Thursday, 2 July 2020

ಜುಲೈ 26, 2020 ಭಾನುವಾರ

ಜುಲೈ 26, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 17ನೇ ಭಾನುವಾರ
ಮೊದಲ ವಾಚನ: 1 ಅರಸರು 3.5, 7-12
ಕೀರ್ತನೆ 119: 57, 72, 76-77, 127, 128, 129-130. ಶ್ಲೋಕ.77
ನಿನ್ನ ಧರ್ಮಶಾಸ್ತ್ರ ಪ್ರಭೂ, ನನಗೆ ಪರಮಪ್ರಿಯ
ಎರಡನೇ ವಾಚನ: ರೋಮನರಿಗೆ 8.28-30
ಶುಭಸಂದೇಶ: ಮತ್ತಾಯ 13.44-52
==================
1 ಅರಸರು 3.5, 7-12
5 : ದೇವರಾದ ಸರ್ವೇಶ್ವರ ಆ ರಾತ್ರಿ ಕನಸಿನಲ್ಲಿ ಅವನಿಗೆ ಕಾಣಿಸಿಕೊಂಡರು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು.
7 : ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು.
8 : ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾ ಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ.
9 : ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು.
10 : ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು.
11 : ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ.
12 : ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ.
===================
ಕೀರ್ತನೆ 119: 57, 72, 76-77, 127, 128, 129-130. ಶ್ಲೋಕ.77
ನಿನ್ನ ಧರ್ಮಶಾಸ್ತ್ರ ಪ್ರಭೂ, ನನಗೆ ಪರಮಪ್ರಿಯ
57 : ಹೇ ಪ್ರಭು, ನೀನೇ ನನ್ನ ಪಾಲಿನ ಸ್ವಾಸ್ತ್ಯ / ನಿನ್ನ ವಾಕ್ಯದ ಪಾಲನೆಯೆ ನಾಗೈದ ನಿರ್ಣಯ //
72 : ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ / ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ //
76 : ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ / ಸಾಂತ್ವನ ನೀಡಲಿ ಎನಗೆ ನಿನ್ನಚಲ ಒಲವರ
77 : ನಾ ಬದುಕುವಂತೆ ತೋರೆನಗೆ ನಿನ್ನ ದಯ / ನಿನ್ನ ಧರ್ಮಶಾಸ್ತ್ರ ನನಗೆ ಪರಮಪ್ರಿಯ
127 : ಚಿನ್ನ, ಅಪರಂಜಿಗಿಂತಲೂ ಪ್ರಿಯ / ನಿನ್ನ ಆಜ್ಞೆಗಳು ನನಗೆ ಸುಪ್ರಿಯ
128 : ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ / ನನಗೆ ಹಗೆ ಮಿಥ್ಯಮಾರ್ಗಗಳೆಲ್ಲ //
129 : ಅಪೂರ್ವವಾದ ನಿನ್ನ ಕಟ್ಟಳೆಗಳನು / ಹೃತ್ಪೂರ್ವಕವಾಗಿ ನಾ ಪಾಲಿಪೆನು
130 : ತರುವುದು ನಿನ್ನ ವಾಕ್ಯೋಪದೇಶ / ಸರಳ ಜನರಿಗೆ ಜ್ಞಾನ ಪ್ರಕಾಶ
=======================
ರೋಮನರಿಗೆ 8.28-30
28 : ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು. ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ.
29 : ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋ ಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ.
30 : ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.
ಮತ್ತಾಯ 13.44-52
44 : "ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡು ಕೊಂಡುಬಿಡುತ್ತಾನೆ.
45 : "ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು.
46 : ಅನಘ್ರ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ.
47 : "ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನುಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ.
48 : ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕಳಿತುಕೊಂಡು, ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ.
49 : ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು.
50 : ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು.
51 : "ಇದೆಲ್ಲ ನಿಮಗೆ ಅರ್ಥವಾಯಿತೇ?" ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು "ಅರ್ಥವಾಯಿತು" ಎಂದರು.
52 : ಆಗ ಯೇಸು, "ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ," ಎಂದರು.
================
ಮತ್ತಾಯ 13.44-52
44 : "ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದುಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡು ಕೊಂಡುಬಿಡುತ್ತಾನೆ.
45 : "ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು.
46 : ಅನಘ್ರ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ.
47 : "ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನುಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ.
48 : ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕಳಿತುಕೊಂಡು, ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ.
49 : ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು.
50 : ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು.
51 : "ಇದೆಲ್ಲ ನಿಮಗೆ ಅರ್ಥವಾಯಿತೇ?" ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು "ಅರ್ಥವಾಯಿತು" ಎಂದರು.
52 : ಆಗ ಯೇಸು, "ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ," ಎಂದರು.
===================

