Wednesday, 1 July 2020

ಜುಲೈ 8, 2020 ಬುಧವಾರ

ಜುಲೈ 8, 2020 ಬುಧವಾರ [ಹಸಿರು] ಮೊದಲ ವಾಚನ: ಹೊಶೇ 10.1-3, 7-8, 12 ಕೀರ್ತನೆ 33:2-3, 10-11, 18-19. ಶ್ಲೋಕ.11 ಅಪೇಕ್ಷಿಸಿ ನಿತ್ಯವೂ ಪ್ರಭುವಿನ ದರ್ಶನವನು ಶುಭಸಂದೇಶ: ಮತ್ತಾಯ 10.1-7
==================
ಮೊದಲ ವಾಚನ: ಹೊಶೇ 10.1-3, 7-8, 12 1 : ಇಸ್ರಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆ, ಫಲಭರಿತ ದ್ರಾಕ್ಷಾಬಳ್ಳಿ. ಅದರ ಫಲ ಹೆಚ್ಚಿದಂತೆಲ್ಲ ಬಲಿಪೀಠಗಳು ಹೆಚ್ಚಿಕೊಂಡಿವೆ. ಆ ನಾಡು ಅಭಿವೃದ್ಧಿಯಾದಂತೆಲ್ಲ, ಹೆಚ್ಚು ಸುಂದರವಾದ ವಿಗ್ರಹಸ್ತಂಭಗಳು ನಿರ್ಮಿತವಾಗಿವೆ. 2 : ಅವರದು ವಂಚನೆಯ ಮನಸ್ಸು. ಈಗ ಅವರು ತಮ್ಮ ಪಾಪಕ್ಕೆ ತಕ್ಕ ದಂಡನೆಯನ್ನು ಅನುಭವಿಸಲೇಬೇಕು. ಸರ್ವೇಶ್ವರಸ್ವಾಮಿ ಅವರ ಯಜ್ಞವೇದಿಗಳನ್ನು ಕೆಡವುವರು. ಅವರ ಪೂಜಾಸ್ತಂಭಗಳನ್ನು ಒಡೆದು ಹಾಕುವರು. 3 : “ನಮಗೆ ರಾಜನೇ ಇಲ್ಲ. ನಾವು ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಲ್ಲ. ನಮಗೆ ರಾಜನಿದ್ದರೂ ಅವನು ನಮಗೆ ಏನು ತಾನೇ ಮಾಡಿಯಾನು?” ಎಂದು ಆ ಜನರು ಆಡಿಕೊಳ್ಳುತ್ತಾರೆ. 7 : ಸಮಾರ್ಯದ ರಾಜನು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಕಡ್ಡಿಯಂತೆ ಕಣ್ಮರೆ ಆಗುವನು. 8 : ಇಸ್ರಯೇಲಿನ ಪಾಪಕ್ಕೆ ಆಸ್ಪದ ಆಗಿದ್ದ ಆವೆನಿನ ಪೂಜಾಸ್ಥಾನಗಳು ನಾಶವಾಗುವುವು. ಪಾಳುಬಿದ್ದ ಬಲಿಪೀಠಗಳ ಮೇಲೆ ಮುಳ್ಳುಕಳ್ಳಿಗಳು ಹುಟ್ಟಿಕೊಳ್ಳುವುವು. ಅಲ್ಲಿನ ಜನರು: ‘ಪರ್ವತವೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ ನಮ್ಮನ್ನು ನುಂಗಿಬಿಡಿ’ ಎಂದು ಕೂಗಿಕೊಳ್ಳುವರು.” 12 : ನಾನು ಇಂತೆಂದೆ: “ಪಾಳುಬಿದ್ದ ನೆಲವನ್ನು ಉತ್ತು ಹದಮಾಡಿರಿ; ನೀತಿಯ ಬೀಜವನ್ನು ಬಿತ್ತಿರಿ; ಪ್ರೀತಿಯ ಫಲವನ್ನು ಕೊಯ್ಯಿರಿ. ಸಮಯವು ಸನ್ನಿಹಿತವಾಗಿದೆ. ಸರ್ವೇಶ್ವರ ಆಗಮಿಸಿ ನಿಮ್ಮ ಮೇಲೆ ನೀತಿಯನ್ನು ಮಳೆಗರೆಯುವಂತೆ ಅವರಿಗೆ ಶರಣು ಹೋಗಬೇಕು. ==================
ಕೀರ್ತನೆ 33:2-3, 10-11, 18-19. ಶ್ಲೋಕ.11 ಅಪೇಕ್ಷಿಸಿ ನಿತ್ಯವೂ ಪ್ರಭುವಿನ ದರ್ಶನವನು
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು / ಧ್ಯಾನಿಸಿ ನೀವು ಆತನ ಪವಾಡಗಳನು // 3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ // 4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ / ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು // 5 : ಆತನ ದಾಸ ಅಬ್ರಹಾಮನ ಸಂತತಿಯವರೇ / ಆತನಾರಿಸಿಕೊಂಡ ಯಕೋಬನ ವಂಶದವರೇ / 6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು // 7 : ಪ್ರಭು ನಮ್ಮ ದೇವನೆಂಬುದು ಶ್ರುತ / ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
