ಜುಲೈ 23, 2020 ಗುರುವಾರ [ಹಸಿರು]
ಸಂತ ಬ್ರಿಜಿತ್ [ಸಂನ್ಯಾಸಿನಿ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆರೆಮಿಯ 2.1-3, 7-8, 12-13
ಕೀರ್ತನೆ 36:6-11. ಶ್ಲೋಕ.9
ಪ್ರಭೂ, ನಿನ್ನಲ್ಲಿದೆ ಜೀವದ ಬುಗ್ಗೆ
ಶುಭಸಂದೇಶ: ಮತ್ತಾಯ 13.10-17
==================
ಯೆರೆಮಿಯ 2.1-3, 7-8, 12-13
1 : ಇಸ್ರಯೇಲಿನ ಬಗ್ಗೆ ದೇವರ ಮಮತೆ ಸರ್ವೇಶ್ವರಸ್ವಾಮಿ ನನಗೆ ನೀಡಿದ ಆದೇಶ ಇದು:
2 : “ನೀನು ಹೋಗಿ ಜೆರುಸಲೇಮ್ ನಗರಕ್ಕೇ ಕೇಳಿಸುವಂತೆ ಈ ಸಂದೇಶವನ್ನು ಸಾರು: ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವ ವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆಯಿಲ್ಲದ ಅರಣ್ಯಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ; ಇದು ನಿನ್ನ ಹಿತಕ್ಕಾಗಿಯೇ.
3 : “ಎಲೈ ಇಸ್ರಯೇಲ್, ನೀನು ನನಗೆ ಮೀಸಲಾದವಳು, ನನ್ನ ಬೆಳೆಯ ಪ್ರಥಮ ಫಲ. ಯಾರು ಯಾರು ಅದನ್ನು ತಿಂದರೋ ಅವರು ದ್ರೋಹಿಗಳು, ಕೇಡಿಗೆ ಗುರಿಯಾದವರು, ಎನ್ನುತ್ತಾರೆ ಸರ್ವೇಶ್ವರ.”
7 : ನಾನು ನಿಮ್ಮನ್ನು ಫಲವತ್ತಾದ ನಾಡಿಗೆ ಕರೆತಂದೆ. ಅದರ ಫಲವನ್ನೂ ಸಾರವನ್ನೂ ಅನುಭವಿಸುವ ಹಾಗೆ ಮಾಡಿದೆ. ಆದರೆ ನೀವು ಒಳನುಗ್ಗಿ ಬಂದು ಆ ನನ್ನ ನಾಡನ್ನು ಹೊಲೆಮಾಡಿದಿರಿ; ಆ ನನ್ನ ಸೊತ್ತನ್ನು ಅಸಹ್ಯಪಡಿಸಿದಿರಿ.
8 : ಯಾಜಕರು, ‘ಸರ್ವೇಶ್ವರಸ್ವಾಮಿ ಎಲ್ಲಿ? ಎಂದು ವಿಚಾರಿಸಲೇ ಇಲ್ಲ. ಧರ್ಮಶಾಸ್ತ್ರಿಗಳು ನನ್ನನ್ನು ಅರಿತುಕೊಳ್ಳಲಿಲ್ಲ. ಪ್ರಜಾಪಾಲಕರು ನನಗೆ ದ್ರೋಹಮಾಡಿದರು. ಪ್ರವಾದಿಗಳು ಬಾಳ್ ದೇವತೆಯ ಆವೇಶದಿಂದ ಪ್ರವಾದನೆ ಮಾಡಿದರು. ನಿರರ್ಥಕವಾದುವುಗಳನ್ನು ಪೂಜಿಸಿದರು.’
12 : ಆಕಾಶ ಮಂಡಲವೇ, ಇದನ್ನು ಕೇಳಿ ನಿಬ್ಬೆರಗಾಗು; ತತ್ತರಿಸಿ ಹಾಳಾಗು!” ಇದು ಸರ್ವೇಶ್ವರ ಸ್ವಾಮಿಯ ವಾಣಿ.
13 : “ನನ್ನ ಜನರು ಇಬ್ಬಗೆಯ ಅಪರಾಧಗಳನ್ನು ಎಸಗಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನೇ ತೊರೆದುಬಿಟ್ಟಿದ್ದಾರೆ! ತೊಟ್ಟಿಗಳನ್ನು, ನೀರುನಿಲ್ಲದ ಬಿರುಕು ತೊಟ್ಟಿಗಳನ್ನು ತಮಗಾಗಿ ಕೊರೆದುಕೊಂಡಿದ್ದಾರೆ!”
