ಆಗಸ್ಟ್ 3, 2020 ಸೋಮವಾರ [ಹಸಿರು]
ಮೊದಲ ವಾಚನ: ಯೆರೆಮೀಯ 28.1-17
ಕೀರ್ತನೆ 119:29, 43, 79-80, 95, 102 ಶ್ಲೋಕ.68
ಪ್ರಭೂ, ಬೋಧಿಸೆನಗೆ ನಿನ್ನ ನಿಬಂಧನೆಗಳನ್ನು
ಶುಭಸಂದೇಶ ಮತ್ತಾಯ 14.13-21 [ಅಥವಾ] ಮತ್ತಾಯ 14.22-36
ಯೆರೆಮೀಯ 28.1-17
1 : ಅದೇ ವರ್ಷದಲ್ಲಿ, ಅಂದರೆ ಜುದೇಯದ ಅರಸ ಚಿದ್ಕೀಯನ ಆಳ್ವಿಕೆಯಲ್ಲಿ ನಾಲ್ಕನೆಯ ವರ್ಷದ ಐದನೆಯ ತಿಂಗಳಲ್ಲಿ, ಪ್ರವಾದಿಯಾದ ಅಜ್ಜೂರನ ಮಗನು ಹಾಗು ಗಿಬ್ಯೋನ್ ಊರಿನವನು ಆದ ಹನನ್ಯನು ಸರ್ವೇಶ್ವರನ ಆಲಯದೊಳಗೆ ಬಂದು ಯಾಜಕರ ಮತ್ತು ಸಕಲ ಜನರ ಮುಂದೆ ನಿಂತು ನನಗೆ ಹೀಗೆ ಹೇಳಿದ –
2 : “ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ ಇದು: ‘ಬಾಬಿಲೋನಿಯದ ಅರಸನು ಹೇರಿರುವ ನೊಗವನ್ನು ಮುರಿದುಬಿಟ್ಟಿದ್ದೇನೆ.
3 : ಬಾಬಿಲೋನಿಯದ ಅರಸನಾದ ನೆಬೂಕದ್ನೆಚ್ಚರನು ಈ ಸ್ಥಳದಿಂದ ಬಾಬಿಲೋನಿಗೆ ಕೊಂಡು ಒಯ್ದ ಸರ್ವೇಶ್ವರನ ಆಲಯದ ಸಕಲ ಉಪಕರಣಗಳನ್ನು ಎರಡು ವರ್ಷಗಳೊಳಗಾಗಿ ನಾನು ಪುನಃ ಈ ಸ್ಥಳಕ್ಕೆ ಸೇರಿಸುವೆನು.
4 : ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಯೆಕೊನ್ಯನನ್ನು ಮತ್ತು ಬಾಬಿಲೋನಿಗೆ ಸೆರೆಹೋದ ಎಲ್ಲ ಯೆಹೂದ್ಯರನ್ನು ಈ ಸ್ಥಳಕ್ಕೆ ಮರಳಿ ಬರಮಾಡುವೆನು. ಇದು ಸರ್ವೇಶ್ವರನ ನುಡಿ.”
5 : ಆಗ ಪ್ರವಾದಿ ಯೆರೆಮೀಯನು ಸರ್ವೇಶ್ವರನ ಆಲಯದೊಳಗೆ ನಿಂತಿದ್ದ ಯಾಜಕರ ಮತ್ತು ಸಕಲ ಜನರ ಎದುರಿನಲ್ಲೆ ಪ್ರವಾದಿ ಹನನ್ಯನಿಗೆ:
6 : “ಆಮೆನ್! ಸರ್ವೇಶ್ವರ ಹಾಗೆಯೇ ಮಾಡಲಿ! ಸರ್ವೇಶ್ವರ ತಮ್ಮ ಆಲಯದ ಉಪಕರಣಗಳನ್ನೂ ಸೆರೆಹೋದವರೆಲ್ಲರನ್ನೂ ಬಾಬಿಲೋನಿನಿಂದ ಈ ಸ್ಥಳಕ್ಕೆ ಪುನಃ ಬರಮಾಡಲಿ. ನೀನು ನುಡಿದ ಮಾತುಗಳನ್ನು ನೆರವೇರಿಸಲಿ!
