Friday, 3 July 2020

ಆಗಸ್ಟ್ 22, 2020 ಶನಿವಾರ

ಆಗಸ್ಟ್ 22, 2020 ಶನಿವಾರ                                [ಬಿಳಿ]
ಇಹಪರಗಳ ರಾಣಿ ಪರಿಶುದ್ಧ ಕನ್ಯಾಮರಿಯಮ್ಮ (ಸ್ಮರಣೆ)
ಮೊದಲ ವಾಚನ: ಯೆಜೆಕಿಯೇಲ 43.1-7
ಕೀರ್ತನೆ 85: 8, 9, 10-13. ಶ್ಲೋಕ.9
ಪ್ರಭುವಿನ ಮಹಿಮೆ ನಾಡಿನಲ್ಲಿರುವುದು ನಿರುತ
ಶುಭಸಂದೇಶ: ಮತ್ತಾಯ 23.1-12


ಯೆಜೆಕಿಯೇಲ 43.1-7
1 : ಆಮೇಲೆ ಆ ಪುರುಷ ನನ್ನನ್ನು ಪೂರ್ವದ ಬಾಗಿಲಿಗೆ ಬರಮಾಡಿದನು.
2 : ಆಗ ಇಗೋ, ಇಸ್ರಯೇಲಿನ ದೇವರ ತೇಜಸ್ಸು ಪೂರ್ವ ಮಾರ್ಗವಾಗಿ ಬಂದಿತು. ಅವರ ಧ್ವನಿ ಜಲ ಪ್ರವಾಹದ ಘೋಷದಂತಿತ್ತು. ಅವರ ತೇಜಸ್ಸಿನಿಂದ ಭೂಮಿ ಬೆಳಗಿತು.
3 : ಮೊದಲು ನನಗೆ ಕಂಡು ಬಂದ ತೇಜಸ್ಸಿನಂತೆ ಅದು ಕಾಣಿಸಿತು. ಪಟ್ಟಣವನ್ನು ಹಾಳುಮಾಡಲು ನಾನು ಬಂದಾಗ ಎಂಥದನ್ನು ಕಂಡೆನೋ ಅಂಥದನ್ನೇ ಕಂಡೆನು. ಕೆಬಾರ್ ನದಿಯ ಹತ್ತಿರ ನನಗಾದ ಅದ್ಭುತ ದರ್ಶನದಂಥ ದರ್ಶನ ಈಗಲೂ ನನಗಾಯಿತು; ಅದನ್ನು ನೋಡಿ ಅಡ್ಡಬಿದ್ದೆ.
4 : ಆಗ ಸರ್ವೇಶ್ವರನ ತೇಜಸ್ಸು ಪೂರ್ವ ಬಾಗಿಲ ಮಾರ್ಗವಾಗಿ ದೇವಸ್ಥಾನವನ್ನು ಪ್ರವೇಶಿಸಿತು.
5 : ದೇವರಾತ್ಮ ನನ್ನನ್ನು ಎತ್ತಿ ಒಳಗಿನ ಪ್ರಾಕಾರಕ್ಕೆ ತಂದಿತು. ಆಗ ಏನಾಶ್ಚರ್ಯ! ಸರ್ವೇಶ್ವರನ ತೇಜಸ್ಸು ದೇವಸ್ಥಾನವನ್ನು ತುಂಬಿಕೊಂಡಿತ್ತು.
6 : ದೇವಸ್ಥಾನದೊಳಗಿಂದ ನನ್ನನ್ನು ಸಂಬೋಧಿಸಿ ನುಡಿಯುವವನ ಶಬ್ಧ ನನ್ನ ಕಿವಿಗೆ ಬಿದ್ದಿತು; ಆ ಪುರುಷ ನನ್ನ ಪಕ್ಕದಲ್ಲೇ ನಿಂತಿದ್ದನು
7 : ನುಡಿಯುವಾತನು ನನಗೆ ಹೀಗೆ ಹೇಳಿದನು: “ನರಪುತ್ರನೇ, ಇದು ನನ್ನ ಸಿಂಹಾಸನಸ್ಥಾನ, ನನ್ನ ಪಾದಸನ್ನಿಧಿ. ಇಲ್ಲಿ ನಾನು ಇಸ್ರಯೇಲರ ಮಧ್ಯೆ ಸದಾ ವಾಸಿಸುವೆನು. ಇಸ್ರಯೇಲ್ ವಂಶದವರಾಗಲಿ ಅವರ ಅರಸರಾಗಲಿ, ತಮ್ಮ ದೇವ ದ್ರೋಹದಿಂದ, ಗತಿಸಿದ ಅರಸರ ಶವಗಳಿಂದ


