9/13/2020
ದೈನಂದಿನ
ಪವಿತ್ರವಾಚನಗಳ ಸೂಚಿ
===============
ಸೆಪ್ಟೆಂಬರ್ 13, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 24ನೇ ಭಾನುವಾರ
ಮೊದಲ ವಾಚನ: ಸಿರಾಖ 27.30 - 28.7
ಕೀರ್ತನೆ 103: 1-2, 3-4, 9-10, 11-12 ಶ್ಲೋಕ.8
ಪ್ರಭು ದಯಾಳು, ಕೃಪಾಪೂರ್ಣನು
ನಿತ್ಯಕ್ಕೂ ಕೋಪ ಇಟ್ಟುಕೊಳ್ಳುವವನಲ್ಲ
ಎರಡನೇ ವಾಚನ: ರೋಮನರಿಗೆ 14.7-9
ಶುಭಸಂದೇಶ: ಮತ್ತಾಯ 18.21-35
----------------------------------
ಸಂತ ಜಾನ್ ಕ್ರಿಸಾಸ್ಪಮ್, ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ
==================
ದೈವ ವಾಕ್ಯದ ವಿಧಿ
=============
ಮೊದಲನೇ ವಾಚನ
===============
ಸಿರಾಖ 27.30 - 28.7
30 : ಸಿಟ್ಟು ಸಿಡುಕು ಸಿಟ್ಟುಸಿಡುಕುಗಳು ಹೇಯವಾದವುಗಳು ಅವೆರಡೂ ಇರುವುವು ಪಾಪಾತ್ಮನೊಳು.
1 : ಪ್ರತೀಕಾರ ಮಾಡುವವನು ಸರ್ವೇಶ್ವರನಿಂದ ಪ್ರತೀಕಾರ ಹೊಂದುವನು ಅವನ ಪಾಪಗಳನ್ನು ಸರ್ವೇಶ್ವರ ಸದಾ ಮನಸ್ಸಿನಲ್ಲಿ ಇಟ್ಟುಕೊಳ್ಳುವರು.
2 : ಕ್ಷಮೆನೀಡು ನಿನ್ನ ನೆರೆಯವನು ಮಾಡಿದ ತಪ್ಪಿಗೆ ನೀನು ಪ್ರಾರ್ಥಿಸುವಾಗ ಕ್ಷಮೆ ದೊರಕುವುದು ನಿನ್ನ ಪಾಪಗಳಿಗೆ.
3 : ನೆರೆಯವನ ಮೇಲೆ ಮುನಿಸಿಟ್ಟುಕೊಂಡರೆ ದೇವರಿಂದ ಕ್ಷಮೆಹೊಂದಲು ಆದೀತೆ?
4 : ತನ್ನಂಥ ಮನುಷ್ಯನ ಮೇಲೆ ಅವನಿಗೆ ಕರುಣೆಯಿಲ್ಲದಿರೆ ಬೇಡಿಕೊಂಡರೆ ಪಾಪಮನ್ನಣೆ ಪಡೆಯುವನೆ?
5 : ಕೇವಲ ನರಮಾನವನಾದವನು ಇಂಥ ಸಿಡುಕಿಟ್ಟುಕೊಂಡರೆ ಇವನ ಪಾಪಗಳಿಗೆ ದೋಷಪರಿಹಾರ ಮಾಡುವವರು ಯಾರಿದ್ದಾರೆ?
6 : ನಿನ್ನ ಅಂತ್ಯಕಾಲವನ್ನು ಸ್ಮರಿಸಿಕೊಂಡು ಹಗೆತನವನು ತೊರೆದುಬಿಡು ಸಾವು ಮರಣಗಳನ್ನು ನೆನೆದು ದೇವರ ಆಜ್ಞೆಗಳನ್ನು ಪಾಲನೆಮಾಡು.
7 : ದೇವರ ಆಜ್ಞೆಗಳನ್ನು ಸ್ಮರಿಸಿಕೊಂಡು ನೆರೆಯವನ ಮೇಲೆ ಮುನಿಸಬೇಡ ಮಹೋನ್ನತನ ಒಡಂಬಡಿಕೆಯನ್ನು ನೆನಸಿ ಕೊಂಡು ತಪ್ಪು ನೆಪ್ಪುಗಳನ್ನು ವೀಕ್ಷಿಸಬೇಡ.
