ಆಗಸ್ಟ್ 23, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 21ನೇ ಭಾನುವಾರ
ಮೊದಲ ವಾಚನ: ಯೆಶಾಯ 22.15, 19-23
ಕೀರ್ತನೆ 138:1-3, 6, 8. ಶ್ಲೋಕ.8
ಪ್ರಭೂ, ಶಾಶ್ವತವಾಗಿರಿಸು ನಿನ್ನ ಅಚಲ ಪ್ರೀತಿಯನು
ಎರಡನೇ ವಾಚನ: ರೋಮನರಿಗೆ 11.33-36
ಶುಭಸಂದೇಶ: ಮತ್ತಾಯ 16.13-20
ಯೆಶಾಯ 22.15, 19-23
15 : ಸೇನಾಧೀಶ್ವರ ಸರ್ವೇಶ್ವರಸ್ವಾಮಿ ಹೀಗೆ ನುಡಿದಿದ್ದಾರೆ: “ಹೋಗು, ಅರಮನೆಯ ಮೇಲ್ವಿಚಾರಕ ಶೆಬ್ನ ಎಂಬ ಅಧ್ಯಕ್ಷನಿಗೆ ಹೀಗೆಂದು ಹೇಳು:
19 : ನಿನ್ನನ್ನು ಕೆಲಸದಿಂದ ತೆಗೆದುಬಿಡುವರು, ನಿನ್ನ ಪದವಿಯಿಂದ ತೆಗೆದುಹಾಕುವರು.
20 : “ಆ ದಿನದಂದು, ನನ್ನ ದಾಸನೂ ಹಿಲ್ಕಿಯನ ಮಗನೂ ಆದ ಎಲ್ಯಾಕೀಮನನ್ನು ಬರಮಾಡುವೆನು.
21 : ನಿನ್ನ ವಸ್ತ್ರವನ್ನು ಅವನಿಗೆ ತೊಡಿಸುವೆನು. ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟುವೆನು. ನಿನ್ನ ಅಧಿಕಾರವನ್ನು ಅವನಿಗೆ ಒಪ್ಪಿಸುವೆನು. ಅವನು ಜೆರುಸಲೇಮಿನ ನಿವಾಸಿಗಳಿಗೂ ಜುದೇಯದ ಮನೆತನಕ್ಕೂ ತಂದೆಯಾಗಿರುವನು.
22 : ದಾವೀದ ಮನೆತನದ ಅಧಿಕಾರವನ್ನು ಅವನ ಹೆಗಲ ಮೇಲೆ ಹೊರಿಸುವೆನು. ಅವನು ತೆರೆದ ಬಾಗಿಲನ್ನು ಯಾರೂ ಮುಚ್ಚರು; ಅವನು ಮುಚ್ಚಿದ ಬಾಗಿಲನ್ನು ಯಾರೂ ತೆರೆಯರು.
23 : ವಸ್ತುಗಳನ್ನು ತಗುಲಿ ಹಾಕುವ ಮೊಳೆಯಂತೆ ಗಟ್ಟಿಯಾದ ಸ್ಥಳದಲ್ಲಿ ಅವನನ್ನು ಬಿಗಿಯಾಗಿ ನಿಲ್ಲಿಸುವೆನು. ಅಲ್ಲದೆ, ಅವನು ತನ್ನ ವಂಶದವರಿಗೆ ಗೌರವಪೀಠವಾಗಿರುವನು.”
ಕೀರ್ತನೆ 138:1-3, 6, 8. ಶ್ಲೋಕ.8
ಪ್ರಭೂ, ಶಾಶ್ವತವಾಗಿರಿಸು ನಿನ್ನ ಅಚಲ ಪ್ರೀತಿಯನು
1 : ಹೃದಯಪೂರ್ವಕ ವಂದನೆ ಪ್ರಭು ನಿನಗೆ / ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ
2 : ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ / ನಿನ್ನ ಪ್ರೀತಿಸತ್ಯತೆಗಳ, ನಾಮ ನುಡಿಗಳ ಮಹತ್ವದ ಪ್ರಯುಕ್ತ
3 : ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು / ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು
6 : ಉನ್ನತನಾದರೂ ಗಮನಿಸುವನು ಪ್ರಭು ದೀನರನು / ದೂರದಿಂದಲೇ ಗುರುತಿಸುವನಾತನು ಗರ್ವಿಷ್ಠರನು
8 : ಸಿದ್ಧಿಗೆ ತರುವೆ ನೀ ಪ್ರಭು, ನನ್ನ ಕಾರ್ಯವನು / ಶಾಶ್ವತವಾಗಿಸು ನಿನ್ನ ಅಚಲ ಪ್ರೀತಿಯನು / ಮರೆತುಬಿಡಬೇಡ ನಿನ್ನಯ ಕೈ ಕೃತಿಯನು //
ರೋಮನರಿಗೆ 11.33-36
33 : ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ!
