ಅಕ್ಟೋಬರ್ 11, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 28ನೇ ಭಾನುವಾರ
ಮೊದಲ ವಾಚನ: ಯೆಶಾಯ 25.6-10
ಕೀರ್ತನೆ 23:1-6 ಶ್ಲೋಕ.6 ದೇವರ ಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ
ಎರಡನೇ ವಾಚನ: ಫಿಲಿಪ್ಪಿಯರಿಗೆ 4.12-14, 19-20
ಶುಭಸಂದೇಶ: ಮತ್ತಾಯ 22.1-14
ಸಂತ 23ನೇ ಜಾನ್, ವಿಶ್ವಗುರು
==================
ಮೊದಲನೇ ವಾಚನ
ಯೆಶಾಯ 25.6-10 6
ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಠವಾದ ದ್ರಾಕ್ಷಾರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು.
7 : ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು.
8 : ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರಸ್ವಾಮಿಯೇ ಇಂತೆಂದು ನುಡಿದಿದ್ದಾರೆ.
9 : ಇದು ನೆರವೇರಿದಾಗ ಜನರು: “ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೇ ನೆಚ್ಚಿಕೊಂಡಿದ್ದೆವು. ಇವರೇ ಸರ್ವೇಶ್ವರ; ಇವರನ್ನೇ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ!” ಎಂದು ಹೇಳಿಕೊಳ್ಳುವರು. ದೇವರು ನೀಡುವ ದಂಡನೆ
10 : ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.
===================
ಕೀರ್ತನೆ
ಕೀರ್ತನೆ 23:1-6 ಶ್ಲೋಕ.6
ದೇವರ ಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ
1 : ಪ್ರಭು ಕುರಿಗಾಹಿಯಾಗಿರಲು ನನಗೆ / ಕುಂದುಕೊರತೆಗಳೆಲ್ಲಿಯವು ಎನಗೆ? //
2 : ಹಸಿರುಗಾವಲುಗಳಲೆನ್ನ ತಂಗಿಸುವನು / ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ / ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ // 4 : ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ / ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ / ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ //
5 : ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು / ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು //
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ / ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //
===================
ಎರಡನೇ ವಾಚನ
ಫಿಲಿಪ್ಪಿಯರಿಗೆ 4.12-14, 19-20 12
12: ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ.
13 : ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮಥ್ರ್ಯ ನನಗಿದೆ.
14 : ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯ ಮಾಡಿದುದು ನಿಮ್ಮ ಸೌಜನ್ಯವೇ ಸರಿ.
19 : ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತಯೇಸುವಿನ ಮುಖಾಂತರ ಪೂರೈಸುವರು.
20 : ನಮ್ಮ ತಂದೆಯಾದ ದೇವರಿಗೆ ನಿರಂತರವೂ ಮಹಿಮೆ ಸಲ್ಲಲಿ!
ಶುಭಸಂದೇಶ
ಮತ್ತಾಯ 22.1-14 1 :
1: ಯೇಸುಸ್ವಾಮಿ ಮತ್ತೆ ಅವರೊಡನೆ ಸಾಮತಿಗಳಲ್ಲೇ ಮಾತನಾಡಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ;
2 : ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ.
3 : ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ.
4 : ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿ ಕಳುಹಿಸಿದ.
5 : ಆದರೂ ಆಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟು ಹೋದ.
6 : ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದು ಹಾಕಿದರು.
7 : ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ.
8 : ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು.
9 : ನೀವು ಹೆದ್ದಾರಿಗಳಿಗೆ ಹೋಗಿ ಕಂಡ ಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ.
10 : ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು.
11 : “ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ.
12 : ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ.
13 : ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ.