===================
ವಾಚಕ: ಪ್ರಭುವಿನ ವಾಕ್ಯ
ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ.
================
ಕೀರ್ತನೆ
======
ಕೀರ್ತನೆ 103: 1-2, 3-4, 9-10, 11-12 ಶ್ಲೋಕ.8
ಪ್ರಭು ದಯಾಳು, ಕೃಪಾಪೂರ್ಣನು
ನಿತ್ಯಕ್ಕೂ ಕೋಪ ಇಟ್ಟುಕೊಳ್ಳುವವನಲ್ಲ
1 : ಭಜಿಸು ನನ್ನ ಮನವೇ,
ಭಜಿಸು ಪ್ರಭುವನು /
ನನ್ನ ಅಂತರಂಗವೇ,
ಭಜಿಸು ಆತನನು /
ನೆನೆ ಆತನ ಪರಮಪಾವನ
ನಾಮವನು //
2 : ಭಜಿಸು ನನ್ನ ಮನವೇ,
ಭಜಿಸು ಪ್ರಭುವನು /
ಮರೆಯದಿರು ಆತನ
ಉಪಕಾರಗಳೊಂದನು //
3 : ಮನ್ನಿಸುವನಾತ
ನನ್ನ ದೋಷಗಳನು /
ವಾಸಿಮಾಡುವನು
ನನ್ನ ರೋಗಗಳನು //
4 : ಉಳಿಸುವನು ಪಾತಾಳದ
ಕೂಪದಿಂದ ನನ್ನನು /
ಮುಡಿಸುವನೆನಗೆ ದಯದಾಕ್ಷಿಣ್ಯದ
ಮುಕುಟವನು //
9 : ಆತನು ಸದಾ
ತಪ್ಪು ಹುಡುಕುವವನಲ್ಲ /
ನಿತ್ಯಕು ಕೋಪ
ಇಟ್ಟುಕೊಳ್ಳುವವನಲ್ಲ //
10 : ನಮ್ಮ ಪಾಪಗಳಿಗೆ
ತಕ್ಕಂತೆ ಆತ ವರ್ತಿಸಲಿಲ್ಲ /
ನಮ್ಮ ಅಪರಾಧಗಳಿಗೆ
ತಕ್ಕಹಾಗೆ ದಂಡಿಸಲಿಲ್ಲ //
11 : ಆಕಾಶಮಂಡಲವು
ಭೂಮಿಯಿಂದೆಷ್ಟೋ ಉನ್ನತ /
ದೈವಭಯವುಳ್ಳವರಿಗೆ ಆತನ
ಕೃಪೆ ಅಷ್ಟೇ ಸನ್ನುತ //
12 : ಪಡುವಣದಿಂದ
ಮೂಡಣವೆಷ್ಟೋ ದೂರ /
ದೂಡಿದನಾತ ನಮ್ಮ ಪಾಪಗಳನು
ಅಷ್ಟು ದೂರ //
===================
ಎರಡನೇ ವಾಚನ
===========
ರೋಮನರಿಗೆ 14.7-9
7 : ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ.
8 : ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು.
9 : ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತಯೇಸು ಸತ್ತು ಜೀವಂತರಾದದ್ದು.
ವಾಚಕ: ಪ್ರಭುವಿನ ವಾಕ್ಯ
ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ
ಅಲ್ಲೆಲೂಯ
=========
ಯೋವಾನ್ನ 10: 27
ಅಲ್ಲೆಲ್ಲೂಯ, ಅಲ್ಲೆಲೂಯ!
ನನ್ನ ಕುರಿಗಳಾದರೊ ನನ್ನ ಸ್ವರವನ್ನು ಗುರುತಿಸುತ್ತವೆ.
ನಾನು ಅವನ್ನು ಬಲ್ಲೆನು; ಅವು ನನ್ನನ್ನು ಹಿಂಬಾಲಿಸುತ್ತವೆ.
ಅಲ್ಲೆಲೂಯ!
----------------------------
ಅಲ್ಲೆಲೂಯ, ಅಲ್ಲೆಲೂಯ!
