ಅಕ್ಟೋಬರ್ 1, 2020 ಗುರುವಾರ [ಬಿಳಿ]
ಯೇಸುವಿನ ಕಿರಿಯ ಪುಷ್ಟ ಸಂತ ತೆರೇಸಾ, ಕನ್ಯೆ ಮತ್ತು ಧರ್ಮಸಭೆಯ ಪಂಡಿತೆ (ಹಬ್ಬ)
ಮೊದಲ ವಾಚನ: ಯೆಶಾಯ 66.10-14
ಕೀರ್ತನೆ : 131: 1-3, ಶ್ಲೋಕ .2
ಎರಡನೆಯ ವಾಚನ : ಹಿಬ್ರಿಯರಿಗೆ 1 : 2-3
ಶುಭಸಂದೇಶ: ಮತ್ತಾಯ 18 : 1- 5
===============
ಮೊದಲ ವಾಚನ: ಯೆಶಾಯ 66.10-14
10 : “ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ.
11 : ಆಕೆಯ ನಿಮಿತ್ತ ದುಃಖಿಸುವವರೇ, ‘ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವು, ಹೌದು, ಆಕೆಯ ಸಿರಿಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು,’ ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ.”
12 : ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಇಗೋ, ಆಕೆಗೆ ಹರಿಯಮಾಡುವೆನು ಸುಖಶಾಂತಿಯನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನು ತುಂಬಿತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ.
13 : ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೆ.
14 : ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. ‘ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ’ ಎಂಬುವುದು ವ್ಯಕ್ತವಾಗುವುದು ನಿಮಗೆ.
============
ಕೀರ್ತನೆ 27:7-8, 9, 13-14. ಶ್ಲೋಕ.13
ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು
7 : ಪ್ರಭೂ, ನಿನಗೆ ಮೊರೆಯಿಡುವೆನು /
ಕರುಣಿಸೆನಗೆ ಸದುತ್ತರವನು //
8 : “ಅರಸೆನ್ನ ಮುಖದರುಶನವನು”, ಎಂದೆ ನೀನು /
“ಅರಸುವೆನು ಅದನೆ”, ಎಂದು ಮರುನುಡಿದೆ ನಾನು //
9 : ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ /
ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ //
13 : ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು /
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //
14 : ಪ್ರಭುವನು ಎದುರುನೋಡುತ್ತಿರು ಮನವೇ /
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //
===================
ಎರಡನೆಯ ವಾಚನ : ಹಿಬ್ರಿಯರಿಗೆ 1 : 2-3
2 : ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ.
3 : ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದು ಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾಶ್ರ್ವದಲ್ಲಿ ಆಸೀನರಾಗಿರುವವರೂ ಇವರೇ." "ಅಲ್ಲೆಲೂಯ
=========
ಶುಭಸಂದೇಶ
ಮತ್ತಾಯ 18 : 1- 5
1 : ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, ""ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?"" ಎಂದು ಕೇಳಿದರು.
2 : ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು:
3 : “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ.
4 : ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು.
5 : ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ.""
==============
ಚಿಂತನೆ
ಮರಿಯ ಫ್ರಾನ್ಸ್ವಾಸ್ ತೆರೇಸಾ ಹುಟ್ಟಿದ್ದು 2ನೇ ಜನವರಿ 1873ರಲ್ಲಿ. ಲೂಯಿ ಮತ್ತು ಜೆಲಿ ಮಾರ್ಟಿನ್ ದಂಪತಿಯ 9 ಮಕ್ಕಳಲ್ಲಿ ಆಕೆ ಕೊನೆಯವಳು. ತೆರೇಸಾಳ ಬದುಕು ನೋವಿನಿಂದ ಕೂಡಿತ್ತು. ನಾಲ್ಕುವರೆ ವರ್ಷದ ಮಗುವಾಗಿದ್ದಾಗ ತಾಯಿ ಎದೆಯ ಕ್ಯಾನ್ಸರಿಂದ ತೀರಿಕೊಂಡಳು. 16 ವರ್ಷದ ಅಕ್ಕನೇ ಆಕೆಗೆ ತಾಯಿಯಾದಳು. ಆದರೆ ಕೇವಲ 5 ವರ್ಷಗಳಲ್ಲಿ ಅವಳೂ ಮನೆಬಿಟ್ಟು ಕಾನ್ವೆಂಟ್ ಸೇರಿದಳು. ತನ್ನ ಏಕೈಕ ಅಕ್ಕ ಸೆಲಿನ್ ಮತ್ತು ತಂದೆ ಜೊತೆ ಬೆಳೆದ ತೆರೇಸಾ ತನ್ನ 14ನೇ ವಯಸ್ಸಿಗೆ ಕಾನ್ವೆಂಟ್ ಸೇರುವ ಬಯಕೆ ವ್ಯಕ್ತಪಡಿಸಿದಳು. ಕಾನ್ವೆಂಟಿನ ಮುಖ್ಯಾಧಿಕಾರಿಗಳು ಮತ್ತು ಸ್ಥಳೀಯ ಧರ್ಮಾಧ್ಯಕ್ಷರು ಅನುಮತಿ ನೀಡದಿದ್ದಾಗ ಜಗದ್ಗುರುಗಳ ಬಳಿ ಸಾಗಿ ತನ್ನ ಬಯಕೆ ವ್ಯಕ್ತಪಡಿಸುತ್ತಾಳೆ. 1988, 9ನೇ ಏಪ್ರಿಲ್ ಆಕೆ ಕಾನ್ವೆಂಟ್ ಸೇರಿದಳು.
