ದೈನಂದಿನ ಪವಿತ್ರವಾಚನಗಳ ಸೂಚಿ
===============
ಆಗಸ್ಟ್ 9, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 19ನೇ ಭಾನುವಾರ
ಮೊದಲ ವಾಚನ: 1 ಅರಸರು 19.9, 11-13
ಕೀರ್ತನೆ 85:8, 9, 10-13. ಶ್ಲೋಕ.7
ತೋರಿಸೆಮಗೆ ಪ್ರಭೂ, ಕರುಣೆಯನು
ಎರಡನೇ ವಾಚನ: ರೋಮನರಿಗೆ 9.1-5
ಶುಭಸಂದೇಶ: ಮತ್ತಾಯ 14.22-33
----------------------------
ಶಿಲುಬೆಯ ಸಂತ ತೆರೇಸಾ ಬೆನೆಡಿಕ್ಟಾ, ಕನ್ಯೆ ಮತ್ತು ರಕ್ತಸಾಕ್ಷಿ
==================
ದೈವ ವಾಕ್ಯದ ವಿಧಿ
=============
ಮೊದಲನೇ ವಾಚನ
===============
1 ಅರಸರು 19.9, 11-13
9 : ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಎಲೀಯನಿಗೆ ಸರ್ವೇಶ್ವರನ ಸಂದರ್ಶನ ಆಗ ಅವನಿಗೆ ಸರ್ವೇಶ್ವರನಿಂದ, “ಎಲೀಯನೇ, ಇಲ್ಲೇನು ಮಾಡುತ್ತಿರುವೆ?” ಎಂಬ ವಾಣಿ ಕೇಳಿಸಿತು.
11 : ಆಗ ಇನ್ನೊಮ್ಮೆ, “ನೀನು ಹೊರಗೆ ಬಂದು ಬೆಟ್ಟದ ಮೇಲೆ ಸರ್ವೇಶ್ವರನ ಮುಂದೆ ನಿಲ್ಲು,” ಎಂದು ವಾಣಿಯಾಯಿತು; ಆಹಾ! ಸರ್ವೇಶ್ವರ ಅಲ್ಲೇ ಹಾದುಹೋದರು, ಅವರ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಂಥ ದೊಡ್ಡ ಬಿರುಗಾಳಿ ಬೀಸಿತು; ಸರ್ವೇಶ್ವರ ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲೂ ಅವರಿರಲಿಲ್ಲ.
12 : ಭೂಕಂಪವಾದನಂತರ ಸಿಡಿಲು ಉಂಟಾಯಿತು. ಕಡೆಗೊಂದು ಮೆಲುದನಿ!
13 : ಅದನ್ನು ಕೇಳಿದಕೂಡಲೆ ಎಲೀಯನು ತನ್ನ ಕಂಬಳಿಯಿಂದ ಮುಖವನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. ಆಗ, “ಎಲೀಯನೇ, ನೀನು ಇಲ್ಲೇನು ಮಾಡುತ್ತಿರುವೆ?” ಎಂಬ ವಾಣಿ ಕೇಳಿಸಿತು
===================
ವಾಚಕ: ಪ್ರಭುವಿನ ವಾಕ್ಯ
ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ.
