Saturday, 4 July 2020

ಸೆಪ್ಟೆಂಬರ್ 8, 2020 ಮಂಗಳವಾರ

ಸೆಪ್ಟೆಂಬರ್ 8, 2020 ಮಂಗಳವಾರ                        [ಬಿಳಿ]
ಪೂಜ್ಯ ಕನ್ಯಾಮರಿಯಮ್ಮನವರ ಜಯಂತಿ (ಹಬ್ಬ)
ಮೊದಲ ವಾಚನ: ಮಿಕ 5.1-4 (ಐಚ್ಚಿಕ)
ಮೊದಲ ವಾಚನ: ರೋಮನರಿಗೆ 8.28-30 
ಕೀರ್ತನೆ 13:5-6. ಶ್ಲೋಕ.ಯೆಶಾಯ 61:10
ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ
ಶುಭಸಂದೇಶ: ಮತ್ತಾಯ 1.1-16, 18-23 / (ಸಂಕ್ಷಿಪ್ತ) ಮತ್ತಾಯ 1.18-23


ಮಿಕ 5.1-4 (ಐಚ್ಚಿಕ)
2 : ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: ಎಫ್ರಾತದ ಬೆತ್ಲೆಹೇಮೇ, ಜುದೇಯದ ಕುಲಗಳಲ್ಲಿ ನೀನು ಅತಿಚಿಕ್ಕವಳಾಗಿದ್ದರೂ ಇಸ್ರಯೇಲನ್ನು ಆಳತಕ್ಕವನು ನಿನ್ನಿಂದಲೇ ಉದಯಿಸುವನು. ಆತನ ಗೋತ್ರದ ಮೂಲ ಪುರಾತನವಾದುದು, ಅನಾದಿಕಾಲದಿಂದ ಬಂದುದು.
3 : ಇಂತಿರಲು ದಿನತುಂಬಿದವಳು ಹೆರುವವರೆಗೂ ಸರ್ವೇಶ್ವರ ತನ್ನ ಜನರನ್ನು ಶತ್ರುಗಳ ವಶಕ್ಕೆ ಬಿಟ್ಟುಬಿಡುವರು. ಅನಂತರ ಅಳಿದುಳಿದ ಸಹೋದರರು ಬಂದು ಇಸ್ರಯೇಲ್ ಜನರೊಂದಿಗೆ ಸೇರಿಕೊಳ್ಳುವರು.
4 : ಆತನು ಸರ್ವೇಶ್ವರನಿಂದ ಬರುವ ಶಕ್ತಿಯಿಂದಲೂ ಆ ಸ್ವಾಮಿ ದೇವರ ನಾಮದ ಪ್ರಭಾವದಿಂದಲೂ ತನ್ನ ಜನರನ್ನು ಪರಿಪಾಲಿಸುವನು. ಆ ಜನರು ಸುರಕ್ಷಿತವಾಗಿ ಬಾಳುವರು. ಆತನು ಜಗದ ಕಟ್ಟಕಡೆಯವರೆಗೂ ಪ್ರಬಲನಾಗಿರುವನು. ಆತನೇ ನಮಗೆ ಶಾಂತಿದಾತನು. 

ಕೀರ್ತನೆ 13:5-6. ಶ್ಲೋಕ.ಯೆಶಾಯ 61:10
ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ
5 : ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ / ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ /
6 : ಪ್ರಭು ಮಾಡಿದ ಮಹೋಪಕಾರಗಳಿಗಾಗಿ / ಹಾಡುವೆ ಗೀತವನು ಮನಃಪೂರ್ವಕವಾಗಿ //

