ಅಕ್ಟೋಬರ್ 9, 2020 ಶುಕ್ರವಾರ [ಹಸಿರು]
ಸಂತ ಡೆನಿಸ್, ಧರ್ಮಾಧ್ಯಕ್ಷ ಮತ್ತು ಸಂಗಡಿಗರು, ರಕ್ತಸಾಕ್ಷಿಗಳು (ಐಚ್ಛಿಕ ಸ್ಮರಣೆ)
ಸಂತ ಜಾನ್ ಲೆಯೊನಾರ್ಡಿ, ಯಾಜಕ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಗಲಾತ್ಯರಿಗೆ 3.7-14.
ಕೀರ್ತನೆ 111: 1-6. ಶ್ಲೋಕ.5
ತನ್ನೊಡಂಬಡಿಕೆಯ ಚಿರ ನೆನಪಿರುವುದು ಪ್ರಭುವಿಗೆ
ಶುಭಸಂದೇಶ: ಲೂಕ 11.15-26
==================
ಮೊದಲನೇ ವಾಚನ
ಗಲಾತ್ಯರಿಗೆ 3.7-14.
7 : ಆದ್ದರಿಂದ ಯಾರು ವಿಶ್ವಾಸದಿಂದ ಜೀವಿಸುತ್ತಾರೋ ಅವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿ.
8 : ಈ ವಿಶ್ವಾಸದ ಮೂಲಕವೇ ಅನ್ಯಧರ್ಮೀಯರನ್ನು ಕೂಡ ದೇವರು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ, ಎಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆಯಲಾಗಿತ್ತು. ಈ ಕಾರಣದಿಂದಲೇ ಅಬ್ರಹಾಮನಿಗೆ, “ನಿನ್ನ ಮುಖಾಂತರವೇ ಎಲ್ಲಾ ಜನಾಂಗಗಳು ಆಶೀರ್ವಾದವನ್ನು ಪಡೆಯುವುವು,” ಎಂಬ ಶುಭವರ್ತಮಾನವನ್ನು ಮುಂಚಿತವಾಗಿ ತಿಳಿಸಲಾಯಿತು.
9 : ಹೀಗಿರಲಾಗಿ, ವಿಶ್ವಾಸದಿಂದ ಬಾಳುವವರು ವಿಶ್ವಾಸಿಯಾದ ಅಬ್ರಹಾಮನು ಪಡೆದ ಸೌಭಾಗ್ಯವನ್ನೇ ಪಡೆಯುವರು.
10 : ಧರ್ಮಶಾಸ್ತ್ರದ ವಿಧಿನಿಯಮಗಳನ್ನೇ ಆಧಾರವಾಗಿಟ್ಟುಕೊಂಡು ಬಾಳುವವರು ಶಾಪಗ್ರಸ್ತರು. ಏಕೆಂದರೆ, “ಧರ್ಮಗ್ರಂಥದಲ್ಲಿ ಬರೆದಿರುವುದನ್ನೆಲ್ಲಾ ಅನುದಿನವೂ ಕೈಗೊಂಡು ನಡೆಯದ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಲಿಖಿತವಾಗಿದೆ.
11 : ಇದಲ್ಲದೆ ಧರ್ಮಶಾಸ್ತ್ರ ವಿಧಿಸುವುದನ್ನು ಪೂರೈಸುವುದರಿಂದ ಯಾರೂ ದೇವರೊಡನೆ ಸತ್ಸಂಬಂಧ ಪಡೆಯಲಾರರು ಎಂಬುದು ಸಹ ಸ್ಪಷ್ಟವಾಗಿದೆ. ಯಾಕೆಂದರೆ, “ಯಾರು ದೇವರೊಡನೆ ಸತ್ಸಂಬಂಧವನ್ನು ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ” ಎಂದು ಪವಿತ್ರ ಗ್ರಂಥದಲ್ಲೇ ಲಿಖಿತವಾಗಿದೆ.
12 : ಧರ್ಮಶಾಸ್ತ್ರ ವಿಶ್ವಾಸವನ್ನು ಆಧರಿಸಿಲ್ಲ. ಬದಲಿಗೆ, “ಅದರ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕವಾಗಿ ಜೀವಿಸುತ್ತಾನೆ,” ಎಂದು ಬರೆಯಲಾಗಿದೆ.
13 : “ಮರಕ್ಕೆ ತೂಗುಹಾಕಲಾದ ಪ್ರತಿ ಒಬ್ಬನೂ ಶಾಪಗ್ರಸ್ತನು,” ಎಂದು ಬರೆದಿರುವಂತೆ, ನಮಗೋಸ್ಕರ ಕ್ರಿಸ್ತಯೇಸು ಶಾಪ ಸ್ವರೂಪಿಯಾಗಿ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಶಾಪದಿಂದ ನಮ್ಮನ್ನು ಪಾರುಮಾಡಿದರು.
