Sunday, 22 November 2020

ಸೆಪ್ಟೆಂಬರ್ 12, 2020 ಶನಿವಾರ

 ಸೆಪ್ಟೆಂಬರ್ 12, 2020 ಶನಿವಾರ                        [ಬಿಳಿ]

ಮರಿಯಮ್ಮನವರ ಅತಿ ಪವಿತ್ರ ನಾಮ

ಮೊದಲ ವಾಚನ: 1 ಕೊರಿಂಥಿಯರಿಗೆ 10.14-22

ಕೀರ್ತನೆ 116:12-13, 17-19. ಶ್ಲೋಕ.17

ಅರ್ಪಿಸುವೆ ಪ್ರಭೂ, ನಾ ನಿನಗೆ ಕೃತಜ್ಞತಾ ಬಲಿಗಳನು

ಶುಭಸಂದೇಶ: ಲೂಕ 6.43-49

==================

1 ಕೊರಿಂಥಿಯರಿಗೆ 10.14-22

14 : ಆದ್ದರಿಂದ ಪ್ರಿಯರೇ, ವಿಗ್ರಹಾರಾಧನೆಯನ್ನು ತೊರೆದು ಬಿಡಿ.

15 : ನೀವು ಅರಿತವರೆಂದು ತಿಳಿದೇ ಇದನ್ನು ಹೇಳುತ್ತಿದ್ದೇನೆ. ನನ್ನ ಮಾತುಗಳನ್ನು ನೀವೇ ಪರಿಶೀಲಿಸಿ ನೋಡಿ.

16 : ನಾವು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ?

17 : ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.

18 : ಇಸ್ರಯೇಲರ ಪದ್ಧತಿಯನ್ನು ಗಮನಿಸಿರಿ: ಬಲಿಯಾಗಿ ಅರ್ಪಿತವಾದುದನ್ನು ಭುಜಿಸುವವರು ಬಲಿಪೀಠದ ಸೇವೆಯಲ್ಲಿ ಭಾಗಿಯಾಗಿರುತ್ತಾರಷ್ಟೆ.

19 : ಹೀಗೆ ನಾನು ಹೇಳುವಾಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥವು ವಾಸ್ತವವಾದುದು ಅಥವಾ ವಿಗ್ರಹವೇ ವಾಸ್ತವವಾದುದು ಎಂದು ಅರ್ಥವೇ?

20 : ಯಾವುದೂ ಅಲ್ಲ. ನಾನು ಹೇಳುವುದೇನೆಂದರೆ: ಅನ್ಯಜನರು ಬಲಿಯನ್ನು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ. ಹೀಗೆ ನೀವು ದೆವ್ವಗಳೊಂದಿಗೆ ಭಾಗಿಯಾಗುವುದನ್ನು ನಾನೆಂದಿಗೂ ಇಷ್ಟಪಡುವುದಿಲ್ಲ.

21 : ನೀವು ಪ್ರಭುವಿನ ಪಾತ್ರೆಯಿಂದ ಹಾಗೂ ದೆವ್ವಗಳ ಪಾತ್ರೆಯಿಂದ ಕುಡಿಯಲಾಗದು. ಪ್ರಭುವಿನ ಪಂಕ್ತಿಯಲ್ಲೂ ಅಂತೆಯೇ ದೆವ್ವಗಳ ಪಂಕ್ತಿಯಲ್ಲೂ ಊಟಮಾಡಲಾಗದು.

22 : ನಾವು ಪ್ರಭುವನ್ನು ಅಸೂಯೆಗೆಬ್ಬಿಸಬಹುದೇ? ಅವರಿಗಿಂತ ನಾವು ಬಲಾಢ್ಯರೇ?