ದೇವರ ವಾಕ್ಯವೇ ಬೀಜವು, ಕ್ರಿಸ್ತರೇ ಬಿತ್ತುವವರು;
ಯಾವನು ಈ ಬೀಜವನ್ನು ಹೊಂದುವನೋ
ಅವನು ಅನಂತಕಾಲ ಬಾಳುವನು.
ಅಲ್ಲೆಲೂಯ!
---------------------------
ಶುಭಸಂದೇಶ
==========
ಮತ್ತಾಯ 18.21-35
21 : ಅನಂತರ ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾವಿೂ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು.
22 : “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಎಂದು ಯೇಸು ಉತ್ತರವಿತ್ತರು.
23 : ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ.
24 : ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು.
25 : ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ.
26 : ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾವಿೂ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ.
27 : ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ.
28 : “ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ.
29 : ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ.
30 : ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ.
31 : ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು.
32 : ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ.
33 : ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ.
34 : ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ.
35 : “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.
===================
ಚಿಂತನೆ
======
ಸಾಧಾರಣ ಕಾಲದ 24ನೇ ಭಾನುವಾರ
=====================
ಪೀಠಿಕೆ
==========
ತಪ್ಪು ಮಾಡುವುದು ಮಾನವನಿಗೆ ಹುಟ್ಟುಗುಣದಂತೆ ಅದನ್ನು ತಿದ್ದಿ ನಡೆಯುವುದೋ ಮಾನವನ ಸದ್ಗುಣ. ಮಾನವೀಯತೆಯನ್ನು ದ್ವಿಗುಣಗೊಳಿಸಲು ಸಹಾಯವಾಗುವುದು ಕ್ಷಮೆ. ಏಕೆಂದರೆ, ಕ್ಷಮಿಸುವುದು ಒಂದು ದಿವ್ಯ ಗುಣ. ದೇವರ ಮಕ್ಕಳಾಗಿರುವ ನಾವೆಲ್ಲರೂ , ಪರಸ್ಪರ ಪ್ರೀತಿಸಿ, ಕ್ಷಮಿಸಿ ಬದುಕಿದರೆ ಮಾತ್ರ ಸ್ವರ್ಗ ಸಾಮ್ರಾಜ್ಯದ ದಾರಿಯಲ್ಲಿ ನಡೆದಂತೆ. ದೈವ ಸಾಮ್ರಾಜ್ಯಕ್ಕಾಗಿ ಹಾತೊರೆಯುತ್ತಿರುವ ನಾವೆಲ್ಲರೂ, ನಮ್ಮನ್ನು ಕ್ಷಮಿಸಿ, ಪ್ರೀತಿಸಿದ ಕ್ರಿಸ್ತರ ಹೆಜ್ಜೆಯಲ್ಲಿ ಸಾಗುತ್ತಾ. ಆ ಪ್ರೀತಿಯನ್ನು ಮತ್ತೊಮ್ಮೆ ಅನುಭವಿಸಲು ಈ ಬಲಿಪೂಜೆಯಲ್ಲಿ ಪ್ರಯತ್ನ ಪಡೋಣ.
ಮೊದಲನೆಯ ವಾಚನ: ಸಿರಾಖ 27:30-28:7
=====================
ನಮ್ಮ ವೈಯಕ್ತಿಕ ಜೀವನವೇ ಒಂದು ರಣರಂಗ, ಇಲ್ಲಿ ಸತ್ಯಮಿಥ್ಯೆಗಳ ನಡುವೆ ಸದಾಚಾರ -ಅನಾಚಾರಗಳ ನಡುವೆ, ಒಳಿತುಕೆಡುಕುಗಳ ನಡುವೆ ಸಂಗ್ರಾಮ ನಡೆದೇ ಇರುತ್ತದೆ. ಕೋಪ ಮತ್ಸರ, ಅಸೂಯೆ, ದ್ವೇಷ, ಭ್ರಷ್ಟಾಚಾರ, ಮೋಸ, ವಂಚನೆಗಳನ್ನು ತೊರೆದು, ಕ್ಷಮೆ. ಪ್ರೀತಿ ತ್ಯಾಗಗಳೆಂಬ ಸಾಧನಗಳನ್ನು ಸ್ವರ್ಗ ಸಾಮ್ರಾಜ್ಯದ ಮಾರ್ಗವನ್ನಾಗಿ ಬಳಸಲು ಕರೆ ನೀಡುತ್ತಾರೆ ಯೇಸು ಸ್ವಾಮಿ.
