ಜುಲೈ 27, 2020 ಸೋಮವಾರ [ಹಸಿರು]
ಮೊದಲ ವಾಚನ: ಯೆರೆಮೀಯ 13.1-11
ಕೀರ್ತನೆ 32: 18-21
ಜನ್ಮವಿತ್ತ ದೇವರನ್ನು ನೀವು ಸ್ಮರಿಸಲಿಲ್ಲ
ಶುಭಸಂದೇಶ: ಮತ್ತಾಯ 13.31-35
=================
ಯೆರೆಮೀಯ 13.1-11
1 : ಸರ್ವೇಶ್ವರಸ್ವಾಮಿ ನನಗೆ: “ನೀನು ಹೋಗಿ ನಾರಿನ ನಡುಕಟ್ಟು ಒಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊ. ಅದನ್ನು ನೀರಿನಲ್ಲಿ ನೆನೆಸಬೇಡ,” ಎಂದು ಅಪ್ಪಣೆ ಕೊಟ್ಟರು.
2 : ನಾನು ಅವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ.
3 : ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಿಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂದಿನೊಳಗೆ ಬಚ್ಚಿಡು,”
4 : ಎಂಬುದಾಗಿ ಸರ್ವೇಶ್ವರಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು.
5 : ಅವರ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ.
6 : ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,” ಎಂದು ಹೇಳಿದರು.
7 : ಆಗ ನಾನು ಯೂಫ್ರೆಟಿಸ್ ನದಿಗೆ ಹೋಗಿ ಹುಡುಕಿ ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು.
8 : ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಕ್ಯವೇನೆಂದರೆ:
9 : “ಇದು ಸರ್ವೇಶ್ವರನಾದ ನನ್ನ ನುಡಿ – ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು.
10 : ಈ ದುಷ್ಟ ಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬರುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು.
11 : ಇಸ್ರಯೇಲ್ ವಂಶವೆಲ್ಲವು ಹಾಗು ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕಟ್ಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನಗೆ ಕಿವಿಗೊಡದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.”
====================
ಧ.ಕಾ: 32: 18-21
ಜನ್ಮವಿತ್ತ ದೇವರನ್ನು ನೀವು ಸ್ಮರಿಸಲಿಲ್ಲ
18 : ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು ಸ್ಮರಿಸಲಿಲ್ಲ ನೀವು ಹೆತ್ತತಾಯಂತಿದ್ದಾ ದೇವರನು.
19 : ಇದ ಕಂಡು ಸರ್ವೇಶ್ವರ ಬೇಸರಗೊಂಡ ತನ್ನಾ ಕುವರಕುವರಿಯರ ನಡತೆಯ ನೋಡಿ ನೊಂದುಕೊಂಡ.
20 : ಎಂದೇ ಇಂತೆಂದುಕೊಂಡನು: ಇವರಿಗೆ ವಿಮುಖನಾಗುವೆನು, ಇವರಿಗೊದಗಲಿರುವ ಗತಿಯನು ನೋಡುವೆನು. ಸತ್ಯವರಿತೂ ಅನುಸರಿಸದೆ ಹೋದರು ಈ ವಿದ್ರೋಹ ಮಕ್ಕಳಂತವರು.
21 : ‘ರೇಗಿಸಿದರೆನ್ನನು ದೇವರಲ್ಲದವುಗಳ ಮೂಲಕ, ಸಿಟ್ಟೇರಿಸಿದರು ಅಚೇತ ವಿಗ್ರಹಗಳ ಮೂಲಕ. ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ, ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದಾ ಜನರ ಮುಖಾಂತರ.
====================
ಮತ್ತಾಯ 13.31-35
31 : ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: "ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡುಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ.
32 : ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಿಸುತ್ತವೆ."
33 : ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು: "ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು." ಸಾಮತಿಗಳ ಸುರಿಮಳೆಯೇಕೆ? (ಮಾರ್ಕ 4:33-34)
34 : ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ.
35 : “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು" ಎಂದು ದೇವರು ಪ್ರವಾದಿಯ ಮುಖಾಂತರ ತಿಳಿಸಿದ್ದ ಪ್ರವಚನವನ್ನು ಯೇಸು ಹೀಗೆ ನೆರವೇರಿಸಿದರು.
======================
ಯೇಸುಸ್ವಾಮಿ ಜನರೊಂದಿಗೆ ಮಾತನಾಡುವಾಗ ಸಾಮಿತಿಯ ಮೂಲಕ ಮಾತನಾಡುತ್ತಿದ್ದರು. ಹೀಗೆ ಸಾಮಿತಿಗಳನ್ನು ಕೊಡುವುದರಿಂದ ಜನಸಾಮಾನ್ಯರು ಸಂಗತಿಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಿದ್ದರು. ಇಂದಿನ ಶುಭ ಸಂದೇಶದಲ್ಲಿ ಯೇಸು ದೇವರ ಸಾಮ್ರಾಜ್ಯವನ್ನು ಸಾಸಿವೆ ಕಾಳಿನ ಮರಕ್ಕೆ ಹೋಲಿಸುತ್ತಾರೆ. ಸಣ್ಣ ಸಾಸಿವೆ ಕಾಳು ಮೊಳಕೆ ಒಡೆದು ಮುಂದೆ ಮರವಾಗುವುದಲ್ಲಿ ಸಂದೇಹವಿಲ್ಲ. ಹಾಗೆಯೇ ದೇವರ ಸಾಮ್ರಾಜ್ಯ ಕಟ್ಟಬೇಕಾದರೆ ನಾವು ಸಣ್ಣ ಪುಟ್ಟ ಕಾರ್ಯಗಳಿಂದ ಪ್ರಾರಂಭಿಸಿಬೇಖು. ದೇವರ ಪ್ರೀತಿಯನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ, ನಡೆನುಡಿಗಳಲ್ಲಿ ತೋರಿಸಬೇಕಾಗಿದೆ. ಒಬ್ಬ ಸಾಹಿತಿ ಹೇಳುತ್ತಾನೆ ಭೂಮಿಗೆ ಬಿದ್ದ ಬೀಜ ಎದಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು. ನಾವು ಮಾಡುವ ಒಳ್ಳೆಯ ಕಾರ್ಯ ಎಷ್ಟೇ ಸಣ್ಣದಿದ್ದರೂ ಒಂದಲ್ಲ ಒಂದು ದಿನ ಫಲ ಕೊಡುವುದು.
ಇದು ನಿಶ್ಚಿತ ಎಂಬ ಸಂದೇಶವನ್ನು ಯೇಸು ಕ್ರಿಸ್ತರು ಇಂದು ನಮಗೆ ಬೋಧಿಸುತ್ತಾರೆ. ಸಮಾಜದಲ್ಲಿ ನಾವು ಬದಲಾವಣೆ ತರಬೇಕಾದರೆ ಮೊದಲು ನಮ್ಮಲ್ಲಿರುವ ಮನೋಭಾವನೆಗಳಲ್ಲಿ ಬದಲಾವಣೆ ತರಬೇಕು. ಬದಲಾವಣೆಯ ಆಶೆ ಮೊಳಕೆಯೊಡೆಯಬೇಕು.
=================
@ದನಿ ಮಾಧ್ಯಮ ಮನೆ
No comments:
Post a Comment