Monday, 23 November 2020

ಡಿಸೆಂಬರ್ 10, 2020 ಗುರುವಾರ

 ಡಿಸೆಂಬರ್ 10, 2020 ಗುರುವಾರ                        [ನೇರಳೆ]
ಮೊದಲ ವಾಚನ: ಯೆಶಾಯ 41:13-20
ಕೀರ್ತನೆ 145: 1, 9, 10-12, 13 ಶ್ಲೋಕ.8 
ಪ್ರಭು ದಯಾನಿಧಿ, ಕೃಪಾಸಾಗರನು 
ಸಹನಶೀಲನು ಪ್ರೀತಿಪೂರ್ಣನು
ಶುಭಸಂದೇಶ: ಲೂಕ 11:11-15
==================

ಮೊದಲನೇ ವಾಚನ
ಯೆಶಾಯ 41:13-20
13 : ನಿನ್ನ ದೇವರಾದ ಸರ್ವೇಶ್ವರ ನಾನೇ ಭಯಪಡಬೇಡ, ನಿನಗೆ ನಾನೇ ನೆರವಾಗುವೆ ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ.
14 : ಸರ್ವೇಶ್ವರ ಇಂತೆನ್ನುತ್ತಾರೆ: “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ.
15 : ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನೆ ಹೊಟ್ಟು ಧೂಳಾಗಿಸುವೆ ಗುಡ್ಡಗಳನೆ.
16 : ನೀನು ತೂರಲು ಅವುಗಳನ್ನು ಕೊಂಡೊಯ್ವುದು ಗಾಳಿ ಚಂಡಮಾರುತವು ಮಾಡುವುದವುಗಳನ್ನು ಚೆಲ್ಲಾಪಿಲ್ಲಿ. ನೀನಾದರೋ ಆನಂದಿಸುವೆ ಸರ್ವೇಶ್ವರ ಸ್ವಾಮಿಯಲಿ.
17 : ದೀನದರಿದ್ರರು ನೀರಿಗಾಗಿ ಪರದಾಡುವಾಗ ಬಾಯಾರಿ ಅವರ ನಾಲಿಗೆ ಒಣಗಿಹೋದಾಗ ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವೆನೆ?
18 : ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು ತಗ್ಗುತಿಟ್ಟುಗಳಲ್ಲಿ ಒರತೆಗಳನು ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು ಬುಗ್ಗೆಗಳಾಗಿ ಮರುಭೂಮಿಯನು.
19 : ನೆಡುವೆನು ಅಡವಿಯಲಿ ದೇವದಾರು, ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು.
20 : ಇದನು ಕಂಡರಿತು ಗ್ರಹಿಸಿಕೊಳ್ಳುವರು ಜನರು ಮನಸಾರೆ, ನುಡಿವರಾಗ, ‘ಇದನ್ನು ಮಾಡಿದ ಹಸ್ತವು ಸರ್ವೇಶ್ವರಸ್ವಾಮಿಯದೇ, ಇದನ್ನು ಸೃಷ್ಟಿಸಿದಾತ ಇಸ್ರಯೇಲಿನ ಪರಮಪಾವನ ಸ್ವಾಮಿಯೇ.’
===================
ಕೀರ್ತನೆ 
ಕೀರ್ತನೆ 145: 1, 9, 10-12, 13 ಶ್ಲೋಕ.8 
ಶ್ಲೋಕ:ಪ್ರಭು ದಯಾನಿಧಿ, ಕೃಪಾಸಾಗರನು 
ಸಹನಶೀಲನು ಪ್ರೀತಿಪೂರ್ಣನು||
1 : ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ / 
ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ //
9 : ಪ್ರಭುವಿನ ಕರುಣೆ ಎಲ್ಲರ ಮೇಲೆ / 
ಆತನ ಕೃಪೆಯು ಸೃಷ್ಟಿಯ ಮೇಲೆ //
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / 
