯಾತ್ಮಿಕ ಆಹಾರವನ್ನು ಭುಜಿಸಿದವರೆಲ್ಲರೂ ತೃಪ್ತಿ ಹೊಂದಿದ್ದರು. ಪವಿತ್ರ ಪರಮಪ್ರಸಾದವೇ ನಮ್ಮ ಆಧ್ಯಾತ್ಮಿಕ ಆಹಾರ. ಈ ಆಹಾರ ನಮ್ಮ ಜೀವನಕ್ಕೆ ಅತಿ ಅವಶ್ಯವೆಂಬುದನ್ನು ನಾವೆಲ್ಲ ಅರಿಯ ಬೇಕಾಗಿದೆ.

2016ರಲ್ಲಿ ಪ್ರಖ್ಯಾತ ಪ್ರಬೋಧಕ ಬೆನ್ನಿ ಹಿನ್ನ್ ಹೇಳಿದ ಮಾತುಗಳು: ಪ್ರತಿನಿತ್ಯ ಕಥೋಲಿಕ ಧರ್ಮಸಭೆಯವರು ಅರ್ಪಿಸುವ ಬಲಿಪೂಜೆಗಳಲ್ಲಿ ಹಲವಾರು ಅಧ್ಬುತಗಳು, ಪವಾಡಗಳು ಆಗುತ್ತಿವೆ.. ಸಂಶೋಧನೆಯ ಪ್ರಕಾರ ಸಾಕ್ಷಾತ್ ಪ್ರಭುಯೇಸುವಿನ ಪ್ರಸನ್ನತೆ ಆ ಪವಿತ್ರ ಪರಮಪ್ರಸಾದದಲ್ಲಿ ಅಡಕವಾಗಿದೆ. ಪರಮಪ್ರಸಾದವನ್ನು ಭಕ್ತಿಯಿಂದ, ವಿಶ್ವಾಸದಿಂದ ಸ್ವೀಕರಿಸುವ ಪ್ರತಿಯೊಬ್ಬರು ಆಧ್ಯಾತ್ಮಿಕವಾಗಿ ಗುಣಹೊಂದುತ್ತಾರೆ.

ಅಂದು ಪ್ರಭುವನ್ನು ಹುಡುಕಿಕೊಂಡು ಬಂದ ಜನರು ಆಧ್ಯಾತ್ಮಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಗುಣ ಹೊಂದಿದರು. ಆ ಪ್ರಭು ಯೇಸು ನಮ್ಮನ್ನು ಪ್ರತಿನಿತ್ಯ ಪ್ರತಿಕ್ಷಣ ಕೈಚಾಚಿ ಕರೆಯುತ್ತಿದ್ದಾರೆ. ನಮಗೆ ಆಧ್ಯಾತ್ಮಿಕ ಸ್ವಾಸ್ಥ್ಯ ನೀಡಲು, ದೈಹಿಕವಾಗಿ ಬಲಪಡಿಸಲು, ಮಾನಸಿಕವಾಗಿ ಮೇಲೆತ್ತಲು ಆಹ್ವಾನಿಸುತ್ತಿರುವರು.

• ಕ್ರೈಸ್ತರಾದ ನಾವು ಎಷ್ಟರ ಮಟ್ಟಿಗೆ ಪವಿತ್ರ ಪರಮಪ್ರಸಾದವನ್ನು ವಿಶ್ವಾಸದಿಂದ ಸ್ವೀಕರಿಸಿದ್ದೇವೆ?

• ನಮ್ಮ ಆಧ್ಯಾತ್ಮಿಕ ಜೀವನ ಬಲವಾಗಿದೆಯೇ?

• ಇನ್ನು ಮುಂದೆಯಾದರೂ ನಮ್ಮ ಆಧ್ಯಾತ್ಮಿಕ ಹಸಿವನ್ನು ನಾವು ನೀಗಿಸಿಕೋಳ್ಳೋಣವೇ?

===============================
ಚಿಂತನೆ – ಫಾ . ದೀಪಕ್ (ಮೌಂಟ್‍ಫೊರ್ಟ್)
==================================

No comments:

Post a Comment