ಸೆಪ್ಟೆಂಬರ್ 9, 2020 ಬುಧವಾರ [ಹಸಿರು]
ಸಂತ ಪೀಟರ್ ಕ್ಲಾವೆರ್ [ಯಾಜಕ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: 1 ಕೊರಿಂಥಿಯರಿಗೆ 7.25-31
ಕೀರ್ತನೆ 45: 10-11, 14-15, 16-17. ಶ್ಲೋಕ.10
ಎಲೇ ಕುವರಿಯೇ ಕೇಳು, ಎನ್ನ ಮೊರೆಗೆ ಕಿವಿಗೊಡು
ಶುಭಸಂದೇಶ: ಲೂಕ 6.20-26
1 ಕೊರಿಂಥಿಯರಿಗೆ 7.25-31
25 : ಅವಿವಾಹಿತರ ಬಗ್ಗೆ ಪ್ರಭುವಿನಿಂದ ಬಂದ ಕಟ್ಟಳೆ ಯಾವುದೂ ನನ್ನಲ್ಲಿಲ್ಲ. ಪ್ರಭುವಿನ ಕೃಪೆಯಿಂದ ನಂಬಿಕೆಗೆ ಅರ್ಹನಾದ ವ್ಯಕ್ತಿಯಂತೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡುತ್ತೇನೆ.
26 : ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬನು ತಾನು ಇದ್ದ ಸ್ಥಿತಿಯಲ್ಲೇ ಇರುವುದು ಉತ್ತಮವೆಂದು ಭಾವಿಸುತ್ತೇನೆ.
27 : ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ.
28 : ಹಾಗೇನಾದರೂ ನೀನು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಅಂತೆಯೇ, ಅವಿವಾಹಿತ ಸ್ತ್ರೀಯೊಬ್ಬಳು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಆದರೆ ದಂಪತಿಗಳಿಗೆ ತಾಪತ್ರಯಗಳು ಅನೇಕ. ಇವುಗಳು ನಿಮ್ಮನ್ನು ಬಾಧಿಸದಿರಲೆಂಬುದೇ ನನ್ನ ಹಾರೈಕೆ.
29 : ಪ್ರಿಯ ಸಹೋದರರೇ, ನನ್ನ ಅಭಿಪ್ರಾಯ ಇದು: ಉಳಿದಿರುವ ಕಾಲವು ಕೊಂಚ ಮಾತ್ರ. ಆದ್ದರಿಂದ ಮದುವೆಯಾದವರು ಮದುವೆಯಾಗದವರೋ ಎಂಬಂತೆ ನಡೆದುಕೊಳ್ಳಲಿ.
30 : ದುಃಖಿತರು ದುಃಖವಿಲ್ಲದವರಂತೆ, ಸಂತೋಷಭರಿತರು ಸಂತೋಷರಹಿತರಂತೆ ಹಾಗು ಕೊಂಡುಕೊಳ್ಳುವವರು ಕೊಂಡದ್ದು ತಮ್ಮದಲ್ಲವೋ ಎಂಬಂತೆ ನಡೆದುಕೊಳ್ಳಲಿ.
31 : ಲೋಕದ ವ್ಯವಹಾರದಲ್ಲಿ ಇರುವವರು ಅದರಲ್ಲಿಯೇ ತಲ್ಲೀನರಾಗದಿರಲಿ. ಏಕೆಂದರೆ, ಲೋಕದ ರೂಪರೇಷೆಗಳು ಗತಿಸಿ ಹೋಗುತ್ತವೆ.
ಕೀರ್ತನೆ 45: 11-12, 14-15, 16-17. ಶ್ಲೋಕ.10
ಎಲೇ ಕುವರಿಯೇ ಕೇಳು, ಎನ್ನ ಮೊರೆಗೆ ಕಿವಿಗೊಡು
11 : ಆಗ ಬಯಸುವನು ರಾಜ ನಿನ್ನ ಲಾವಣ್ಯವನು / ಆತನ ಪಾದಕ್ಕೆರಗು, ಆತನೇ ನಿನಗೊಡೆಯನು //
12 : ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು ಸನ್ಮಾನಿಸುವರು / ಸಿರಿವಂತ ಪ್ರಜೆಗಳು ನಿನ್ನುಪಕಾರವನು ಕೋರಿಬರುವರು //
14 : ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ / ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ //
15 : ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ / ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ //
16 : ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ ಸ್ಥಾನವನು / ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ ಜಗದೊಳು //
17 : ನಿನ್ನ ನಾಮಸ್ಮರಣೆಯನುಳಿಸುವೆನು ಚಿರಕಾಲ / ಹೊಗಳುವರು ಸಕಲ ಜನರು ನಿನ್ನನು ಅನುಗಾಲ //
ಲೂಕ 6.20-26
20 : ಯೇಸುಸ್ವಾಮಿ ತಮ್ಮ ಶಿಷ್ಯರ ಕಡೆಗೆ ದೃಷ್ಟಿಸಿ ನೋಡಿ ಹೀಗೆಂದು ಬೋಧಿಸಿದರು: “ದೀನದಲಿತರೇ, ನೀವು ಭಾಗ್ಯವಂತರು! ದೇವರ ಸಾಮ್ರಾಜ್ಯ ನಿಮ್ಮದು.
