ಆಗಸ್ಟ್ 30, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 22ನೇ ಭಾನುವಾರ
ಮೊದಲ ವಾಚನ: ಯೆರೆಮೀಯ 20.7-9
ಕೀರ್ತನೆ 63: 1-8. ಶ್ಲೋಕ.1
ದೇವಾ, ನಿನಗಾಗಿ ಎನ್ನ ಮನ ಕಾದಿದೆ
ಎರಡನೇ ವಾಚನ: ರೋಮನರಿಗೆ 12.1-2
ಶುಭಸಂದೇಶ: ಮತ್ತಾಯ 16.21-27
ಯೆರೆಮೀಯ 20.7-9
7 : ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ. ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ? ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ.
8 : ನನ್ನ ಮಾತೆಲ್ಲ ಅರಚಾಟ ‘ಹಿಂಸಾಚಾರ, ಕೊಳ್ಳೆ’ ಇವೇ ನನ್ನ ಕೂಗಾಟ. ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ.
9 : ‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು, ಅವರ ಹೆಸರಿನಲ್ಲಿ ಇನ್ನು ಮಾತಾಡೆನು’ ಎಂದುಕೊಂಡೆನಾದರೆ ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ. ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ ಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ.
ಕೀರ್ತನೆ 63: 1-8. ಶ್ಲೋಕ.1
ದೇವಾ, ನಿನಗಾಗಿ ಎನ್ನ ಮನ ಕಾದಿದೆ
2 : ನಿನ್ನ ಮಂದಿರದಲಿ ನನಗಾದ ದರ್ಶನದಲಿ | ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ ||
3 : ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ / ಎಡೆಬಿಡದೆ ಮಾಳ್ಪುದು ನನ್ನೀ ತುಟಿ ನಿನ್ನ ಸ್ತುತಿ //
4 : ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ / ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ //
5 : ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ / ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ//
6 : ನಿದ್ರಿಸುವಾಗಲು ಮಾಡುವೆ ನಿನ್ನ ಸ್ಮರಣೆ / ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ //
8 : ನನ್ನಾತ್ಮ ನಿನಗಾತುಕೊಂಡಿದೆ / ನಿನ್ನ ಬಲಗೈ ನನಗಿಂಬಾಗಿದೆ //
9 : ಕೇಡು ಬಗೆವವರು ನನ್ನ ಪ್ರಾಣಕೆ / ಇಳಿದು ಹೋಗುವರು ಅಧೋಲೋಕಕೆ
ಮತ್ತಾಯ 16.21-27
21 : ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನಾನು ಜೆರುಸಲೇಮಿಗೆ ಹೋಗಬೇಕಾಗಿದೆ; ಅಲ್ಲಿ ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಕಠಿಣವಾದ ಯಾತನೆಯನ್ನು ಅನುಭವಿಸಿ, ಮರಣಕ್ಕೆ ತುತ್ತಾಗಿ, ಮೂರನೆಯ ದಿನ ಪುನರುತ್ಥಾನ ಹೊಂದಬೇಕಾಗಿದೆ" ಎಂದು ಅಂದಿನಿಂದಲೂ ಒತ್ತಿ ಹೇಳಲಾರಂಭಿಸಿದರು.
22 : ಇದನ್ನು ಕೇಳಲಾಗದೆ ಪೇತ್ರನು ಯೇಸುವನ್ನು ಪಕ್ಕಕ್ಕೆ ಕರೆದು, "ಪ್ರಭೂ, ಹಾಗೆನ್ನಲೇಬೇಡಿ, ನಿಮಗೆಂದಿಗೂ ಹಾಗೆ ಸಂಭವಿಸದಿರಲಿ," ಎಂದು ಪ್ರತಿಭಟಿಸಿದನು.
23 : ಆದರೆ ಯೇಸು ಪೇತ್ರನತ್ತ ತಿರುಗಿ, "ಸೈತಾನನೇ, ತೊಲಗಿಲ್ಲಿಂದ; ನೀನು ನನಗೆ ಅಡೆತಡೆ; ನಿನ್ನ ಈ ಆಲೋಚನೆ ಮನುಷ್ಯರದ್ದೇ ಹೊರತು, ದೇವರದಲ್ಲ," ಎಂದರು.
24 ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
25 : ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.
26 : ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?
27 : ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.