===================

ಕೀರ್ತನೆ 116:12-13, 17-19. ಶ್ಲೋಕ.17

ಅರ್ಪಿಸುವೆ ಪ್ರಭೂ, ನಾ ನಿನಗೆ ಕೃತಜ್ಞತಾ ಬಲಿಗಳನು

12 : ಪ್ರಭು ಎನಗೆ ಮಾಡಿದ 

ಮಹೋಪಕಾರಗಳಿಗಾಗಿ / 

ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //

13 : ಎತ್ತಿ ಹಿಡಿವೆನು ರಕ್ಷಣೆಯ 

ಪಾನಪಾತ್ರೆಯನು / 

ಪ್ರಖ್ಯಾತಪಡಿಸುವೆನು 

ಪ್ರಭುವಿನ ನಾಮವನು //

16 : ಹೇ ಪ್ರಭು, ಕರುಣಿಸು, 

ನಾ ನಿನ್ನ ಕಿಂಕರನು / 

ನಿನ್ನ ದಾಸಿಯ ಮಗನು, 

ನಿನ್ನ ಸೇವಕನು / 

ಬಿಡಿಸಿರುವೆ ನೀನು

 ನನ್ನ ಬಂಧನಗಳನು //

17 : ಅರ್ಪಿಸುವೆ ನಾ ನಿನಗೆ 

ಕೃತಜ್ಞತಾ ಬಲಿಗಳನು / 

ಪ್ರಖ್ಯಾತಪಡಿಸುವೆನು 

ಪ್ರಭುವಿನ ನಾಮವನು //

18 : ಹೇ ಜೆರುಸಲೇಮೇ, 

ನಿನ್ನ ಮಧ್ಯದೊಳು / 

ಆತನಿರುವ ಮಂದಿರದ 

ಅಂಗಳದೊಳು //

19 : ತೀರಿಸುವೆನು ಆತನ ಸಭೆಯ 

ಸಮ್ಮುಖದೊಳು / 

ಅರ್ಪಿಸುವೆನು ನಾ ಹೊತ್ತ

 ಆ ಹರಕೆಗಳನು //

===================

ಲೂಕ 6.43-49

43 : “ಒಳ್ಳೆಯ ಮರವು ಕೆಟ್ಟ ಫಲವನ್ನು ಕೊಡುವುದಿಲ್ಲ; ಕೆಟ್ಟ ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.

44 : ಪ್ರತಿಯೊಂದು ಮರದ ಗುಣವನ್ನು ಅದರ ಹಣ್ಣಿನಿಂದ ಗುರುತಿಸಬಹುದು. ಮುಳ್ಳು ಗಿಡದಲ್ಲಿ ಅಂಜೂರ ಕೀಳುವಂತಿಲ್ಲ. ಮುಳ್ಳು ಕಳ್ಳಿಯಲ್ಲಿ ದ್ರಾಕ್ಷಿ ಕೊಯ್ಯುವಂತಿಲ್ಲ.

45 : ಒಳ್ಳೆಯವನು ತನ್ನ ಹೃದಯವೆಂಬ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ. ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರ ತರುತ್ತಾನೆ. ಹೃದಯದಲ್ಲಿ ತುಂಬಿರುವುದೇ ಬಾಯಿಮಾತಾಗಿ ತುಳುಕುತ್ತದೆ. ಸುಭದ್ರ ಅಸ್ತಿವಾರ (ಮತ್ತಾ. 7.24-27)

46 : “ನೀವು ನನ್ನನ್ನು ‘ಸ್ವಾವಿೂ, ಸ್ವಾವಿೂ,’ ಎಂದು ಕರೆಯುತ್ತೀರಿ; ಆದರೆ ನನ್ನ ಮಾತಿನಂತೆ ನಡೆಯುವುದಿಲ್ಲವೇಕೆ?

47 : ನನ್ನ ಬಳಿಗೆ ಬಂದು ನನ್ನ ಮಾತನ್ನು ಕೇಳಿ, ಅದರಂತೆ ನಡೆಯುವ ಪ್ರತಿಯೊಬ್ಬನೂ ಎಂಥವನಿಗೆ ಸಮಾನನೆಂದು ನಿಮಗೆ ಹೇಳುತ್ತೇನೆ ಕೇಳಿ:

48 : ಆಳವಾಗಿ ಅಡಿಪಾಯ ತೆಗೆದು, ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ ಮನೆಕಟ್ಟಿದವನಿಗೆ ಅವನು ಸಮಾನನು; ಹುಚ್ಚು ಹೊಳೆ ಬಂದು ಪ್ರವಾಹವು ಆ ಮನೆಗೆ ಅಪ್ಪಳಿಸಿದರೂ ಅದು ಕದಲಲಿಲ್ಲ. ಕಾರಣ - ಆ ಮನೆಯನ್ನು ಸುಭದ್ರವಾಗಿ ಕಟ್ಟಲಾಗಿತ್ತು.

49 : ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದವನು ಅಸ್ತಿವಾರವೇ ಇಲ್ಲದೆ ಬರಿಯ ಮಣ್ಣಿನ ಮೇಲೆ ಮನೆ ಕಟ್ಟಿದವನಿಗೆ ಸಮಾನನು. ಆ ಮನೆಗೆ ಪ್ರವಾಹವು ಅಪ್ಪಳಿಸಿದಾಗ ಒಡನೆಯೇ ಅದು ಕುಸಿದು ಬಿತ್ತು, ಆ ಮನೆಗೆ ಒದಗಿದ ಪತನವೋ ವಿಪರೀತ!” 

