ಆಗಸ್ಟ್ 6, 2020 ಗುರುವಾರ [ಬಿಳಿ]
ಪ್ರಭುವಿನ ರೂಪಾಂತರ
ಮೊದಲ ವಾಚನ: ದಾನಿ 7.9-10, 13-14 [ಅಥವಾ]
ಮೊದಲ ವಾಚನ: 2 ಪೇತ್ರ 1.16-19
ಕೀರ್ತನೆ 97:5-6, 9, ಶ್ಲೋಕ.1, 9
ಪ್ರಭುವೇ, ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ
ಶುಭಸಂದೇಶ: ಮತ್ತಾಯ 17.1-9
2 ಪೇತ್ರ 1.16-19
9 : ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.
10 : ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು.
13 : ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು.
14 : ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!
ಕೀರ್ತನೆ 97:5-6, 9, ಶ್ಲೋಕ.1, 9
ಪ್ರಭುವೇ, ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ
1 : ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ / ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ / ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ //
2 : ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು / ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು //
5 : ಸಾರ್ವಭೌಮನಾದ ಪ್ರಭುವಿನ ಮುಂದೆ / ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ //
6 : ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು / ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು //
9 : ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ / ಮಹೋನ್ನತನು ನೀನು ದೇವರುಗಳಿಗೆಲ್ಲಾ //
ಮತ್ತಾಯ 17.1-9
1 : ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸುಸ್ವಾಮಿ ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.
2 : ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು.
3 : ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು.
4 : ಆಗ ಪೇತ್ರನು ಯೇಸುವಿಗೆ, "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು! ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ತಮಗೊಂದು, ಮೋಶೆಗೊಂದು, ಎಲೀಯನಿಗೊಂದು," ಎಂದನು.
5 : ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ," ಎಂದಿತು.
6 : ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು.
7 : ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, "ಏಳಿ, ಭಯಪಡಬೇಡಿ," ಎಂದರು.
8 : ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ.
9 : ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು.
ಪುನರುತ್ಥಾನವಿಲ್ಲದ ಕ್ರೈಸ್ತಧರ್ಮ ಇರಬಹುದೇನೋ ಆದರೆ ಶಿಲುಬೆಯಿಲ್ಲದ ಕ್ರೈಸ್ತ ಧರ್ಮ ಇರಲು ಸಾಧ್ಯವಿಲ್ಲ. ಯೇಸುಕ್ರಿಸ್ತರ ರೂಪಾಂತರವು ಅವರ ಶಿಲುಬೆ, ಮರಣ ಮತ್ತು ಪುನರುತ್ಥಾನದ ಮುನ್ಸೂಚನೆ. ಈ ಘಟನೆಯಿಂದ ಪ್ರಭು ಯೇಸುವೇ ಲೋಕ ರಕ್ಷಕರು ಎಂದು ಶಿಷ್ಯರು ಅರಿಯುತ್ತಾರೆ ಮತ್ತು ತಮ್ಮ ಭ್ರಮಲೋಕದಿಂದ ವಾಸ್ತವಕ್ಕೆ ಬರುತ್ತಾರೆ. “ಈತನು ತನ್ನ ಪುತ್ರನು, ನನಗೆ ಪರಮ ಪ್ರಿಯನು” ಎಂಬ ವಾಣಿ ಶಿಷ್ಯರಲ್ಲಿ ವಿಶ್ವಾಸ, ಭರವಸೆಯನ್ನು ಮೂಡಿಸುವುದರೊಂದಿಗೆ ಶಿಲುಬೆ ಬದುಕಿನ ಒಂದು ಭಾಗ ಎಂದು ಮನದಟ್ಟು ಮಾಡುತ್ತೆ. ಇಂದು ಯೇಸು ರೂಪಾಂತರಗೊಡಂತೆ ನಮ್ಮ ಬದುಕು ಭಾವ ರೂಪಾಂತರಗೊಳ್ಳಲಿ. ಬಲಿಪೂಜೆಯಲ್ಲಿ ಅರ್ಪಿಸುವ ರೊಟ್ಟಿ ಮತ್ತು ದ್ರಾಕ್ಷರಸ ಯೇಸುವಿನ ಶರೀರ ಮತ್ತು ರಕ್ತವಾಗಿ ಮಾರ್ಪಡುವಂತೆ ನಮ್ಮ ಕಷ್ಟ, ಸಂಕಟಗಳು ನಲಿವಾಗಿ ಮಾರ್ಪಡಲಿ. ತಾಬೋರ್ ಬೆಟ್ಟದಲ್ಲಿ ಶಿಷ್ಯರಿಗಾದ ದೈವಾನು¨Àವ ಬಲಿಪೂಜೆಯಲ್ಲಿ ನಮಗೂ ಆಗಲಿ.
No comments:
Post a Comment