7 : ಆದರೆ ನಾನು, ನಿನ್ನ ಮತ್ತು ಸಕಲ ಜನರ ಕಿವಿಗೆ ಬೀಳುವಂತೆ ನುಡಿಯುವ ಈ ಮಾತನ್ನು ಗಮನಿಸು:
8 : ನನಗೂ ನಿನಗೂ ಹಿಂದೆ, ಪುರಾತನ ಕಾಲದಿಂದಿದ್ದ ಪ್ರವಾದಿಗಳು ಅನೇಕ ದೇಶಗಳಿಗೂ ದೊಡ್ಡ ದೊಡ್ಡ ರಾಜ್ಯಗಳಿಗೂ ಯುದ್ಧ, ಆಪತ್ತು-ವಿಪತ್ತು, ಕಾಯಿಲೆ-ಕಷ್ಟ, ಇಂಥವುಗಳನ್ನು ಸಾರುತ್ತಿದ್ದರು.
9 : ಹಿತಸಮಾಚಾರವನ್ನು ಸಾರುವ ಪ್ರವಾದಿಯೇ ಸರ್ವೇಶ್ವರನಿಂದ ನಿಜವಾಗಿ ಕಳಿಸಲ್ಪಟ್ಟವನೆಂದು ಅವನ ಮಾತು ಕೈಗೂಡಿದ ಮೇಲೆ ತಿಳಿಯತಕ್ಕದ್ದು,” ಎಂದು ಹೇಳಿದನು.
10 : ಆಗ ಪ್ರವಾದಿ ಹನನ್ಯನು ಪ್ರವಾದಿ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು ಮುರಿದುಹಾಕಿದನು.
11 : ನೆರೆದಿದ್ದ ಜನರೆಲ್ಲರ ಮುಂದೆ, “ಸರ್ವೇಶ್ವರನೇ ಹೇಳಿದ್ದಾರೆ – ಇದೇ ಪ್ರಕಾರ, ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಹೊರಿಸಿರುವ ನೊಗವನ್ನು ಇನ್ನೆರಡು ವರ್ಷದೊಳಗೆ ಸಮಸ್ತ ರಾಷ್ಟ್ರಗಳ ಹೆಗಲಿನಿಂದ ತೆಗೆದು ಮುರಿದು ಹಾಕಲಾಗುವುದು,” ಎಂದು ಹೇಳಿದನು. ಇದನ್ನು ಕೇಳಿದ ಪ್ರವಾದಿ ಯೆರೆಮೀಯನು ಅಲ್ಲಿಂದ ಹೊರಟುಹೋದನು. 12 : ಹೀಗೆ ಪ್ರವಾದಿ ಹನನ್ಯನು ಪ್ರವಾದಿ ಯೆರೆಮೀಯನ ಹೆಗಲಿನಿಂದ ನೊಗವನ್ನು ತೆಗೆದು, ಮುರಿದುಹಾಕಿದ ಮೇಲೆ ಸರ್ವೇಶ್ವರ ಯೆರೆಮೀಯನಿಗೆ ಹೀಗೆಂದರು
13 : “ನೀನು ಹೋಗಿ ಹನನ್ಯನಿಗೆ: ‘ಸರ್ವೇಶ್ವರ ಇಂತೆನ್ನುತ್ತಾರೆ - ನೀನು ಮರದ ನೊಗಗಳನ್ನು ಮುರಿದು ಬಿಟ್ಟಿರುವೆ. ಅವುಗಳಿಗೆ ಬದಲಾಗಿ ಕಬ್ಬಿಣದ ನೊಗಗಳನ್ನು ಮಾಡು.
14 : .ಏಕೆಂದರೆ ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರನ ಮಾತಿವು: ಈ ಎಲ್ಲ ರಾಷ್ಟ್ರಗಳು ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನಿಗೆ ಸೇವೆಮಾಡಲೆಂದು ನಾನು ಅವುಗಳ ಹೆಗಲಿಗೆ ಕಬ್ಬಿಣದ ನೊಗವನ್ನು ಹೇರಿದ್ದೇನೆ. ಅವು ಅವನಿಗೆ ಸೇವೆ ಸಲ್ಲಿಸೇತೀರಬೇಕು; ಕಾಡು ಮೃಗಗಳು ಕೂಡ ಸೇವೆಸಲ್ಲಿಸುವಂತೆ ಅವನಿಗೆ ಅವುಗಳನ್ನು ಒಪ್ಪಿಸಿದ್ದೇನೆ, ಎಂದು ಹೇಳು.”
15 : ಆಗ ಪ್ರವಾದಿ ಯೆರೆಮೀಯನು ಪ್ರವಾದಿ ಹನನ್ಯನಿಗೆ, “ಹನನ್ಯನೇ ಕೇಳು, ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ. ಆದರೂ ಈ ಜನರು ಸುಳ್ಳನ್ನು ನಂಬುವಂತೆ ಮಾಡುತ್ತಿರುವೆ.