====================
ಮತ್ತಾಯ 10.1-7 1 : ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. 2 : ಆ ಹನ್ನೆರಡು ಮಂದಿ ಪ್ರೇಷಿತರ ಹೆಸರುಗಳು ಇವು; ಮೊದಲನೆಯವನು ಪೇತ್ರ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಕೋಬ ಮತ್ತು ಅವನ ಸಹೋದರ ಯೊವಾನ್ನ; 3 : ಫಿಲಿಪ್ಪ ಮತ್ತು ಬಾರ್ತೊಲೊಮಾಯ; ತೋಮ ಮತ್ತು ಸುಂಕ ವಸೂಲಿಗಾರ ಮತ್ತಾಯ; ಅಲ್ಫಾಯನ ಮಗ ಯಕೋಬ ಮತ್ತು ತದ್ದಾಯ; 4 : ದೇಶಾಭಿಮಾನಿ ಎಂದು ಕರೆಯಲಾದ ಸಿಮೋನ ಮತ್ತು ಗುರುದ್ರೋಹಿ ಆಗಲಿದ್ದ ಯೂದ ಇಸ್ಕರಿಯೋತ. 5 : ಆ ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. 6 : ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; 7 : ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. --------------------------
ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತರು ದೈವಚಿತ್ತದ ಅನುಷ್ಠಾನಕ್ಕೆ ಸಹಾಯಕರನ್ನಾಗಿ ಹನ್ನೆರಡು ಹುಲುಮಾನವರನ್ನು ಆರಿಸಿಕೊಳ್ಳುತ್ತಾರೆ. ಮುಂದೆ ಇದು ಕೇವಲ ಒಂದು ಸಂಘಟನೆ ಅಥವಾ ಸಂಸ್ಥೆಯಾಗಿ ಉಳಿಯದೆ ಅನೇಕ ಸಂಘ-ಸಂಸ್ಥೆಗಳನ್ನು ಹುಟ್ಟುಹಾಕಿ ಪ್ರಪಂಚಾದ್ಯಾಂತ ದೇವರ ಸುವಾರ್ತೆ ಮತ್ತು ದೈವೀಕಾರ್ಯಗಳ ನೆಲೆಯಾಗಿದೆ. ಸಂಘಟನೆಯ ಹೋರಾಟ ಏಕಾಂಗಿ ಹೋರಾಟಕ್ಕಿಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ. ಶಿಷ್ಯರುಗಳಲ್ಲಿ ಬೇರೆಬೇರೆ ಗುಣಗಳಿದ್ದರೂ, ವಿಭಿನ್ನ ಕಾಯಕದ, ಕುಟುಂಬದ ಮತ್ತು ವ್ಯಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ದೈವಕಾರ್ಯಕ್ಕೆ ಎಲ್ಲರು ಪವಿತ್ರಾತ್ಮವರಗಳಿಂದ ಅಭಿಷಿಕ್ತರಾಗಿ ಪ್ರಪಂಚದ ಮೂಲೆಮೂಲೆಗೂ ಯೇಸುವಿನ ಬೋಧನಕಾರ್ಯಾಗಳನ್ನು ಮಾಡುತ್ತ ಯೇಸುವಿಗೋಸ್ಕರ ಪ್ರಾಣತ್ಯಾಗ ಮಾಡುತ್ತಾರೆ. ನಮ್ಮ ಕ್ರೈಸ್ತಸಮುದಾಯಗಳು ಸಹ ಇಂತಹ ಹೊಸ ಹುರುಪಿನಿಂದ ಅಭಿಷಿಕ್ತರಾಗಿ ಅನ್ಯಾಯ, ಕೋಮುಗಲಭೆ, ಭ್ರಷ್ಟಚಾರ, ಜಾತಿ, ಮೇಲು-ಕೀಳು, ಮಹಿಳೆ-ಮಕ್ಕಳ ಶೊಷಣೆಗಳ ವಿರದ್ಧ ಸಿಡಿದೆದ್ದು ಕುಟುಂಬಗಳ ಮತ್ತು ಲೋಕ ಕಲ್ಯಾಣಗಳಿಗೆ ಶ್ರಮಿಸಿ ದೈವಸಮ್ರಾಜ್ಯವನ್ನು ಸ್ಥಾಪಿಸಲು ನಮ್ಮಿಂದಾಗಬಹುದಾದ ಅಳಿಲು ಸೇವೆಯನ್ನು ಮಾಡಲು ಬೇಕಾದ ವರಗಳ್ಗಿಗೊಸ್ಕರ ಪ್ರಾರ್ಥಿಸೋಣ.
============
@ ದನಿ ಮಾಧ್ಯಮ ಮನೆ

No comments:

Post a Comment