ಮತ್ತಾಯ 1.1-16, 18-23 / (ಸಂಕ್ಷಿಪ್ತ) ಮತ್ತಾಯ 1.18-23
1 : ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸುಕ್ರಿಸ್ತರ ವಂಶಾವಳಿ:
2 : ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು.
3 : ಯೂದನಿಗೆ ತಾಮರ ಎಂಬವಳಿಂದ ಪೆರಸ್ ಹಾಗೂ ಜೆರಹನ್ ಹುಟ್ಟಿದರು.
4 : ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ನಹಸ್ಸೋನನಿಗೆ ಸಲ್ಮೋನ್,
5 : ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ,
6 : ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು. ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೊಮೋನ್,
7 : ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ,ಅಬೀಯನಿಗೆ ಆಸನ್ ಹುಟ್ಟಿದರು
8 : ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು.
9 : ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು.
10 : ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್,
11 : ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.
12 : ಬಾಬಿಲೋನಿಗೆ ಸೆರೆಹೋದ ದಾಸ್ಯದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್ , ಸಲಥಿಯೇಲನಿಗೆ ಜೆರುಬಾಬೆಲ್
13 : ಜೆರುಬಾಬೆಲನಿಗೆ ಅಬೀಹೂದ್, ಅಬಿಹೂದನಿಗೆ ಎಲ್ಯಕೀಮ್, ಎಲ್ಯಕೀಮನಿಗೆ ಅಜೋರ್ ಹುಟ್ಟಿದರು.
14 : ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್,
15 : ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು. ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು.
16 : ಈ ಮರಿಯಳಿಂದಲೇ "ಕ್ರಿಸ್ತ" ಎಂದು ಕರೆಯಲಾಗುವ ಯೇಸುಸ್ವಾಮಿ ಹುಟ್ಟಿದ್ದು;
18 : ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ.
19 : ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು.
20 : ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ.
21 : ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ," ಎಂದನು.
22 : "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು "ಇಮ್ಮಾನುವೇಲ್" ಎಂದು ಆತನಿಗೆ ಹೆಸರಿಡುವರು" ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.
23 : “ಇಮ್ಮಾನುವೇಲ್" ಎಂದರೆ "ದೇವರು ನಮ್ಮೊಡನೆ ಇದ್ದಾರೆ" ಎಂದು ಅರ್ಥ.