ಎರಡನೆಯ ವಾಚನ ರೋಮನರಿಗೆ 14:7-9
==================
ನಾವು ದೇವರ ಸೃಷ್ಟಿ. ದೇವರಿಗೆ ಪ್ರಿಯರು ನಾವು ಬದುಕಿರುವುದೇ “ದೇವರಿಗಾಗಿ ಏಕೆಂದರೆ ನಾವು ದೇವರಿಗೆ ಮೀಸಲು. ಆದ್ದರಿಂದ ದೇವರ ಮಕ್ಕಳಂತೆಯೇ ಜೀವಿಸಲು ಸಂತ ಪೌಲರು ನಮಗೆ ಕರೆ ನೀಡುತ್ತಾರೆ.
ಶುಭಸಂದೇಶ – ಮತ್ತಾಯ 18:21 – 35
========================
ಅಮೇರಿಕಾದಲ್ಲಿ ವರ್ಣಭೇದದಿಂದ ಹುಟ್ಟಿದ ಹಿಂಸೆ, ಕಗ್ಗೊಲೆಗಳು ಇತಿಹಾಸದ ಪುಟಗಳಲ್ಲಿ ನೋವಿನ ಚರಿತ್ರೆಯನ್ನೆ ತುಂಬಿವೆ. ವಾಸ್ತವದಲ್ಲೂ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಲೇ ಇವೆ. ಇಂತಹ ಘಟನೆ ಒಮ್ಮೆ ಉಗಾಂಡದಲ್ಲಿ ನಡೆಯಿತು. ಬಿಳಿ ವರ್ಣೀಯನೊಬ್ಬ ಕಪ್ಪು ವರ್ಣದ ಕುಟುಂಬದ ಅಪ್ಪಮಗನನ್ನು ಭೀಕರವಾಗಿ ಕೊಂದ. ಆ ಕಾರಣ ಅವನಿಗೆ ಸೆರೆ ವಾಸವೂ ಆಯಿತು. ಕೆಲವು ತಿಂಗಳ ನಂತರ ಆ ಕೊಲೆಗಾರನನ್ನು ಭೇಟಿಯಾಗಲು ಆ ಕುಟುಂಬದ ತಾಯಿ ಜೈಲಿಗೆ ಹೋದಳು. ಕೊಲೆಗಾರನನ್ನು ಕಣ್ಣಲ್ಲಿ ಕಣ್ಣಿಟ್ಟು ನಾನು ನಿನ್ನನ್ನು ಕ್ಷಮಿಸಿದ್ದೇನೆ ಮಗು, ನನ್ನನ್ನು ನಿನ್ನ ತಾಯಿಯನ್ನಾಗಿ ಸ್ವೀಕರಿಸುವೆಯಾ ಎಂದು ಕೇಳಿಕೊಂಡಳು. ಇದನ್ನು ಕೇಳಿದ ಆ ಕೊಲೆಗಡುಕನ, ಮನಕರುಗಿತು ಅಖಿಲ ಮನದಿಂದ ಆಕೆಯ ಮಗನಾಗಿ ಹೊಸ ಮನುಷ್ಯನಾದ. ಇವತ್ತಿನ ವಾಚನಗಳು, ಮೂರು ವಿಚಾರಗಳನ್ನು ನಮ್ಮ ಮುಂದಿಡುತ್ತದೆ;
• ದೇವರದ್ದು ಕ್ಷಮಿಸುವ ಪ್ರೀತಿ. ಇದಕ್ಕೆ ಇತಿ ಮಿತಿ ಇಲ್ಲ.