===================
ಸಾಧಾರಣ ಕಾಲದ 22ನೇ ಭಾನುವಾರ
=========================
ಪೀಠಿಕೆ
========
ಕಷ್ಟ, ಸಂಕಟ, ನೋವು, ನಲಿವು, ಸುಖ, ದುಃಖ, ಸಂಭ್ರಮ, ಸೋಲು, ಗೆಲುವು ಜೀವನದ ಅವಿಭಾಜ್ಯ ಅಂಗಗಳು. ಇವುಗಳನ್ನು ಅನುಭವಿಸುತ್ತಲೇ ಮನುಷ್ಯನು ಜೀವಿಸ ಬೇಕಿದೆ. ಇಂದಿನ ಮೂರು ವಾಚನಗಳ ಸಾರಾಂಶ ಇದೇ. ಮಾನವನು ಸುಖಕ್ಕಾಗಿ ಹಾತೊರೆಯುತ್ತಾನೆ ಮತ್ತು ತನ್ನ ಸುಖಕ್ಕಾಗಿ ಇತರರ ಸಂತೋಷವನ್ನು ಬಲಿಕೊಡಲೂ ಹಿಂಜರಿಯುವುದಿಲ್ಲ.
ಇಂದಿನ ಆರಾಧನಾ ವಿಧಿಯಲ್ಲಿ ಭಾಗವಹಿಸುವಾಗ ಪ್ರಭುವಿನ ವಾಕ್ಯದಂತೆ “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸಿದ್ದರೆ ಅವನು ತನ್ನನ್ನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೆ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ ” ಈ ವಾಕ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಪವಿತ್ರ ಬಲಿಪೂಜೆಯೇ ನಮಗೆ ಪ್ರೇರಣೆ ಮತ್ತು ಸಹಾಯವಾಗಲಿ.
ಮೊದಲ ವಾಚನ: ಯೆರೆಮೀಯ 20.7-9
===============================
ಮೊದಲನೇ ವಾಚನದಲ್ಲಿ ಪ್ರವಾದಿ ಯೆರೆಮೀಯ ತನ್ನ ಪ್ರವಾದನೆಯ ಸಮಯದಲ್ಲಿ ಅನುಭವಿಸುತ್ತಿದ್ದ ನೋವನ್ನು ಹಾಗೂ ಸಂಕಟವನ್ನು ವ್ಯಕ್ತಪಡಿಸುತ್ತಾನೆ. ಸರ್ವೇಶ್ವರನ ಕರೆಗೆ ಸಮ್ಮತಿಸಿ ತನ್ನನ್ನೇ ಆ ಕರೆಗೆ ಸಮರ್ಪಿಸಿ ಜೀವಿಸುವ ಜೀವನವು ಆತನಿಗೆ ಅತಿ ಕಷ್ಟಕರವಾಗಿತ್ತು. ಆದರೆ ಆ ಕಷ್ಟವನ್ನು ಸಹಿಸಿಕೊಂಡು ಬಾಳಲು ಸರ್ವೇಶ್ವರನ ಕೃಪೆಗಾಗಿ ಅವನು ಅಂಗಲಾಚುತ್ತಾನೆ. ಸರ್ವೇಶ್ವರನ ವಾಕ್ಯವನ್ನು ಪ್ರಕಟಿಸಲು ಅಂಜಿದರೆ “ಸುಡು ಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ” ಭಾಸವಾಗುತ್ತದೆ. ಎಷ್ಟೇ ಕಷ್ಟ ಬಂದರೂ ಪ್ರವಾದಿ ಯೆರೆಮೀಯ ಪ್ರವಾದನೆಯನ್ನು ನಿಲ್ಲಿಸಲಿಲ್ಲ. ನಮ್ಮ ಜೀವನದಲ್ಲಿ ಅನೇಕ ಘಟನೆಗಳು ನಡೆದಾಗ ನಾವು ಸಹ ಎದೆಗುಂದದೆ ದೇವರ ವಾಕ್ಯದಂತೆ ಜೀವಿಸಲು ಕಲಿಯಬೇಕಿದೆ.
