Wednesday, 1 July 2020

ಜುಲೈ 9, 2020 ಗುರುವಾರ

ಜುಲೈ 9, 2020 ಗುರುವಾರ [ಹಸಿರು]
ಸಂತ ಅಗುಸ್ತೀನ್ ಝವೋ ರೊಂಗ್ ಮತ್ತು ಸಂಗಡಿಗರು [ಯಾಜಕರು / ರಕ್ತಸಾಕ್ಶಿ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಹೊಶೇ 11.1, 3-4, 8-9
ಕೀರ್ತನೆ 80:1, 2, 14-15. ಶ್ಲೋಕ.3
ದೇವರೇ, ಬೆಳಗಲಿ ನಿನ್ನ ಮುಖ ಕಾಂತಿಯು, 
ಪಡೆವೆವು ರಕ್ಷಣೆಯನ್ನು.
ಶುಭಸಂದೇಶ: ಮತ್ತಾಯ 10.7-15
================
ಮೊದಲ ವಾಚನ: ಹೊಶೇ 11.1, 3-4, 8-9 
1 : ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ. 2 : ದೂರ ಸರಿದರು ಆ ಇಸ್ರಯೇಲರು ನಾ ಕರೆದರೂ ನನ್ನ ಬಳಿಗೆ ಅರ್ಪಿಸುತ್ತಾ ಬಂದರು ಯಜ್ಞವನ್ನು ಬಾಳ್ದೇವತೆಗಳಿಗೆ ಧೂಪಾರತಿ ಬೆಳಗುತ್ತಾ ಬಂದರು ಆ ವಿಗ್ರಹಗಳಿಗೆ. 3 : ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆ ಹೋದರು ಈ ವಿಷಯವನೇ. 4 : ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ. 8 : “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ? 9 : ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು ! 
==================
ಕೀರ್ತನೆ 80:1, 2, 14-15. ಶ್ಲೋಕ.3 ದೇವರೇ, ಬೆಳಗಲಿ ನಿನ್ನ ಮುಖ ಕಾಂತಿಯು, ಪಡೆವೆವು ರಕ್ಷಣೆಯನ್ನು.
2 : ಶೋಭಿಸು ಎಫ್ರಯಿಮ್, ಬೆನ್ಯಮಿನ್, ಮನಸ್ಸೆ ಕುಲಗಳ ಮುಂದೆ / ತೋರ್ಪಡಿಸು ನಿನ್ನ ಶೌರ್ಯವನು, ಬಂದು ಜಯಪ್ರದನಾಗು ನಮಗೆ // 
3 : ಎಲೈ ದೇವನೇ, ಪುನರುದ್ಧಾರ ಮಾಡೆಮ್ಮನು / ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು // 
15 : ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು / ಕಾದಿರಿಸು ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು // 
16 : ಅದನು ಬೆರಣಿಯಂತೆ ಸುಟ್ಟುಹಾಕಿದವರಾದರೋ / ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು // 
====================
ಮತ್ತಾಯ 10.7-15 
7 : ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. 8 : ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. 9 : ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, 10 : ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. 11 : "ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. 12 : ನೀವು ಒಂದು ಮನೆಗೆ ಹೋದಾಗ, "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ. 13 : ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆ ಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ. 14 : ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆ ಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ಧೂಳನ್ನೂ ಝಾಡಿಸಿಬಿಡಿ. 15 : ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ. 
============
ಶುಭಸಂದೇಶದಲ್ಲಿ ಕ್ರಿಸ್ತ ತನ್ನ ನಿಯೋಗಕ್ಕೆ ನೀಡಿದ ಹಿತನುಡಿಗಳು ಬುದ್ಧಿಮಾತುಗಳು ಲೋಕದಲ್ಲಿರುವ ಎಲ್ಲಾ ಅನುಯಾಯಿಗಳಿಗೂ ಎಚ್ಚರಿಕೆಯ ಘಂಟೆ. ದೇವರ ಶಕ್ತಿ ಮತ್ತು ದೈವಿಕ ವರಗಳು ಕ್ರಿಸ್ತನ ಉದಾರ ಕೊಡುಗೆಗಳು, ಇವೆಲ್ಲವನ್ನು ಇತರರಿಗೆ ಉದಾರವಾಗಿ ನೀಡಿ ಆಶಿರ್ವಾದಿಸಿರಿ ಎಂದು ಕರೆಕೊಡುತ್ತಾರೆ. ನಮ್ಮ ಜೀವನದಲ್ಲಿ ಕಾಯಕ ದೇಹಾತ್ಮಗಳ ಶ್ರೇಷ್ಠತೆ ಮತ್ತು ಉದ್ದಾರಕ್ಕೆಂದು ತಿಳಿಸುವುದಲ್ಲದೆ, ನಮ್ಮ ಪಯಣದ ಹಾದಿ ಹಗುರವಾಗಿದ್ದು ಸುಗಮವಾಗಿರಲಿ ಎಂದು ತಿಳಿಸುತ್ತಾರೆ. ಕ್ರಿಸ್ತನ ಸಂದೇಶವನ್ನು ಸ್ವಾಗತಿಸುವ ಜನಾಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿರಿ. ನಿರಾಕರಿಸುವ ಹೃದಯಗಳಿಗೆ ಸ್ಪಂದಿಸದಿರಿ ಎಂದು ತಿಳಿಸುತ್ತಾರೆ.
===================
@ ದನಿ ಮಾಧ್ಯಮ ಮನೆ

No comments:

Post a Comment