Friday, 3 July 2020

ಆಗಸ್ಟ್ 27, 2020 ಗುರುವಾರ

ಆಗಸ್ಟ್ 27, 2020 ಗುರುವಾರ                        [ಹಸಿರು]
ಸಂತ ಮೋನಿಕ (ಸ್ಮರಣೆ)
ಮೊದಲ ವಾಚನ: 1 ಕೊರಿಂಥಿಯರಿಗೆ 1.1-9
ಕೀರ್ತನೆ 145: 2-7. ಶ್ಲೋಕ.1
ದೇವಾ, ಮಾಡುವೆ ನಿನ್ನ ನಾಮಕ್ಕೆ ನಮನ ಯುಗಯುಗಾಂತರಕೂ
ಶುಭಸಂದೇಶ: ಮತ್ತಾಯ 24.42-51

1 ಕೊರಿಂಥಿಯರಿಗೆ 1.1-9 1 : ಕ್ರಿಸ್ತಯೇಸುವಿನಲ್ಲಿ ಪುನೀತರಾಗಿ ದೇವಜನರಾಗಲು ಕರೆಹೊಂದಿರುವ ಕೊರಿಂಥದ ಶ್ರೀಸಭೆಯವರಿಗೂ ಹಾಗೂ ಪ್ರಭು ಯೇಸುಕ್ರಿಸ್ತರನ್ನು ಎಲ್ಲೆಡೆಯೂ ನಾಮಸ್ಮರಣೆ ಮಾಡುವ ಸರ್ವಜನರಿಗೂ - ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಲು ಕರೆಹೊಂದಿದ ಪೌಲನಾದ ನಾನು ಸಹೋದರ ಸೊಸ್ಥೆನನೊಂದಿಗೆ ಸೇರಿ ಬರೆಯುವ ಪತ್ರ. 2 : ಯೇಸುಕ್ರಿಸ್ತರು ನಮಗೂ ಸಮಸ್ತ ದೇವಜನರಿಗೂ ಪ್ರಭುವಾಗಿದ್ದಾರೆ. 3 : ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ 4 : ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 5 : ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್ ಚತುರರು ಆಗಿದ್ದೀರಿ. 6 : ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ. 7 : ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರು ನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ. 8 : ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು. 9 : ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸ ಪಾತ್ರರು.


ಕೀರ್ತನೆ 145: 2-7. ಶ್ಲೋಕ.1 ದೇವಾ, ಮಾಡುವೆ ನಿನ್ನ ನಾಮಕ್ಕೆ ನಮನ ಯುಗಯುಗಾಂತರಕೂ 2 : ಹೊಗಳುವೆನು ನಾ ದಿನದಿನವೂ ನಿನ್ನನು / ಭಜಿಸುವೆನೆಂದೆಂದಿಗೂ ನಿನ್ನ ಹೆಸರನು 3 : ಪ್ರಭು ಮಹಾತ್ಮನು, ಸ್ತುತ್ಯರ್ಹನು / ಆತನ ಮಹಿಮೆ ಅಗಮ್ಯವಾದದು 4 : ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು / ತಿಳಿಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು 5 : ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು / ನಿನ್ನ ಮಹೋನ್ನತ ಮಹಿಮಾಪ್ರಭಾವವನು 6 : ಜನರು ಸಾರುವರು ನಿನ್ನ ಅದ್ಭುತ ಶಕ್ತಿಯನು / ನಾ ಪ್ರಸಿದ್ಧಪಡಿಸುವೆನು ನಿನ್ನ ಮಹಿಮೆಯನು 7 : ಪ್ರಕಟಿಸುವರವರು ನಿನ್ನ ಮಹೋಪಕಾರವನು / ಹಾಡಿ ಹೊಗಳುವರು ನಿನ್ನ ನ್ಯಾಯನೀತಿಯನು


ಮತ್ತಾಯ 24.42-51 42 : ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ. 43 : ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ? 44 : ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು. 45 : “ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು. 46 : ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. 47 : ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ. 48 : ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು, 49 : ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದು ಕುಡಿಯಲಾರಂಭಿಸಿದರೆ, 50 : ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು. 51 : ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು.


ಅಖಾಯ ರೋಮ್ ಸಾಮ್ರಾಜ್ಯದ ಪ್ರಾ೦ತ್ಯ, ಭವ್ಯ ಕೊರಿ೦ಥ, ಅದರ ರಾಜಧಾನಿಯಾಗಿತ್ತು. ವಿವಿಧ ಧರ್ಮ, ಭಾಷೆ, ಸ೦ಸ್ಕ್ರತಿಗಳ ತಾಣವಾಗಿ, ವ್ಯಾಪಾರ ಹಾಗೂ ಉದ್ಯಮದಲ್ಲಿ ಚುರುಕಾದ ನಗರವಾದರಿ೦ದ ಭಿನ್ನಭೇಧದಿ೦ದ ಅನ್ನೈತಿಕಥೆಯಿ೦ದಲೂ ಕೂಡಿತ್ತು. ಸ೦ತ ಪೌಲ ತನ್ನ ಮೊದಲನೆಯ ಪತ್ರದಲ್ಲಿ ಕೊರಿ೦ಥಿಯದವರಿಗೆ, ಪ್ರಭು ಯೇಸುವಿನ ಬಗ್ಗೆ ಬರೆಯುತ್ತಾ ಅವರ ಎಲ್ಲ ಪ್ರಶ್ನೆ-ಸ೦ಶಯಗಳಿಗೆ ಕ್ರಿಸ್ತನಲ್ಲಿ ಉತ್ತರವಿದೆ ಎ೦ದು ಅವರಿಗೆ ಆರ್ಥೈಸುತ್ತಾನೆ. ಹ್ರತ್ಪೂರ್ವಕ, ಆನ೦ದಭರಿತ ಪೀಠಿಕೆಯಿ೦ದ ಪ್ರಾರ೦ಭಿಸುತ್ತಾನೆ. ಈ ನಿಟ್ಟಿನಲ್ಲಿ ಪ್ರಭುವನ್ನು ಅನುಸರಿಸುವವನ ಗೌರವ, ಸ್ಥಾನಮಾನ, ಹಿರಿದು ಹಾಗೂ ಹೆಮ್ಮೆಯ ವಿಷಯ ಎ೦ದು ಹೊಗಳುತ್ತಾನೆ. ಶುಭಸ೦ದೇಶದಲ್ಲಿ ಪ್ರಭುವಿನ ಧನ್ಯ ಹಿ೦ಬಾಲಕನ೦ತೆ ಪ್ರಾಮಾಣಿಕ, ವಿವೇಕ ಜೀವನದಲ್ಲಿ ತನ್ನ ಕರ್ತವ್ಯವನ್ನು ನಿಷ್ಟೆಯಿ೦ದ ಬಾಳಲು ದೇವರ ಕರೆಯಿದೆ.

No comments:

Post a Comment