ಎರಡನೇ ವಾಚನ: ರೋಮನರಿಗೆ 12.1-2
================================
ಎರಡನೆಯ ವಾಚನದಲ್ಲಿ ಸಂತ ಪೌಲನು ರೋಮನ್ನರಿಗೆ ಬರೆಯುತ್ತಾ ಜೀವನದಲ್ಲಿ ಮನಃಪರಿವರ್ತನೆಗೊಂಡು ನವ ಜೀವಿಗಳಾಗಿ ಬಾಳಲೆಂದು ತಿಳಿಸುತ್ತಾನೆ. ದೇವರ ಚಿತ್ತಕ್ಕೆ ತಲೆ ಬಾಗಿದಾಗ ನಮಗೆ ಅನೇಕ ಕಷ್ಟಗಳು ಸಹ ಬಂದೊದಗುವ ಪ್ರಕ್ರಿಯೆ ಸಹಜ, ಇಂತಹ ಸಂದರ್ಭಗಳಲ್ಲಿ ಆಯ್ಕೆ ನಮ್ಮದಾಗಿರುತ್ತದೆ. ಒಳ್ಳೆಯದನ್ನುಆಯ್ದುಕೊಂಡು ಬಾಳಬೇಕಾಗುತ್ತದೆ. ಇದು ಮನುಷ್ಯರ ಚಿತ್ತವಲ್ಲ, ದೇವರ ಚಿತ್ತ.
ಶುಭಸಂದೇಶ: ಮತ್ತಾಯ 16.21-27
=============================
ಇಂದಿನ ಶುಭ ಸಂದೇಶದಲ್ಲಿ ಕಠಿಣವಾದ ಯಾತನೆ ಹಾಗೂ ಮರಣವಿಲ್ಲದೆ ಪುನರುತ್ಥಾನ ಇಲ್ಲವೆಂದು ತಿಳಿಸುತ್ತಾರೆ ನಮ್ಮ ಪ್ರಭು ಯೇಸು ಕ್ರಿಸ್ತ. ಪ್ರಭುವಿನ ಈ ನುಡಿಗಳನ್ನು ಪೇತ್ರನು ಪ್ರತಿಭಟಿಸುತ್ತಾನೆ ಒಬ್ಬ ಸಾಮಾನ್ಯ ಮನುಷ್ಯನಂತೆ. ಆದರೆ ಪ್ರಭು ಯೇಸು ತಂದೆಯ ಚಿತ್ತಕ್ಕೆ ತಲೆಬಾಗಿ ಈ ಲೋಕದಲ್ಲಿ ಜನಿಸಿ ಬಂದು ತನ್ನನ್ನು ಸಮರ್ಪಿಸಿಕೊಳ್ಳುವ ಕಾಲ ಹತ್ತಿರವಾದಾಗ ಪೇತ್ರನ ಈ ವಾಕ್ಯಗಳು ಅವರಿಗೆ ಇಷ್ಟೂ ಸರಿಯೆನಿಸುವುದಿಲ್ಲ ಎಂದೇ ಪೇತ್ರನನ್ನು ಬಾಯಿಮುಚ್ಚಿಸುತ್ತಾರೆ. ಆದರೆ ಅದೇ ಪ್ರಭು ಕ್ರಿಸ್ತರು ಪೇತ್ರನ ಬಗ್ಗೆ ಮತ್ತಾಯರ ಶುಭ ಸಂದೇಶ 16: 13 - 20 ರಲ್ಲಿ ಪೇತ್ರನನ್ನು ಬಂಡೆ ಎಂದು ಸನ್ಮಾನಿಸಿದುದನ್ನು ನಾವು ಗಮನಿಸಬೇಕು.
ಪ್ರಭು ಯೇಸುವಿನ ಶಿಷ್ಯರಾಗಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಅವರನ್ನು ಹಿಂಬಾಲಿಸುವ ನಿರ್ಧಾರ ಹಾಗೂ ಅದಕ್ಕೆ ತಕ್ಕ ತ್ಯಾಗ ಮತ್ತು ಕಷ್ಟಗಳನ್ನು ಎದುರಿಸುವ ಎದೆಗಾರಿಕೆ. ಇವ್ಲಿಲ್ಲದಿದ್ದರೆ ಕ್ರಿಸ್ತಾನುಸರಣೆ ಎಂದೂ ಕೈಗೂಡದು.
