Wednesday, 1 July 2020

ಜುಲೈ 5, 2020 ಭಾನುವಾರ

ಸಾಧಾರಣ ಕಾಲದ 14ನೇ ಭಾನುವಾರ
ಮೊದಲ ವಾಚನ: ಜೆಕರ್ಯ 9.9-10
ಕೀರ್ತನೆ 145:1-2, 8-9, 10-11, 13-14 ಶ್ಲೋಕ.1
ದೇವಾ, ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ
ಎರಡನೇ ವಾಚನ: ರೋಮನರಿಗೆ 8.9, 11-13
ಶುಭಸಂದೇಶ: ಮತ್ತಾಯ 11.25-30
----------------------------
ಜೆಕರ್ಯ 9.9-109 :
9.ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ ನಿವಾಸಿಗಳೇ, ಹರ್ಷೋದ್ಗಾರ ಮಾಡಿರಿ, ಜೆರುಸಲೇಮಿನ ಜನಗಳೇ. ಇಗೋ, ಬರುತಿಹನು ನಿಮ್ಮ ಅರಸನು ನ್ಯಾಯವಂತನು, ಜಯಶೀಲನು ಆತನು ವಿನಮ್ರನು, ಹೇಸರಗತ್ತೆಯನ್ನೇರಿ ಸಾಗಿಬರುತಿಹನು.
10.ಕಿತ್ತುಹಾಕುವೆನು ಎಫ್ರಯಿಮಿನ ರಥಬಲವನು ನಿಶ್ಯೇಷಮಾಡುವೆನು ಜೆರುಸಲೇಮಿನ ಅಶ್ವಬಲವನು ಮುರಿಯಲಾಗುವುದು ಯುದ್ಧದ ಬಿಲ್ಲುಗಳನು. ಘೋಷಿಸುವೆನು ಶಾಂತಿಯನು ರಾಷ್ಟ್ರಗಳಿಗೆ ಆತನ ರಾಜ್ಯಭಾರ ಸಮುದ್ರದಿಂದ ಸಮುದ್ರದವರೆಗೆ ಯೂಫ್ರೆಟಿಸ್ ನದಿಯಿಂದ ಭುವಿಯ ಕಟ್ಟಕಡೆಯವರೆಗೆ.
---------------------------

ಕೀರ್ತನೆ 145:1-2, 8-9, 10-11, 13-14 ಶ್ಲೋಕ.1
ದೇವಾ, ಯುಗಯುಗಾಂತರಕ್ಕೂನಿನ್ನನಾಮಕ್ಕೆನಮನ
1 :ದೇವಾ, ನನ್ನೊಡೆಯಾ, ಮಾಡುವೆನಿನ್ನಗುಣಗಾನ / ಯುಗಯುಗಾಂತರಕ್ಕೂನಿನ್ನನಾಮಕ್ಕೆನಮನ
2 :ಹೊಗಳುವೆನುನಾದಿನದಿನವೂನಿನ್ನನು / ಭಜಿಸುವೆನೆಂದೆಂದಿಗೂನಿನ್ನಹೆಸರನು
10 :ಪ್ರಭು, ನಿನ್ನನುಸ್ತುತಿಪುದುಸೃಷ್ಟಿಯೆಲ್ಲವು / ಕೊಂಡಾಡುವುದುನಿನ್ನನುಭಕ್ತಸಮೂಹವು
8 :ಪ್ರಭುದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು 9 :ಪ್ರಭುವಿನಕರುಣೆಎಲ್ಲರಮೇಲೆ / ಆತನಕೃಪೆಯುಸೃಷ್ಟಿಯಮೇಲೆ
13 :ಶಾಶ್ವತವಾದುದುನಿನ್ನರಾಜ್ಯವು / ಇರುವುದೆಂದಿಗುನಿನ್ನಆಳ್ವಿಕೆಯು
11 :ಪ್ರಸಿದ್ಧಪಡಿಸುವರುನಿನ್ನರಾಜ್ಯದಮಹತ್ವವನು / ವರ್ಣಿಸುವರವರುನಿನ್ನಶಕ್ತಿಸಾಮಥ್ರ್ಯವನು
14 :ನುಡಿಯಲಿಪ್ರಭುಸದಾಪ್ರಾಮಾಣಿಕನು / ನಡೆಯಲಿಆತನುಸದಾಪ್ರೀತಿಮಯನು
------------------
ರೋಮನರಿಗೆ 8.9, 11-13
9 : ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತಯೇಸುವಿಗೆ ಸೇರಿದವನಲ್ಲ.
11 : ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು.
12 : ಆದ್ದರಿಂದ ಸಹೋದರರೇ, ನಾವು ಶರೀರ ಸ್ವಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬಾಳುವ ಹಂಗಿನಲ್ಲೂ ಇಲ್ಲ.
13 : ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಬಾಳಿದರೆ ಖಂಡಿತವಾಗಿ ಸಾಯುವಿರಿ. ಪವಿತ್ರಾತ್ಮ ಅವರ ನೆರವಿನಿಂದ ದೈಹಿಕ ದುರಭ್ಯಾಸಗಳನ್ನು ದಮನಮಾಡಿದರೆ ಜೀವಿಸುವಿರಿ.
--------------------------
ಮತ್ತಾಯ 11.25-30
25 : ಆ ಸಮಯದಲ್ಲಿ ಯೇಸುಸ್ವಾಮಿ, "ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ.
26 : ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.
27 : "ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು. ಶ್ರಮಜೀವಿಗಳಿಗೆ ವಿಶ್ರಾಂತಿದಾತ
28 : "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. 29 : ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. 30 ನನ್ನ ನೊಗ ಹಗುರ, ನನ್ನ ಹೊರೆ ಸುಗಮ," ಎಂದರು.
----------------------