34 : “ಪ್ರಭುವಿನ ಮನಸ್ಸನು ಅರಿತವರಾರು? ಅವರಿಗೆ ಉಪದೇಶಿಸುವವರಾರು?
35 : ಮೊದಲೇ ಅವರ ಬಳಿ ಕೊಟ್ಟಿಟ್ಟವರಾರು? ಹೀಗೆ ಅವರಿಂದ ಪ್ರತಿಫಲ ಪಡೆದವರಾರು?
36 : ಸಮಸ್ತವೂ ಉಂಟಾಗುವುದು ಅವರಿಂದಲೇ; ಮುಂದುವರಿಯುವುದೂ ಅವರ ಮುಖಾಂತರವೇ; ಇರುವುದೂ ಅವರಿಗೋಸ್ಕರವೇ. ಆ ಪ್ರಭುವಿಗೆ ಯುಗಯುಗಾಂತರಕ್ಕೂ ಸ್ತುತಿಸ್ತೋತ್ರ ಸಲ್ಲಲಿ. ಆಮೆನ್.
ಮತ್ತಾಯ 16.13-20
13 : ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು.
14 : ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆವಿೂಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು.
15 : ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು.
16 : ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು.
17 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ.
18 : ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.
19 : ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು."
20 : ಅನಂತರ ಯೇಸು ತಮ್ಮ ಶಿಷ್ಯರಿಗೆ ತಾವು ‘ಅಭಿಷಿಕ್ತರಾದ ಲೋಕೋದ್ಧಾರಕ’ ಎಂಬುದನ್ನು ಯಾರಿಗೂ ಹೇಳಕೂಡದೆಂದು ಕಟ್ಟಪ್ಪಣೆ ಮಾಡಿದರು.
==============
ಸಾಧಾರಣ ಕಾಲದ 21ನೆಯ ಭಾನುವಾರ
=========================
ಪೀಠಿಕೆ
===========
ನೀವು ನನ್ನನ್ನು ಯಾರೆನ್ನುತ್ತೀರಿ?
ಸಭೆ ಸಮಾರಂಭಗಳಲ್ಲಿ ಗಣ್ಯವ್ಯಕ್ತಿಗಳನ್ನು ಹಾಗೂ ಮುಖ್ಯ ಅತಿಥಿಗಳನ್ನು ಪರಿಚಯ ಮಾಡಿಕೊಡುವುದು ಸರ್ವೇ ಸಾಮಾನ್ಯ. ಯಾರನ್ನಾದರೂ ನಾವು ಪರಿಚಯ ಮಾಡಿಕೊಡಬೇಕಾದರೆ ಆ ವ್ಯಕ್ತಿಯ ಬಗ್ಗೆ ಸಾಕಷ್ಟು ವಿಷಯಗಳನ್ನು ಸಂಗ್ರಹಿಸುತ್ತೇವೆ. ಆ ವ್ಯಕ್ತಿಯ ಸ್ನೇಹಿತರು, ಶಿಕ್ಷಕರು, ಮನೆಯವರು - ಹೀಗೆ ಅನೇಕರನ್ನು ಭೇಟಿಮಾಡಿ ಮಾಹಿತಿ ಪಡೆಯುತ್ತೇವೆ. ಸಂಗ್ರಹಿಸುತ್ತೇವೆ. ಕೊನೆಗೆ ಸಾಧ್ಯವಾದರೆ, ನಾವು ಪರಿಚಯಿಸಲಿರುವ ವ್ಯಕ್ತಿಯ ಬಳಿ ವೈಯಕ್ತಿಕ ಸಂದರ್ಶನ ನಡೆಸಿ ಇನ್ನೂ ಸೂಕ್ತ ಮಾಹಿತಿಯನ್ನು ಕಲೆಹಾಕುತ್ತೇವೆ. ಅಕಸ್ಮಾತ್ ಆ ವ್ಯಕ್ತಿಯ ಪರಿಚಯ ನಮಗಿದ್ದರೆ, ಹಾಗೂ ಅವರೊಂದಿಗೆ ಆಪ್ತ ಒಡನಾಟ ಇದ್ದರೆ, ಅವರನ್ನು ಇತರರಿಗೆ ಪರಿಚಯಿಸಲು ನಾವು ಸಂತೋಷಪಡುವುದಿಲ್ಲವೇ? ಅಂತೆಯೇ ಕ್ರಿಸ್ತನ ಬಗೆಗೆ ತಿಳಿಯುವುದು ಸುಲಭ. ಆದರೆ ಕ್ರಿಸ್ತನನ್ನು ತಿಳಿಯುವುದು ಮಖ್ಯ. ಈ ಬಲಿಪೂಜೆಯು ಪ್ರಭುಕ್ರಿಸ್ತರನ್ನು ವೈಯಕ್ತಿಕವಾಗಿ ಅರಿಯಲು ಹಾಗೂ ಅನುಭವಿಸಲು ನಮ್ಮೆಲ್ಲರಿಗೂ ನೆರವಾಗಲಿ.
ಮೊದಲನೆಯ ವಾಚನ - ಯೆಶಾಯ 22:19-23
================================
ದೇವರು ತಾವೇ ನೇಮಿಸಿದ ಅರಸನ್ನೂ ದೇವಜನರನ್ನೂ ಆಳುವರು ಎಂಬ ಸಂದೇಶವನ್ನು ಯೆಶಾಯ ಪ್ರವಾದಿಯ ಮೂಲಕ ಜನರಿಗೆ ತಿಳಿಸುತ್ತಾರೆ. ಆ ರಾಜನ ಆಳ್ವಿಕೆಯ ರೀತಿ ನೀತಿ ಹಾಗೂ ವೈಭವವದ ವರ್ಣನೆಯನ್ನು ಇಂದಿನ ಮೊಲನೆಯ ವಾಚನದಲ್ಲಿ ಆಲಿಸುತ್ತೇವೆ.
ಎರಡನೆಯ ವಾಚನ - ರೋಮನರಿಗೆ 11:33-36
=================================
ಸಂತ ಪೌಲರು ಕೊರಿಂಥದಲ್ಲಿದ್ದುಕೊಂಡು ಕ್ರಿಸ್ತಶಕ 57ರಲ್ಲಿ ರೋಮ್‍ನಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರ ಇದಾಗಿದೆ. ದೇವರ ಶುಭಸಂದೇಶವನ್ನು ಅಧ್ಯಾಯ 11ರಲ್ಲಿ ವಿವರಿಸುತ್ತಾರೆ. ಇಲ್ಲಿ ದೇವರು ಯೆಹೂದ್ಯರಿಗೂ ಅನ್ಯಧರ್ಮೀಯರಿಗೂ ಹೊಂದಿರುವ ವಿಶೇಷ ಯೋಜನೆಯನ್ನು ಜನರಿಗೆ ತಿಳಿಸುತ್ತಾರೆ. ದೇವರ ಪ್ರೀತಿ ಮಾನವರ ಅರ್ಹತೆಗೆ ಮೀರಿದ್ದು ಎಂಬ ಸಂದೇಶವನ್ನು ಪತ್ರದ ಮೂಲಕ ಜನರಿಗೆ ಬೋಧಿಸಿದ ನಂತರ ಕೀರ್ತನೆ ಅಥವಾ ಗೀತೆಯೊಂದಿಗೆ ಆ ಸಂದೇಶವನ್ನು ಅಂತ್ಯಗೊಳಿಸುವುದನ್ನು ಈ ವಾಚನದಲ್ಲಿ ನೋಡಬಹುದು.
