ಜುಲೈ 24, 2020 ಶುಕ್ರವಾರ [ಹಸಿರು]
ಸಂತ ಶಾರ್ಬೆಲ್ ಮಕ್ಲುಫ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆರೆಮಿಯ 3.14-17
ಕೀರ್ತನೆ ಯೆರೆಮಿಯ 31:10, 11-12, 13. ಶ್ಲೋಕ.10
ಪ್ರಭು ನಮ್ಮನ್ನು ಕಾಪಾಡುವರು
ಶುಭಸಂದೇಶ: ಮತ್ತಾಯ 13.18-23
==================
ಯೆರೆಮಿಯ 3.14-17
14 : “ಭ್ರಷ್ಟರಾದ ಜನರೇ, ನನಗೆ ಅಭಿಮುಖರಾಗಿರಿ, ನಾನು ನಿಮಗೆ ಅಧಿಪತಿ. ನಿಮ್ಮಲ್ಲಿ ಒಂದು ಪಟ್ಟಣಕ್ಕೆ ಒಬ್ಬನಂತೆ, ಗೋತ್ರಕ್ಕೆ ಇಬ್ಬರಂತೆ ಆರಿಸಿ ಸಿಯೋನಿಗೆ ಕರೆತರುವೆನು.
15 : ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ಕೊಡುವೆನು. ಅವರು ನಿಮ್ಮನ್ನು ಜ್ಞಾನವಿವೇಕಗಳಿಂದ ಪೋಷಿಸುವರು.
16 : ನೀವು ನಾಡಿನಲ್ಲಿ ಹೆಚ್ಚಿ ಅಭಿವೃದ್ಧಿಯಾದಾಗ, ‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವೆಲ್ಲಿ?’ ಎಂದು ಪ್ರಸ್ತಾಪಿಸುವಂತಿಲ್ಲ. ಅದು ಜ್ಞಾಪಕಕ್ಕೆ ಬರುವುದಿಲ್ಲ, ಯಾರೂ ಅದನ್ನು ಸ್ಮರಿಸುವುದಿಲ್ಲ. ಅದು ಇಲ್ಲವಲ್ಲಾ ಎಂದು ದುಃಖಿಸುವುದಿಲ್ಲ. ಹೊಸದೊಂದನ್ನು ಕಲ್ಪಿಸಿಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.
17 : ಆ ಕಾಲ ಬಂದಾಗ ಜೆರುಸಲೇಮನ್ನೇ ‘ಸರ್ವೇಶ್ವರನ ಸಿಂಹಾಸನ’ ಎಂದು ಕರೆಯುವರು. ನನ್ನ ನಾಮಮಹತ್ವದ ಸ್ಥಾನವಾದ ಜೆರುಸಲೇಮಿಗೆ ಸಕಲ ರಾಷ್ಟ್ರಗಳವರು ನೆರೆದುಬರುವರು. ಆಮೇಲೆ ತಮ್ಮ ದುಷ್ಟ ಹೃದಯದ ನಿಮಿತ್ತ ಹಟಮಾರಿಗಳಂತೆ ನಡೆಯಲಾರರು.
======================
ಕೀರ್ತನೆ ಯೆರೆಮಿಯ 31:10, 11-12, 13. ಶ್ಲೋಕ.10
ಪ್ರಭು ನಮ್ಮನ್ನು ಕಾಪಾಡುವರು
10 : ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ: ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ: ಇಸ್ರಯೇಲರನ್ನು ಚದುರಿಸಿದಾತ ಕುರಿಮಂದೆಯನ್ನು ಕಾಯುವ ಕುರುಬನಂತೆ ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ.
11 : ಸರ್ವೇಶ್ವರ ಯಕೋಬರ ವಿಮೋಚಕ ಅವರನ್ನು ಅವರಿಗಿಂತ ಬಲಿಷ್ಠರ ಕೈಯಿಂದ ಬಿಡಿಸಿದಾತ.
12 : ಅವರು ಬಂದು ಹಾಡುವರು ಸಿಯೋನ್ ಶಿಖರದಲ್ಲಿ ಬರುವರು ಪ್ರವಾಹ ಪ್ರವಾಹವಾಗಿ ಧಾನ್ಯ, ದ್ರಾಕ್ಷಾರಸ, ಎಣ್ಣೆ, ಕುರಿ, ಕುರಿಮರಿ, ಸರ್ವೇಶ್ವರನ ಈ ವರದಾನಗಳನ್ನು ಅನುಭವಿಸಲಿಕ್ಕಾಗಿ. ಹದವಾಗಿ ನೀರುಹಾಯಿಸಿದ ಉದ್ಯಾನವನದಂತೆ ಅವರ ಜೀವನ ಇನ್ನು ಅವರಿಗಿರದು ವ್ಯಸನ.
