ಅಕ್ಟೋಬರ್ 2, 2020 ಶುಕ್ರವಾರ [ಬಿಳಿ]
ಪವಿತ್ರ ಸಂರಕ್ಷಕ ದೂತರು (ಸ್ಮರಣೆ)
ಮೊದಲ ವಾಚನ: ಯೋಬ 38:1, 12-21; 40:3-5.
ಕೀರ್ತನೆ 139: 1-3, 7-8, 9-10, 13-14. ಶ್ಲೋಕ.24
ಪ್ರಭೂ, ನಡೆಸೆನ್ನನು ಆ ಸನಾತನ ಪಥದಲಿ
ಶುಭಸಂದೇಶ: ಲೂಕ 10:13-16
==================
ಮೊದಲನೇ ವಾಚನ
ಯೋಬ 38:1, 12-21; 40:3-5.
1 : ಬಿರುಗಾಳಿಯೊಳಗಿಂದ ಸರ್ವೇಶ್ವರ ಯೋಬನಿಗೆ ಕೊಟ್ಟ ಪ್ರತ್ಯುತ್ತರ ಇದು:
12 : ನಿನ್ನ ಜೀವಮಾನದಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯಾ?
13 : ‘ಧರಣಿಯ ಅಂಚುಗಳನು ಹಿಡಿದು ದುರುಳರನ್ನು ಅದರೊಳಗಿಂದ ಒದರಿಬಿಡು’ ಎಂದು ಅದಕ್ಕೆ ಅಪ್ಪಣೆಮಾಡಿದೆಯಾ?
14 : ಮುದ್ರೆಒತ್ತಿದ ಜೇಡಿಮಣ್ಣಿನಂತೆ ಭೂಮಿ ರೂಪತಾಳುತ್ತದೆ ಅದು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುತ್ತದೆ.
15 : ದುರುಳರಿಂದ ಬೆಳಕನು ಹಿಂತೆಗೆದುಕೊಳ್ಳಲಾಗುವುದು ಅವರು ಎತ್ತಿದ ಕೈಯನು ಮುರಿಯಲಾಗುವುದು.
16 : ನೀನೆಂದಾದರು ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಸಾಗರದ ತಳಹದಿಯಲ್ಲಿ ತಿರುಗಾಡಿರುವೆಯೋ?
17 : ಮರಣದ ದ್ವಾರಗಳು ನಿನಗೆ ಗೋಚರವಾಗಿರುವುವೋ? ಘೋರಾಂಧಕಾರದ ಕದಗಳನ್ನು ನೀನು ಕಂಡಿರುವೆಯೋ?
18 : ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವು ನಿನಗೆ ತಿಳಿದಿದ್ದರೆ ಹೇಳು, ನೋಡೋಣ!
19 : ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
20 : ನೀನು ಅವುಗಳನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕೆ ಹಾದಿಯನು ಕಂಡುಹಿಡಿಯಬಲ್ಲೆಯಾ?
21 : ಇದನ್ನು ಬಲ್ಲೆಯಾದರೆ ನೀನು ಆಗಲೇ ಹುಟ್ಟಿದ್ದಿರಬೇಕು ಮತ್ತು ಈಗ ಬಹಳ ವೃದ್ಧನಾಗಿರಬೇಕು!
3 : ಆಗ ಯೋಬನು ಸರ್ವೇಶ್ವರಸ್ವಾಮಿಗೆ ಇಂತೆಂದನು:
4 : “ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ.
5 : ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.”
======
ಕೀರ್ತನೆ
ಕೀರ್ತನೆ 139: 1-3, 7-8, 9-10, 13-14. ಶ್ಲೋಕ.24
ಪ್ರಭೂ, ನಡೆಸೆನ್ನನು ಆ ಸನಾತನ ಪಥದಲಿ
1 : ಪ್ರಭು, ಪರಿಶೋಧಿಸಿರುವೆ ನೀ ನನ್ನನು /
ಅರಿತುಕೊಂಡಿರುವೆ ಅಂತರಂಗವನು //
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ /
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ //
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ /
ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ //
7 : ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು? /
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು? //
8 : ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ /
ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ //
9 : ನಾನರುಣನ ರೆಕ್ಕೆಗಳನೇರಿ ಹಾರಿದರೂ /
ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ //
10 : ಅಲ್ಲೂ ನನ್ನ ನಡೆಸುವುದು ನಿನ್ನ ಕೈ /
ನನ್ನ ಹಿಡಿದಿರುವುದು ನಿನ್ನ ಬಲಗೈ //
13 : ನನ್ನ ಅಂತರಂಗವನು ಉಂಟುಮಾಡಿದಾತ ನೀನು /
ತಾಯಗರ್ಭದಲೆ ನನ್ನ ರೂಪಿಸಿದಾತ ನೀನು //
14 : ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ /
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ /
ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ //
===================
ಶುಭಸಂದೇಶ
ಲೂಕ 10:13-16
13 : “ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಭುತ ಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು.