ಪೇತ್ರ ಮತ್ತು ಪ್ರಭುವಿನ ನಡುವೆ ನಡೆದ ಸಂವಾದವನ್ನು ನಾವು ಮನನ ಮಾಡಿದರೆ ನಮಗೆ ವಿಶದರಾಗುವುದು ಇದು: ಪೇತ್ರನು ಕ್ಷಣಿಕ ಸುಖಕ್ಕಾಗಿ ಹಾಗೂ ಲೌಕಿಕ ತೃಪ್ತಿಗಾಗಿ ಹಾತೊರೆಯುತ್ತಾನೆ ಮತ್ತು ಪ್ರಭು ಕ್ರಿಸ್ತನನ್ನು ಸಹ ಅದೇ ದೃಷ್ಟಿಮಾಪನದಿಂದ ಅಳೆಯುತ್ತಾನೆ. ಆದರೆ ಪ್ರಭು ಯೇಸು ಬಂದ ಉದ್ದೇಶವೇ ಬೇರೆ ಅದುವೇ ಲೋಕದ ಜನರಿಗೆ ಸರಿದಾರಿ ತೋರಿಸಿ ರಕ್ಷಿಸುವುದು. ತಮ್ಮನ್ನೇ ತಾವು ಪರಿತ್ಯಜಿಸುವುದರ ಮುಖಾಂತರ ಪ್ರಭು ಯೇಸು ಈ ಲೋಕವನ್ನು ರಕ್ಷಿಸಬೇಕಿತ್ತು.
ಇಂದಿನ ಆರಾಧನಾ ವಿಧಿಯ ಒಟ್ಟು ಸಾರಾಂಶ:
ಕೈಕೆಸರಾದರೆ ಬಾಯಿ ಮೊಸರು ಎಂಬ ನಾಣ್ಣುಡಿಯಂತೆ, ಕಷ್ಟ ಸಂಕಟ ನೋವು ಇವೆಲ್ಲವನ್ನು ನಾವು ಮನಃಪೂರ್ವಕವಾಗಿಯೋ ಅಥವಾ ಗತ್ಯಂತರವೋ ಒಪ್ಪಿಕೊಂಡು ಜೀವಿಸಿದಾಗ ಮಾತ್ರ ಪ್ರಭು ಯೇಸುವಿನ ನೈಜ ಶಿಷ್ಯ ರಾಗುತ್ತೇವೆ.
ಯೇಸು ಶಿಲುಬೆಯ ಮೇಲಿಂದ ಎಲ್ಲರನ್ನೂ ಕ್ಷಮಿಸಿದಂತೆ ನಾವು ಸಹ ತೊಂದರೆ ನಮಗೆ ಎದುರಾಗುವ ಪ್ರತಿಯೊಬ್ಬರನ್ನು ಕ್ಷಮಿಸುವುದು ಅನಿವಾರ್ಯ..
ಪ್ರತಿದಿನ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಆಳವಾಗಿ ಅರ್ಥೈಸಿಕೊಂಡು ಪ್ರಭುವಿನಲ್ಲಿ ವಿಶ್ವಾಸವಿಟ್ಟು ಜೀವಿಸಬೇಕು.
ನಮ್ಮ ನಮ್ಮ ಕುಟುಂಬಗಳಲ್ಲಿ ಜಪ ತಪಗಳನ್ನು ತಪ್ಪದೆ ಮಾಡುತ್ತ ಪ್ರಭುವನ್ನು ಆಶ್ರಯಿಸಿಕೊಂಡು ಬಾಳಿದಾಗ ಮಾತ್ರ ನಮ್ಮ ಜೀವನಕ್ಕೆ ಒಂದು ಅರ್ಥ ಸಾರ್ಥಕತೆ ಬರುತ್ತದೆ.
“ ಶಿಲುಬೆಯೇ ನನ್ನ ಮಾರ್ಗ, ಮುಂದೆ ನಡೆಯುವಾಗ ಹಿಂದೆ ನೋಡದಿರು” ಎಂಬ ಹಾಡಿನಂತೆ ನಾವೆಲ್ಲರೂ ಒಂದೇ ದಿಕ್ಕಿಗೆ ಮುಖಮಾಡಿ ಈ ಬಾಳೆಂಬ ಪಯಣದಲಿ ಮುಂದೆ ಸಾಗಬೇಕಿದೆ.
=======================
ಚಿಂತನೆ – ಫಾ ಆನಂದ್ ಪ್ರಸಾದ್, ಬಳ್ಳಾರಿ ಧರ್ಮಾಕ್ಷೇತ್ರ
==========================
No comments:
Post a Comment