14 : ಇದರಿಂದಾಗಿ ಅಬ್ರಹಾಮನಿಗೆ ದೊರಕಿದ ಸೌಭಾಗ್ಯ, ಕ್ರಿಸ್ತಯೇಸುವಿನ ಮುಖಾಂತರ ಅನ್ಯಧರ್ಮೀಯರಿಗೂ ದೊರಕುವಂತಾಯಿತು; ವಿಶ್ವಾಸದ ಮೂಲಕವಾಗಿ, ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ ನಮಗೂ ದೊರಕುವಂತಾಯಿತು.
==================
ಶುಭಸಂದೇಶ
ಲೂಕ 11.15-26
15 : ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ
16 : ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು.
17 : ಅವರ ಆಲೋಚನೆಗಳನ್ನು ಅರಿತುಕೊಂಡ ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು.
18 : ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು?
19 : ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು.
20 : ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ.
21 : “ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ.
22 : ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ.
23 : “ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದುರಿಸುತ್ತಾನೆ,” ಎಂದರು.
24 : ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ’ ಎಂದುಕೊಳ್ಳುತ್ತದೆ.
25 : ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ.
26 : ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲೆಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ,” ಎಂದರು.
===================
ಚಿಂತನೆ
ಇಂದಿನ ವಾಚನದಲ್ಲಿ ಅಬ್ರಹಾಮನ ಮೂಲಕ ಅನ್ಯಧರ್ಮದವರನ್ನು ವಿಶ್ವಾಸಕ್ಕೆ ಕರೆತರಲಾಯಿತ್ತು ಮತ್ತು ಅಬ್ರಹಾಮನು ರಾಷ್ಟ್ರ ರಾಷ್ಟ್ರಗಳ ಜನರಿಗೆ ದೇವರ ಆಶೀರ್ವಾದವಾಗುತ್ತಾನೆ. ವಿಶ್ವಾಸದ ಪಿತಾಮಹನಾಗುತ್ತಾನೆ. ಹಾಗಾಗಿ ಧರ್ಮದ ಆದೇಶ ನಮಗೆ ಆಶೀರ್ವಾದವಾದರೆ ಅದರ ವಿರೋಧಿಗಳಿಗೆ ಶಾಪವಾಗುತ್ತದೆ. ಶಾಪದಿಂದ ದೂರವಿರು. ಆಶೀರ್ವಾದ ಪಡೆಯುವ ಮನಸ್ಸಿದ್ದರೆ ದೇವರೊಡನೆ ಸತ್ಸಂಬಂಧ ಇರಿಸುವುದು ಅತ್ಯಗತ್ಯ ಅದಕ್ಕೆ ವಿಶ್ವಾಸ ಅಗತ್ಯ. ನನ್ನ ಪರವಾಗಿರದವನು ನನ್ನ ವಿರೊಧಿಯೇ ಸರಿ ಎನ್ನುವ ಕ್ರಿಸ್ತರ ಮಾತು ಅಕ್ಷರಶಃ ಸತ್ಯ, ಕ್ರಿಸ್ತನಿಲ್ಲದ ಮನೆ ಒಡೆಯನಿಲ್ಲದ, ಬೆಲೆಯಿಲ್ಲದ ಬರಿದಾದ ಶೂನ್ಯಕ್ಕೆ ಸಮಾನ. ನಮ್ಮೆಲ್ಲರ ಜೀವನದಲ್ಲಿ ನಮ್ಮ ಸ್ನೇಹಿತರು, ಪ್ರೀತಿಬಾಂಧವರು ನಮ್ಮಿಂದ ದೂರವಾದಾಗ, ಶೂನ್ಯತೆ ಮನೆ ಮಾಡಿದಾಗ ಈ ಜೀವನದ ಸಾರ ನಿಸ್ಸಾರವಾಗುತ್ತದೆ, ಇಂದಿಗೆ ಈ ಜೀವನ ಸಾಕು ಎಂದೇ ಭಾಸವಾಗುತ್ತದೆ. ಕೆಟ್ಟದ್ದನ್ನು, ಅಶುದ್ಧತೆಯನ್ನು, ಸುಳ್ಳು, ಅಹಂಭಾವ ಮತ್ತೆಲ್ಲಾ ಬೇಡವಾದುವುಗಳನ್ನು ನಿರ್ಮೂಲಗೊಳಿಸಿ ದೇವರು ನಮ್ಮ ಹೃದಯದಲ್ಲಿ ನೆಲೆಸಲು ಸೂಕ್ತ ಸ್ಥಳವನ್ನು ಅಣಿಗೊಳಿಸದೆ ಭಗವಂತನ್ನು ದೂರವಿರಿಸಿದರೆ ಅಂಥ ಮನೆಮನಗಳಲ್ಲಿ ಸೈತಾನನೇ ಮನೆ ಮಾಡುತ್ತಾನೆ. ‘ ಅನ್ ಎಮ್ ಟಿ ಮೈಂಡ್ ಇಸ್ ದ ಡೆವಿಲ್ಸ್ ವರ್ಕ್ ಶಾಪ್’
===================
No comments:
Post a Comment