================
ಕೀರ್ತನೆ
======
ಕೀರ್ತನೆ 85:8, 9, 10-13. ಶ್ಲೋಕ.7
ತೋರಿಸೆಮಗೆ ಪ್ರಭೂ, ಕರುಣೆಯನು
8 : ನಾ ಕೇಳುತ್ತಿರುವೆನು,
ಪ್ರಭು ಹೇಳುವುದನು /
ತನ್ನ ಜನರಿಗಾತ ನುಡಿವುದು
ಶಾಂತಿಯನು /
ಇನ್ನಾದರು ತೊರೆಯೋಣ
ಮೂರ್ಖತೆಯನು //
9 : ಭಯಭಕ್ತಿಯುಳ್ಳವರಿಗಾತನ
ರಕ್ಷಣೆ ಸನ್ನಿಹಿತ /
ಇದರಿಂದಾತನ ಮಹಿಮೆ
ನಾಡಿಲ್ಲಿರುವುದು ನಿರುತ //
10 : ಪ್ರೀತಿಯೂ ಸತ್ಯವೂ
ಒಂದನ್ನೊಂದು ಕೂಡಿರುವುವು /
ನೀತಿಯೂ ಶಾಂತಿಯೂ
ಒಂದನ್ನೊಂದು ಚುಂಬಿಸುವುವು //
11 : ಸತ್ಯತೆಯು ಹುಟ್ಟುವುದು
ಭೂಮಿಯಿಂದ /
ನೀತಿಯು ದೃಷ್ಟಿಸುವುದು
ಗಗನದಿಂದ //
12 : ಪ್ರಭು ಕೊಟ್ಟೇ ತೀರುವನು
ಒಳಿತನು /
ನಮ್ಮ ನಾಡು ನೀಡುವುದು
ಬೆಳೆಯನು //
13 : ನಡೆವುದು ಪ್ರಭುವಿನ
ಮುಂದೆ ನೀತಿ /
ಮಾಡುವುದು ಆತನ
ಹೆಜ್ಜೆಗೆ ಹಾದಿ //
===================
ಎರಡನೇ ವಾಚನ
===========
ರೋಮನರಿಗೆ 9.1-5
1 : ನನ್ನ ಜನರಾದ ಯೆಹೂದ್ಯರ ವಿಷಯವಾಗಿ ನನಗೆ ಅತೀವ ದುಃಖವೂ ನಿರಂತರ ಮನೋವೇದನೆಯೂ ಉಂಟಾಗುತ್ತಿದೆ.
2 : ಇದು ಸುಳ್ಳಲ್ಲ, ಕ್ರಿಸ್ತಯೇಸುವಿನಲ್ಲಿ ಸತ್ಯವಾಗಿಯೇ ಹೇಳುತ್ತಿದ್ದೇನೆ. ಪವಿತ್ರಾತ್ಮಾಧೀನವಾಗಿರುವ ನನ್ನ ಮನಸ್ಸೇ ಇದಕ್ಕೆ ಸಾಕ್ಷಿಯಾಗಿದೆ.
3 : ಸ್ವದೇಶಿಯರೂ ರಕ್ತಸಂಬಂಧಿಕರೂ ಆದ ನನ್ನ ಸಹೋದರರ ಪರವಾಗಿ ನಾನು ಕ್ರಿಸ್ತಯೇಸುವಿನಿಂದ ಬಹಿಷ್ಕøತನಾಗಿ ಶಾಪಗ್ರಸ್ತನಾಗಲು ಸಹ ಸಿದ್ಧನಿದ್ದೇನೆ.
4 : ಅವರೇ ಇಸ್ರಯೇಲರು. ದೇವರೇ ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡರು; ಇವರಿಗೆ ತಮ್ಮ ಮಹಿಮೆಯನ್ನು ವ್ಯಕ್ತಪಡಿಸಿದರು; ಇವರೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಇವರಿಗೆ ಧರ್ಮಶಾಸ್ತ್ರವನ್ನೂ ಸಭಾರಾಧನೆಯನ್ನೂ ವಾಗ್ದಾನಗಳನ್ನೂ ದಯಪಾಲಿಸಿದರು.
5 : ಸಹ ಇವರಿಗೆ ಸೇರಿದವರೇ. ಶಾರೀರಿಕವಾಗಿ ಕ್ರಿಸ್ತಯೇಸುವೂ ಇವರ ವಂಶದಲ್ಲಿ ಹುಟ್ಟಿದವರೇ. ಸಕಲಕ್ಕೂ ಒಡೆಯರಾದ ದೇವರಿಗೆ ನಿರಂತರ ಸ್ತುತಿಸ್ತೋತ್ರ ಸಲ್ಲಲಿ, ಆಮೆನ್.
ವಾಚಕ: ಪ್ರಭುವಿನ ವಾಕ್ಯ
ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ
ಅಲ್ಲೆಲೂಯ
=========
ಎಫೆಸಿಯರಿಗೆ 1: 18
ಅಲ್ಲೆಲೂಯ, ಅಲ್ಲೆಲೂಯ!
ಯೇಸುಕ್ರಿಸ್ತರ ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ;
ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ
ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು.
ಅಲ್ಲೆಲೂಯ!