ಸಾಧಾರಣ ಕಾಲದ 17ನೇ ಭಾನುವಾರ

================================

ಪೀಠಿಕೆ

===========

ಈ ದಿನದ ವಾಚನಗಳು, ಸಂಪತ್ತು, ಅನರ್ಘ್ಯ ಮುತ್ತು ರತ್ನ, ನಿಧಿ ಮತ್ತು ಬಹುಮುಖ್ಯವಾಗಿ ಯಾವುದು ಒಳ್ಳೆಯದು ಕೆಟ್ಟದು ಎಂದು ನಿರ್ಧರಿಸುವ ಅಥವಾ ವಿವೇಚಿಸುವ ಜ್ಞಾನದ ಬಗ್ಗೆ ಮಾತನಾಡುತ್ತಿವೆ. ದೇವರ ಸಾಮ್ರಾಜ್ಯದ ಬಗ್ಗೆ ಮೂರು ಸಾಮತಿಗಳ ಮೂಲಕ ತಿಳಿ ಹೇಳುವ ಕ್ರಿಸ್ತ, ವಾಸ್ತವ ಬದುಕಲ್ಲೇ ಹೇಗೆ ದೇವರ ಸಾಮ್ರಾಜ್ಯ ಸ್ಥಾಪನೆಗೊಳ್ಳಬಹುದೆಂಬ ವಿಚಾರವನ್ನೂ, ಸಾಧ್ಯತೆಗಳನ್ನೂ ತಿಳಿಸುತ್ತಾನೆ. ಈ ದೇವರ ಸಾಮ್ರಾಜ್ಯ ಎಂದು ಬರುತ್ತದೋ ಎಂದು ಕಾಯದೆ ನಮ್ಮ ದಿನನಿತ್ಯ ವಾಸ್ತವದ ಬದುಕಿನಲ್ಲೆ ದೇವರ ಸಾಮ್ರಾಜ್ಯ ಸಾಧರಪಡಿಸುವ ವಿವೇಚನೆಗಾಗಿ ಈ ಬಲಿಪೂಜೆಯಲ್ಲಿ ಬೇಡಿಕೊಳ್ಳೋಣ.

1 ಅರಸರು 3.5, 7-12
==================

ಮೊದಲನೆಯ ವಾಚನವು, ಸರ್ವೇಶ್ವರ ಸ್ವಾಮಿಯು ಸೊಲೊಮೋನಿಗೆ ಜ್ಞಾನವನ್ನು ವಿವೇಕವನ್ನು ಅನುಗ್ರಹಿಸುವ ಘಟನೆಯ ಬಗ್ಗೆ ತಿಳಿಸುತ್ತದೆ. ಸೊಲೊಮೋನಿಗೆ ಕನಸಿನಲ್ಲಿ ಕಾಣಿಕೊಂಡ ದೇವರು ‘ನಿನಗೆ ಯಾವ ವರಬೇಕೋ ಕೇಳಿಕೊ?’ ಎಂದು ಅಗ್ರಹಿಸಿ, ಜ್ಞಾನ ವಿವೇಕವನ್ನು ಬೇಡುವ ಸೊಲೊಮೋನಿಗೆ ಜ್ಞಾನ ವಿವೇಕದ ಜತೆಗೆ ಎಲ್ಲ ಸಂಪತ್ತನ್ನೂ ಅನುಗ್ರಹಿಸಿ ಅವನನ್ನು ಅಶೀರ್ವದಿಸುತ್ತಾರೆ.
================
ರೋಮ 8:28-30
===============
ಎರಡನೆಯ ವಾಚನದಲ್ಲಿ ಸಂತ ಪೌಲನು “ದೇವರನ್ನು ಪ್ರೀತಿಸುವವರಿಗೆ ಸಕಲವೂ ಹಿತಕರವಾಗಿರುವುದು” ಎಂದು ಹೇಳುವುದರ ಮೂಲಕ ದೇವರನ್ನು ಎಲ್ಲಕ್ಕಿಂತಲ್ಲೂ ಹೆಚ್ಚಾಗಿ ಪ್ರೀತಿಸಲು ಕರೆನೀಡುತ್ತಾನೆ.
===================
ಮತ್ತಾಯ 13: 44-52
==================

