Friday, 3 July 2020

ಆಗಸ್ಟ್ 26, 2020 ಬುಧವಾರ

ಆಗಸ್ಟ್ 26, 2020 ಬುಧವಾರ                        [ಹಸಿರು]
ಮೊದಲ ವಾಚನ: 2 ಥೆಸಲೋನಿಯರಿಗೆ 3.6-10, 16-18
ಕೀರ್ತನೆ 128:1-2, 4-5. ಶ್ಲೋಕ.1
ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು
ಶುಭಸಂದೇಶ: ಮತ್ತಾಯ 23.27-32

2 ಥೆಸಲೋನಿಯರಿಗೆ 3.6-10, 16-18 6 : ಪ್ರಿಯ ಸಹೋದರರೇ, ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ; ನಾವು ನಿಮಗೆ ಬೋಧಿಸಿದ ಸದಾಚಾರವನ್ನು ಪಾಲಿಸದೆ, ಮೈಗಳ್ಳತನದಿಂದ ದಿನಗಳೆಯುವ ಯಾವ ಸೋದರನೊಂದಿಗೂ ಸಂಪರ್ಕವಿಟ್ಟುಕೊಳ್ಳಬೇಡಿ. 7 : ನಾವು ಹೇಗೆ ನಡೆದುಕೊಂಡೆವೊ ಹಾಗೆಯೇ, ನೀವು ಸಹ ನಡೆದುಕೊಳ್ಳಬೇಕೆಂಬುದು ನಿಮಗೆ ತಿಳಿದ ವಿಷಯ. ನಾವು ನಿಮ್ಮ ಬಳಿಯಿದ್ದಾಗ ಸೋಮಾರಿಗಳಾಗಿರಲಿಲ್ಲ. 8 : ಪುಕ್ಕಟೆಯಾಗಿ ನಾವು ಯಾರ ಅನ್ನವನ್ನೂ ಉಣ್ಣಲಿಲ್ಲ. ನಿಮ್ಮಲ್ಲಿ ಯಾರಿಗೂ ಹೊರೆಯಾಗಬಾರದೆಂದು ಹಗಲಿರುಳೂ ನಾವೇ ಕಷ್ಟಪಟ್ಟು ದುಡಿದಿದ್ದೇವೆ. 9 : ನಿಮ್ಮಿಂದ ಪೋಷಣೆ ಪಡೆಯಲು ನಮಗೆ ಹಕ್ಕಿಲ್ಲವೆಂದಲ್ಲ; ನೀವು ನಮ್ಮನ್ನು ಅನುಸರಿಸಿ ನಡೆಯುವಂತೆ, ನಿಮಗೆ ಆದರ್ಶವಾಗಿ ಇರಬೇಕೆಂದೇ ನಾವು ಹೀಗೆ ಮಾಡಿದೆವು. 10 : ನಾವು ನಿಮ್ಮೊಡನಿದ್ದಾಗ, “ದುಡಿಯಲೊಲ್ಲದವನು ಉಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು. 16 : ಶಾಂತಿದಾತರಾದ ಪ್ರಭು ಎಲ್ಲ ಕಾಲಕ್ಕೂ ಎಲ್ಲ ವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಪ್ರಭು ನಿಮ್ಮೆಲ್ಲರೊಡನೆ ಇರಲಿ ! 17 : ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದಲೇ ಇದನ್ನು ಬರೆಯುತ್ತಿದ್ದೇನೆ. ನನ್ನ ಪ್ರತಿ ಪತ್ರಕ್ಕೂ, ನಾನು ಹಾಕುವ ಸಹಿ ಹಾಗೂ ನಾನು ಬರೆಯುವ ಧಾಟಿ ಇದೇ. ನಿಮಗೆ ನನ್ನ ಶುಭಾಶಯಗಳು ! 18 : ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೆಲ್ಲರೊಡನೆ ಇರಲಿ !


ಕೀರ್ತನೆ 128:1-2, 4-5. ಶ್ಲೋಕ.1 ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು 1 : ಧನ್ಯನು, ಪ್ರಭುವಿನಲಿ ಭಯಭಕ್ತಿಯುಳ್ಳವನು / ಧನ್ಯನು, ಆತನ ಮಾರ್ಗಗಳಲೇ ನಡೆಯುವವನು 2 : ನಿನ್ನ ಕೈಕೆಸರಾದರೆ ಬಾಯಿ ಮೊಸರಾಗುವುದು / ಧನ್ಯನಾಗುವೆ ನೀನು; ನಿನಗೆ ಶುಭವಾಗುವುದು 4 : ಹೊಂದುವನು ಅಂತಹ ಆಶೀರ್ವಾದವನು / ಪ್ರಭುವಿನಲಿ ಭಯಭಕ್ತಿಯುಳ್ಳವನು 5 : ಸಿಯೋನಿನಲ್ಲಿರುವ ಪ್ರಭು ನಿನ್ನನು ಆಶೀರ್ವದಿಸಲಿ / ಜೆರುಸಲೇಮಿನ ಏಳ್ಗೆಯನು ಕಾಣು ಇಡೀ ಜೀವಮಾನದಲಿ