• ದೇವರು ಎಂತಹ ಕಡು ಪಾಪಿಯನ್ನು ಕೂಡ ಕ್ಷಮಿಸಬಲ್ಲರು
• ಆದ್ದರಿಂದ ಅವರ ಕ್ಷಮಾದಾನಕ್ಕಾಗಿ ನಾವು ಇತರರನ್ನು ಕ್ಷಮಿಸಬೇಕು ಹಾಗೂ ದೇವರಿಂದ ಕ್ಷಮೆಯನ್ನು ಯಾಚಿಸಬೇಕು.
ಪ್ರಭು ಯೇಸು ಕ್ರಿಸ್ತರು, ತಮ್ಮ ಶಿಷ್ಯರಿಗೆ ಕಲಿಸಿಕೊಟ್ಟ ಪ್ರಾರ್ಥನೆಯಲ್ಲಿ ದೈವ ಸಾಮ್ರಾಜ್ಯದ ಆಗಮನವನ್ನು ನಾವು ಅಪೇಕ್ಷಿಸುವುವ ಮೊದಲು ಕ್ಷಮಿಸಬೇಕೆಂದು ಕರೆ ನೀಡಿದರು. ಆ ಕ್ಷಮೆಯ ಫಲವಾಗಿ ನಮಗೆ ದೇವರ ಕ್ಷಮೆ ದೊರಕುವುದು. ಇವತ್ತಿನ ಮೊದಲನೆಯ ವಾಚನದಲ್ಲೂ ಬೆನ್ ಸಿರಾಖನು ಕ್ರಿ.ಪೂ 180ರ ಸಮಯದಲ್ಲಿ ಇಸ್ರಯೇಲರಿಗೆ ತಪ್ಪಿತಸ್ಥರನ್ನು ಕ್ಷಮಿಸಲು ಕರೆ ನೀಡುತ್ತಾನೆ. ಆಗ ನಮ್ಮ ಪ್ರಾರ್ಥನೆಯ ಫಲ ನಮಗೆ ಲಭಿಸುತ್ತದೆ.
ಇವತ್ತಿನ ಎರಡನೆಯ ವಾಚನದಲ್ಲಿ ಸಂತ ಪೌಲ ರೋಮನರಿಗೆ ಹೇಳುವಂತೆ ನಾವು ಬದುಕಿರುವುದೂ, ನಾವು ಸಾಯುವುದೂ ದೇವರಿಗಾಗಿ ಏಕೆಂದರೆ ನಾವು ದೇವರಿಗೆ ಮೀಸಲಾದವರು, ದೇವರಿಗೆ ಸಮರ್ಪಿತರಾದ ನಾವು ಪ್ರಭುಕ್ರಿಸ್ತರು ಕಲಿಸಿದ ಪ್ರಾರ್ಥನೆಯನ್ನು ಜಪಿಸುವಾಗ ಆ ಸಮರ್ಪಣಾ ಮನೋಭಾವವನ್ನು ವ್ಯಕ್ತಪಡಿಸುತ್ತೇವೆ. `ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಮ್ಮ ತಪ್ಪನ್ನು ಕ್ಷಮಿಸಿರಿ ಎಂದೆನ್ನುವಾಗ ನಮ್ಮ ಬದುಕೂ ಸಾವೂ ಇತರರ ಮೇಲೆ ಪರಿಣಾಮ ಬೀರುತ್ತದೆ. ನಾವು ಇತರರಿಗೆ ತೋರಿಸುವ ಪ್ರತೀಕಾರವೂ ಪ್ರೀತಿಯೂ, ನಿರ್ಲಕ್ಷ್ಯವೂ ಕ್ಷಮೆಯೂ ಇತರರ ಮೇಲೆ ಹೇಗೊ ಹಾಗೆ ನಮ್ಮ ಮೇಲೆಯೂ ಪರಿಣಾಮವನ್ನು ಬೀರುತ್ತವೆ. ಕ್ಷಮೆಯ ಮೂಲಕ ನಾವು ದೇವರ ಮಕ್ಕಳಾಗಿದ್ದೇವೆಂದು ಸಮರ್ಥಿಸುತ್ತೇವೆ.
ನಾವು ಇಂದಿನ ಕೀರ್ತನೆಯಲ್ಲಿ ಕೇಳಿದಂತೆ ದೇವರು ಕರುಣಾಮಯಿ ಹಾಗೂ ಪ್ರೀತಿಸ್ವರೂಪಿ. ಅವರ ಸಹನೆ ಹಾಗೂ ದಯೆ ಅಪ್ರತಿಮ.