14 : ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು.
15 : ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತಿಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ,” ಎಂದರು ಯೇಸುಸ್ವಾಮಿ.
16 : ಅನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ನಿಮ್ಮನ್ನು ಆಲಿಸುವವನು ನನ್ನನ್ನೇ ಆಲಿಸುತ್ತಾನೆ; ನಿಮ್ಮನ್ನು ಅಲಕ್ಷ್ಯಮಾಡುವವನು ನನ್ನನ್ನೇ ಅಲಕ್ಷ್ಯಮಾಡುತ್ತಾನೆ; ನನ್ನನ್ನು ಅಲಕ್ಷ್ಯಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ,” ಎಂದರು.
===================
ಚಿಂತನೆ
ಹೀಬ್ರೂ ಭಾಷೆಯಲ್ಲಿ `ಮಲಾಕ್’ ಎಂದರೆ ಸಂದೇಶಕ, ಸಂದೇಶ ರವಾನೆ ಮಾಡುವವ ಎಂದರ್ಥ. ದೇವದೂತರ ಪ್ರಮುಖ ಕಾರ್ಯವೋ ರಕ್ಷಣೆ, ಮಾರ್ಗದರ್ಶನ ಮತ್ತು ದೇವರ ಸಂದೇಶವನ್ನು ಶಿರಸಾವಹಿಸಿ ತರುವುದು. ಪ್ರಮುಖವಾದ, ಮಹತ್ವವಾದ ಸಂದೇಶವನ್ನು ಹೊತ್ತು ತರುವವರು ಪ್ರಧಾನ ದೂತರು. ಅಷ್ಟು ಮಹತ್ವವಲ್ಲದ ವಿಷಯಗಳನ್ನು ರವಾನೆ ಮಾಡುವವರು ಸಾಮಾನ್ಯ ದೂತರು. ಸಂರಕ್ಷಕ ದೂತರ ಸ್ಮರಣೆಯನ್ನು ಸ್ಪೇನ್ ದೇಶದ ವಾಲೆನ್ಸಿಯಾದಲ್ಲಿ ಕ್ರಿ.ಶ. 1411ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. 1608ರಲ್ಲಿ ಜಗದ್ಗುರು ಐದನೇ ಪೌಲರು ಈ ಹಬ್ಬವನ್ನು ಕಥೋಲಿಕ ಪಂಚಾಂಗದಲ್ಲಿ ಸೇರಿಸಿ, ಅಕ್ಟೋಬರ್ 2 ರಂದು ಹಬ್ಬ ಆಚರಿಸಲು ಕರೆನೀಡಿದರು. ನಮ್ಮ ಜನನದಿಂದಲೇ ದೇವರು ನಮ್ಮ ರಕ್ಷಣೆಗಾಗಿ, ಮಾರ್ಗದರ್ಶನಕ್ಕಾಗಿ ಪ್ರತಿಯೊಬ್ಬರಿಗೂ ಒಬ್ಬ ಸಂರಕ್ಷಕ ದೂತರನ್ನು ನೀಡಿದ್ದಾರೆ. ನಮ್ಮ ಪ್ರಾರ್ಥನೆಗಳನ್ನು ಅವರು ದೇವರಿಗೆ ತಲುಪಿಸುತ್ತಾರೆ ಮತ್ತು ದೇವರಿಂದ ಅನುಗ್ರಹವನ್ನು ನಮಗೆ ಹೊತ್ತು ತರುತ್ತಾರೆ. ದಿನನಿತ್ಯ ಅವರಲ್ಲಿ ನಾವು ಪ್ರಾರ್ಥಿಸಬೇಕಿದೆ.
===================
No comments:
Post a Comment