===================

ಚಿಂತನೆ

"ಎಷ್ಟೋ ಬಾರಿ ನಾವು ಓದಿದ ಪುಸ್ತಕಗಳಿಂದ ಮೆಚ್ಚಿದ ಪ್ರೇರಕ ನುಡಿಗಳು, ಆದರ್ಶ ವ್ಯಕ್ತಿಗಳ ಜೀವನ ತತ್ವಗಳು, ಕೇವಲ ಕಪಾಟುಗಳಲ್ಲಿ ಸುರಕ್ಷಿತವಾಗಿರುತ್ತವೆ, ಅಥವಾ ಗೋಡೆಯ ಮೇಲೆ ತೂಗುಫಲಕಗಳಾಗಿ ನೇತಾಡುತ್ತಿರುತ್ತವೆ. ನೆಚ್ಚಿದ್ದು, ಮೆಚ್ಚಿದ್ದು ಹೃದಯದೊಳಗಚ್ಚಾಗದಿದ್ದಲ್ಲಿ ಅದನ್ನು ಪಾಲಿಸುತ್ತಿದ್ದೇವೆಂಬ ಭ್ರಮೆಯಲ್ಲಿ ಅಚಾತುರ್ಯವೂ ನಡೆದು ಹೋಗಬಹುದೆಂದು ಯೇಸು ಎಚ್ಚರಿಸುತ್ತಾರೆ. 

ಕ್ರೈಸ್ತರಾದ ನಮಗೆ ಪ್ರೇರಣೆಗಳಿಗೆ, ಪ್ರೇರಕರಿಗೆ ಕಡಿಮೆಯಿಲ್ಲ. ನಮ್ಮ ಆಚರಣೆಗಳು, ಹಬ್ಬ ಹರಿದಿನಗಳು, ಸಂತರು, ಪವಿತ್ರಗ್ರಂಥ, ಸಂಪ್ರದಾಯಗಳ ಗೂಢಾರ್ಥಗಳು, ದಿನನಿತ್ಯದ ಬಲಿಪೂಜೆ, ಪ್ರಾರ್ಥನೆ, ಭಾನುವಾರದ ಆರಾಧನೆ, ಬೋಧನೆ ... ಇದ್ಯಾವುದನ್ನೂ ನಮ್ಮ ಜೀವನದಲ್ಲಿ ಕಾರ್ಯರೂಪಗೊಳಿಸದಿದ್ದರೆ ಅವೆಲ್ಲವೂ ಅರ್ಥಹೀನ, ಮಣ್ಣಿನ ಮೇಲೆ ಮನೆ ಕಟ್ಟುವುದಕ್ಕೆ ಸಮಾನ ಅದೋ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗುವ ಸಂಭವವುಂಟು. 

ಕೇಳಿ ಮೆಚ್ಚಿ ಪ್ರಶಂಸಿಸಿದ್ದನ್ನು ಕಾರ್ಯರೂಪಕ್ಕಿಳಿಸುವ ಬದ್ಧತೆ ನಮಗೆ ಬಂದಲ್ಲಿ, ಆಳ ಅಡಿಪಾಯದೊಂದಿಗೆ ಬಂಡೆಕಲ್ಲಿನ ಮೇಲೆ ಅಸ್ತಿವಾರ ಹಾಕಿ ಮನೆಕಟ್ಟಿದವನಂತೆ ನಾವಾಗುತ್ತೇವೆ.  ಸಿಡಿಲು, ಮಳೆ, ಗುಡುಗಿಗಂಜದೆ ಎಲ್ಲವನ್ನೂ ಎದುರಿಸಿ ಬಾಳುವ ಎದೆಗಾರಿಕೆ ನಮಗೆ ಬೇಕು ಆಗ ಮಾತ್ರ  ಜೀವನವನ್ನು ಸಂಪೂರ್ಣವಾಗಿ  ಬದುಕುತ್ತೇವೆ. ನಾವು ಮೆಚ್ಚುವ ಆದರ್ಶಗಳು ನಮ್ಮೊಳಗೊಂದಾದರೆ ಮಾತ್ರ ಅವು ನಮ್ಮ  ಬದುಕಾಗುತ್ತದೆ , ಬದುಕಿದ್ದನ್ನು  ಪ್ರೀತಿಸುತ್ತೇವೆ. ಕ್ರಿಸ್ತನ ಆದರ್ಶಗಳನ್ನು ಪ್ರೀತಿಸುವ, ಬದುಕುವ, ಪರರಿಗೂ ಪ್ರೇರಕರಾಗುವ ವರಗಳಿಗಾಗಿ ಬೇಡಿಕೊಳ್ಳೋಣ.

===================

No comments:

Post a Comment