ಚಿಂತನೆ

ದುಡಿದು, ಭಾರಹೊತ್ತು, ಬಳಲಿ, ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ, ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ”.

ಪೀಠಿಕೆ:

ಈ ಸಾಧಾರಣಕಾಲದ 14ನೆಯ ಭಾನುವಾರದಂದು, ಯೇಸುವಿನ ದೀನತೆ ಮತ್ತು ವಿನಯಶೀಲತೆ ಗುಣಗಳ ಕುರಿತು ಚಿಂತಿಸಲು ಧರ್ಮಸಭೆ ಕರೆನೀಡುತ್ತದೆ. ದೀನತೆ ಮತ್ತು ವಿನಯಶೀಲತೆ, ಈ ಅವಳಿ ಸದ್ಗುಣಗಳು ನಮ್ಮ ಕ್ರಿಸ್ತೀಯ ಪ್ರಯಾಣಕ್ಕೆ ಬಹಳ ಅವಶ್ಯಕ. ನಮ್ಮ ಜೀವನದಲ್ಲಿ ನಾವು ಎಷ್ಟು ಎತ್ತರಕ್ಕೆ ಬೆಳೆದಿದ್ದೀವಿ ಎಂಬುದು ಮುಖ್ಯವಲ್ಲ, ದೀನತೆ ಮತ್ತು ವಿನಯಶೀಲತೆಯಿಂದ ಜೀವನ ನಡೆಸುವುದು ಮುಖ್ಯ. ಇಂತಹ ಜೀವನಕ್ಕೆ ಯೇಸು ನಮ್ಮ ಆದರ್ಶ ಮತ್ತು ಸ್ಫೂರ್ತಿಯಾಗಿದ್ದಾರೆ. ಸ್ವರ್ಗ ಮತ್ತು ಭುವಿಯ ಸೃಷ್ಟಿಕರ್ತ ಮತ್ತು ಒಡೆಯನಾಗಿದ್ದರೂ ಕ್ರಿಸ್ತ ತಮ್ಮನ್ನು ತಾವೇ ತಗ್ಗಿಸಿಕೊಂಡು ಸಾಧಾರಣ ವ್ಯಕ್ತಿಯಾಗಿ ಜೀವಿಸಲು ಆರಿಸಿಕೊಂಡರು. ಅದರಿಂದ ಇಂದು ಪ್ರಭುಯೇಸು ತನ್ನಿಂದ ಕಲಿತುಕೊಳ್ಳಲು ಕರೆನೀಡುತ್ತಾರೆ. “ ದುಡಿದು, ಭಾರಹೊತ್ತು, ಬಳಲಿ, ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ, ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ”.