ಶುಭಸಂದೇಶ - ಮತ್ತಾಯ 16:13-20
=============================
ಫಿಲಿಪ್ಪನ ಸೆಜರೇಯ ಗಲಿಲೇಯ ಸರೋವರದಿಂದ 25 ಮೈಲಿ ದೂರದಲ್ಲಿರುವ ಪಟ್ಟಣ. ಈ ಪ್ರಾಂತ್ಯವನ್ನು ಹೆರೋದನ ಮಗನಾದ ಫಿಲಿಪ್ಪ ಆಳುತ್ತಿದ್ದನು. ಅವನು ಆ ಸ್ಥಳಕ್ಕೆ ‘ಸೀಜರನ ಪಟ್ಟಣ’ ಎಂದು ಹೆಸರಿಟ್ಟು, ನಂತರ ತನ್ನ ಹೆಸರನ್ನು ಸೇರಿಸಿದನು. ‘ಫಿಲಿಪ್ಪಿ’ ಎಂದರೆ ಫಿಲಿಪ್ಪನಿಗೆ ಸೇರಿದ್ದು ಎಂದರ್ಥ. ಈ ಪ್ರಾಂತ್ಯವು ಸಮುದ್ರ ತೀರದಲ್ಲಿದ್ದ ಇನ್ನೊಂದು ಸೆಜರೇಯ ಪಟ್ಟಣಕ್ಕಿಂತ ಭಿನ್ನವಾಗಿತ್ತೆಂದು ತೋರಿಸಲು ಇದಕ್ಕೆ ಫಿಲಿಪ್ಪನ ಸೆಜರೇಯ ಎಂದು ಹೆಸರಿಡಲಾಗಿತ್ತು. ಜೋರ್ಡನ್ ನದಿಯ ಮೂಲ ಫಿಲಿಪ್ಪನ ಸೆಜರೇಯ ಪ್ರಾಂತ್ಯದಲ್ಲಿದೆ. ಈ ಪ್ರಾಂತ್ಯದಲ್ಲಿನ ಅನೇಕ ಸ್ಥಳಗಳಲ್ಲಿ ಜನರು ತಮ್ಮದೇ ಆದ ದೇವರುಗಳ್ನು ಆರಾಧಿಸುತ್ತಿದ್ದರು. ಆದ್ದರಿಂದ ಯೇಸು ತಮ್ಮ ಶಿಷ್ಯರ ಅನಿಸಿಕೆಯನ್ನು ತಿಳಿದುಕೊಳ್ಳುವುದರೊಂದಿಗೆ ತಮ್ಮ ಬಗ್ಗೆ ಅಲ್ಲಿನ ಜನರ ಅಭಿಪ್ರಾಯವನ್ನು ಕೇಳುತ್ತಾರೆ.
“ಜನರು ನನ್ನನ್ನು ಯಾರೆನ್ನುತ್ತಾರೆ?” ಎಂದು ಯೇಸು ಕೇಳಿದ ಪ್ರಶ್ನೆಗೆ ಶಿಷ್ಯರು ನಾಲ್ಕು ಉತ್ತರಗಳನ್ನು ನೀಡುತ್ತಾರೆ:
1. ಸ್ನಾಪಕ ಯೊವಾನ್ನ: ಹೆರೋದನು ಕೂಡ ಯೇಸು ಮರಳಿ ಜೀವಂತನಾದ ಸ್ನಾಪಕ ಯೊವಾನ್ನನೇ ಎಂದು ಭಾವಿಸಿದ್ದನು. ಹೆರೋದನೇ ಸ್ನಾಪಕ ಯೊವಾನ್ನನ ಸಾವಿಗೆ ಕಾರಣನಾಗಿದ್ದನು (ಮತ್ತಾಯ14:12)
2. ಎಲೀಯ: ಯೆಹೂದ್ಯರು ಎಲೀಯನು ಮರಳಿ ಬರುವನೆಂದು ನಂಬಿದ್ದರು. ಆತ ರಕ್ಷಕನಿಗೆ (ಮೆಸ್ಸೀಯ) ಹಾದಿಯನ್ನು ಸಿದ್ಧಪಡಿಸುವನು ಎಂದು ಅವರ ನಂಬಿಕೆಯಾಗಿತ್ತು (ಮಲಾಕಿ 4:5-6)
3. ಯೆರೆಮೀಯ: ದೇವರ ಸಂದೇಶವನ್ನು ಜನರಿಗೆ ಸಾರಿದ್ದಕ್ಕಾಗಿ ಯೆರೆಮೀಯ ಪ್ರವಾದಿ ಹಿಂಸೆಯನ್ನನುಭವಿಸಿದ್ದನು. ದೇವರು ತಮ್ಮ ಸ್ವಂತ ಜನರೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವರು ಎಂದು ಈತನು ತಿಳಿಸಿದ್ದನು.