=============
ಕೀರ್ತನೆ 36:6-11 ಶ್ಲೋಕ.9
ಪ್ರಭೂ, ನಿನ್ನಲ್ಲಿದೆ ಜೀವದ ಬುಗ್ಗೆ
6 : ನಿನ್ನ ನೀತಿ ಸುರಗಿರಿಯಂತೆ, ನಿನ್ನ ನ್ಯಾಯ ಮಹಾಸಾಗರದಂತೆ / ಮಾನವರನು, ಪಶು ಪ್ರಾಣಿಗಳನು ಪ್ರಭು, ಸಲಹುವೆ ರಕ್ಷಕನಂತೆ //
7 : ನಿನ್ನಚಲ ಪ್ರೀತಿ, ಹೇ ದೇವಾ, ಎಷ್ಟೋ ಅಮೂಲ್ಯ / ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿ ಗಾಶ್ರಯ //
8 : ಅವರ ತೃಪ್ತಿ ನಿನ್ನ ಮಂದಿರದ ಸಮೃದ್ಧಿಯಿಂದ / ಅವರ ಪಾನೀಯ ನಿನ್ನ ಸಂಭ್ರಮ ಪ್ರವಾಹದಿಂದ //
9 : ನಿನ್ನಲ್ಲಿದೆ ಜೀವದ ಬುಗ್ಗೆ / ನಿನ್ನ ಬೆಳಕಿಂದ ಬೆಳಕೆಮಗೆ //
10 : ನಿನ್ನನರಿತವರನು ಪ್ರೀತಿಸು ಮುಂದಕ್ಕೂ / ಒಳಿತನ್ನು ಮಾಡು ನೇರಮನಸ್ಕರಿಗೂ //
11 : ಗರ್ವಿಗಳ ಕಾಲಿಗೆ ನಾ ಬೀಳುವುದು ಬೇಡ / ದುರುಳರ ಕೈ ನನ್ನ ಹೊರದೂಡುವುದು ಬೇಡ //
=================
ಮತ್ತಾಯ 13.10-17
10 : ತರುವಾಯ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ?" ಎಂದು ಕೇಳಿದರು.
11 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ.
12 : ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ.
13 : ಅವರೊಡನೆ ಸಾಮತಿ ರೂಪದಲ್ಲಿ ಮಾತನಾಡುವುದಕ್ಕೆ ಕಾರಣ ಇದು: ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕಿವಿಯಾರೆ ಕೇಳಿದರೂ ಕಿವಿಗೊಡುವುದಿಲ್ಲ; ಗ್ರಹಿಸುವುದೂ ಇಲ್ಲ.
14 : ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರುತ್ತದೆ: "ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರು.
15 : ಈ ಜನರ ಹೃದಯ ಕಲ್ಲಾಗಿದೆ ಕಿವಿ ಮಂದವಾಗಿದೆ ಕಣ್ಣು ಮಬ್ಬಾಗಿದೆ. ಇಲ್ಲದಿದ್ದರೆ ಇವರ ಕಣ್ಣು ಕಾಣುತ್ತಾ ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ ನನ್ನತ್ತ ತಿರುಗುತ್ತಿದ್ದರು; ದೇವರಾದ ನಾನಿವರನು ಸ್ವಸ್ಥಪಡಿಸುತ್ತಿದ್ದೆನು."
16 : "ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ.
17 : ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ.
==================
ಇಂದಿನ ಶುಭಸಂದೇಶದಲ್ಲಿ ಯೇಸುವು ಶಿಷ್ಯರನ್ನುದ್ದೇಶಿ, ನಿಮಗೆ ದೇವರ ಸಾಮ್ರಾಜ್ಯವನ್ನು ಅರಿಯಲು ದೈವಿಕ ವರವನ್ನು ನೀಡಲಾಗಿದೆ ಎನ್ನುತ್ತಾರೆ. ಶಿಷ್ಯರು ದೈವಿಕ ವರಕ್ಕೆ ಭಾಧ್ಯಸ್ಥರು, ಏಕೆಂದರೆ ಅವರೆಲ್ಲರೂ ಪ್ರಭುವಿನ ಆಪ್ತರಾಗಿದ್ದು, ದೇವರ ಸಾಮ್ರಾಜ್ಯ ಸಾರುವ ಜವಾಬ್ದಾರಿ ಹೊಂದಿದ್ದವರು.
ಶಿಷ್ಯರಂತೆ ನಮಗೂ ಪವಿತ್ರಾತ್ಮರ ಕೊಡುಗೆಗಳನ್ನು ನೀಡಲಾಗಿದೆ. ಈ ಕೊಡುಗೆಗಳು ನಾವು ಪಡೆದುಕೊಂಡದಲ್ಲ ಬದಲಾಗಿ ದೇವರೇ ಉಚಿತವಾಗಿ ನೀಡಿರುವುದು. ಈ ವರದಾನಗಳನ್ನು ನಮ್ಮನ್ನು ಹಾಗೂ ಇತರರನ್ನು ಪಾವನಗೊಳಿಸುವುದಕ್ಕೋಸ್ಕರವಾಗಿ ಹಾಗೂ ದೇವರ ವಾಕ್ಯವನ್ನು ಬೋಧಿಸುವುದಕ್ಕೆ ನೀಡಲಾಗಿದೆ.
ದೇವರು ನಮಗಿತ್ತಿರುವ ಹಲವಾರು ವರದಾನಗಳ ಬಗ್ಗೆ ನಮಗೆ ಕೃತಜ್ಞತೆಯಿರಬೇಕು, ತೃಪ್ತಿಯಿರಬೇಕು. ಆಗ ಮಾತ್ರ ನಮ್ಮಲ್ಲಿರುವುದರ ಬಗ್ಗೆ ನಮಗೆ ಅರಿವಿರುತ್ತದೆ, ಕೊರತೆಗಳಿದ್ದರೂ ಸಂತೋಷ, ನೆಮ್ಮದಿಯೆಂಬ ವರದಾನಗಳು ಕೂಡಿಬರುತ್ತವೆ. ಇಲ್ಲವಾದಲ್ಲಿ, ಇಲ್ಲದವುಗಳನ್ನು ನೆನೆದು, ಇರುವುದನ್ನೂ ಮರೆತು ಎಲ್ಲವನ್ನೂ ಕಳೆದುಕೊಳ್ಳುತ್ತೇವೆ.
===============
@ದನಿ ಮಾಧ್ಯಮ ಮನೆ
No comments:
Post a Comment