ಸೆಪ್ಟೆಂಬರ್ 11, 2020 ಶುಕ್ರವಾರ [ಹಸಿರು]
ಮೊದಲ ವಾಚನ: 1 ಕೊರಿಂಥಿಯರಿಗೆ 9.16-19, 22-27
ಕೀರ್ತನೆ 83:2-3, 4-5, 11. ಶ್ಲೋಕ.1
ಸ್ವರ್ಗಸೇನಾಧೀಶ್ವರಾ, ನಿನ್ನ ನಿವಾಸಗಳಿನಿತೋ ಸುಂದರ
ಶುಭಸಂದೇಶ: ಲೂಕ 6.39-42
==================
ಮೊದಲನೇ ವಾಚನ
1 ಕೊರಿಂಥಿಯರಿಗೆ 9.16-19, 22-27
16 : ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ!
17 : ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ.
18 : ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ಏನು? ಶುಭಸಂದೇಶವನ್ನು ಸಾರುವಾಗ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳದೆ ಉಚಿತವಾಗಿ ಸಾರುವ ಸೌಭಾಗ್ಯವೇ ನನ್ನ ಸಂಭಾವನೆ.
19 : ನಾನು ಸ್ವತಂತ್ರನು, ಯಾರಿಗೂ ದಾಸನಲ್ಲ. ಆದರೂ ಆದಷ್ಟು ಜನರನ್ನು ಗಳಿಸಿಕೊಳ್ಳಲೆಂದು ಎಲ್ಲರಿಗೂ ದಾಸನಾದೆ.
22 : ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ. ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ.
23 : ಶುಭಸಂದೇಶದ ಸೌಭಾಗ್ಯದಲ್ಲಿ ಪಾಲುಗೊಳ್ಳಲೆಂದು ಇದೆಲ್ಲವನ್ನು ಶುಭಸಂದೇಶಕ್ಕಾಗಿಯೇ ಮಾಡುತ್ತೇನೆ.
24 : ನಿಮಗೆ ತಿಳಿದಿರುವಂತೆ ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ; ಆದರೆ ಪ್ರಥಮ ಬಹುಮಾನ ದೊರಕುವುದು ಒಬ್ಬನಿಗೆ ಮಾತ್ರ. ಅಂತೆಯೇ ಬಹುಮಾನವನ್ನು ಪಡೆದುಕೊಳ್ಳಲು ನೀವೂ ಓಡಿ.
25 : ಕ್ರೀಡಾಪಟುಗಳೆಲ್ಲರೂ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ಅಳಿದುಹೋಗುವ ಪದಕದ ಗಳಿಕೆಗಾಗಿ ಪ್ರಯತ್ನಮಾಡುತ್ತಾರೆ. ನಾವಾದರೋ ಅಮರ ಪದಕದ ಗಳಿಕೆಗಾಗಿ ಶ್ರಮಿಸುತ್ತೇವೆ.
26 : ನಾನಾದರೋ ಗೊತ್ತುಗುರಿಯಲ್ಲದವನಂತೆ ಓಡುವುದಿಲ್ಲ, ಗಾಳಿಯೊಡನೆ ಗುದ್ದಾಡುವವನಂತೆ ಹೋರಾಡುವುದಿಲ್ಲ.
27 : ಇತರರಿಗೆ ಕರೆಕೊಟ್ಟ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ, ನನ್ನನ್ನೇ ನಾನು ಹತೋಟಿಯಲ್ಲಿಟ್ಟುಕೊಳ್ಳುತ್ತೇನೆ.
===================
ಕೀರ್ತನೆ 84:2-3, 4-5, 11. ಶ್ಲೋಕ.1
ಸ್ವರ್ಗಸೇನಾಧೀಶ್ವರಾ,
ನಿನ್ನ ನಿವಾಸಗಳಿನಿತೋ ಸುಂದರ
2 : ಹಂಬಲಿಸಿ ಸೊರಗಿಹೋಗಿದೆ
ಎನ್ನ ಮನ /
ಕಾಣಬೇಕೆಂದು
ಪ್ರಭುವಿನ ಪ್ರಾಂಗಣ //
3 : ಸ್ವಾಮಿ ದೇವ, ಎನ್ನರಸ,
ಸ್ವರ್ಗಸೇನಾಧೀ ಶ್ವರ /
ದೊರಕಿದೆ ಗುಬ್ಬಿಗೆ ಗೂಡು
ನಿನ್ನ ವೇದಿಕೆಯ ಹತ್ತಿರ /
ಪಾರಿವಾಳಕ್ಕು ಅಲ್ಲೇ ಇದೆ
ಮರಿಯಿಡಲು ಆಗರ //
4 : ನಿನ್ನ ಮಂದಿರದಲಿ
ವಾಸಿಸುವವರು ಧನ್ಯರು /
ನಿರಂತರವು ನಿನ್ನ ಗುಣಗಾನ
ಮಾಡುವರವರು //
5 : ನಿನ್ನಿಂದ ಶಕ್ತಿಪಡೆಯುವವರು
ಧನ್ಯರು /
ಸಿಯೋನ್ ಶಿಖರಕ್ಕವರು
ಪ್ರಿಯ ಯಾತ್ರಿಕರು //
6 : ದಾಟುವಾಗ ಬಾಕಾ ಕಣಿವೆಯನು /
ಚಿಲುಮೆಗಳನಾಗಿ ಮಾಡುವರದನು //
ಮುಂಗಾರು ಮಳೆಯು ಸುರಿಯಲು /
ತುಂಬಿ ತುಳುಕುವುದಾ ಸರಸಿಗಳು //
12 : ಪ್ರಭುವೇ, ಸ್ವರ್ಗಸೇನಾಧೀಶ್ವರನೇ /
ನಿನ್ನಲಿ ನಂಬಿಕೆ ಇಡುವವನೇ ಧನ್ಯನು //
=================
ಲೂಕ 6.39-42
39 : ಯೇಸುಸ್ವಾಮಿ ಅವರಿಗೆ ಈ ಸಾಮತಿಯನ್ನೂ ಹೇಳಿದರು: “ಕುರುಡನು ಕುರುಡನಿಗೆ ದಾರಿ ತೋರಿಸಲಾದೀತೆ? ಇಬ್ಬರೂ ಹಳ್ಳದಲ್ಲಿ ಬೀಳುವುದಿಲ್ಲವೆ?
