ಆಗಸ್ಟ್ 7, 2020 ಶುಕ್ರವಾರ [ಹಸಿರು]
ಸಂತಸಿಕ್ಸ್ಟಸ್ -2 ಮತ್ತುಸಂಗಡಿಗರು (ಐಚ್ಛಿಕಸ್ಮರಣೆ)
ಸಂತಕಯೆತಾನ್ (ಐಚ್ಛಿಕಸ್ಮರಣೆ)
ಮೊದಲವಾಚನ: ನಹೂಮ್ 1.15; 2.2; 3.1-3, 6-7
ಕೀರ್ತನೆ: ಧರ್ಮೋ 32: 35, 36, 39, 41 ಶ್ಲೋಕ.39
ಬದುಕಿಸುವವನು, ಕೊಲ್ಲುವವನುನಾನೇ
ಶುಭಸಂದೇಶ: ಮತ್ತಾಯ 16.24-28
1 : ನಿನೆವೆಯೇ, ನಿನಗೆದುರಾಗಿ ನಿಂತಿಹನು, ನಿನ್ನನ್ನು ಚದುರಿಸುವವನು ! ಕಾವಲಿಡು ಕೋಟೆಯ ಸುತ್ತಲು, ಪಹರೆಯಿಡು ದಾರಿ ಕಾಯಲು; ಅಣಿಯಾಗಲಿ ನಿನ್ನ ಸೈನ್ಯವಿಡೀ, ನಡುಕಟ್ಟಿ ನಿಲ್ಲು.
3 : ಶತ್ರುವಿನ ಶೂರರ ಗುರಾಣಿ ರಕ್ತಗೆಂಪು, ಪರಾಕ್ರಮಿಗಳ ಉಡುಪು ಕಡುಗೆಂಪು. ರಣರಂಗದೊಳು ಥಳಥಳಿಸುತ್ತವೆ ರಥಗಳು ಝಳಪಿಸುತ್ತವೆ ಈಟಿಗಳು. ಕಾಳಗಕ್ಕೆ ಕಾತರದಿಂದಿವೆ ಕುದುರೆಗಳು.
1 : ಧಿಕ್ಕಾರ ರಕ್ತಮಯವಾದ ನಗರಕೆ! ತುಂಬಿದೆ ಅದರಲಿ ಸುಳ್ಳು ಮತ್ತು ಸುಲಿಗೆ ನಿಲ್ಲದೆ ನಡೆಯುತ್ತಿದೆ ಅದರಲಿ ಕೊಳ್ಳೆ.
2 : ಕೇಳಿ, ಚಕ್ರಗಳ ಚೀತ್ಕಾರ, ಚಾಟಿಗಳ ಚಟಪಟ; ಕುದುರೆಗಳ ಭರದೌಡು, ರಥಗಳ ಹಾರಾಟ.
3 : ರಾಹುತರ ರಭಸ, ಕತ್ತಿಯ ಥಳಥಳಿಪು, ಈಟಿಯ ಝಳಿಪು; ಹತರಾದವರು ಅಗಣಿತ; ಸತ್ತವರು ಅಸಂಖ್ಯಾತ, ಶವಗಳ ರಾಶಿ ವಿಪರೀತ; ನುಗ್ಗುವವರು ಎಡವುತಿಹರು ಹೆಣಗಳನು ದಾಟಿಹೋಗುತ.
6 : ಎಸೆಯುವೆನು ನಿನ್ನ ಮೇಲೆ ಹೊಲಸನು ಕಳೆಯುವೆನು ನಿನ್ನ ಮಾನವನು ಪರಿಹಾಸ್ಯಕ್ಕೀಡುಮಾಡುವೆನು ನಿನ್ನನು.
7 : ನಿನ್ನ ನೋಡುವವರು ನಿನ್ನಿಂದ ದೂರ ಓಡುವರು “ನಿನೆವೆ ಹಾಳುಬಿದ್ದಿದೆ, ಅದಕ್ಕೆ ಗೋಳಿಡುವರಾರು? ಅದನ್ನು ಸಂತೈಸುವವರು ನಮಗೆಲ್ಲಿ ಸಿಕ್ಕಿಯಾರು?, ಎಂದುಕೊಳ್ಳುವರು.”
ಕೀರ್ತನೆ: ಧರ್ಮೋ 32: 35, 36, 39, 41 ಶ್ಲೋಕ.39
ಬದುಕಿಸುವವನು, ಕೊಲ್ಲುವವನು ನಾನೇ
35 : ಅವನ ಶತ್ರುಗಳಿಗೆ ಮುಯ್ಯಿತೀರಿಸುವುದು ನನ್ನ ಕೆಲಸ; ಸವಿೂಪಿಸಿತವರಿಗೆ ಜಾರಿಬೀಳುವ ಸಮಯ, ವಿಪತ್ಕಾಲ; ಬೇಗಬರುವುದು ಅವರಿಗೆ ಸಿದ್ದವಾದ ದುರ್ಗತಿಕಾಲ!