4. ಪ್ರವಾದಿಗಳಲ್ಲೊಬ್ಬರು: ದೇವರ ವಾಕ್ಯವನ್ನು ಸಾರಲು ಬಂದ ವಿಶೇಷ ಪ್ರವಾದಿಗಳಲ್ಲಿ ಒಬ್ಬ.
ಬೈಬಲ್ ಓದುವುದರಿಂದಲೋ ಪ್ರಬೋಧನೆಗಳನ್ನು ಕೇಳುವುದರಿಂದಲೋ ಯೇಸುವಿನ ಬಗ್ಗೆ ತಿಳಿಯಬಹುದು. ಆದರೆ ಅದು ಸಾಲದು. ಪ್ರತಿಯೊಬ್ಬ ವ್ಯಕ್ತಿಯೂ ಯೇಸುವನ್ನು ವೈಯಕ್ತಿಕವಾಗಿ ಅರಿತಿರಬೇಕು. ಅವರ ಬಗ್ಗೆ ತಿಳಿದರೆ ಸಾಲದು, ಅವರನ್ನು ತಿಳಿಯಬೇಕು. ಆದ್ದರಿಂದಲೇ ಯೇಸು ಶಿಷ್ಯರನ್ನು ಕುರಿತು, “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು. ‘ಅಭಿಷಿಕ್ತರಾದ ಲೋಕೋದ್ಧಾರಕ ತಾವೇ’ ಎಂದು ಪೇತ್ರ ನುಡಿಯುತ್ತಾನೆ. ಕ್ರಿಸ್ತ ಎಂದರೆ ಅಭಿಷಿಕ್ತನಾದವನು ಎಂದೆನ್ನುವುದೇ ಗ್ರೀಕ್ ಭಾಷೆಯ ಪದ. ಅದಕ್ಕೆ ಸನಮಾನ ಅರ್ಥವನ್ನು ಕೊಡುವ ಹಿಬ್ರೀಯ ಭಾಷೆಯ ಪದ ಮೆಸ್ಸೀಯ ಅಥವಾ ರಕ್ಷಕ.
ಯೇಸು ಸಿಮೋನನನ್ನು ಬಂಡೆ ಎಂದು ಕರೆಯುವುದರಲ್ಲಿ ವಿಶೇಷ ಅರ್ಥವಿದೆ. ಹಳೆಯ ಒಡಂಬಡಿಕೆಯಲ್ಲಿ ಬಂಡೆ ಎನ್ನುವುದು ದೇವರು ಮಾನವರಿಗೆ ನೀಡುವ ಸುಭದ್ರತೆಯನ್ನು ಸೂಚಿಸುತ್ತದೆ. “ಸರ್ವೇಶ್ವರನೇ ನನಗೆ ಪೊರೆಬಂಡೆ, ನನ್ನ ಕಲ್ಲುಕೋಟೆ, ಆತನೇ ನನಗೆ ವಿಮೋಚಕ” (2 ಸಮುವೇಲ 22:2). ಯೇಸು ಸಿಮೋನನಿಗೆ ಪೇತ್ರ ಅಥವಾ ಬಂಡೆ ಎನ್ನುವುದನ್ನು ಹಲವು ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು.
1. ಬಂಡೆ ಎನ್ನುವುದು ಕ್ರಿಸ್ತನನ್ನು ಸೂಚಿಸುತ್ತದೆ: “ಯೇಸುವೇ ಈ ತಳಹದಿಯ ಮುಖ್ಯ ಮೂಲೆಗಲ್ಲು” (ಎಫೆಸಿಯರಿಗೆ 2:20). ಸಂತ ಪೌಲರು ಯೇಸುವನ್ನು ಧರ್ಮಸಭೆಯ ಮೂಲೆಗಲ್ಲು ಅಥವಾ ಆಧಾರಸ್ತಂಭವೆನ್ನುತ್ತಾರೆ.