ಕೊಂಡಾಡುವುದು ನಿನ್ನನು ಭಕ್ತ ಸಮೂಹವು //
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / 
ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು //
12 : ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / 
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು //
13 : ಶಾಶ್ವತವಾದುದು ನಿನ್ನ ರಾಜ್ಯವು / 
ಇರುವುದೆಂದಿಗು ನಿನ್ನ ಆಳ್ವಿಕೆಯು //
===================
ಲೂಕ 11:11-15
11 : ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ.
12 : ಯೊವಾನ್ನನು ತನ್ನ ಸಂದೇಶವನ್ನು ಸಾರಿದಂದಿನಿಂದ ಇಂದಿನವರೆಗೆ ಸ್ವರ್ಗಸಾಮ್ರಾಜ್ಯವು ನೂಕುನುಗ್ಗಲಿಗೆ ಗುರಿಯಾಗಿದೆ. ಬಲಪ್ರಯೋಗ ಮಾಡುವವರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
13 : ಯೊವಾನ್ನನ ಕಾಲದ ತನಕ ಧರ್ಮಶಾಸ್ತ್ರ ಹಾಗೂ ಎಲ್ಲ ಪ್ರವಾದಿಗಳು ದೇವರ ಸಾಮ್ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು.
14 : ಅವರ ಹೇಳಿಕೆಯನ್ನು ನಂಬಲು ನಿಮಗಿಷ್ಟವಿದ್ದರೆ, ಇಗೋ, ಬರತಕ್ಕ ಎಲೀಯನು ಈ ಯೊವಾನ್ನನೇ.
15 : ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.
===================
ಚಿಂತನೆ
ಸ್ಥಾಪಕ ಯೊವಾನ್ನರ ಜೀವನಕ್ರಮ ಮತ್ತು ಅವರ ಬಗ್ಗೆ ಯೇಸು ಸ್ವಾಮಿ ನುಡಿಯುವಂತಹ ಮಾತುಗಳು ತುಂಬಾ ಆಳವಾದ ಸಂದೇಶವನ್ನು ನಮಗೆ ನೀಡುತ್ತವೆ. ಮಾನವನಾಗಿ ಹುಟ್ಟುವ ಪ್ರತಿಯೊಬ್ಬನು ತಾನು ಶ್ರೇಷ್ಠನಾಗಿರಬೇಕೆಂದು ಬಯಸುತ್ತಾನೆ ಹೊರತು ಕನಿಷ್ಠನಲ್ಲ, ಅಂತೆಯೇ ಹುಟ್ಟಿದ ಪ್ರತಿಯೊಬ್ಬರೂ ತಮ್ಮ ಜೀವನ ಕ್ರಮದ ಮುಖಾಂತರ ದೇವರನ್ನು ಮೆಚ್ಚಿಸಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಇದಕ್ಕೆ ಕಾರಣ ಅವರಲ್ಲಿರುವ ಅವಿಶ್ವಾಸ, ದೇವರ ವಾಕ್ಯದಲ್ಲಿ ಅಪನಂಬಿಕೆ, ಪ್ರಾರ್ಥನೆಗಳಲ್ಲಿ ಅನುಮಾನ ಈ ರೀತಿಯಾಗಿ ಅನೇಕ ಕಾರಣಗಳಿವೆ. ಆದರೆ ಇವೆಲ್ಲವನ್ನು  ಮೆಟ್ಟಿನಿಂತು ಪರಸೇವೆ, ಪರೋಪಕಾರ, ಪರಿತ್ಯಾಗ, ಪರಮ ಪ್ರಸಾದದಲ್ಲಿ ಭಕ್ತಿ, ಪರಮತ್ರಿತ್ವದಲ್ಲಿ ಅಚಲ ನಂಬಿಕೆಯನ್ನು ಇರಿಸಿಕೊಂಡು ಬಾಳಿದಾಗ ಮಾತ್ರ ನಮಗೆ ಪ್ರಭು ಕ್ತಿಸ್ತರ ನೈಜ ಅನುಯಾಯಿಗಳಾಗಲು ಸಾಧ್ಯ. ನಾನಿದಕ್ಕೆ ಸಿದ್ಧನಿದ್ದೆಯೇ? 
=================== 

No comments:

Post a Comment