Thursday, 26 November 2020

ಅಕ್ಟೋಬರ್ 12, 2020 ಸೋಮವಾರ

 ಅಕ್ಟೋಬರ್ 12, 2020 ಸೋಮವಾರ                        [ಹಸಿರು]

ಮೊದಲ ವಾಚನ: ಗಲಾತ್ಯರಿಗೆ 4.22-24, 26-27, 31 - 5.1

ಕೀರ್ತನೆ 113: 1-6, 7 ಶ್ಲೋಕ.2

ಪ್ರಭುವಿನ ಸಿರಿನಾಮವು ಇಂದಿಗೂ ಎಂದೆಂದಿಗೂ ಪೂಜ್ಯ

ಶುಭಸಂದೇಶ: ಲೂಕ 11.29-32

==================

ಮೊದಲನೇ ವಾಚನ

ಗಲಾತ್ಯರಿಗೆ 4.22-24, 26-27, 31 - 5.1

22 : ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು: ಒಬ್ಬನು ದಾಸಿಯಿಂದ ಹುಟ್ಟಿದವನು; ಇನ್ನೊಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು.

23 : ದಾಸಿಯ ಮಗ ಪ್ರಕೃತಿ ಸಹಜವಾಗಿ ಹುಟ್ಟಿದವನು; ಧರ್ಮಪತ್ನಿಯ ಮಗನಾದರೋ ವಾಗ್ದಾನದ ಫಲವಾಗಿ ಹುಟ್ಟಿದವನು.

24 : ಇದೊಂದು ಅಲಂಕಾರ ರೂಪ. ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳಿಗೆ ಸದೃಶ್ಯರಾಗಿದ್ದಾರೆ. ಒಂದು, ಸೀನಾಯ್ ಪರ್ವತದಲ್ಲಿ ಮಾಡಲಾದ ಒಡಂಬಡಿಕೆ; ಅದು ದಾಸತ್ವಕ್ಕೆ ಮಕ್ಕಳನ್ನು ಹೆರುತ್ತದೆ. ಅದನ್ನು ಸೂಚಿಸುವವಳೇ ದಾಸಿ ಹಾಗರಳು.

26 : ಆದರೆ ಸ್ವರ್ಗೀಯ ಜೆರುಸಲೇಮ್ ದಾಸಿ ಅಲ್ಲ, ಸ್ವತಂತ್ರಳು, ಈಕೆಯೇ ನಮ್ಮ ತಾಯಿ.

27 : “ಸಂತಾನವಿಲ್ಲದ ಸ್ತ್ರೀಯೇ, ಸಂತೋಷಿಸು ಪ್ರಸವ ವೇದನೆಯನರಿಯದವಳೇ, ಹರ್ಷೋದ್ಗಾರಮಾಡು ಗಂಡನುಳ್ಳವಳಿಗಿಂತ ಕೈ ಬಿಟ್ಟವಳ ಸಂತಾನ ಹೆಚ್ಚು,” ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ.

31 : ಹೌದು, ಪ್ರಿಯ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು. 

5:1 :ನಾವು ಮುಕ್ತ ಸ್ವಾತಂತ್ರ್ಯದಿಂದ ಬಾಳಬೇಕೆಂದು ಕ್ರಿಸ್ತಯೇಸು ನಮ್ಮನ್ನು ಬಿಡುಗಡೆ ಮಾಡಿದರು. ಆದ್ದರಿಂದ ದೃಢವಾಗಿರಿ. ಗುಲಾಮಗಿರಿಯ ನೊಗಕ್ಕೆ ಪುನಃ ಕೊರಳನ್ನು ಒಡ್ಡದಿರಿ.

