Thursday, 2 July 2020

ಜುಲೈ 30, 2020 ಗುರುವಾರ

ಜುಲೈ 30, 2020 ಗುರುವಾರ                        [ಹಸಿರು]
ಸಂತ ಪೀಟರ್ ಕ್ರಿಸೊಲಗಸ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆರೆಮೀಯ 18.1-6
ಕೀರ್ತನೆ 146: 1-2, 3-4, 5-6. ಶ್ಲೋಕ.5
ಇಸ್ರಯೇಲ ಕುಲ ದೇವರು ಯಾರಿಗೆ ಉದ್ಧಾರಕನೋ ಅವನೇ ಧನ್ಯನು
ಶುಭಸಂದೇಶ: ಮತ್ತಾಯ 13.47-53

ಯೆರೆಮೀಯ 18.1-6 1 : ಸರ್ವೇಶ್ವರಸ್ವಾಮಿ ನನಗೆ: 2 : “ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು, ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುತ್ತೇನೆ,” ಎಂದು ತಿಳಿಸಿದರು. 3 : ಅಂತೆಯೇ ನಾನು ಕುಂಬಾರನ ಮನೆಗೆ ಹೋದೆ. ಅಲ್ಲಿ ಆ ಕುಂಬಾರನು ತಿರುಗುತ್ತಿದ್ದ ಚಕ್ರದ ಮೇಲೆ ಕೆಲಸ ಮಾಡುತ್ತಿದ್ದ. 4 : ಅವನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಒಂದು ಪಾತ್ರೆ ಕೆಟ್ಟು ಹೋಗುತ್ತಿದ್ದಾಗಲೆಲ್ಲ ಅದನ್ನು ಮತ್ತೆ ತನಗೆ ಸರಿತೋಚಿದ ಹಾಗೆ ಹೊಸ ಪಾತ್ರೆಯನ್ನಾಗಿ ಮಾಡುತ್ತಿದ್ದ. 5 : ಆಗ ಸರ್ವೇಶ್ವರ ನನಗೆ ಅನುಗ್ರಹಿಸಿದ ಸಂದೇಶ: 6 : “ಇಸ್ರಯೇಲಿನ ವಂಶಜರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೇ? ಇಸ್ರಯೇಲಿನ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ ಹಾಗೆಯೇ ನೀವು ನನ್ನ ಕೈಯಲ್ಲಿ ಇದ್ದೀರಿ.


ಕೀರ್ತನೆ 146: 1-2, 3-4, 5-6. ಶ್ಲೋಕ.5 ಇಸ್ರಯೇಲ ಕುಲ ದೇವರು ಯಾರಿಗೆ ಉದ್ಧಾರಕನೋ ಅವನೇ ಧನ್ಯನು 1 : ಪ್ರಭುವಿಗೆ ಸ್ತುತಿಸ್ತೋತ್ರ ಅಲ್ಲೆಲೂಯ / ಮನವೇ, ವಂದಿಸು ಆತನನು ಅಲ್ಲೆಲೂಯ 2 : ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು / ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು 3 : ನಂಬಬೇಡ ಅಧಿಕಾರಿಯನು / ನೆಚ್ಚಬೇಡ ನರಮಾನವನನು / ಉದ್ಧರಿಸಲು ಅಸಮರ್ಥನವನು 4 : ಉಸಿರುಹೋದುದೇ ಮರುಳುತ್ತಾನವನು ಮಣ್ಣಿಗೆ / ಅಂದೇ ಅಳಿಯುತ್ತದೆ ಅವನೆಲ್ಲಾ ಯೋಜನೆ 5 : ಇಸ್ರಯೇಲ ಕುಲದೇವರು ಯಾರಿಗೆ ಉದ್ಧಾರಕನೋ, ಅವನೇ ಧನ್ಯನು / ಪ್ರಭುವನು ತನ್ನ ದೇವರೆಂದು ಯಾರು ನಂಬಿಹನೋ, ಅವನೇ ಧನ್ಯನು 6 : ಭೂಮ್ಯಾಕಾಶ, ಸಾಗರ, ಚರಾಚರಗಳನು ನಿರ್ಮಿಸಿದವ ಆತನೆ / ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ

ಮತ್ತಾಯ 13.47-53 47 : "ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನುಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. 48 : ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕಳಿತುಕೊಂಡು, ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ. 49 : ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟುಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು. 50 : ಅಲ್ಲಿ ಅವರು ಕಟಕಟನೆ ಹಲ್ಲು ಕಡಿದುಕೊಂಡು ಗೋಳಾಡುವರು. 51 : "ಇದೆಲ್ಲ ನಿಮಗೆ ಅರ್ಥವಾಯಿತೇ?" ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು "ಅರ್ಥವಾಯಿತು" ಎಂದರು. 52 : ಆಗ ಯೇಸು, "ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ," ಎಂದರು. 53 : ಈ ಸಾಮತಿಗಳನ್ನು ಹೇಳಿಯಾದ ಮೇಲೆ ಯೇಸುಸ್ವಾಮಿ ಅಲ್ಲಿಂದ ಹೊರಟು ಹೋದರು.

ಯೇಸುಸ್ವಾಮಿ ಜನರಿಗೆ ಅರ್ಥವಾಗುವ ರೀತಿ ಸರಳ ಭಾಷೆಯಲ್ಲಿ ಸ್ವರ್ಗ ಸಾಮ್ರಾಜ್ಯದ ಬಗ್ಗೆ ಭೋದಿಸುತ್ತಿದ್ದರು. ತನ್ನ ಶಿಷ್ಯರಲ್ಲಿ ಬಹು ಮಂದಿ ಮೀನುಗಾರರಿದುದ್ದರಿಂದ ಅವರಿಗೆ ಅರ್ಥವಾಗುವ ರೀತಿ ದೇವರ ಸಾಮ್ರಾಜ್ಯವನ್ನು ಮೀನಿನ ಬಲೆಗೆ ಹೋಲಿಸುತ್ತಾರೆ. ಮೀನು ಹಿಡಿಯಲು ಬಲೆ ಬೀಸಿದಾಗ ಅದರಲ್ಲಿ ಎಲ್ಲ ಜಾತಿಯ ಮಿನುಗಳು ಸಿಕ್ಕಿ ಹಾಕಿಕೊಳ್ಳುತ್ತವೆ. ಅದೇ ರೀತಿ ದೇವರ ಸಾಮ್ರಾಜ್ಯ ಕೇವಲ ಒಂದು ವರ್ಗದವರಿಗೆ ಸೀಮಿತವಲ್ಲ ಅದು ಎಲ್ಲರ ಸ್ವತ್ತು. ಆದರೆ ಆ ಸಾಮ್ರಾಜ್ಯವನ್ನು ಸೇರಬೇಕಾದರೆ ಒಳ್ಳೆಯವರಾಗಿ ಜೀವಿಸಿ ಯೇಸುವಿನ ತತ್ವಗಳನ್ನು ಪಾಲಿಸಿದಾಗ ಮಾತ್ರ. ಹೇಗೆ ಮೀನುಗಾರ ಬಳಸಲು ಯೋಗ್ಯವಾದ ಮೀನುಗಳನ್ನು ಮಾತ್ರ ಆಯ್ದುಕೊಂಡು ಕೆಟ್ಟ ಮೀನುಗಳನ್ನು ಬಿಸಾಡುತ್ತಾನೊ ಹಾಗೆಯೇ ದೇವರು ಉತ್ತಮರನ್ನು ಸ್ವರ್ಗಕ್ಕು ಅನೀತಿವಂತರನ್ನು, ಪಾಪಿಗಳನ್ನು ನರಕಕ್ಕು ದಬ್ಬುತ್ತಾರೆಂದು ಈ ಸಾಮತಿಯ ಮೂಲಕ ತಿಳಿಸಲಾಗಿದೆ.

No comments:

Post a Comment