Thursday, 26 November 2020

ಅಕ್ಟೋಬರ್ 10, 2020 ಶನಿವಾರ

 ಅಕ್ಟೋಬರ್ 10, 2020 ಶನಿವಾರ                        [ಹಸಿರು]
ಮೊದಲ ವಾಚನ: ಗಲಾತ್ಯರಿಗೆ 3.22-29
ಕೀರ್ತನೆ 105: 2-7. ಶ್ಲೋಕ.8
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು
ಶುಭಸಂದೇಶ: ಲೂಕ 11.27-28
==================
ಮೊದಲನೇ ವಾಚನ
ಗಲಾತ್ಯರಿಗೆ 3.22-29
22 : ಅದಕ್ಕೆ ಬದಲಾಗಿ ಸಮಸ್ತ ಲೋಕವೂ ಪಾಪಕ್ಕೆ ಒಳಗಾಯಿತು ಎಂದು ಪವಿತ್ರಗ್ರಂಥ ಸ್ಪಷ್ಟೀಕರಿಸುತ್ತದೆ. ಹೀಗೆ, ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ.
23 : ಕ್ರೈಸ್ತವಿಶ್ವಾಸದ ಕಾಲವು ಬರುವುದಕ್ಕೆ ಮೊದಲು ನಾವು ಧರ್ಮಶಾಸ್ತ್ರದ ನಿರ್ಬಂಧಕ್ಕೆ ಒಳಗಾಗಿ ಕೈದಿಗಳಂತೆ ಇದ್ದೆವು. ಈ ವಿಶ್ವಾಸವು ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಇತ್ತು.
24 : ಅಂತೆಯೇ, ವಿಶ್ವಾಸದ ಮೂಲಕ ನಾವು ದೇವರೊಡನೆ ಸತ್ಸಂಬಂಧ ಹೊಂದುವಂತೆ ಕ್ರಿಸ್ತಯೇಸು ಬರುವತನಕ ಅದು ನಮಗೆ ಕಾವಲಾಗಿತ್ತು.
25 : ಈಗ ಕ್ರೈಸ್ತವಿಶ್ವಾಸವು ಆಗಮಿಸಿರುವುದರಿಂದ ಇನ್ನು ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಇಲ್ಲ.
26 : ಕ್ರಿಸ್ತಯೇಸುವಿನಲ್ಲಿ ಇಟ್ಟಿರುವ ವಿಶ್ವಾಸದ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರಿ.
27 : ಹೇಗೆಂದರೆ, ಕ್ರಿಸ್ತಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತಂಬರರಾಗಿದ್ದೀರಿ.
28 : ನೀವೆಲ್ಲರೂ ಕ್ರಿಸ್ತಯೇಸುವಿನಲ್ಲಿ ಒಂದಾಗಿದ್ದೀರಿ. ಎಂದೇ, ಇನ್ನು ಮೇಲೆ ಯೆಹೂದ್ಯ-ಯೆಹೂದ್ಯನಲ್ಲದವ, ದಾಸ-ದಣಿ, ಗಂಡು-ಹೆಣ್ಣು ಎಂಬ ಭೇದವಿಲ್ಲ.
29 : ನೀವು ಕ್ರಿಸ್ತ ಯೇಸುವಿಗೆ ಸೇರಿದವರಾಗಿದ್ದರೆ ಅಬ್ರಹಾಮನ ಸಂತತಿಯೂ ಆಗಿದ್ದೀರಿ; ದೈವ ವಾಗ್ದಾನದ ಪ್ರಕಾರ ವಾರಸುದಾರರೂ ಆಗಿದ್ದೀರಿ.
==================="
ಕೀರ್ತನೆ 
ಕೀರ್ತನೆ 105: 2-7. ಶ್ಲೋಕ.8
ನೆನಪಿನಲ್ಲಿಡುವನು ಪ್ರಭು ತನ್ನ 
ವಾಗ್ದಾನವನು
2 : ಹಾಡಿ ಪಾಡಿ ಹೊಗಳಿರಿ 
ಪ್ರಭುವನು / 
ಧ್ಯಾನಿಸಿ ನೀವು ಆತನ 
ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ 
ಶ್ರೀನಾಮ / 
ಹಿಗ್ಗಲಿ ಹೃದಯ, ಕೋರಿ 
ಆತನ ದರ್ಶನ //
4 : ಅರಸಿರಿ ಪ್ರಭುವನೂ 
ಆತನ ಶಕ್ತಿಯನೂ / 
ಅಪೇಕ್ಷಿಸಿ ನಿತ್ಯವೂ ಆತನ 
ದರ್ಶನವನು //
5 : ಆತನ ದಾಸ ಅಬ್ರಹಾಮನ 
ಸಂತತಿಯವರೇ / 
ಆತನಾರಿಸಿಕೊಂಡ ಯಕೋಬನ 
ವಂಶದವರೇ /
6 : ನೆನೆಯಿರಿ ಆತನದ್ಭುತಗಳನು, 
ಮಹತ್ಕಾರ್ಯಗಳನು / 
ಆತನ ವದನ ವಿಧಿಸಿದಾ 
ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ ದೇವನೆಂಬುದು 
ಶ್ರುತ / 
ಆತನಿತ್ತ ತೀರ್ಪು ಇದೋ 
ವಿಶ್ವವ್ಯಾಪ್ತ //
==================
ಶುಭಸಂದೇಶ
ಲೂಕ 11.27-28
27 : ಯೇಸುಸ್ವಾಮಿ ಹೀಗೆ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, “ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!” ಎಂದು ಕೂಗಿ ಹೇಳಿದಳು.
28 : ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!” ಎಂದರು
===================
ಚಿಂತನೆ
ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯುಡಿಸಿದ ತಾಯಿ ಭಾಗ್ಯವಂತಳು’’ ಎಂದು ಮಹಿಳೆಯೊಬ್ಬಳು ಯೇಸುವಿನ ಬುದ್ದಿವಂತಿಕೆಯನ್ನೂ, ಬೋಧನೆಯನ್ನೂ, ಅದ್ಭುತಗಳನ್ನು ಕಂಡು ಹೊಗಳುತ್ತಾಳೆ. ಮಕ್ಕಳು ತಂದೆ ತಾಯಿಗಳಿಗೆ ತಂದು ಕೊಡಬಹುದಾದ ಗೌರವವಿದು. ಉತ್ತಮ ಫಲ ನೀಡುವ ಮರ ಹೇಗೆ ಉತ್ತಮವೊ ಹಾಗೆ ಮಕ್ಕಳ ಬದುಕನ್ನು ನೋಡಿ ತಂದೆ ತಾಯಿಯರನ್ನು ಸತ್ಕರಿಸುತ್ತದೆ ಸಮಾಜ.
ಯೇಸುವಿಗೆ ಜನ್ಮ ನೀಡುವುದರ ಮೂಲಕ ಮರಿಯಳು ಭಾಗ್ಯವಂತಳಾದಳು. ದೇವರ ವಾಕ್ಯವನ್ನು ಆಲಿಸಿ ಅದರಂತೆ ಜೀವಿಸುವವರು ಕೂಡ ಭಾಗ್ಯವಂತರೆನ್ನುತ್ತಾರೆ ಯೇಸು. ಮರಿಯಳು `ದೇವರ ತಾಯಿ’ ಆಗುವ ಮುನ್ನ ದೇವರ ವಾಕ್ಯಕ್ಕೆ ಶಿರಬಾಗಿದರು. ದೇವರ ವಾಕ್ಯದ ಪ್ರಕಾರ ಜೀವಿಸಿದಳು. ದೇವರ ವಾಕ್ಯವು ತನ್ನ ಗರ್ಭದಲ್ಲಿ ಜೀವತಳೆಯಲು ಸಮ್ಮತಿಸಿದಳು ನೀಡಿದಳು. ಮಾತೆ ಮರಿಯಳಂತೆ ನಾವು ಕೂಡ ದೇವರ ವಾಕ್ಯವನ್ನು ಗೌರವಿಸಿದ್ದಲ್ಲಿ ನಾವೂ ಭಾಗ್ಯವಂತರಾಗುವುದರಲ್ಲಿ ಯಾವ ಸಂದೇಹವೂ ಇರಕೂಡದು..
====================

No comments:

Post a Comment