Monday, 23 November 2020

ಡಿಸೆಂಬರ್ 11, 2020 ಶುಕ್ರವಾರ

 ಡಿಸೆಂಬರ್ 11, 2020 ಶುಕ್ರವಾರ                        [ನೇರಳೆ]
ಸಂತ ದಮಾಸುಸ್  I , ವಿಶ್ವಗುರು (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಶಾಯ 48.17-19
ಕೀರ್ತನೆ 1: 1-2, 3, 4, 6 ಶ್ಲೋಕ.ಯೊವಾನ್ನ 8:12 
ನಾನೇ ಜಗಜ್ಯೋತಿ! 
ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, 
ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ
ಶುಭಸಂದೇಶ: ಮತ್ತಾಯ 11.16-19
==================
ಮೊದಲನೇ ವಾಚನ
ಯೆಶಾಯ 48.17-19
17 : ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರಸ್ವಾಮಿಯೆ ನುಡಿದಿಹನು: “ನಿನಗೆ ಕ್ಷೇಮಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರಸ್ವಾಮಿ ದೇವರು ನಾನು.
18 : ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ.
19 : ಅಗಣಿತವಾಗಿರುತಿತ್ತು ನಿನ್ನ ಸಂತತಿ ಕಡಲ ಮರಳಿನಂತೆ, ನಿನ್ನ ಕರುಳಿನ ಕುಡಿಗಳು ಉಸುಬಿನ ಅಣುರೇಣುಗಳಂತೆ, ಅವರ ಹೆಸರುಗಳು ಕೆಟ್ಟು ಅಳಿದುಹೋಗುತ್ತಿರಲಿಲ್ಲ ನನ್ನ ಮುಂದೆ.”
===================
ಕೀರ್ತನೆ 1: 1-2, 3, 4, 6 ಶ್ಲೋಕ.ಯೊವಾನ್ನ 8:12 
ಶ್ಲೋಕ :ನಾನೇ ಜಗಜ್ಯೋತಿ!
 ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ,
 ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ||
1 : ದುರ್ಜನರ ಆಲೋಚನೆಯಂತೆ ನಡೆಯದೆ / 
ಪಾಪಾತ್ಮರ ಪಥದಲಿ ಕಾಲೂರದೆ / 
ಧರ್ಮನಿಂದಕರ ಕೂಟದಲಿ ಕೂರದೆ //
2 : ಪ್ರಭುವಿನ ಧರ್ಮಶಾಸ್ತ್ರದಲಿ
 ಹರ್ಷಗೊಳ್ಳುವವನಾರೋ - ಅವನೇ ಧನ್ಯನು/ 
ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ
 - ಅವನೇ ಧನ್ಯನು //
3 : ನದಿಯ ಬದಿಯಲೇ ಬೆಳೆದಿಹ ಮರದಂತೆ / 
ಸಕಾಲಕೆ ಫಲವೀವ ವೃಕ್ಷದಂತೆ / 
ಎಲೆಬಾಡದೆ ಪಸಿರಿರುವ ತರುವಂತೆ / 
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ //
4 : ದುರುಳರಾದರೊ ತೂರಿ ಹೋಗುವರು / 
ಬಿರುಗಾಳಿಗೆ ತರಗೆಲೆಯಾಗುವರು //
6 : ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ / 
ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ //
===================
"ಶುಭಸಂದೇಶ
ಮತ್ತಾಯ 11.16-19
16 : ""ಈ ಪೀಳಿಗೆಯನ್ನು ನಾನು ಯಾರಿಗೆ ಹೋಲಿಸಲಿ?
17 : ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ,"" ಎಂದು ಪೇಟೆಬೀದಿಯಲ್ಲಿ ಕುಳಿತು, ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಇವರು ಹೋಲುತ್ತಾರೆ.
18 : ಏಕೆಂದರೆ, ಯೊವಾನ್ನನು ಬಂದನು; ಅವನು ಅನ್ನಪಾನೀಯವನ್ನು ಸೇವಿಸಲಿಲ್ಲ. ಅದಕ್ಕೆ ‘ಇವನಿಗೆ ದೆವ್ವ ಹಿಡಿದಿದೆ’ ಎಂದರು.
19 : ನರಪುತ್ರನು ಬಂದನು; ಅನ್ನಪಾನೀಯಗಳನ್ನು ಸೇವಿಸಿದನು. ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ ಎನ್ನುತ್ತಾರೆ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದರ ಕಾರ್ಯಗಳಿಂದಲೇ ಸಮರ್ಥಿಸಲಾಗುತ್ತದೆ,"" ಎಂದರು.
===================
ಚಿಂತನೆ
ಯೊವಾನ್ನನಿಗೂ  ಯೇಸುವಿಗೂ ವಿರೋಧವನ್ನು ವ್ಯಕ್ತಪಡಿಸಲು ಯೆಹೂದ್ಯ ನಾಯಕರು ಅನೇಕ ಕಾರಣಗಳನ್ನು ನೀಡುತ್ತಾರೆ. ಯೊವಾನ್ನನು ಮರುಳುಗಾಡಿನಲ್ಲಿ ಕಠಿಣ ತಪಸ್ಸಿನ ಜೀವನವನ್ನು ನಡೆಸಿದ. ಕಾಡು ಮಿಡತೆ ಮತ್ತು ಜೇನು ಆತನ ಸರಳ ಆಹಾರವಾಗಿತ್ತು (ಲೂಕ 7:33, ಮಾರ್ಕ 1:16) ಆತನ ಬದುಕಿನ ಶೈಲಿ ನೋಡಿದ ಜನ ಆತನಿಗೆ ಹುಚ್ಚುಹಿಡಿದಿದೆ, ದೆವ್ವ ಹಿಡಿದಿದೆ ಎಂದು ಆಪಹಾಸ್ಯ ಮಾಡಿದರು. ಯೇಸು ಬೆಂಗಾಡಿನಲ್ಲಿ ನೆಲೆಸದೆ ಜನರ ಜೊತೆ ಬೆರೆತರು, ಅದರೊಂದಿಗೆ ಊಟವುಪಚಾರಗಳಲ್ಲಿ ಭಾಗಿಯಾದರು. ಅದನ್ನು ಗಮನಿಸಿದ ಜನ ಯೇಸುವನ್ನು ಹೊಟ್ಟೆಬಾಕ, ಕುಡುಕ ಎಂದು ಜರೆದರು. ಯೇಸು ಮತ್ತು ಯೊವಾನ್ನನಲ್ಲಿ ಕುಂದುಗಳನ್ನು ಹುಡುಕಿ ಅವರನ್ನು ಅವಗಣಿಸಿದರು.
ನಾವು ಹೇಗೆ ಬದುಕಿದರೂ ಖಂಡಿಸುವವರಿಗೆ, ಕೊಂಕು ನುಡಿಯುವವರಿಗೆ, ವ್ಯಂಗ್ಯವಾಡುವವರಿಗೇನು ಕೊರತೆಯಿಲ್ಲ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿಯೇ ಕಾಣಿಸುವಂತೆ ಎಲ್ಲದರಲ್ಲೂ ತಪ್ಪನ್ನು ಹುಡುಕುವ ಜನರಿದ್ದಾರೆ, ಅವರನ್ನೆಲ್ಲ ಲೆಕ್ಕಿಸದೆ ನಮ್ಮ ನಂಬಿಕೆ, ವಿಶ್ವಾಸಕ್ಕೆ, ಕ್ರಿಸ್ತನ ತತ್ವಗಳಿಗೆ ಬದ್ದರಾಗಿ ನಾವು ಜೀವಿಸಬೇಕಿದೆ. 
==================="

No comments:

Post a Comment