40 : ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ಆದರೂ ಪೂರ್ಣ ಶಿಕ್ಷಣ ಪಡೆದ ಪ್ರತಿಯೊಬ್ಬನೂ ಗುರುವಿನಂತೆ ಆಗುವನು.
41 : “ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ನೋಡದೆ, ಸೋದರನ ಕಣ್ಣಿನಲ್ಲಿರುವ ಅಣುವನ್ನು ಗಮನಿಸುವುದೇಕೆ?
42 : ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನೇ ಕಾಣಲಾರದ ನೀನು, ‘ತಮ್ಮಾ ತಾಳು, ನಿನ್ನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಬಿಡುತ್ತೇನೆ,’ ಎಂದು ಸೋದರನಿಗೆ ಹೇಗೆ ಹೇಳಬಲ್ಲೆ? ಎಲೈ ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ದಿಮ್ಮಿಯನ್ನು ತೆಗೆದು ಹಾಕು, ಅನಂತರ ನಿನ್ನ ಸೋದರನ ಕಣ್ಣಿನಲ್ಲಿರುವ ಅಣುವನ್ನು ತೆಗೆದು ಹಾಕಲು ನಿನಗೆ ಕಣ್ಣು ನಿಚ್ಚಳವಾಗಿ ಕಾಣಿಸುವುದು
============
ಚಿಂತನೆ
"ನಾವು ಒಳ್ಳೆಯವರಾದರೆ ಮಾತ್ರ ಇತರರಿಗೆ ಮಾರ್ಗದರ್ಶನ ನೀಡಲು ಸಾಧ್ಯ. ಇಲ್ಲವಾದರೆ ನಮ್ಮ ಕೆಟ್ಟ ನುಡಿ, ನಡತೆ, ಕ್ರಿಯೆಗಳೆಲ್ಲವು ಇತರರನ್ನು ದುರ್ಮಾರ್ಗದಲ್ಲಿ ನಡೆಯಲು ಪ್ರೇರೆಪಿಸುತ್ತವೆ. ಕುರುಡನು ಇನ್ನೊಬ್ಬ ಕುರುಡನಿಗೆ ದಾರಿ ತೋರಿಸಬಲ್ಲನೆ? ಹಾಗೆಯೇ ಕಪಟಿಗಳು ದುರ್ಮಾರ್ಗಿಗಳು, ಪಾಪಿಗಳು ಇತರರನ್ನು ಪುಣ್ಯಮಾರ್ಗದಲ್ಲಿ ನಡೆಸಲು ಎಂದೂ ಸಮರ್ಥರಲ್ಲ. ಯಾವುದೇ ವ್ಯಕ್ತಿಗೆ ತನ್ನೊಳಗೆ ನೈತಿಕತೆ ಇದ್ದರೆ ಮಾತ್ರ ಮತ್ತೊಬ್ಬರ ಬಗ್ಗೆ ಮಾತನಾಡಲು, ಉಪದೇಶಿಸಲು ಸಾಧ್ಯ. ಪ್ರಭುವಿನ ಈ ವಾಕ್ಯ ಎಷ್ಟೊಂದು ಅರ್ಥಗರ್ಭಿತ! ನಾವು ಅನೇಕ ಬಾರಿ ಪಾಪಕ್ಕೆ ಸಿಲುಕಿ ಆಧ್ಯಾತ್ಮಿಕ ಅಂಧತ್ವದಲ್ಲಿ ನರಳುತ್ತೇವೆ. ಮೊದಲು ನಮ್ಮ ಆತ್ಮಿಕ ಕಣ್ಣುಗಳನ್ನು ತೆರೆದು ಪರಿಶುದ್ದ ಜೀವನ ನಡೆಸುವಂತೆ ಕರೆಯನ್ನಿಯುತ್ತಾರೆ.
===================
No comments:
Post a Comment