Thursday, 2 July 2020

ಜುಲೈ 29, 2020 ಬುಧವಾರ

ಜುಲೈ 29, 2020 ಬುಧವಾರ                        [ಹಸಿರು]
ಸಂತ ಮಾರ್ತಾ (ಸ್ಮರಣೆ)
ಮೊದಲ ವಾಚನ: ಯೆರೆಮೀಯ 15.10, 16-21
ಕೀರ್ತನೆ 59:1-2, 3-4, 9-11, 16-17 ಶ್ಲೋಕ.16
ದೇವಾ, ಸಂಕಟದಲ್ಲೆನಗಾದ ಆಶ್ರಯ ಗಿರಿ ನೀವು
ಶುಭಸಂದೇಶ: ಯೊವಾನ್ನ 11: 19-27 (ಪರ್ಯಾಯ) 
==================
ಯೆರೆಮೀಯ 15.10, 16-21 10 : “ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ. 16 : ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿ ಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದೆವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ? 17 : ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸ ಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ. 18 : ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?” 19 : ಅದಕ್ಕೆ ಸರ್ವೇಶ್ವರ: “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ. 20 : ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. 21 ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.” =================
ಕೀರ್ತನೆ 59:1-2, 3-4, 9-11, 16-17 ಶ್ಲೋಕ.16 ದೇವಾ, ಸಂಕಟದಲ್ಲೆನಗಾದ ಆಶ್ರಯ ಗಿರಿ ನೀವು
2 : ಕೇಡಿಗರಿಂದೆನ್ನ ಬಿಡಿಸು / ಕೊಲೆಪಾತಕರಿಂದ ಉಳಿಸು // 3 : ಇಗೋ ನನ್ನ ಪ್ರಾಣಕ್ಕವರು ಹೂಡಿರುವ ಹೊಂಚು / ನನ್ನ ಮೇಲೆರಗಲು ಹೂಡಿರುವ ಕ್ರೂರಿಗಳ ಸಂಚು // 4 : ನಿರಪರಾಧಿ, ನಿರ್ದೋಷಿ ನಾನಾದರು / ಮೇಲೆ ಬೀಳಲಿದೋ ಸಜ್ಜುಗೊಂಡಿಹರು / ಎಚ್ಚೆತ್ತು ಪ್ರಭು, ನನಗೆ ನೆರವಾಗಿರು // 10 : ಪ್ರೀತಿಯಿಂದ ನೆರವಾಗುವನು ದೇವನೆನಗೆ / ಶತ್ರುಗಳಿಗಾದ ಸೋಲನು ತೋರಿಸುವನೆನಗೆ // 11 : ಕೊಲಬೇಡಾ ದ್ರೋಹಿಗಳನು ಫಕ್ಕನೆ / ಮರೆತಾರೆನ್ನ ಜನತೆ ಪಾಠ ಕಲಿಯದೆ // ಚದರಿಸು ಶಕ್ತಿಯಿಂದ, ಅಲೆಯಲಿ ದಿಕ್ಕು ತೋಚದೆ / ಈ ಪರಿ ತಗ್ಗಿಸು ಅವರನು; ಪ್ರಭು, ನೀಡೆನಗೆ ರಕ್ಷೆ // 16 : ನಾನಾದರೊ ಹೊಗಳಿ ಹಾಡುವೆ ದೇವಾ, ನಿನ್ನ ಸಾಮಥ್ರ್ಯವನು / ಉದಯಕಾಲದಲೆ ನಾ ಸಂಕೀರ್ತಿಸುವೆ ನಿನ್ನ ಪ್ರೀತಿ ಪ್ರೇಮವನು / ಸಂಕಟದಲ್ಲೆನಗಾದ ಆಶ್ರಯಗಿರಿ, ದುರ್ಗ, ನಿನಲ್ಲವೇನು?// 17 : ನೀನೆನ್ನ ಶಕ್ತಿದೇವಾ, ನಿನಗೆನ್ನ ಸ್ತುತಿ / ನೀನೆನ್ನ ದುರ್ಗ, ತೋರಿಸು ಎನಗೆ ಪ್ರೀತಿ //
===================
ಯೊವಾನ್ನ 11: 19-27 19 : ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು. 20 : ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು 21 : ಮಾರ್ತ ಯೇಸುವನ್ನು ಕಂಡು, ‘ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. 22 : ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು. 23 : ಯೇಸು, “ನಿನ್ನ ಸಹೋದರನು ಜೀವಂತವಾಗಿ ಏಳುವನು,” ಎಂದರು. 24 : “ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ,” ಎಂದಳು ಮಾರ್ತ. 25 : ಯೇಸು, ಅವಳಿಗೆ, “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. 26 : ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?” ಎಂದು ಕೇಳಲು ಅವಳು, 27 : ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು.
========================
ಮಾರ್ತ, ಲಾಜರ್ ಮತ್ತು ಮರಿಯಳದು ಬೆಥಾನಿಯದಲ್ಲಿ ಸಂತೋಷದ ಕುಟುಂಬವಾಗಿತ್ತು. ಯೇಸು ಆಗಾಗ ಅವರ ಮನೆಯಲ್ಲಿ ತಂಗುತ್ತಿದ್ದರು. ಅವರೊಂದಿಗೆ ಶಿಷ್ಯರ ಕೂಟವೂ ಬರುತ್ತಿತ್ತು. ಮಾರ್ತ ಮನೆಯ ಹಿರಿಯಳಾಗಿ ಅವರೆಲ್ಲರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದಳು. `ಅತಿಥಿ ದೇವೊಭವ’ವೆಂದು ನಂಬಿದ್ದಳು. ಎಷ್ಟೇ ತಡವಾಗಿ ಬಂದರೂ, ಅನೇಕರಿದ್ದರೂ ಮಾರ್ತ ಸತ್ಕರಿಸುತ್ತಿದ್ದಳು. ಮಾರ್ತ ಒಮ್ಮೆ ಯೇಸುವಿನ ನವಿರಾದ ನಯವಾದ ತಿದ್ದುಪಡಿಯನ್ನು ಸ್ವೀಕರಿಸಿ ಮೊದಲು ಸ್ವರ್ಗ ಸಾಮ್ರಾಜ್ಯಕ್ಕಾಗಿ ತವಕ ಪಡುವವಳಾದಳು (ಮತ್ತಾ 6:33). ಲಾಜರ ತೀರಿಹೋದಾಗ ಕ್ರಿಸ್ತನಿಗಾಗಿ ಹೇಳಿ ಕಳುಹಿಸಿದಳು, ಬಂದಾಗ ವಿಶ್ವಾಸ ಪ್ರಕಟನೆಯನ್ನೂ ಮಾಡಿದಳು (ಯೊವಾ 11:27). ಮಾರ್ತಳಂತ ಬದುಕು ನಮ್ಮದಾಗಲಿ.

===================

@ದನಿ ಮಾಧ್ಯಮ ಮನೆ

No comments:

Post a Comment