ಜೆಕರ್ಯ 9.9-10

 

ಮೊದಲನೆಯ ವಾಚನ ಬರಲಿರುವ ಕ್ರಿಸ್ತರಾಜನ ದೀನತೆಯನ್ನು ಮುನ್ಸೂಚಿಸುತ್ತದೆ. ಈ ವಾಚನ ದೀನದಲಿತರಿಗೆ, ಬಡವರಿಗೆ ಭರವಸೆಯನ್ನು ಉಂಟುಮಾಡುತ್ತದೆ; “ಸಂತೋಷಿಸಿರಿ, ಆನಂದಿಸಿರಿ, ಸಿಯೋನಿನ ನಿವಾಸಿಗಳೇ.....ಇಗೋ, ಬರುತಿಹನು ನಿಮ್ಮ ಅರಸನು, ನ್ಯಾಯವಂತನು, ಜಯಶೀಲನು ಆತನು ವಿನಮ್ರನು, ಹೇಸರಗತ್ತೆಯನ್ನೇರಿ ಸಾಗಿಬರುತಿಹನು”. ಸಹಜವಾಗಿ, ಅವರು ಇಸ್ರಯೇಲರ ಬಡ ಮತ್ತು ತುಳಿತಕ್ಕೊಳಗಾದವರಿಗೆ ಸಹಾಯ ಮತ್ತು ನ್ಯಾಯವನ್ನು ನೀಡಲು ಬರುತ್ತಾರೆ. ಹಾಗೂ ದೇವ ಜನರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಲು, ಪ್ರವಾದಿ ದೈವಪ್ರೇರಿತರಾಗಿ ದೇವರ ವಿಶೇಷ ದಯೆಯ ಬಗ್ಗೆ ಇನ್ನೂ ಗಮನ ಸೆಳೆವ ಉದಾಹರಣೆಯನ್ನು ಘೋಷಿಸುತ್ತಾರೆ, ಅದೇನೆಂದರೆ, ಬರಲಿರುವ ಮೆಸ್ಸೀಯ ಅಥವಾ ಅರಸ. ಇದರ ಬಗ್ಗೆ ಹೊಸ ಒಡಂಬಡಿಕೆಯ ಎರಡು ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆ (ಮತ್ತಾಯ 21:5, ಯೊವಾನ್ನ 12:15).

ರೋಮನರಿಗೆ 8.9, 11-13

ಎರಡನೆಯ ವಾಚನದಲ್ಲಿ ಸಂತ ಪೌಲನು ದೇವರಾತ್ಮ ಜೊತೆ ಬದುಕುವ ಅಗತ್ಯವನ್ನು ನೆನಪಿಸುತ್ತಾರೆ. ಏಕೆಂದರೆ ಆತ್ಮವು ದೀನತೆ ಮತ್ತು ವಿನಯವನ್ನು ಬೆಳೆಸುತ್ತದೆ, ಶರೀರವಾದರೂ ಅದಕ್ಕೆ ವಿರುದ್ಧವಾಗಿ ಅಹಂಕಾರ ಮತ್ತು ಎಲ್ಲ ರೀತಿಯ ಲೌಕಿಕತೆಯನ್ನು ವೃದ್ದಿಸುತ್ತದೆ. ದೇವರಾತ್ಮ ಮತ್ತು ದುರಾತ್ಮ ಎರಡು ನಮ್ಮಲ್ಲಿ ನೆಲೆಸಿರುತ್ತವೆ. ನಾವು ಯಾವುದನ್ನು ಅಧಿಕವಾಗಿ ಪ್ರೋಷಿಸುತ್ತೇವೋ  ಕೊನೆಯಲ್ಲಿ ಅದು ಪಡೆಯುವುದು ಗೆಲುವು. ಅದರಿಂದ ಶರೀರ ಸ್ವಭಾವದ ಅನುಸಾರವಾಗಿ ಬಾಳದೆ, ದೇವರ ಆತ್ಮದ ನೆರವಿನಿಂದ ಜೀವಿಸಲು ಸಂತ ಪೌಲರು ಕರೆನೀಡುತ್ತಾರೆ.