ಕೀರ್ತನೆ 85: 8, 9, 10-13. ಶ್ಲೋಕ.9 ಪ್ರಭುವಿನ ಮಹಿಮೆ ನಾಡಿನಲ್ಲಿರುವುದು ನಿರುತ 9 : ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ / ಇದರಿಂದಾತನ ಮಹಿಮೆ ನಾಡಿಲ್ಲಿರುವುದು ನಿರುತ // 10 : ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು / ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು // 11 : ಸತ್ಯತೆಯು ಹುಟ್ಟುವುದು ಭೂಮಿಯಿಂದ / ನೀತಿಯು ದೃಷ್ಟಿಸುವುದು ಗಗನದಿಂದ // 12 : ಪ್ರಭು ಕೊಟ್ಟೇ ತೀರುವನು ಒಳಿತನು / ನಮ್ಮ ನಾಡು ನೀಡುವುದು ಬೆಳೆಯನು // 13 : ನಡೆವುದು ಪ್ರಭುವಿನ ಮುಂದೆ ನೀತಿ / ಮಾಡುವುದು ಆತನ ಹೆಜ್ಜೆಗೆ ಹಾದಿ //

ಮತ್ತಾಯ 23.1-12 1 : ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು: 2 : “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. 3 : ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ. 4 : ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು. 5 : ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದಮಾಡಿಕೊಳ್ಳುತ್ತಾರೆ. 6 : ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ. 7 : ಅದು ಮಾತ್ರವಲ್ಲ, ‘ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ. 8 : ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. 9 : ಇಹದಲ್ಲಿ ನೀವು ಯಾರನ್ನೂ ‘ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ. 10 : ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ‘ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. 11 : ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು. 12 : ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.

``ಇಗೋ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರಯವೆ, ಆತನು ಮಹಾ ಪುರುಷನಾಗುವನು. ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ನೀಡುವರು’’ (ಲೂಕ 1:32-33). ಮೇಲಿನ ಸಾಲುಗಳು ಯೇಸು ದಾವೀದರಸನ ಮನೆತನಕ್ಕೆ ಸೇರಿದ್ದವರು ಎಂದು ಸೂಚಿಸುತ್ತದೆ. ಹಾಗಾಗಿ ಮಾತೆ ಮರಿಯಳು ಈ ವಿಶಿಷ್ಟ ಸೌಭಾಗ್ಯ ಪಡೆದುಕೊಂಡರು. ಸಂತ ಅಥನಾಸಿಯರ ಪ್ರಕಾರ ಮಗನು ಅರಸನಾಗಿದ್ದರೆ ಆ ಮಗನನ್ನು ಹೆತ್ತ ತಾಯಿಯೂ ರಾಣಿ ಆಗಿರುತ್ತಾಳೆ. ``ದಿವ್ಯವಾಣಿಗೆ ತಾಯಿಯಾಗುವ ಸಮ್ಮತಿಯನ್ನು ಬಹಿರಂಗಪಡಿಸಿದ ಆ ಕ್ಷಣದಿಂದಲೇ ಮರಿಯಳು ಪ್ರಪಂಚದ ಮತ್ತು ಸೃಷ್ಠಿಯ ರಾಣಿಯಾದಳು’’ ಎಂದು ಸಂತ ಬೆರ್ನಾರ್ಡಿನ್ ತಿಳಿಸುತ್ತಾರೆ.

No comments:

Post a Comment