===================

ಕೀರ್ತನೆ 

ಕೀರ್ತನೆ 113: 1-6, 7 ಶ್ಲೋಕ.2

ಪ್ರಭುವಿನ ಸಿರಿನಾಮವು ಇಂದಿಗೂ 

ಎಂದೆಂದಿಗೂ ಪೂಜ್ಯ


1 : ಪ್ರಭುವಿನ ದಾಸರೇ, 

ಸ್ತುತಿಮಾಡಿ / 

ಪ್ರಭುವಿನ 

ನಾಮಸ್ತುತಿಯನು ಮಾಡಿ //


2 : ಪ್ರಭುವಿನ 

ಸಿರಿನಾಮವು ಪೂಜ್ಯ / 

ಇಂದಿಗೂ 

ಎಂದೆಂದಿಗೂ ಪೂಜ್ಯ //


3 : ಪ್ರಭುವಿನಾ 

ಸಿರಿನಾಮವು ಸ್ತುತ್ಯ / 

ಪೂರ್ವ ಪಶ್ಚಿಮದವರೆಗೂ

 ಸ್ತುತ್ಯ // 


4 : ಸಕಲ ಜಾತಿಜನಾಂಗಗಳಲಿ

 ಪ್ರಭು ಶ್ರೇಷ್ಠ / 

ಆತನ ಮಹಿಮೆ ಗಗನಕ್ಕಿಂತಲೂ 

ಉತ್ಕೃಷ್ಟ //

 

5 : ನಮ್ಮ ಪ್ರಭು ದೇವನಂತೆ 

ಯಾರು ಸಮರ್ಥ /

6 : ಇಹಪರಗಳನು 

ವೀಕ್ಷಿಸಲಾತ ಶಕ್ತ //


7 : ದೀನರನು ಎಬ್ಬಿಸುವನು 

ಧೂಳಿನಿಂದ / 

ಬಡವರನು ಎತ್ತುವನು 

ತಿಪ್ಪೆಯಿಂದ //

===================

ಶುಭಸಂದೇಶ

ಲೂಕ 11.29-32

29 : ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು.

30 : ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.

31 : “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

32 : ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. 

===================

ಚಿಂತನೆ

ಯೋನ ಪ್ರವಾದಿಯು ನಿನೆವೆ ಜನರಿಗೆ ತಮ್ಮ ಪಾಪದ ಜೀವವನ್ನು ತೊರೆದು, ಮನಃಪರಿವರ್ತನೆಗೆ ಕರೆನೀಡಿದಾಗ ಆ ಜನರು ಸೂಚಕ ಕಾರ್ಯಗಳನ್ನು ಅಪೇಕ್ಷಿಸದೆ ಯೋನನ ಮಾತನ್ನು ಗಂಭೀರವಾಗಿ ಸ್ವೀಕರಿಸಿದರು. ಇಲ್ಲಿ ಗಮನಿಸಬೇಕಾದುದು ನಿನೆವೆ ಜನರು ಅನ್ಯದೇವರನ್ನು ಪೂಜಿಸುತ್ತಿದ್ದರೂ ಸರ್ವೇಶ್ವರ ಸ್ವಾಮಿಯ ಪ್ರವಾದಿಯ ಮಾತಲ್ಲಿ ವಿಶ್ವಾಸವಿರಿಸಿ ತಮ್ಮ ಬದುಕನ್ನು ಮಾರ್ಪಡಿಸಿಕೊಂಡರು.ದೇವರು ಆಯ್ದುಕೊಂಡ ಜನಾಂಗವಾದರೂ, ರಕ್ಷಕನಿಗಾಗಿ 400 ವರ್ಷಗಳಿಂದ ಕಾಯುತ್ತಿದ್ದವರು ಕೊನೆಗೆ ಬಂದ `ರಕ್ಷಕ’ನನ್ನು ತಿರಸ್ಕರಿಸಿದರು.

ದಕ್ಷಿಣ ಅರೇಬಿಯ, ಶೆಬದ ರಾಣಿ (1 ಅರಸು 10:1-13) ಸೋಲೋಮನ್ ಅರಸನ ಜ್ಞಾನೋಕ್ತಿಗಳನ್ನು ಕೇಳುವುದಕ್ಕೆ ದೂರದ ದೇಶದಿಂದ ಪ್ರಯಾಣ ಬೆಳೆಸಿದಳು. ಆದರೆ ಯಹೂದ್ಯರು ದೇವರ ಪುತ್ರನನ್ನೇ ಅರಿಯಲು ವಿಫಲರಾದರು. ಶೆಬದ ರಾಣಿ ಮತ್ತು ನಿನೆವೆ ನಗರದ ಜನರು ತೀರ್ಪಿನ ದಿನದಂದು ತನ್ನನ್ನು ತಿರಸ್ಕರಿಸಿದ ಪೀಳಿಗೆಯನ್ನು ದೂಷಿಸುವರು ಎನ್ನುತ್ತಾರೆ ಯೇಸು.

===================

No comments:

Post a Comment