ಆಗಸ್ಟ್ 31, 2020 ಸೋಮವಾರ [ಹಸಿರು]
ಮೊದಲ ವಾಚನ: 1 ಕೊರಿಂಥಿಯರಿಗೆ 2.1-5
ಕೀರ್ತನೆ 119: 97-102. ಶ್ಲೋಕ.97
ಪ್ರಭೂ, ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ
ಶುಭಸಂದೇಶ: ಲೂಕ 4.16-30
1 ಕೊರಿಂಥಿಯರಿಗೆ 2.1-5
1 : ಸಹೋದರರೇ, ದೇವರ ಸತ್ಯಾರ್ಥವನ್ನು ಸಾರಲು ನಿಮ್ಮಲ್ಲಿಗೆ ನಾನು ಬಂದಾಗ ವಾಕ್ಚಾತುರ್ಯವನ್ನಾಗಲಿ, ಜ್ಞಾನಾಡಂಬರವನ್ನಾಗಲಿ ಪ್ರದರ್ಶಿಸುತ್ತಾ ಬರಲಿಲ್ಲ.
2 : ನಾನು ನಿಮ್ಮೊಡನೆ ಇದ್ದಾಗ, ಯೇಸುಕ್ರಿಸ್ತರನ್ನು, ಅದೂ ಶಿಲುಬೆಗೇರಿಸಲಾದ ಯೇಸುವನ್ನು ಹೊರತು ಬೇರೆ ಯಾವುದನ್ನೂ ಅರಿಯಲು ಆಶಿಸಲಿಲ್ಲ.
3 : ಈ ಕಾರಣ, ನಾನು ನಿಮ್ಮ ನಡುವೆ ದುರ್ಬಲನೂ ಭಯಭೀತನೂ ಆಗಿದ್ದೆ.
4 : ನನ್ನ ಬೋಧನೆ ಹಾಗೂ ಮಾತುಕತೆ ಕೇವಲ ಬುದ್ಧಿವಂತಿಕೆಯಿಂದಾಗಲಿ ಮಾತಿನ ಚಮತ್ಕಾರದಿಂದಾಗಲಿ ಕೂಡಿರಲಿಲ್ಲ; ಅದಕ್ಕೆ ಬದಲಾಗಿ ದೇವರ ಆತ್ಮವನ್ನು, ಅವರ ಶಕ್ತಿಯನ್ನು ಸಮರ್ಥಿಸುತ್ತಿದ್ದವು.
5 : ಅಂತೆಯೇ ನಿಮ್ಮ ವಿಶ್ವಾಸವು ಮನುಷ್ಯ ಜ್ಞಾನವನ್ನು ಆಧರಿಸದೆ, ದೇವರ ಶಕ್ತಿಯನ್ನು ಆಧರಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು.
ಕೀರ್ತನೆ 119: 97-102. ಶ್ಲೋಕ.97
ಪ್ರಭೂ, ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ
97 : ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ / ನಾನದರಲೇ ದಿನವೆಲ್ಲ ಧ್ಯಾನಮಯ
98 : ನಿನ್ನಾಜ್ಞೆಗಳು ಸದಾ ನನ್ನೊಂದಿಗಿರುವುದರಿಂದ / ನಾನಧಿಕ ಬುದ್ಧಿವಂತ ನನ್ನ ಶತ್ರುಗಳಿಗಿಂತ
99 : ನಿನ್ನ ಕಟ್ಟಳೆಗಳ ಧ್ಯಾನಿ ನಾನಾದುದರಿಂದ ನಾನಧಿಕ ಜ್ಞಾನಿ ನನ್ನ ಬೋಧಕರೆಲ್ಲರಿಗಿಂತ
100 : ನಿನ್ನ ನಿಯಮಗಳನು ಕೈಗೊಂಡುದರಿಂದ / ನಾನಧಿಕ ವಿವೇಕಿ ಗುರುಹಿರಿಯರಿಗಿಂತ
101 : ನಿನ್ನ ವಾಕ್ಯವನು ಅನುಸರಿಸುವ ಧ್ಯೇಯದಿಂದ / ನನ್ನ ಹೆಜ್ಜೆಗಳನು ತಡೆದೆನು ದುರ್ಮಾರ್ಗದಿಂದ
102 : ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ / ನೀನೇ ನನಗದರ ಬೋಧನೆ ಮಾಡಿದ್ದರಿಂದ
ಲೂಕ 4.16-30
16 : ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ,
17 : ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು:
18 : “ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ
19 : ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.”