13 : ಆಗ ನಾಟ್ಯವಾಡಿ ನಲಿವಳು ಯುವತಿ ಹರ್ಷಿಸುವರು ಯುವಕರು ಮುದುಕರು ಜೊತೆಯಾಗಿ. ಅವರ ದುಃಖವನ್ನು ಸಂತೋಷವಾಗಿಸುವೆನು ವ್ಯಸನ ತೊರೆದು ಆನಂದಿಸುವಂತೆ ಅವರನ್ನು ಸಂತೈಸುವೆನು.
ಮತ್ತಾಯ 13.18-23
18 : "ಈಗ ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ:
19 : ಒಬ್ಬನು ಶ್ರೀ ಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆ ಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಾಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ.
20 : ಬೇರೊಬ್ಬನು ಈ ಸಂದೇಶವನ್ನು ಕೇಳಿದಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ.
21 : ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟ ಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿ ಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ.
22 : ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ; ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ.
23 : ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲ ಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ," ಎಂದರು.
======================
ಪ್ರಭು ಯೇಸುವಿನ ಸಾಮತಿಗಳು ಸಾಮಾನ್ಯ ಹಾಗೂ ಸರಳವಾದವುಗಳು. ದೈನಂದಿನ ಜೀವನದಲ್ಲಿ ನಡೆಯುವ ಸರಳ ಸಂಗತಿಗಳನ್ನೇ ಸರ್ವರೂ ಅರಿಯುವಂತೆ ಭೋಧಿಸಿದರು ಗುರು ಯೇಸು. ಬೆರೆತು ಬಾಳುವಂತಹ ಸತ್ಯ ಬೋಧಿಸುವಂತಹ ಸಾಮತಿಗಳಲ್ಲೊಂದು 'ಬಿತ್ತುವವನ ಸಾಮತಿ'. ಪ್ರತಿಯೊಬ್ಬರ ಮಾತಿಗೂ ಒಂದು ಮೌಲ್ಯವಿದೆ, ಬೆಲೆಯಿದೆ, ತನ್ನದೇ ಆದ ತೂಕವಿದೆ. ತಂದೆ ತಾಯಿಯರ ಪ್ರೀತಿಯ ಮಾತು, ಗುರು ಹಿರಿಯರ ಹಿತ ಮಾತು, ಸ್ನೇಹಿತರ ಸಲಹೆಯ ಮಾತು, ಬಂಧುಗಳ ಮಾತು, ಶತ್ರುಗಳ ಕಟುಮಾತು. . . ಹೀಗೆ ಮುಂದುವರಿಯುತ್ತದೆ ಈ ಪಟ್ಟಿ. ಯಾರಾದರೂ ಅಧಿಕಾರದಲ್ಲಿದ್ದು ನುಡಿದರೆ ಆ ಮಾತಿನೊಂದಿಗೆ ಅಧಿಕಾರ, ಸ್ಥಾನಮಾನದ ಘನತೆ ಸೇರ್ಪಡೆ. ಹೀಗಿರುವಾಗ ಮನುಜನು ದೇವರ ಮಾತಿಗೆ ಅಥವಾ ದೈವವಾಕ್ಯಕ್ಕೆ ಎಷ್ಟು ಮೌಲ್ಯ ಕಟ್ಟಲು ಸಾಧ್ಯ? ಅದು ಅಸಾಧ್ಯ, ಆದರೆ ಅದರ ಪಾಲನೆಯಿಂದ ದೈವವಾಕ್ಯವನ್ನು ಫಲಪ್ರದವಾಗಿಸಲು ಸಾಧ್ಯ. ತುಂಬಾ ಪರಿಚಿತವಾದ ಈ ಸಾಮತಿ ನಮ್ಮ ಹೃದಯವೆಂಬ ಹೊಲವನ್ನು ದೈವವಾಕ್ಯವೆಂಬ ಬೀಜಗಳಾಗಿ ಸ್ಮರಿಸಿ, ಧ್ಯಾನಿಸಿ, ಪೋಷಿಸಿ, ಪಾಲಿಸಿ, ಫಲವನ್ನು ಎದುರು ನೋಡುತ್ತಿರುವ ಪ್ರಭುವಿಗೆ ನೂರರಷ್ಟು, ಅರವತ್ತರಷ್ಟು, ಕನಿಷ್ಠ ಮೂವತ್ತರಷ್ಟು ಫಲವೀಯಲಿ.
=====================
@ದನಿ ಮಾಧ್ಯಮ ಮನೆ
No comments:
Post a Comment