ಶುಭಸಂದೇಶದಲ್ಲಿ ಯೇಸು, ದೇವರ ಹೃದಯದ ಕೀಲಿಯನ್ನು ಬಹಿರಂಗಪಡಿಸಿ ನಮಗೆ ನೀಡುತ್ತಾರೆ. ಈ ಮಾಸ್ಟರ್ ಕೀಲಿಯಿಂದ ದೇವರ ಅಂತರಂಗಕ್ಕೆ ನಾವು ಹೋಗಬಲ್ಲೆವು. ದೀನತೆ ಮತ್ತು ವಿನಯ ಆ ಕೀಲಿಯ ಹೆಸರು. ದೇವರ ಸಾಮ್ರಾಜ್ಯ ರಹಸ್ಯಗಳನ್ನು ಜ್ಞಾನಿ-ಮೇಧಾವಿಗಳಿಂದ ಮರೆಮಾಡಿ ಚಿಕ್ಕ ಮಕ್ಕಳಂಥವರಿಗೆ ಅವುಗಳನ್ನು ತಿಳಿಯಪಡಿಸಲಾಗಿದೆ ಎಂದು ಯೇಸು ಘೋಷಿಸುತ್ತಾರೆ. ಯೇಸು ತಮ್ಮ ಕಾಯಕದಲ್ಲೆ ಅತೀವ ವಿರೋಧ ಮತ್ತು ನಿರಾಕರಣೆಯನ್ನು ವಿಶೇಷವಾಗಿ ಪ್ರಬುದ್ದರೆಂದನಿಸಿದ ಶಾಸ್ತ್ರಿಗಳ ಮತ್ತು ಫರಿಸಾಯರಿಂದ ಎದುರಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಡವರು, ಅನ್ಯಜನರು, ಅಶುದ್ದರು, ಸುಂಕವಸೂಲಿ ಮಾಡುವವರು ಮತ್ತು ಪಾಪಿಗಳು ಅವರ ಸಂದೇಶವನ್ನು ಅತಿ ಮುಕ್ತ ಮನಸ್ಸಿನಿಂದ ಸ್ವೀಕರಿಸಿದರು. ದೇವರು ಇತಿಹಾಸದುದಕ್ಕೂ ತಮ್ಮ ಮಾರ್ಗದಲ್ಲಿ ನಡೆಯಲೂ, ನಡೆಸಲೂ ದುರ್ಬಲ, ದೀನ, ತಿರಸ್ಕಾರಕೊಳ್ಳಪಟ್ಟವರನ್ನು ಆರಿಸಿಕೊಂಡಿದ್ದಾರೆ. 

ಅಧಿಕಾರ, ಸಂಪತ್ತು, ಹೆಸರು, ಪ್ರತಿಷ್ಟೆ, ಯಶಸ್ಸು ಇವುಗಳನ್ನು ಅರಸುವಂತವರನ್ನು ಹಿಂಬಾಲಿಸದೆ, ನಿಸ್ವಾರ್ಥ, ದೀನತೆ, ವಿನಯ ಇವುಗಳ ಮಾರ್ಗವನ್ನು ತೋರಿದ ಯೇಸುವನ್ನು ಹಿಂಬಾಲಿಸಲು ನಮಗೆ ಬೇಕಾದ ಧೈರ್ಯಕ್ಕಾಗಿ ಪ್ರಾರ್ಥಿಸೋಣ. ಆಮೆನ್!   

ಫಾದರ್ ಪ್ರತಾಪ್ ಚಂದ್ರು ಯೇ.ಸ

---------------------------

@ದನಿ ಮಾಧ್ಯಮ ಮನೆ


No comments:

Post a Comment