20 : ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು.
21 : ಆಗ ಯೇಸು, “ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು,” ಎಂದು ವಿವರಿಸಲಾರಂಭಿಸಿದರು.
22 : ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. “ಇವನು ಜೋಸೆಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು.
23 : ಅನಂತರ ಯೇಸು ಅವರಿಗೆ, “ ‘ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ’, ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ; ಅಲ್ಲದೆ, ‘ಕಫೆರ್ನವುಮಿನಲ್ಲಿ ನೀನು ಎಂಥೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು,’ ಎಂದೂ ಹೇಳುವಿರಿ.
24 : ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
25 : ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು.
26 : ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು.
27 : ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ,” ಎಂದು ಹೇಳಿದರು.
28 : ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು.
29 : ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು.
30 : ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.
ಪ್ರಭುಕ್ರಿಸ್ತರು ದೇವರು ನಮ್ಮನ್ನು ಬಹಳವಾಗಿ ಪ್ರೀತಿಸುತ್ತಾರೆ ಎಂಬ ಸತ್ಯವನ್ನು ಭೋಧಿಸಲು ತಿಳಿಯಪಡಿಸಲು ಈ ಧರೆಗೆ ಇಳಿದು ಬಂದರು. ವಾರಕೊಮ್ಮೆ ಪ್ರಾರ್ಥನಾಲಯಕ್ಕೆ ಅಂದರೆ ಸಿನಾಗೊಗ್ ಹೋಗಿ ಧರ್ಮಗ್ರಂಥವನ್ನು ಓದಿ ಅದರ ವಿವರಣೆಯನ್ನು ನೀಡುವುದು ಪ್ರಭುಯೇಸುವಿನ ವಾಡಿಕೆಯಾಗಿತ್ತು. ಒಂದು ದಿನ ಪ್ರವಾದಿ ಯೆಶಾಯನ ಗ್ರಂಥವನ್ನು ಓದಿ, ಭೋಧಿಸಿದಾಗ, ಅವರ ಜ್ಞಾನವನ್ನು ಕಂಡು ಜನರು ಆಶ್ಚರ್ಯಚಕಿತರಾದರು. ಈತ ಜೋಸೆಫನ ಮಗನಲ್ಲವೇ? ಈತನಿಗೆ ಈ ಜ್ಞಾನವಾದರೂ ಎಲ್ಲಿಂದ ಬಂದಿತು! ಎಂದು ಯೇಸುವನ್ನು ತಿರಸ್ಕರಿಸಿದರು. ಆದ್ದರಿಂದ ಯೇಸು ಯಾವುದೇ ಮಹಾತ್ಕಾರ್ಯಗಳನ್ನು ಮಾಡಲಿಲ್ಲ. ಯೇಸುಪ್ರಭುವಿನ ಸ್ವಂತ ಊರಿನ ಜನರೇ ಅವರ ದೈವತ್ವವನ್ನು ಶಕ್ತಿಯನ್ನು, ನಂಬಲ್ಲಿಲ್ಲ. ಆದ್ದರಿಂದ ಮಹಾತ್ಕಾರ್ಯಗಳನ್ನು ಕಾಣಲಿಲ್ಲ. ನಾವು ಯೇಸುವನ್ನು ಅರಿತಿದ್ದೇವೆಯೇ? ಅಥವಾ ಆ ಜನರಂತೆ ಯೇಸುವನ್ನು ತಿರಸ್ಕರಿಸಿದ್ದೇವೆಯೆ? ಅವರಲ್ಲಿ ಅಚಲವಾದ ವಿಶ್ವಾಸವನ್ನಿಟ್ಟರೇ ಮಾತ್ರ ನಮಗೆ ರಕ್ಷಣೆ ಎಂಬುವುದನ್ನು ಮರೆಯದಿರೋಣ.
No comments:
Post a Comment