ಶುಭಸಂದೇಶದಲ್ಲಿ ಕಂಡುಬರುವ ಮೂರು ಸಾಮತಿಗಳು; ಹೂಳಿಟ್ಟ ನಿಧಿ, ಅನರ್ಘ್ಯ ಮುತ್ತು ಮತ್ತು ಮೀನುಬಲೆ, ದೇವರ ಸಾಮ್ರಾಜ್ಯದ ನಾನಾ ಅಂಶಗಳನ್ನು ಅನಾವರಣಗೊಳಿಸುತ್ತವೆ. ಇವೆಲ್ಲವೂ ನಿಧಿ ಮತ್ತು ಮುತ್ತಿನಂತಿರುವ ದೇವರ ರಾಜ್ಯದ ಬೆಲೆ ಅಥವಾ ಮೌಲ್ಯದ ಬಗ್ಗೆ ತಿಳಿಯಪಡಿಸುತ್ತವೆ. ದೇವರ ಅನುಭವ ಪಡೆದವರಿಗೆ ಮಾತ್ರ ಮುತ್ತಿನಂತಿರುವ ದೇವರ ರಾಜ್ಯದ ಬೆಲೆ ತಿಳಿದಿರುತ್ತದೆ. ಅಂಥವರು ಎಲ್ಲಾ ಲೌಕಿಕ ವಸ್ತುಗಳನ್ನು ತ್ಯಜಿಸಿ ದೇವರ ಅನುಗ್ರಹ ಪಡೆಯಲು ಹಾತೊರೆಯುತ್ತಾರೆ ಎಂದು ತಿಳಿಸುವ ಸಾಮತಿಗಳು ಬದುಕಿನಲ್ಲಿ ನಾವು ಯಾವುದಕ್ಕೆ ಹಾತೊರೆಯಬೇಕು ಎಂಬ ವಾಸ್ತವಿಕತೆಯನ್ನು ದೃಢಪಡಿಸುತ್ತವೆ.

ದೇವರ ಸಾಮ್ರಾಜ್ಯ ಎಂದರೇನು? ಅದು ಹೇಗೆ ಸಂಭವಿಸುತ್ತದೆ ಎಂಬುವುದರ ಬಗ್ಗೆ ನೂರಾರು ವ್ಯಾಖ್ಯಾನಗಳಿವೆ. ದೇವರ ಸಾಮ್ರಾಜ್ಯದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಹಳೇಒಡಂಬಡಿಕೆಯಲ್ಲಿ ದೇವರ ಸಾಮ್ರಾಜ್ಯವೆಂಬುವುದು ದೇವರ ರಕ್ಷಣಾತ್ಮಕ ರಾಜ್ಯತ್ವ ಅಥವಾ ಆಡಳಿತವನ್ನು ಸೂಚಿಸುತ್ತದೆ. ಆಯ್ಕೆಯಾದ ಜನಾಂಗದ ಆಳ್ವಿಕೆಯು ಸಂಪೂರ್ಣವಾಗಿ ದೇವರ ಕೈಯಲ್ಲಿರುತ್ತದೆ. ಈ ಸಾಮ್ರಾಜ್ಯದಲ್ಲಿ ದೇವರೇ ಸಾರ್ವಭೌಮ ಮತ್ತು ಈ ಸಾಮ್ರಾಜ್ಯವು ಶಾಂತಿ, ನ್ಯಾಯ ಮತ್ತು ಕರುಣೆ. ನೈತಿಕತೆಗಳಿಂದ ಕೂಡಿರುವಂಥದ್ದು ಎಂದೇ ಇದರ ಅರ್ಥ.