``ಅಮ್ಮ ಎನ್ನುವ ಕರೆ ಚೆಂದ ಅದು ನೆಮ್ಮದಿ ನೀಡುವ ಮಕರಂದ’’ ಅ ಎಂದರೆ ಅಮೃತ, ಮ್ಮ ಎಂದರೆ ಮಧುರ ಮಮತೆಯ ಸಮ್ಮಿಲನ. ಅಮ್ಮ ಎಂದರೆ ಏನೋ ಒಂತರಾ ರೋಮಾಂಚನ. ಸವಿದವನೇ ಬಲ್ಲ ಬೆಲ್ಲದ ರುಚಿಯ ಎನ್ನುವಂತೆ ತಾಯಿಯ ಪ್ರೀತಿ ಸವಿದವನಿಗೆ ಗೊತ್ತು ಆ ಪ್ರೀತಿಯ ಮಹತ್ವ. ತಾಯಿ, ಸಹನಮಯಿ, ತ್ಯಾಗಮಯಿ, ಪ್ರೇಮಮಯಿ. ಕ್ರೈಸ್ತರಾದ ನಮಗೆ ಇಬ್ಬರೂ ತಾಯಿಯಂದರು, ನಮಗೆ ಜನ್ಮನೀಡಿದ ತಾಯಿ ಒಬ್ಬರಾದರೆ ಮರಿಯ ನಮ್ಮೆಲ್ಲರ ಆಧ್ಯಾತ್ಮಿಕ ತಾಯಿಯಾಗಿದ್ದಾರೆ. 
ಇಂದು ಈ ತಾಯಿ ಮರಿಯಮ್ಮನವರು ಹುಟ್ಟಿದ ದಿನ: ಸುದಿನ ಪ್ರತಿಯೊಂದು ಮಗುವಿನ ಜನನ. ಕುಟುಂಬದಲ್ಲಿ ಆನಂದವನ್ನು ತರುತ್ತದೆ. ಮಾತೆ ಮರಿಯಳ ಜನನ ಈ ದಿನ ಇಡೀ ಜಗತ್ತಿಗೆ ಸಂತೋಷವನ್ನು ತರುತ್ತದೆ. ಕಥೋಲಿಕರಾದ ನಾವು ಮರಿಯಳನ್ನು ಪೂಜಿಸುವುದಿಲ್ಲ ಬದಲಾಗಿ ಗೌರವಿಸುತ್ತೇವೆ. ಮರಿಯಳು ದೇವತೆಯಾಗಿರಲಿಲ್ಲ ಪ್ರವಾದಿನಿಯಾಗಿರಲಿಲ್ಲ. ಆದರೆ ಸಹಾ ಕನ್ನಿಯಾಗಿ ಉಳಿಯಲು ವ್ರತವನ್ನು ಕೈಗೊಂಡ ಮುಗ್ಧಯುವತಿಯಾಗಿದ್ದಳು. ದೇವರು ಅವರನ್ನು ತಮ್ಮ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ಕ್ರಿಸ್ತನ ತಾಯಿಯಾಗಲು ಅನಾದಿಕಾಲದಿಂದಲೇ ಆರಿಸಿಕೊಂಡಿದ್ದರು.
ಏವಳು ಸೈತಾನ ಮಾತುಗಳಿಗೆ ಮರುಳಾಗಿ ಪಾಪವನ್ನು ಮಾಡಿ ಮರಣವನ್ನು ತಂದಳು. ಆದರೆ ಮರಿಯ ದೇವರಿಗೆ ವಿದೇಯರಾಗಿ ನಡೆದು ನಮ್ಮ ರಕ್ಷಣೆಯಲ್ಲಿ ಪಾಲುದಾರರಾದರೂ.
- ಮರಿಯ ಅಮಲೋದ್ಭವ ಮಾತೆ : ಕ್ರಿಸ್ತರು ಪರಿಶುದ್ಧ ದೇವರು ಅವರು ಮರಿಯಮ್ಮನವರಲ್ಲಿ ಹುಟ್ಟಿಬರಬೇಕಾದರೆ ಮರಿಯ ಪರಿಶುದ್ದರಾಗಿ ಪಾಪವಿಲ್ಲದೇ ಇರಬೇಕಿತ್ತು. ಆದ್ದರಿಂದ ದೇವರು ಮರಿಯಮ್ಮನವರನ್ನು ಜನ್ಮಪಾಪವಿಲ್ಲದೇ ಸೃಷ್ಟಿಸಿದರು.
- ಮರಿಯ ನಿತ್ಯ ಕನ್ನಿಕೆಯಾಗಿಯೇ ಉಳಿದರು. ಈ ಹಬ್ಬದಲ್ಲಿ ನಾವು ಹೂವುಗಳನ್ನು ತರುತ್ತೇವೆ. ಅವರು ಬಯಸುವುದು ಹೂನಿನಂತಿರುವ ನಮ್ಮ ಪರಿಶುದ್ದ ಹೃದಯಗಳನ್ನು. ಕ್ರಿಸ್ತರಲ್ಲಿ ಇರಬೇಕಾದ ವಿಶ್ವಾಸವನ್ನು ದೇವರ ವಾಕ್ಯದ ಪಾಲನೆಯಂತೆ.
- ಇಂದು ಹೆಣ್ಣು ಮಕ್ಕಳ ದಿನ. ಆದುದರಿಂದ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿ ಪ್ರಾರ್ಥಿಸೋಣ. ಹೆಣ್ಣು ಮಕ್ಕಳು ಸಮಾಜದಲ್ಲಿ ಎಲ್ಲ ರೀತಿಯ ಹಕ್ಕು ಮತ್ತು ಸಮಾನತೆಯ ರಕ್ಷಣೆಯನ್ನು ಪಡೆಯುವಂತಾಗಲಿ.


No comments:

Post a Comment