ಮತ್ತಾಯ 23.27-32 27 : “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸುಣ್ಣ ಬಳಿದ ಸಮಾಧಿಗಳು. ಹೊರನೋಟಕ್ಕೇನೋ ಅವು ಥಳಕಾಗಿವೆ. ಒಳಗೋ ಸತ್ತವರ ಮೂಳೆಗಳಿಂದಲೂ ಕೊಳಕಿನಿಂದಲೂ ತುಂಬಿವೆ. 28 : ಬಹಿರಂಗ ನೋಟಕ್ಕೆ ನೀವು ಸತ್ಪುರುಷರು. ಅಂತರಂಗದಲ್ಲಾದರೋ ಕಪಟ, ಕಲ್ಮಷಗಳಿಂದ ತುಂಬಿದವರು. 29 : “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪ್ರವಾದಿಗಳಿಗೆ ಗೋರಿಗಳನ್ನು ಕಟ್ಟಿಸುತ್ತೀರಿ. 30 : ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. ‘ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ’ ಎಂದುಕೊಳ್ಳುತ್ತೀರಿ. 31 : ಹೀಗೆ ಪ್ರವಾದಿಗಳನ್ನು ಕೊಲೆಮಾಡಿದವರ ಪೀಳಿಗೆಗೆ ನೀವು ಸೇರಿದವರು ಎಂದು ನೀವೇ ಸಾಕ್ಷಿಕೊಡುತ್ತೀರಿ. 32 : ಒಳ್ಳೆಯದು, ನಿಮ್ಮ ಪೂರ್ವಜರು ಪ್ರಾರಂಭಿಸಿದ್ದನ್ನು ನೀವು ಹೋಗಿ ಪೂರ್ಣಗೊಳಿಸಿರಿ.

ಮನುಷ್ಯನ ಹೃದಯ ಒಂದು ಬೀಸುವ ಕಲ್ಲಿನಂತೆ, ಅದರಲ್ಲಿ ಅವನು ಏನು ಹಾಕುವನೋ ಅದನ್ನೇ ಅದು ನುರಿಸುತ್ತದೆ. ಒಳ್ಳೆಯ ಕಾಳನ್ನು ಹಾಕಿದರೆ ಅದು ಆ ಕಾಳನ್ನು ಬೀಸುತ್ತದೆ. ಕೆಟ್ಟ ಕಾಳನ್ನು ಹಾಕಿದರೆ ಅದು ಕೆಟ್ಟ ಕಾಳನ್ನು ಬೀಸುತ್ತದೆ. ಅದರಲ್ಲಿ ಏನನ್ನೂ ಹಾಕದೇ ಇದ್ದರೂ ಅದು ಸದಾ ಬೀಸುತ್ತಲೇ ಇರುತ್ತದೆ. ತನ್ನ ಹೃದಯಕ್ಕೆ ಹಾಕುವುದಿದ್ದರೆ ಮನುಷ್ಯನು ಒಳ್ಳೆಯದನ್ನೇ ಹಾಕಬೇಕು. ಮನುಷ್ಯನು ಮಾಡುವ ಎಲ್ಲಾ ಕೆಲಸಗಳೂ, ಮಾತುಗಳು ಅವನ ಹೃದಯವನ್ನೇ ಪ್ರತಿಬಿಂಬಿಸುತ್ತವೆ. ಯೇಸು ನಮ್ಮ ಹೃದಯದ ಶುದ್ಧತೆಗೆ ಹೆಚ್ಚು ಮಹತ್ವ ನೀಡುತ್ತಾರೆ. ಯೆಹೂದ್ಯ ಧಾರ್ಮಿಕ ಮುಖಂಡರು ಸುಣ್ಣ ಬಳಿದ ಸಮಾಧಿಗಳಂತೆ ಅಲಂಕೃತರಾಗಿ ಕಂಡರೂ ಅವರ ಹೃದಯಗಳು ದೇವರ ಸೇವೆಯಿಂದ ಬಹಳ ದೂರವಿದ್ದವು. ಯೇಸು ಧಾರ್ಮಿಕ ಆಚಾರಗಳಿಗಿಂತ, ಬಾಹ್ಯ ಆಚರಣೆಗಿಂತ ಆತ್ಮಶುದ್ದಿ ದೇವರಿಗೆ ಪ್ರಿಯಾವಾದದ್ದು ಎಂದು ಎಚ್ಚರಿಸುತ್ತಾರೆ.


No comments:

Post a Comment