`ಪ್ರೀತಿಗಾಗಿ ಒಂದು ಗುಂಡು ಸೂಜಿಯನ್ನು ಹೆಕ್ಕಿದರೂ ಒಂದು ಆತ್ಮವನ್ನು ರಕ್ಷಿಸಬಹುದು ಎಂದು ನಂಬಿದ್ದ ತೆರೇಸಾ ಕಾನ್ವೆಂಟ್ನ ಅಡುಗೆ ಮನೆಯಲ್ಲಿ ಸಹಾಯ ಮಾಡುವುದು, ಬಟ್ಟೆ ಒಗೆಯುವ, ಇಸ್ತ್ರಿ ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾಳೆ. ಚಿಕ್ಕ ಕೆಲಸವಾದರೂ ಹೇಗೆ ಪ್ರೀತಿಯಿಂದ ಮಾಡಬೇಕೆಂಬುದನ್ನು ಈಕೆಯಿಂದ ನಾವು ಕಲಿಯಬಹುದು.
===================
`ಬೆಳೆಯೇನೋ ಹೇರಳವಾಗಿದೆ, ಕೊಯ್ಲುಗಾರರೋ ವಿರಳ’ ಎಂದು ನುಡಿಯುವುದರ ಮೂಲಕ ಯೇಸು ತಮ್ಮ ಜನರ ಸೇವೆಗೆ ನಮ್ಮನ್ನು ಕರೆಯುತ್ತಿದ್ದಾರೆ. ಯೇಸು ಹನ್ನೆರಡು ಮಂದಿ ಪ್ರೇಷಿತರನ್ನು ಆಯ್ಕೆಮಾಡಿಕೊಂಡರು. ಆದರೆ ಅವರಿಗೆ ಅನೇಕ ಹಿಂಬಾಲಕರೂ, ಶಿಷ್ಯರೂ ಇದ್ದರು. ಈ ಹಿಂಬಾಲಕರಲ್ಲಿ ಯೇಸು 72 ಮಂದಿಯನ್ನು ಜನರ ಸೇವೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮೋಶೆ ಜನರ ಸೇವೆಗಾಗಿ ಹೇಗೆ 70 ಮಂದಿಯನ್ನು ಆಯ್ಕೆಮಾಡಿದನೋ (ಸಂಖ್ಯಾಕಾಂಡ 11) ಹಾಗೇಯೇ ಯೇಸು ಜನರ ಸೇವೆಗೆ, ಶುಭಸಂದೇಶದ ಪ್ರಚಾರಕ್ಕೆ 72 ಮಂದಿಯನ್ನೇ ಆಯ್ಕೆಮಾಡುತ್ತಾರೆ. ಅವರನ್ನು ಕಳುಹಿಸುವ ಮುನ್ನ ಯೇಸು ನೀಡಿದ ಸಲಹೆ, ಮಾರ್ಗದರ್ಶನ ಅನೇಕರಲ್ಲಿ ಆಶ್ಚರ್ಯ ಮೂಡಿಸಬಹುದು. `ಹಣದ ಚೀಲವನ್ನಾಗಲಿ, ಜೋಳಿಗೆಯನ್ನಾಗಲಿ’ ತೆಗೆದುಕೊಂಡು ಹೋಗಬೇಡಿ. ಯೇಸುವಿನ ಹಿಂಬಾಲಕ ದೇವರ ಅನುಗ್ರಹದಲ್ಲಿ ನಂಬಿಕೆಯಿಡಬೇಕು ಮತ್ತು ಲೌಕಿಕ ವಸ್ತುಗಳಿಂದ ದೂರವಿರಬೇಕು. ಬೋಧನಾ ಕಾರ್ಯದಲ್ಲಿ ನಿರತರಾಗಿರುವವರು ಪ್ರೀತಿಯಿಂದ, ಶಾಂತಿಯಿಂದ, ಸಮಾನತೆಯ ಮನೋಭಾವ ಮೂಡಿಸಿಕೊಳ್ಳಬೇಕೆಂದು ಬಯಸುತ್ತಾರೆ.
=================
No comments:
Post a Comment