21 : ಈಗ ಹಸಿದಿರುವವರೇ, ನೀವು ಭಾಗ್ಯವಂತರು! ನಿಮಗೆ ಸಂತೃಪ್ತಿಯಾಗುವುದು. ಈಗ ಅತ್ತು ಗೋಳಾಡುವವರೇ, ನೀವು ಭಾಗ್ಯವಂತರು! ನೀವು ನಕ್ಕುನಲಿದಾಡುವಿರಿ!
22 : ನರಪುತ್ರನ ಶಿಷ್ಯರು ನೀವಾದುದರಿಂದ ನಿಮ್ಮನ್ನು ದ್ವೇಷಿಸಿ, ಬಹಿಷ್ಕರಿಸಿ, ಧಿಕ್ಕರಿಸಿ, ನಿಮ್ಮ ಹೆಸರೆತ್ತುವುದು ಕೂಡ ಕೇಡೆಂದು ತಿರಸ್ಕರಿಸುವಾಗ ನೀವು ಭಾಗ್ಯವಂತರು!
23 : ಈ ಜನರ ಪೂರ್ವಜರು ಪ್ರವಾದಿಗಳನ್ನು ಹೀಗೆಯೇ ತೆಗಳಿದ್ದರು. ಇದೆಲ್ಲಾ ಸಂಭವಿಸುವಾಗ ಹಿಗ್ಗಿ ನಲಿದಾಡಿರಿ. ಏಕೆಂದರೆ, ಸ್ವರ್ಗದಲ್ಲಿ ನಿಮಗೆ ಲಭಿಸುವ ಪ್ರತಿಫಲವು ಮಹತ್ತರವಾದುದು.
24 : “ಆದರೆ ಧನಿಕರೇ, ನಿಮಗೆ ಧಿಕ್ಕಾರ! ನೀವು ಸುಖಜೀವನವನ್ನು ಅನುಭವಿಸಿ ಆಗಿದೆ.
25 : ಈಗ ತಿಂದು ತೃಪ್ತಿಯಾಗಿರುವವರೇ, ನಿಮಗೆ ಧಿಕ್ಕಾರ! ನೀವು ಹಸಿದು ಬಳಲುವಿರಿ. ಈಗ ನಕ್ಕುನಲಿದಾಡುವವರೇ, ನಿಮಗೆ ಧಿಕ್ಕಾರ! ನೀವು ದುಃಖಿಸಿ ಗೋಳಾಡುವಿರಿ
26 : ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು.
ಲೋಕದ ದೃಷ್ಟಿಯಲ್ಲಿ ಶ್ರೀಮಂತರು ಭಾಗ್ಯವಂತರು. ಆದರೆ ಯೇಸು ಪ್ರಭು ದೀನ ದಲಿತರೇ ನೀವು ಭಾಗ್ಯವಂತರು, ದೇವರು ಸಾಮ್ರಾಜ್ಯ ಅವರದು ಎಂದು ಹೇಳುತ್ತಾರೆ. ಇಷ್ಟೇ ಅಲ್ಲ ಸಮಾಜದಿಂದ ಯಾರೆಲ್ಲ ಬಹಿಷ್ಕøತರಾಗಿದ್ದಾರೋ ಅವರನ್ನು ಯೇಸು ಕೊಂಡಾಡುತ್ತಾರೆ. ಜನರು ದ್ವೇಷಿಸಿ, ಬಹಿಷ್ಕರಿಸಿ, ದಿಕ್ಕರಿಸಿ, ಹೆಸರೆತ್ತುವುದು ಕೇಡೆಂದು ತಿರಸ್ಕರಿಸಲ್ಪಟ್ಟಾಗ `ಸಂತೋಷದಿಂದಿರಿ’ ಸ್ವರ್ಗದಲ್ಲಿ ಪ್ರತಿಫಲವು ಸಿಗುವುದು ಎನ್ನುತ್ತಾರೆ. ನಾವೆಲ್ಲರೂ ಮಹೋನ್ನತ ದೇವರ ಮಕ್ಕಳು ಆದುದರಿಂದ ನಮ್ಮ ತಂದೆಯಾದ ದೇವರಂತೆ ನಾವು ಕೂಡ ದಯಾವಂತರಾಗಿ ಇರಬೇಕು. ಒಳ್ಳೆಯವರಾಗಿ ಬೆಳೆÀಯಬೇಕು. ದೇವರ ಒಳ್ಳೆಯತನ ನಮ್ಮಲ್ಲಿ ಪ್ರತಿಬಿಂಬವಾದಾಗ ಮಾತ್ರ ನಮ್ಮ ಕ್ರೈಸ್ತೀಯ ಜೀವನಕ್ಕೆ ಒಂದು ಅರ್ಥ ಬರುತ್ತದೆ.
No comments:
Post a Comment