ಹೊಸಒಡಂಬಡಿಕೆಯಲ್ಲಿ ಕ್ರಿಸ್ತರು ಸ್ವರ್ಗಸಾಮ್ರಾಜ್ಯ ಸಮೀಪಿಸಿತು ಎಂದು ಸಾರುವುದನ್ನು ನಾವು ಕೇಳುತ್ತೇವೆ. ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ ಎಂದು ಜನರಿಗೆ ಎಚ್ಚರಿಸುವುದಂತಹ ಮಾತುಗಳಿವು. ಜತೆಗೆ ಈ ದೇವರ ಸಾಮ್ರಾಜ್ಯವು ದೀನದಲಿತರ ಬಡವರ, ಪಾಪಿಗಳಿಗೆ ಸೇರಿದ್ದಾಗಿದೆ ಎಂದು ಹೇಳುವ ಯೇಸುವಿನ ಕ್ರಾಂತಿಕಾರಿ ಮಾತುಗಳು ಸಹ ನಮಗೆ ತಿಳಿದ್ದೇ ಇವೆ. ಸಹಾಯದ ಆವಶ್ಯಕತೆಯಿರುವ ನಮ್ಮ ನೆರೆಯವರಿಗೆ ನಾವು ಪ್ರತಿಕ್ರಿಯಿಸುವ ರೀತಿಯಿಂದ ಸ್ವರ್ಗರಾಜ್ಯಕ್ಕೆ ನಮ್ಮ ಪ್ರವೇಶವನ್ನು ನಿರ್ಧರಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಸ್ವರ್ಗರಾಜ್ಯವೆನ್ನುವುದು ಇಲ್ಲಿ ವೈಯಕ್ತಿಕದ್ದು, ಆಂತರಿಕದ ಪರಿವರ್ತನೆಯನ್ನು ಆಗ್ರಹಿಸುವಂಥದ್ದು. ಅರಿವಿನ ರೂಪದ್ದು ಮತ್ತು ಬಡಬಗ್ಗರಿಗೆ ಸೇರಿದಂಥದ್ದು. ಮುಖ್ಯವಾಗಿ ಪರರ ಹಿತವನ್ನು ಬಯಸಿ ಪಡೆದುಕೊಳ್ಳುವಂಥದ್ದು.

ಸಂತ ಪೌಲ ಮತ್ತು ಲೂಕರು ಸ್ವರ್ಗರಾಜ್ಯದ ಪ್ರತೀಕ ಕ್ರಿಸ್ತನೆಂದು ಸಾರುತ್ತಾರೆ. ಕ್ರಿಸ್ತರೇ ಸ್ವರ್ಗಸಾಮ್ರಾಜ್ಯದ ಸಾಕಾರ ಎಂದು ಹೇಳಲಾಗಿದೆ. ಇನ್ನೊಂದು ಕಡೆ ಸಂತ ಅಗಸ್ಟೀನ್ ಮತ್ತು ಸಂತ ಮಹಾ ಗ್ರೆಗೊರಿ (ದಿ ಗ್ರೇಟ್) ಅವರು ಧರ್ಮಸಭೆಯನ್ನು ಅಂದರೆ ಚರ್ಚನ್ನೇ ದೇವರ ಸಾಮ್ರಾಜ್ಯವೆಂದು ಪರಿಗಣಿಸಿ ಕ್ರೈಸ್ರರೆಲ್ಲರೂ ಆ ಸಾಮ್ರಾಜ್ಯದ ಪ್ರಜೆಗಳೆಂದು ತಿಳಿಸುತ್ತಾರೆ.

ಆದರೆ ಇಂದಿನ ಸಂದರ್ಭದಲ್ಲಿ ದೇವರ ಸಾಮ್ರಾಜ್ಯದ ಕಲ್ಪನೆ ಇಂತಿದೆ: ಮೊದಲನೆಯದಾಗಿ ದೇವರ ಸಾಮ್ರಾಜ್ಯವೆಂಬುವುದು ಈ ಲೋಕದಲ್ಲಿ ಕಂಡುಬರುವಂತಹ ಅಥವಾ ಕೈಗೊಳ್ಳುವ ದೇವರ ಆಳ್ವಿಕೆ ಮತ್ತು ಇದರಿಂದ ಮಾನವಕುಲಕ್ಕೆ ಸಿಗುವ ಅನಂತ ರಕ್ಷಣೆ. ಎರಡನೆಯದಾಗಿ ಮನುಷ್ಯನ ಎಲ್ಲಾ ಆಯಾಮಗಳನ್ನು ಅಂದರೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ರಾಜಕೀಯ ಮತ್ತು ಪರಿಸರವೂ ಒಳಗೊಂಡ ಮಾನವಕುಲದ ಸಂಪೂರ್ಣ ವಿಮೋಚನೆ. ಶಾಂತಿ, ಪ್ರೀತಿ, ಸತ್ಯ, ನ್ಯಾಯ ನೆಲೆಸಿರುವಂತಹ ಇಂತಹ ಸ್ಥಿತಿ ಮಾನವಕೋಟಿಯು ಹಾತೊರೆಯುವ ಅಂತಿಮ ಗುರಿಯೂ ಹೌದು. ಮೂರನೆಯದಾಗಿ ದೇವರ ಪ್ರೀತಿಯು ಆಳ್ವಿಕೆ ನಡೆಸುವಂಥದ್ದು. ಇಲ್ಲಿ ಎಲ್ಲಾ ವಿಷಯಗಳ ಮೇಲೆ ದೇವರ ಪರಮಾಧಿಕಾರವಿರುತ್ತದೆ ಮತ್ತು ಮಾನವಕುಲವು ಸಂಪೂರ್ಣ ಸಂತೋಷದಿಂದ ಕೂಡಿರುತ್ತದೆ.

ಧರ್ಮಸಭೆಯ ಬೋಧನೆಯನ್ನು ಆಧರಿಸಿ ದೇವರ ರಾಜ್ಯದ ಬಗೆಗಿನ ತಿಳುವಳಿಕೆಯನ್ನು ವಿಸ್ತಾರಿಸಿಕೊಳ್ಳೋಣ. ದೇವರ ರಾಜ್ಯವೆಂದರೆ ದೇವರ ಚಿತ್ತವನ್ನು ಸ್ವೀಕರಿಸಿ ಆ ಚಿತ್ತದಂತೆ ಜೀವಿಸುವುದು. ಪ್ರೀತಿ, ಸತ್ಯ, ನ್ಯಾಯ ಮತ್ತು ಶಾಂತಿ ಎಂಬ ದೇವರ ರಾಜ್ಯದ ಮೌಲ್ಯಗಳನ್ನು ನಮ್ಮ ಬದುಕಾಗಿಸಿಕೊಂಡು ಅವುಗಳನ್ನು ಪ್ರಚುರಪಡಿಸುವುದು. ಈ ಮೌಲ್ಯಗಳಿಂದ ನಮ್ಮ ಬದುಕನ್ನೂ ನಡೆಸಿದ್ದೆ ಆದರೆ ದೇವರ ಆಳ್ವಿಕೆ ನಮ್ಮ ಹೃದಯಗಳಲ್ಲಿ, ನಮ್ಮ ಸಮುದಾಯಗಳಲ್ಲಿ ಸಮಾಜದಲ್ಲಿ ಸ್ಥಾಪಿತಗೊಂಡಿದೆ ಎಂದರ್ಥ.