14 : “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ. ===================
ಚಿಂತನೆ
ಸಾಧಾರಣ ಕಾಲದ 28ನೇ ಭಾನುವಾರ
ಪೀಠಿಕೆ
“ದೇವರ ಸಾನಿಧ್ಯವನ್ನು ಸೇರಲು (ಸ್ವರ್ಗಕ್ಕೆ) ಎಲ್ಲರಿಗೂ ಆಹ್ವಾನವಿದ್ದರೂ ಸಿದ್ಧತೆ ಇಲ್ಲದೆ ಹೋಗಲಾಗದು” ಹೊಸ ಒಡಂಬಡಿಕೆಯ ಪುಟಗಳನ್ನ ತೆರೆದರೆ ಯೇಸು ಹಲವಾರು ಸಾಮತಿಗಳ ಮೂಲಕ ಸ್ವರ್ಗ ಸಾಮ್ರಾಜ್ಯದ ಬಗ್ಗೆ ಬಣ್ಣಿಸುವುದನ್ನು ನೋಡುತ್ತೇವೆ. ಸಾಮತಿಗಳು ರೂಪಕಗಳಿದ್ದಂತೆ, ಹಲವಾರು ಸಾಮತಿಗಳಲ್ಲಿ ಔತಣಕೂಟದ ಉಲ್ಲೇಖವಿದೆ. ಹತ್ತು ಕನ್ಯೆಯರು, ಅಬ್ರಹಾಮ ಮತ್ತು ಬಡ ಲಾಜರ, ದುಂದುಗಾರನಾದ ಮಗ, ಇತ್ಯಾದಿ. ಇವು ಸಂಭ್ರಮದ ಚೌಕಟ್ಟಿನಲ್ಲಿ ಕೂತುಕೊಂಡ ಹೊಸ ಉತ್ಸವದ ಸಂಕೇತಗಳು. ಅದೇ ರೀತಿ ಪ್ರಕಟನಾ ಗ್ರಂಥ 3:14 ಕುರಿಯ ಔತಣಕೂಟಕ್ಕೆ ಸಿದ್ಧರಾಗಿರಲು ಸೂಚಿಸುತ್ತದೆ. ಹೀಗೆ ಈ ಲೋಕದಲ್ಲಿನ ಔತಣಕೂಟಗಳ ಚೌಕಟ್ಟಿಗೆ ಮತ್ತು ಸ್ವರ್ಗ ಸಾಮ್ರಾಜ್ಯದ ಹೋಲಿಸಿ ಯೇಸು ವಿವರಿಸುತ್ತಿರುವುದು ಇಲ್ಲಿನ ವಿಶೇಷ. ಜಗದ್ಗುರು ಫ್ರಾನ್ಸಿಸ್ರವರು “ಸ್ವರ್ಗ ಸಾಮ್ರಾಜ್ಯವನ್ನು ಸಂತೋಷದ ಸಂಭ್ರಮದ ಅನುಭವ ನೀಡುವ ಒಂದು ಹಂತ” ಎನ್ನುತ್ತಾರೆ.
ಮೊದಲ ವಾಚನ: ಯೆಶಾಯ 25.6-10
=======================
ಮೊದಲನೆಯ ವಾಚನದಲ್ಲಿ ಯೆಶಾಯ ಪ್ರವಾದಿಯು ದೇವರ ಭರವಸೆಯ ಔತಣಕೂಟದ ಬಗ್ಗೆ ಹೇಳುತ್ತಾನೆ. ಪಿತದೇವರು ಇಸ್ರಯೆಲ್ ಜನಾಂಗದ ದುಃಸ್ಥಿತಿಯನ್ನು ಅರಿತು ಅವರನ್ನು ಹುರಿದುಂಬಿಸಲು ಮೆಸ್ಸೀಯನ ಜೌತಣಕೂಟದ ಹೋಲಿಕೆಯನ್ನು ಬಳಸುತ್ತಾರೆ. ಇದರ ಮೂಲಕ ಪ್ರವಾದಿಯೂ ದೇವರೇ ನಮ್ಮನ್ನು ಸಾಕಿ ಸಲಹುವವರು ಎಂದು ಉದ್ಗರಿಸುತ್ತಾನೆ.