16 : ಆದ ಕಾರಣ ಸರ್ವೇಶ್ವರ ಇಂತೆನ್ನುತ್ತಾರೆ: ಇಗೋ, ನಾನು ನಿನ್ನನ್ನು ಈ ಜಗತ್ತಿನಿಂದ ತೊಲಗಿಸುವೆನು. ನೀನು ಸರ್ವೇಶ್ವರನಾದ ನನಗೆ ವಿರುದ್ಧವಾಗಿ ದ್ರೋಹದ ಮಾತುಗಳನ್ನು ಆಡಿದ್ದರಿಂದ ಇದೇ ವರ್ಷ ಸಾಯುವೆ,” ಎಂದು ಹೇಳಿದನು.
17 : ಅಂತೆಯೇ ಹನನ್ಯನು ಅದೇ ವರ್ಷದ ಏಳನೆಯ ತಿಂಗಳಲ್ಲಿ ಸತ್ತುಹೋದನು.
ಕೀರ್ತನೆ 119:29, 43, 79-80, 95, 102 ಶ್ಲೋಕ.68
ಪ್ರಭೂ, ಬೋಧಿಸೆನಗೆ ನಿನ್ನ ನಿಬಂಧನೆಗಳನ್ನು
29 : ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ / ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ //
43 : ತೆಗೆಯಬೇಡ ನನ್ನ ಬಾಯಿಂದ ಸತ್ಯವನು / ನಂಬಿಕೊಂಡಿರುವೆ ನಿನ್ನ ನ್ಯಾಯವಿಧಿಯನು //
79 : ನನ್ನತ್ತ ಬರಲಿ ನಿನ್ನಲಿ ಭಯಭೀತಿಯುಳ್ಳವರು / ನಿನ್ನ ಕಟ್ಟಳೆಗಳನು ಆಗ ಕಲಿತುಕೊಳ್ಳುವರು
80 : ನಿನ್ನ ನಿಬಂಧನೆಗಳಲಿ ಸ್ಥಿರವಿದೆ ಎನ್ನ ಮನ / ನನಗೆ ಒದಗದು ಆಗ ಆಶಾಭಂಗ, ಅವಮಾನ //
95 : ಹೊಂಚುಹಾಕುತಿಹರು ದುರುಳರು ಸಂಹರಿಸಲೆನ್ನನು / ನಾನೋ ನಿನ್ನ ಕಟ್ಟಳೆಗಳನು ಲಕ್ಷಿಸುತ್ತಿರುವೆನು
102 : ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ / ನೀನೇ ನನಗದರ ಬೋಧನೆ ಮಾಡಿದ್ದರಿಂದ
ಮತ್ತಾಯ 14.13-21 [ಅಥವಾ] ಮತ್ತಾಯ 14.22-36
13 : ಈ ಸಮಾಚಾರವನ್ನು ಕೇಳಿದ ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು, ದೋಣಿಹತ್ತಿ ನಿರ್ಜನ ಪ್ರದೇಶಕ್ಕೆ ಒಬ್ಬಂಟಿಗರಾಗಿ ಹೊರಟರು. ಇದನ್ನು ತಿಳಿದುಕೊಂಡ ಜನರು ಊರೂರುಗಳಿಂದ ಹೊರಟು ಗುಂಪುಗುಂಪಾಗಿ ಅವರ ಹಿಂದೆಯೇ ಕಾಲ್ದಾರಿಯಲ್ಲಿ ನಡೆದುಹೋದರು.
14 : ಯೇಸು ದೋಣಿಯಿಂದ ಇಳಿದಾಗ, ದೊಡ್ಡ ಜನಸಮೂಹ ಆಗಲೇ ಅಲ್ಲಿ ಸೇರಿತ್ತು. ಆ ಸಮೂಹವನ್ನು ಕಂಡು ಅವರ ಮನ ಕರಗಿತು; ಅವರಲ್ಲಿ ಅಸ್ವಸ್ಥರಾಗಿದ್ದವರನ್ನು ಗುಣಪಡಿಸಿದರು.