----------------------------
ಶುಭಸಂದೇಶ
==========
ಮತ್ತಾಯ 14.22-33
22 : ಇದಾದಮೇಲೆ ಯೇಸುಸ್ವಾಮಿ ತಾವು ಜನರ ಗುಂಪನ್ನು ಕಳಿಸಿಬಿಡುವಷ್ಟರಲ್ಲಿ, ಶಿಷ್ಯರು ದೋಣಿಹತ್ತಿ ತಮಗಿಂತ ಮುಂದಾಗಿ ಸರೋವರದ ಆಚೆಯ ದಡಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು.
23 : ಜನರನ್ನು ಬೀಳ್ಕೊಟ್ಟ ಬಳಿಕ ಪ್ರಾರ್ಥನೆಮಾಡಲು ಯೇಸು ಒಬ್ಬರೇ ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ಅವರು ಅಲ್ಲಿ ಒಬ್ಬಂಟಿಗರಾಗಿದ್ದರು.
24 : ಅಷ್ಟರಲ್ಲಿ ದೋಣಿ ದಡದಿಂದ ಬಹುದೂರ ಸಾಗಿತ್ತು. ಎದುರುಗಾಳಿ ಬೀಸಿ ಅದು ಅಲೆಗಳ ಬಡಿತಕ್ಕೆ ಸಿಕ್ಕಿಕೊಂಡಿತ್ತು.
25 : ಆಗ ರಾತ್ರಿಯ ಕಡೇ ಜಾವದ ಸಮಯ. ಯೇಸು ಸರೋವರದ ಮೇಲೆ ನಡೆದುಕೊಂಡೇ ಶಿಷ್ಯರ ಬಳಿಗೆ ಬಂದರು.
26 : ಹೀಗೆ ಸರೋವರದ ಮೇಲೆ ನಡೆದುಕೊಂಡು ಬರುತ್ತಿದ್ದ ಯೇಸುವನ್ನು ನೋಡಿದಾಗ ಶಿಷ್ಯರು ಭಯಭ್ರಾಂತರಾದರು. ದಿಗಿಲುಗೊಂಡು, "ಭೂತ, ಭೂತ!" ಎಂದು ಚೀರಿದರು.
27 : ತಕ್ಷಣವೇ ಯೇಸು, "ಭಯಪಡಬೇಡಿ, ನಾನೇ. ಬೇರೆ ಯಾರೂ ಅಲ್ಲ, ಧೈರ್ಯದಿಂದಿರಿ," ಎಂದು ಅವರೊಡನೆ ಮಾತನಾಡಿದರು.
28 : ಆಗ ಪೇತ್ರನು, "ಸ್ವಾವಿೂ, ನೀವೇ ಆದರೆ ನಾನೂ ನೀರಿನ ಮೇಲೆ ನಡೆದು ನಿಮ್ಮ ಬಳಿಗೆ ಬರುವಂತೆ ಆಜ್ಞಾಪಿಸಿ," ಎಂದನು. ಯೇಸು, "ಬಾ" ಎಂದು ಕರೆಯಲು
29 : ಪೇತ್ರನು ದೋಣಿಯನ್ನು ಬಿಟ್ಟು ನೀರಿನ ಮೇಲೆ ನಡೆಯುತ್ತಾ ಯೇಸುವಿನತ್ತ ಬಂದನು.
30 : ಆದರೆ ಬಲವಾದ ಗಾಳಿ ಬೀಸುತ್ತಿರುವುದನ್ನು ಕಂಡು ಹೆದರಿದನು. ಹಾಗೆಯೇ ಮುಳುಗಿ ಹೋಗಲಾರಂಭಿಸಿದನು. ಆಗ, "ಸ್ವಾವಿೂ, ಕಾಪಾಡಿ, ಕಾಪಾಡಿ," ಎಂದು ಕೂಗಿಕೊಂಡನು.
31 : ಆ ಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡು, "ಅಲ್ಪ ವಿಶ್ವಾಸಿಯೇ ಏಕೆ ಸಂದೇಹಪಟ್ಟೆ?" ಎಂದರು.
32 : ಅನಂತರ ಅವರಿಬ್ಬರೂ ದೋಣಿಯನ್ನು ಹತ್ತಿದರು. ಕೂಡಲೇ ಗಾಳಿ ನಿಂತುಹೋಯಿತು.