ಎರಡನೇ ವಾಚನ: ಫಿಲಿಪ್ಪಿಯರಿಗೆ 4.12-14, 19-20
================================
ಎರಡನೆಯ ವಾಚನದಲ್ಲಿ ಸಂತ ಪೌಲ ಫಿಲಿಪ್ಪಿ ಸಮುದಾಯಕ್ಕೆ ಬರೆಯುತ್ತಾ ದೇವರು ನಮಗೆ ಯಾವುದರಲ್ಲಿ ಯೂ ನ್ಯೂನತೆಯನ್ನು ನೀಡುವವರಲ್ಲ ತನ್ನ ಶಕ್ತಿ ಮತ್ತು ಕೃಪೆಯಿಂದ ನಮಗೆ ಅಗತ್ಯವಿರುವ ಎಲ್ಲವನ್ನು ಅನುಗ್ರಹಿಸಿ ತಮ್ಮ ಯೋಜನೆಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳುತ್ತಾರೆ.
ಶುಭಸಂದೇಶ: ಮತ್ತಾಯ 22.1-14
=====================
ಶುಭಸಂದೇಶದಲ್ಲಿ ಯೇಸು ಸ್ವರ್ಗ ಸಾಮ್ರಾಜ್ಯವನ್ನು ಒಬ್ಬ ರಾಜನು ತನ್ನ ಮಗನ ವಿವಾಹದ ಪ್ರಯುಕ್ತ ಆಯೋಜಿಸಲಾದ ಔತಣಕೂಟಕ್ಕೆ ಹೋಲಿಸುತ್ತಾರೆ. ಈ ಜೌತಣಕೂಟಕ್ಕೆ ಆಹ್ವಾನಿತರು ಅರ್ಹರಾದ ವ್ಯಕ್ತಿಗಳೇ ಆದರೂ ಕಾರಣಾಂತಗಳಿಂದ ತಪ್ಪಿಸಿಕೊಂಡಾಗ, ರಾಜನ ಆದೇಶದಂತೆ ಸೇವಕರು ಇತರರನ್ನು ಕರೆಯಲು ಹೋಗುತ್ತಾರೆ. ಇಲ್ಲಿನ ರಾಜನು ಪಿತದೇವರಿಗೆ ಸಮಾನ; ಮಗ ಯೇಸುವಿಗೆ ಸಮಾನ; ಆಹ್ವಾನಿತರು ಯೆಹೂದ್ಯರು. ಸಾಹುಕಾರ ಪ್ರವಾದಿ ಔತಣಕ್ಕೆ ಬಂದವರಲ್ಲಿ ಕೆಲವರು ಸರಿಯಾದ ಉಡುಗೆಯನ್ನು ತೊಟ್ಟುಕೊಳ್ಳದಿರುವುದನ್ನು ಯೇಸು ಖಂಡಿಸುತ್ತಾ ಸಿದ್ಧತೆಯ ಬಗ್ಗೆ ತಿಳಿ ಹೇಳಬಯಸುತ್ತಾರೆ. ಇಲ್ಲಿ ಯೇಸು ಹೇಳುವ ಎರಡು ಮುಖ್ಯ ಅಂಶಗಳನ್ನು ಗಮನಿಸಬೇಕು: • ಆಹ್ವಾನಕ್ಕೆ ಸ್ಪಂದನೆ ಅಗತ್ಯ: ಪ್ರತಿ ದಿನದ ಮತ್ತು ಭಾನುವಾರದ ಬಲಿಪೂಜೆ, ಪ್ರಾರ್ಥನೆ, ಜಪಸರ ಇವುಗಳು ನಮಗೆ ಯೇಸುವನ್ನು ಬಳಿಸಾರಲು ಕೊಟ್ಟ ಆಹ್ವಾನಗಳು ಅಥವಾ ಸಾಧನಗಳು; ಸಂಸ್ಕಾರಗಳು, ವಿಧಿವಿಧಾನಗಳು ನಮಗೆ ದಾರಿಗಳು. ಇವುಗಳ ಮೂಲಕ ದೇವರ ಆಹ್ವಾನಕ್ಕೆ ನಾವು ಸ್ಪಂದಿಸಬೇಕಾಗಿದೆ. ನಮ್ಮದೇ ಲೋಕದಲ್ಲಿ, ವ್ಯವಹಾರದಲ್ಲಿ ನಾವು ತಲ್ಲೀನರಾಗಿದ್ದರೆ ಆಹ್ವಾನ ನಮ್ಮ ಕೈ ತಪ್ಪಿಹೋಗಬಹುದು. • ವಸ್ತ್ರಧಾರಣೆ: ಪ್ರತಿ ಸಮಾರಂಭಕ್ಕೆ ಅದಕ್ಕೆ ತಕ್ಕದಾದ ಬಟ್ಟೆ ಬರೆ ಇರುತ್ತದೆ. ಅದೇ ರೀತಿ ಯೇಸುವನ್ನು ಭೇಟಿಯಾಗಲು ಹೋಗುವಾಗ ನಾವು ಸಿದ್ಧರಾಗಿ, ತಕ್ಕದಾದ ಉಡುಗೆಯಲ್ಲಿ ಹೋಗತಕ್ಕದ್ದು. ಅದು ಮಾತ್ರವಲ್ಲದೆ ಒಳ್ಳೆಯ ಮೌಲ್ಯಗಳಾದ ದಯೆ, ಕರುಣೆ, ಕ್ಷಮೆ ಇವುಗಳ ಮೂಲಕ ನಮ್ಮ ಆಧ್ಯಾತ್ಮಿಕ ಉಡುಪು ಅರ್ಹ ವಸ್ತ್ರಧಾರಣೆಯಾಗಿ ಮಾರ್ಪಡಲು ಸಾಧ್ಯ. ನಮ್ಮ ಉಡುಪು ನಮ್ಮ ಅಂತರಂಗ ಶುದ್ಧಿಯ ಪ್ರತೀಕ. ನಾವು ಉಡುವ ವಸ್ತ್ರ ನಮ್ಮ ಬಗ್ಗೆ ಹೇಳುತ್ತದೆ. ಹೀಗೆ ಮಾಡಿದಲ್ಲಿ ಸಂತ ಪಾವ್ಲನು ಹೇಳುವಂತೆ ನಾವು ಕ್ರಿಸ್ತರನ್ನೇ ಧರಿಸಿದಂತಾಗುತ್ತದೆ. (ರೋಮ 3:14) ನಾವು ಈ ಲೋಕದಲ್ಲಿ ನಡೆಯುವ ಸಮಾರಂಭಗಳಿಗೆ ಹೇಗೆ ಸಿದ್ಧರಾಗಿ ಸಮಯಕ್ಕೆ ಸರಿಯಾಗಿ ಹೊರಡುತ್ತೇವೆಯೋ ಅದೇ ರೀತಿ ಸ್ವರ್ಗ ಸಾಮ್ರಾಜ್ಯದ ಔತಣಕ್ಕೆ ಸಿದ್ಧರಾಗಿ ಹೊರಡಲು ಇಂದಿನ ದೈವಸ್ತುತಿ ನಮಗೆ ಆಹ್ವಾನ ನೀಡುತ್ತದೆ. ಪ್ರತಿ ಬಲಿಪೂಜೆಯ ಸಂಭ್ರಮವು ಒಂದು ಔತಣ; ಇದು ಸ್ವರ್ಗ ರಾಜ್ಯದತ್ತ ನಮ್ಮ ಪಯಣಕ್ಕೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಈ ಔತಣ ಕೂಟದಿಂದ ಪ್ರೇರಿತರಾಗಿ, ನಾವು ಶಕ್ತಿ ಮತ್ತು ಕೃಪೆಯಿಂದ ಸದಾ ಸಿದ್ಧರಾಗಿ ಯೇಸುವನ್ನು ಭೇಟಿಯಾಗಲು ಮನಸ್ಸು ಮಾಡೋಣ.
================
ಚಿಂತನೆ – ಫಾ ಲ್ಯಾನ್ಸಿ ಫೆರ್ನಾಂಡಿಸ್ ಎಸ್ ಜೆ
================
No comments:
Post a Comment