ಇಂದಿನ ನಮ್ಮ ಜಗತ್ತಿನ ಪರಿಸ್ಥಿತಿಯನ್ನು ಅವಲೋಕಿಸಿ, ದೇವರ ಆಳ್ವಿಕೆಯನ್ನು ನಾವು ಕಾಣಬಹುದೆ? ಅಧಿಕಾರಕ್ಕಾಗಿ, ಪ್ರತಿಷ್ಠೆಗಾಗಿ, ಹಣಕ್ಕಾಗಿ ಭದ್ರತೆಗಾಗಿ ಹಸಿದಿರುವ ಅನೇಕ ಜನರು ಭ್ರಷ್ಟತೆಯಲ್ಲಿ ಮುಳುಗಿಬಿಟ್ಟಿದ್ದಾರೆ. ಆದ್ದರಿಂದ ಈ ದೇವರ ಸಾಮ್ರಾಜ್ಯದ ಅನುಷ್ಠಾನಕ್ಕೆ ನಾವು ಏನು ಮಾಡಬಹುದು? ತುಂಬಾ ಸರಳ ಮತ್ತು ಪ್ರಾಯೋಗಿಕ ಮಾರ್ಗಸೂಚಿಗಳನ್ನು ತಿಳಿಯುವುದು ಇಲ್ಲಿ ಸೂಕ್ತವೆನ್ನಿಸುತ್ತದೆ.

ನಮ್ಮೆಲ್ಲ ಶಕ್ತಿ, ಪ್ರತಿಭೆ ಮತ್ತು ಇತರ ಸಂಪನ್ಮೂಲಗಳನ್ನು ಬಡವರ ಮತ್ತು ದೀನದಲಿತರ ಉದ್ಧಾರಕ್ಕೆ ಉಪಯೋಗಿಸುವುದು, ಬಂಧಿತರನ್ನು ಭೇಟಿ ಮಾಡುವುದು, ಅನಾರೋಗ್ಯ ಪೀಡಿತರ ಭೇಟಿ ಮಾಡಿ ಭರವಸೆ ಮೂಡಿಸುವುದು, ದುಃಖಿತರಿಗೆ ಸಾಂತ್ವನ ಹೇಳುವುದು, ಎಲ್ಲರಿಗೂ ಮುಖ್ಯವಾಗಿ ಮೃತರಾದವರಿಗಾಗಿ ಪ್ರಾರ್ಥಿಸುವುದು.

ಇವು ಸರಳ ಮತ್ತು ತುಂಬ ಪ್ರಾಯೋಗಿಕವಾದುದು. ಇವುಗಳ ಪಾಲನೆ ಅಸಾಧ್ಯವಾದುದಲ್ಲ. ಮೇಲೆ ಹೇಳಿರುವ ಮಾರ್ಗಸೂಚಿಗಳನ್ನು ಸಂತೋಷದಿಂದ ಅನುಸರಿಸೋಣ ದೇವರ ಆಳ್ವಿಕೆಯಯು ಈ ಲೋಕಕ್ಕೆ ಕಾಣುವಂತೆ ಬಾಳೋಣ.

ಕೊನೆಯದಾಗಿ; ಒಬ್ಬ ಅರಸ, ಒಂದು ಸ್ಥಳ ಎಂಬ ಸಂಕುಚಿತ ಅರ್ಥ ಬರುವ ಹಿನ್ನಲೆಯಲ್ಲಿ ಸಾಮ್ರಾಜ್ಯ ಎನ್ನುವುದಕ್ಕಿಂತ ಆಳ್ವಿಕೆ ಎನ್ನುವುದೇ ಹೆಚ್ಚು ಅರ್ಥಕೊಡುತ್ತದೆ. ಹೀಗೆ ದೇವರ ಸಾಮ್ರಾಜ್ಯ ಎಂದಾಗ ಅದೊಂದು ಪ್ರದೇಶ ಅಥವಾ ಸ್ಥಳ ಎನ್ನುವುದಕ್ಕಿಂತ ಒಂದು ಪ್ರಕ್ರಿಯೆ, ಒಂದು ಜೀವನ ವಿಧಾನ ಎಂಬರ್ಥದಲ್ಲಿ ಗ್ರಹಿಸಿ ಅಂತಹ ಜೀವನ ವಿಧಾನವನ್ನು ರೂಢಿಸಿಕೊಳ್ಳಲು ಪ್ರಯತ್ನಿಸೋಣ.
===========================
ಚಿಂತನೆ – ಫಾ ಜೋವಿ ಎಸ್ ಜೆ
===========================

@ದನಿ ಮಾಧ್ಯಮ ಮನೆ



No comments:

Post a Comment