2. ಬಂಡೆ ಎನ್ನುವುದು ಪೇತ್ರನ ಹೇಳಿಕೆಗೆ ಸಂಬಂಧಿಸಿದ್ದು: ‘ಯೇಸುವೇ ದೇವರ ಪುತ್ರ’ ಎಂದು ಪೇತ್ರ ನುಡಿಯುತ್ತಾನೆ. ಗ್ರೀಕ್ ಭಾಷೆಯಲ್ಲಿ ಧರ್ಮಸಭೆ ಎಂದರೆ ಕಟ್ಟಡವಲ್ಲ, ಬದಲಾಗಿ ಕ್ರಿಸ್ತನ ವಿಶ್ವಾಸಿಗಳ ಸಮುದಾಯ. ಪೇತ್ರನಂತೆ ಯೇಸುವೇ ದೇವರ ಪುತ್ರ ಎಂದು ನುಡಿಯುವ ಪ್ರತಿಯೊಬ್ಬರೂ ಧರ್ಮಸಭೆಗೆ ಸೇರಿದವರಾಗುತ್ತಾರೆ. ಆ ಸಮುದಾಯಕ್ಕೆ ಸೇರಿದವರೆಲ್ಲರೂ ಯೇಸು ದೇವರ ಪುತ್ರ ಎಂದು ಮನಗಾಣುತ್ತಾರೆ.
3. ದೇವರು ಕಟ್ಟುವ ಕಟ್ಟಡಕ್ಕೆ ಪೇತ್ರನೇ ಮೂಲೆಗಲ್ಲು: ಯೇಸುವೇ ಅದರ ತಳಹದಿ. ದೇವರು ನಿರ್ಮಿಸುವ ಧರ್ಮಸಭೆಗೆ ಪೇತ್ರನೇ ನಾಯಕ ಹಾಗೂ ಬೋಧಕನಾಗುತ್ತಾನೆ. ಪವಿತ್ರಾತ್ಮರನ್ನು ಸ್ವೀಕರಿಸಿದ ನಂತರ ಈತನೇ ಪ್ರಥಮ ಪ್ರಬೋಧನೆಯನ್ನು ನೀಡಿ ಒಂದೇ ದಿನ 3000ಕ್ಕೂ ಹೆಚ್ಚು ಜನರಿಗೆ ದೀಕ್ಷಾಸ್ನಾನವನ್ನು ನೀಡುತ್ತಾನೆ (ಪ್ರೇಷಿತರ ಕಾರ್ಯಕಲಾಪ 2).
ಅಂದು ಯೇಸು ಪ್ರೇಷಿತರಿಗೆ ಕೇಳಿದ ‘ನೀನು ನನ್ನನ್ನು ಯಾರೆನ್ನುತ್ತೀಯಾ?’ ಎಂಬ ಪ್ರಶ್ನೆಯನ್ನು ಇಂದು ನನ್ನನ್ನು ಕೇಳಿದರೆ ನಾನು ಏನೆಂದು ಉತ್ತರಿಸಬಲ್ಲೆ? ಜಗದುದ್ಧಾರಕ ಎನ್ನುತ್ತೇನೆಯೋ ನನ್ನ ಉದ್ಧಾರಕ ಎನ್ನುತ್ತೇನೆಯೋ? ನೀವೇ ನನ್ನ ತಾಯಿ, ತಂದೆ, ಸಹೋದರ, ಬಂಧು, ನನ್ನ ಸಕಲವೂ, ನನ್ನ ಸರ್ವಸ್ವವೂ ನೀನೇ ಎಂದು ಹೇಳುವ ಮಟ್ಟಿಗೆ ನನ್ನ ವಿಶ್ವಾಸ ಬೆಳೆದಿದೆಯೋ? ಇಂಥಹ ವಿಶ್ವಾಸ ಪ್ರಕಟಣೆ ಬರೀ ನನ್ನ ಬಾಯಿಮಾತೋ ಅಥವಾ ನನ್ನ ಜೀವನಶೈಲಿ ಹಾಗೂ ಇತರರೊಂದಿಗಿನ ನನ್ನ ವರ್ತನೆ ಅದನ್ನು ಸಾರಿ ಹೇಳುತ್ತದೆಯೋ? ಯೋಚಿಸೋಣ.
========================
ಚಿಂತನೆ – ಫಾ ಸಂತೋಷ್ ಕುಮಾರ್, ಬೆಂಗಳೂರು ಮಹಾ ಧರ್ಮಾಕ್ಷೇತ್ರ
===========================
No comments:
Post a Comment