33 : ದೋಣಿಯಲ್ಲಿದ್ದವರು "ನೀವು ನಿಜವಾಗಿಯೂ ದೇವರ ಪುತ್ರ!" ಎಂದು ಹೇಳಿ ಯೇಸುವನ್ನು ಆರಾಧಿಸಿದರು.
===================
ಯಾಜಕ : ಪ್ರಭುವಿನ ಶುಭಸಂದೇಶ.
ಎಲ್ಲರು : ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ.
ಯಾಜಕ : ಶುಭಸಂದೇಶದ ಈ ನುಡಿಗಳು ನಮ್ಮ ಪಾಪಗಳನ್ನು ಅಳಿಸಲಿ.
=================
ಚಿಂತನೆ
======
ಸಾಧಾರಣ ಕಾಲದ 19ನೇ ಭಾನುವಾರ
=======================
ಪೀಠಿಕೆ
==========
"ಭಯಪಡಬೇಡಿ ಧೈರ್ಯದಿಂದಿರಿ"
ಜೀವನದಲ್ಲಿ ಸಂದಿಗ್ಧ ಪರಿಸ್ಥಿತಿಗಳು ಎದುರಾದಾಗ ನಾವೆಲ್ಲರೂ ಭಯಪಡುತ್ತೇವೆ. ನಮ್ಮಲ್ಲಿ ಕೆಲವರ ಜೀವನ ಭಯದಲ್ಲೇ ಅಂತ್ಯವಾಗುತ್ತದೆ. "ಜೋ ಢರಾ ಸಮ್‍ಜೋ ವೋ ಮರಾ" ಇದರರ್ಥ "ಯಾವನು ಹೆದರುತ್ತಾನೋ ಅವನು ಸತ್ತಂತ್ತೆ". ಬದುಕನ್ನು ಎದುರಿಸಲಾಗದೆ ಎಷ್ಟೋ ಜನ ತಮ್ಮ ಜೀವನವನ್ನು ಕೊನೆಗೊಳಿಸುತ್ತಾರೆ. ವಿನಾಕಾರಣ ಭಯ ಪಡುವ ಜನರಿಗೆ ದೇವರ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಆದರೆ ದೇವರನ್ನು ಅರಿತವ ಭಯಪಡುವುದಿಲ್ಲ ಆತ ಸಾಯುವುದಿಲ್ಲ. ನಮ್ಮ ದೇವರು ಭಯಪಡಿಸುವ ದೇವರಲ್ಲ, ಆತ ನಮ್ಮನ್ನು ರಕ್ಷಿಸುವ ದೇವರು. ಇಂದಿನ ದೈವವಾಕ್ಯ "ಭಯಪಡಬೇಡ ನಾನಿರುವೆ ನಿನ್ನೊಂದಿಗೆ" "ಹೆದರಬೇಡ ನಾ ನಿನ್ನ ಕೈಹಿಡಿದು ನಡೆಸುವೆ" ಬಾ ವಿಶ್ವಾಸಿಸುತ್ತಾ ನನ್ನ ಹಿಂಬಾಲಿಸು ಎನ್ನುತ್ತಿದೆ. ದೇವರ ವಾಕ್ಯಕ್ಕೆ ಕಿವಿಗೊಟ್ಟು "ಭಯವನ್ನು" ಬದಿಗೊತ್ತಿ ಪ್ರಭುವಿನ ಹೆಜ್ಜೆಯಲ್ಲಿ ಹೆಜ್ಜೆಯನಿಟ್ಟು ನಡೆಯೋಣ.