15 : ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, "ಇದು ನಿರ್ಜನ ಪ್ರದೇಶ. ಈಗಾಗಲೇ ಹೊತ್ತು ಮೀರಿಹೋಗಿದೆ. ಜನಸಮೂಹವನ್ನು ಕಳುಹಿಸಿಬಿಡಿ, ಹಳ್ಳಿಪಳ್ಳಿಗಳಿಗೆ ಹೋಗಿ ಅವರಿಗೆ ಬೇಕಾದ ತಿಂಡಿತಿನಿಸುಗಳನ್ನು ಕೊಂಡುಕೊಳ್ಳಲಿ." ಎಂದರು.
16 ಅದಕ್ಕೆ ಯೇಸು, “ಅವರು ಹೋಗಬೇಕಾಗಿಲ್ಲ, ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿ,” ಎಂದರು.
17 : ಶಿಷ್ಯರು ಪ್ರತ್ಯುತ್ತರವಾಗಿ, "ನಮ್ಮ ಬಳಿ ಐದೇ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ," ಎಂದರು.
18 : ಯೇಸು, "ಅವನ್ನು ಇಲ್ಲಿಗೆ ತನ್ನಿ," ಎಂದು ಹೇಳಿ, ಜನರೆಲ್ಲರೂ ಹುಲ್ಲಿನ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿದರು.
19 : ಬಳಿಕ ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ರೊಟ್ಟಿಗಳನ್ನು ಮುರಿದು ಶಿಷ್ಯರಿಗೆ ಕೊಟ್ಟರು. ಶಿಷ್ಯರು ಜನರಿಗೆ ಹಂಚಿದರು.
20 : ಎಲ್ಲರೂ ಹೊಟ್ಟೆತುಂಬ ತಿಂದು ತೃಪ್ತರಾದರು. ಉಳಿದಿದ್ದ ತುಂಡುಗಳನ್ನು ಒಟ್ಟುಗೂಡಿಸಿದಾಗ ಅವು ಹನ್ನೆರಡು ಬುಟ್ಟಿಗಳ ತುಂಬ ಆದುವು.
21 : ಊಟ ಮಾಡಿದವರಲ್ಲಿ ಹೆಂಗಸರು, ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದು ಸಾವಿರ ಇದ್ದರು.
ಸರ್ವೇಶ್ವರಸ್ವಾಮಿ ಮರುಳುಗಾಡಿನಲ್ಲಿ ಇಸ್ರಾಯೇಲರಿಗೆ ಮನ್ನವನ್ನು ನೀಡಿ ಪೋಷಿಸಿದಂತೆ, ಯೇಸುವು ಕೂಡ ಹಸಿದಿದ್ದ ಜನರಿಗೆ ರೊಟ್ಟಿಯನ್ನು ನೀಡಿ ಪೋಷಿಸುತ್ತಾರೆ. ಯೇಸು ಇರುವ ಕಡೆ ಕೊರತೆ ಇರುವುದಿಲ್ಲ. ಶುಭಸಂದೇಶದಲ್ಲಿ ಕಾಣುವಂತೆ ಎಲ್ಲರೂ ಹೊಟ್ಟೆ ತುಂಬಾ ತಿಂದು ತೃಪ್ತರಾದರು ಹಾಗೂ ಉಳಿದಿದ್ದ ತುಂಡುಗಳು 12 ಬುಟ್ಟಿಗಳ ತುಂಬಾ ಆದವು. ಹನ್ನೆರಡು ಬುಟ್ಟಿಗಳು ಇಸ್ರಾಯೇಲರ 12 ಕುಲಗಳನ್ನು ಹೋಲುತ್ತದೆ. ಚದುರಿದ್ದ ಕುಲಗಳನ್ನು ಯೇಸು ಒಂದುಗೂಡಿಸಿದರು ಎಂಬುದು ಇದರ ತಾತ್ಪರ್ಯ. ಯೇಸು ಇರುವೆಡೆ ಕುಂದು ಕೊರತೆ ಇರದು. (ಯೊವಾನ 2:1-12). ದೇವರೊಂದಿಗೆ ನಾವು ಸಹಕರಿಸಿದಾಗ ಯಥೇಚ್ಚವಾಗಿ ನಾವು ಪಡೆದುಕೋಳ್ಳುತೇವೆ. ಯೇಸು 5 ರೊಟ್ಟಿ ಮತ್ತು 2 ಮೀನುಗಳಿಲ್ಲದೆಯೇ ಅದ್ಭುತ ಮಾಡಬಹುದಿತ್ತು. ಆದರೆ ನಮ್ಮ ಸಹಕಾರ, ಅರ್ಪಣಾ ಮನೋಭಾವವನ್ನು ಅವರು ಬಯಸುತ್ತಾರೆ.
No comments:
Post a Comment