36 : ಸ್ವತಂತ್ರರು, ಪರತಂತ್ರರು ನಿರಾಶ್ರಯರಾದಾಗ ಅವರೆಲ್ಲರು ನಿಶ್ಯೇಷರಾದವರು ಎಂದು ತಿಳಿದುಬಂದಾಗ ದೊರಕಿಸುವನು ಸರ್ವೇಶ್ವರನು ನ್ಯಾಯವನು ತನ್ನ ಪ್ರಜೆಗೆ ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ.
39 : “ಇರುವಾತನು ನಾನೇ, ನಾನೊಬ್ಬನೇ ಬದುಕಿಸುವವನು, ಕೊಲ್ಲುವವನು ನಾನೇ, ಗಾಯಗೊಳಿಸುವವನು, ವಾಸಿಮಾಡುವವನು ನಾನೇ. ಇಂದಾದರು ತಿಳಿಯಿರಿ: ನನ್ನ ವಿನಾ ದೇವರಿಲ್ಲ ನನ್ನ ಕೈಯಿಂದ ತಪ್ಪಿಸಬಲ್ಲ ಶಕ್ತನಾರೂ ಇಲ್ಲ.
41 : ಥಳಥಳಿಸುವ ಕತ್ತಿಯನು ಹದಮಾಡಿ ನ್ಯಾಯಸ್ಥಾಪಿಸುವೆನು ಮುನ್ನುಗ್ಗಿ. ಮುಯ್ಯಿ ತೀರಿಸುವೆನು ನನ್ನ ಶತ್ರುಗಳಿಗೆ ಪ್ರತಿದಂಡಿಸುವೆನು ನನ್ನ ದ್ವೇಷಿಸಿದವಗೆ.
ಮತ್ತಾಯ 16.24-28
24 ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.
25 : ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.
26 : ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು?
27 : ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು.
28 : ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.
ಇಂದಿನ ಶುಭಸಂದೇಶದಲ್ಲಿ, ಯೇಸುಸ್ವಾಮಿ ತಮ್ಮ ಶಿಷ್ಯರು, ಜೀವನದಲ್ಲಿ ಮೊದಲ ಪ್ರಾಶಸ್ತ್ಯ ಯಾವುದಕ್ಕೆ ನೀಡಬೇಕೆಂದು ತಿಳಿಸುತ್ತಾರೆ. ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ಎನ್ನುತ್ತಾರೆ ಯೇಸು ಸ್ವಾಮಿ. ಹೊಲಗದ್ದೆ, ಆಸ್ತಿಪಾಸ್ತಿ, ಮನೆಮಠಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರುವ ತನಕ ನಾವು ಯೇಸುವಿನ ನಿಜ ಶಿಷ್ಯರಾಗಲಾರೆವು. ಆದರೆ ಇವೆಲ್ಲವುಗಳನ್ನು ಮೀರಿ ಯೇಸುವಿಗೆ ನಾವು ನಮ್ಮ ಜೀವನದಲ್ಲಿ ಮೊದಲ ಸ್ಥಾನ ನೀಡಿದಾಗ ಸಂಪೂರ್ಣ ಸಂತೃಪ್ತಿ ಹಾಗೂ ಜೀವನದ ಸಫಲತೆ ಲಭಿಸುತ್ತದೆ. ಬದುಕು ಸಾರ್ಥಕವಾಗುತ್ತದೆ.
ಹಾಗಾದರೆ, ನಮ್ಮ ದೈನಂದಿನ ಕೆಲಸಕಾರ್ಯಗಳ ಮೂಲಕ, ವರದಾನ ಪ್ರತಿಭೆಗಳ ಮೂಲಕ, ನಮ್ಮ ಜೀವನವನ್ನೇ ಸಂಪೂರ್ಣವಾಗಿ ಪ್ರಭುವಿನ ಪಾದಾರವಿಂದಗಳಿಗೆ ಸಮರ್ಪಿಸಿ, ಯೇಸುವನ್ನೇ ನಮ್ಮ ಜೀವನದ ಏಕೈಕ ನಾಯಕನಾಗಿ ಸ್ವೀಕರಿಸೋಣವೇ? ಆಗ ಸಂತ ಪೌಲರ ಮಾತುಗಳಲ್ಲಿ ನಾವು ನುಡಿಯಬಹುದು: ನಿಶ್ಚಯವಾಗಿ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿಯುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿ ಇರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸುವ ಸಲುವಾಗಿ ಎಲ್ಲವನ್ನು ತೊರೆದುಬಿಟ್ಟಿದ್ದೇನೆ. ಎಲ್ಲವನ್ನೂ ರಸವೆಂದೇ ಪರಿಗಣಿಸುತ್ತೇನೆ.
ನಾವು ಏನನ್ನು ಪ್ರೀತಿಸುತ್ತೇವೆಯೋ ಆದುರಿಂದಲೇ ರೂಪಿತಗೊಳ್ಳುತ್ತೇವೆ
-ಗಯಾಟೆ
No comments:
Post a Comment