ಮೊದಲನೆಯ ವಾಚನ - 1 ಅರಸು 19: 9, 11-13
=============================
ಜನರನ್ನು ಭಯಪಡಿಸುವ ಭಯಾನಕ ವಿಗ್ರಹಗಳು, ಕಲ್ಲುಗುಡ್ಡೆಗಳು ದೇವರಲ್ಲ. ಬಿರುಗಾಳಿ, ಭೂಕಂಪ, ಸಿಡಿಲು, ಮರಗಿಡಗಳು ಇತ್ಯಾದಿ ದೇವರಲ್ಲ. ಸದಾ ತನ್ನ ಜನರನ್ನು ಕಾಪಾಡಿ ಸಂರಕ್ಷಿಸುವ ದೇವರು ತನ್ನ ಜನರನ್ನು ಎಂದಿಗೂ ಭಯಪಡಿಸುವುದಿಲ್ಲ. ನಾ ನಿನ್ನ ಜೊತೆಯಿರುವೆ, ನಾ ನಿನ್ನ ಮುನ್ನಡೆಸುವೆ ಎಂಬ "ಮೆಲುದನಿ"ಯ ಆಶ್ವಾಸನೆಯ ಮಾತು ಸರ್ವೇಶ್ವರ ಸ್ವಾಮಿಯದು. ಪ್ರವಾದಿ ಎಲೀಯನಿಗೆ ದೈವಾನುಭವವಾದುದು ಆ ಮೆಲುದನಿ"ಯಲ್ಲಿ. ನಾವು ಕೂಡ ಆ ಮೆಲುದನಿಯನ್ನು ಕೇಳಿಕೊಳ್ಳುವ ಭಕ್ತಾದಿಗಳಾಗಬೇಕು ಎನ್ನುತ್ತದೆ ಅರಸುಗಳ ಗ್ರಂಥ.
ಎರಡನೆಯ ವಾಚನ - ರೋಮನರಿಗೆ 9:1-5
===============================
ನಾವು ದೇವರಿಗೆ ಸೇರಿದವರು. ದೇವರಿಗೆ ಸೇರಿದ ಪ್ರತಿಯೊಬ್ಬ ಕ್ರೈಸ್ತಭಕ್ತನಿಗೆ "ದೈವಭಯ"ವಿರಬೇಕು. ಆ "ದೈವಭಯ" ನಮ್ಮನ್ನು ದೇವರ ಸನಿಹಕ್ಕೆ ಬರಮಾಡಿಕೊಳ್ಳವುದರಲ್ಲಿ ಸಂದೇಹವೇ ಇಲ್ಲ. ದೇವರು ನಮ್ಮನ್ನು ತಮ್ಮ ಮಕ್ಕಳನ್ನಾಗಿ ಅಯ್ದುಕೊಂಡು ತಮ್ಮ ಮಹಿಮೆಯನ್ನು ವ್ಯಕ್ತಪಡಿಸಿರುವಾಗ, ಆ ದೇವರಿಗೆ ನಾವೆಲ್ಲ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು. ನಾವೆಲ್ಲ ದೈವವಂಶಜರು ಎಂಬುದನ್ನು ಮರೆಯುವಂತಿಲ್ಲ. ದೇವರ ದಯೆ ನಮಗೆ ದೊರೆಕಿರುವಾಗ ನಾವೆಲ್ಲ ಪ್ರಾಮಾಣೆಕರಾಗಿ ಬಾಳೋಣ.
ಶುಭಸಂದೇಶ - ಮತ್ತಾಯ 14:22-33
========================
"ಈ ಬಾಳ ಕಡಲಿನಲಿ ನನ್ನ ನೌಕೆ ತೇಲಿದೆ.... ನೂರಾರು ಅಲೆಗಳಿಗೆ ಅದು ನಿಲುಕದೆ ಸಾಗಿದೆ... ನನ್ನ ಯೇಸುವೇ ಅದರ ಚಾಲಕ...... ಎಂಬ ಜನಪ್ರಿಯ ಗೀತೆಯ ಅರಿವು ನಮಗಿದೆಯಲ್ಲವೇ? ಬಾಳೆಂಬ ಪಯಣದಲ್ಲಿ ನಮ್ಮ ಪಯಣ ಯಾವಾಗಲೂ ಸುಗುಮವಾಗಿ ಸಾಗದು. ಭಯಂಕರ ಬಿರುಗಾಳಿಗೆ ಏಳುವ ಅಲೆಗಳು ನೂರಾರು, ಆ ಅಲೆಗಳು ನಮ್ಮನ್ನು ನಿದ್ದೆಗೆಡಿಸುತ್ತವೆ. ಪೇತ್ರನಂತೆ ನಮಗೂ ಇರುವುದು ಅಲ್ಪ ವಿಶ್ವಾಸ. ಆ ವಿಶ್ವಾಸವೋ ಎತ್ತಕ್ಕೂ ಸಾಲದು. ಕಷ್ಟ ಬಂದಾಗ ದೇವರೆಲ್ಲಿ? ನನ್ನ ಕೈ ಬಿಟ್ಟರೋ? ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಏಳುವುದು ಸಹಜ. ಓ ದೇವರೇ ನನ್ನ ಕಾಪಾಡಿ ನನ್ನ ದೋಣಿ ಮುಳುಗುತ್ತಿದೆ, ಈಜು ಬಲ್ಲವನಲ್ಲ ನಾನು ಎನ್ನುತ್ತೇವೆ. ಪ್ರಭುವಿನ ಕೈ ಸದಾ ನಮ್ಮೆಡೆಗೆ ಚಾಚಿರುತ್ತದೆ. "ಮನದಲ್ಲಿ ಭಯವೇತಕೆ? ಎಂದೆಂದೂ ಕಾಪಾಡುವೆ" ಎನ್ನುವ ಪ್ರಭುವಿನ ಮಾತುಗಳು ನಮಗೆ ಧೈರ್ಯ ತುಂಬಬಲ್ಲವು. ಪೇತ್ರನಿಗೆ ಕೂಡ ಇದೇ ಅನುಭವವಾಗಿತ್ತು.
ಅದೊಂದು ದೊಡ್ಡ ಹಡಗು. ನೂರಾರು ಪಯಣಿಗರಿದ್ದರು ಅದರಲಿ. ಹಠಾತನೆ ಭಯಾನಕ ಬಿರುಗಾಳಿ ಬೀಸತೊಡಗಿತು. ನಾವಿಕನ ಹತೋಟಿಗೆ ಬರುತ್ತಿಲ್ಲ ಆ ಹಡುಗು. ಎಲ್ಲರೂ ನೀರಿಗೆ ಹಾರಿ, ಈಜಿಕೊಂಡು ದಡ ಸೇರಿರಿ ಎಂಬ ನಾವಿಕನ ಆದೇಶ. ಭಯಭ್ರಾಂತರಾಗಿ ನಿಂತರು ಹಡಗಿನಲ್ಲಿದ್ದ ಸರ್ವರೂ. ಇದನೆಲ್ಲ ಲೆಕ್ಕಿಸಿದ ಇನ್ನೂ ಆಟದಲ್ಲಿ ಮಗ್ನನಾಗಿದ್ದ ಅಲ್ಲೊಂಬ್ಬ ಬಾಲಕ. "ನಿನಗೆಕ್ಕಿಲ್ಲವೇ ಸಾವಿನ ಭಯ?" ಎಂದು ಕೇಳಿದನೊಬ್ಬ ಬಾಲಕನಿಗೆ. ಹಡುಗು ನಡೆಸುವ ಚಾಲಕ ನನ್ನ ತಂದೆ, ನನಗಾವುದರ ಭಯ? ಎಂದು ನುಡಿದ ಆ ಬಾಲಕ.
ಆ ಬಾಲಕನಲ್ಲಿದ್ದ ಧೈರ್ಯ ನಿನ್ನಲ್ಲುಂಟೇ? ಅಥವಾ ಆ ಜನರಂತೆ ನೀನು ಕೂಡ ಭಯಭ್ರಾಂತನಾಗಿ ನಿಂತಿರುವೆಯೇ?
• ನಮ್ಮ ಬಾಳ ನಾವಿಕ ಯೇಸುವಾಗಿದ್ದಾರೆ, ಅವರು ನಡೆಸುತ್ತಿದ್ದಾರೆ ನಮ್ಮ ಬಾಳ ನೌಕೆಯನು ನಿನಗೆ ಇನ್ನೂ ಭಯವೇ?
• ಪ್ರಭುವಿನಲಿ ನಿನಗೆ ವಿಶ್ವಾಸವಿದೆಯೇ? ಆ ವಿಶ್ವಾಸ ಅಗಾಧವೋ? ಅಲ್ಪವೋ?
==================
ಚಿಂತನೆ – ಫಾ. ದೀಪಕ್ (ಮೌಂಟ್ ಫೊರ್ಟ್)
==================
No comments:
Post a Comment