ದೇವರ ಅಪ್ರತಿಮ ಕ್ಷಮಾ ಗುಣ ನಮಗೆ ವ್ಯಕ್ತವಾಗುವುದು ಕ್ರಿಸ್ತರಲ್ಲಿ. ಇವತ್ತಿನ ಶುಭ ಸಂದೇಶದಲ್ಲಿ ನಾವು ತಿಳಿಯುವಂತೆ ಪೇತ್ರನು, ಯೇಸುವನ್ನು ಉದ್ದೇಶಿಸಿ ಪ್ರಭೂ ನಮಗೆ ತಪ್ಪು ಮಾಡಿದವರನ್ನು ನಾವು ಎಷ್ಟು ಸಲ ಕ್ಷಮಿಸಬೇಕು, ಏಳು ಸಲವೋ ಎಂದು ಕೇಳುತ್ತಾನೆ. ಯೇಸುವೋ, ಏಳು ಸಲವಲ್ಲ ಎಪ್ಪತ್ತೇಳು ಸಲ ಕ್ಷಮಿಸಬೇಕು ಎಂದು ಮರುನುಡಿಯುತ್ತಾರೆ. ಅಂದರೆ ನಾವು ನಮ್ಮ ವಿರುದ್ಧ ತಪ್ಪು ಎಸಗಿದವರನ್ನು ಎಂದೆಂದೂ ಕ್ಷಮಿಸಬೇಕು, ಲೆಕ್ಕವನ್ನಿಟ್ಟುಕೊಳ್ಳದೆ ಕ್ಷಮಿಸಲು ಸಿದ್ಧರಾಗಿರಬೇಕು ಎಂದೇ ಆಪ್ತರ ಸೃಷ್ಟೀಕರಣ `ತಪ್ಪು ಮಾಡುವುದು ಮನುಷ್ಯನ ಗುಣವಾದರೆ ಕ್ಷಮಿಸುವುದು ದೈವ ಗುಣ’ ಎಂಬ ಹೇಳಿಕೆಯನ್ನು ಪ್ರಭುಕ್ತಿಸ್ತರು ಒಂದು ನಿದರ್ಶನದ ಮೂಲಕ ತಮ್ಮ ಶಿಷ್ಯರಿಗೆ ತಿಳಿಯಪಡಿಸುತ್ತಾರೆ. ಲಕ್ಷಗಟ್ಟಲೇ ರೂಪಾಯಿ ಸಾಲ ಪಡೆದಿದ್ದ ಒಬ್ಬ ಸೇವಕನನ್ನು ಅರಸನೊಬ್ಬ ಸಂಪೂರ್ಣವಾಗಿ ಕ್ಷಮಿಸಿದ, ಎಂದರೆ ಅರಸ ಅವನ ಸಾಲವನ್ನು ಮನ್ನ ಮಾಡಿದ. ಆದರೆ ಅದೇ ಸೇವಕ ತನ್ನಿಂದ ಕೆಲವೇ ಕೆಲವು ರೂಪಾಯಿಗಳಷ್ಟು ಸಾಲ ಪಡೆದವನನ್ನು ಕಂಡಾಗ ಅವನಿಗೆ ಚಿತ್ರಹಿಂಸೆ ನೀಡಿ ಕಟುಕನಂತೆ ನಡೆದುಕೊಂಡ. ಅವನನ್ನು ನಿಷ್ಕಾರುಣ್ಯದಿಂದ ಬಂಧನದಲ್ಲಿರಿಸಿದ. ಇದು ಕೆಲ ಮಾನವನಲ್ಲಿ ಸಹಜವಾಗಿ ಕಂಡುಬರುವ ವಿಪರ್ಯಾಸ. ನಮ್ಮ ಸ್ವಾರ್ಥಕ್ಕಾಗಿ ನಾವು ಎಷ್ಟು ಬೇಕಾದರೂ ಬೇಡಿಕೊಳ್ಳಲು ಕಣ್ಣೀರು ಸುರಿಸಲೂ ಸಿದ್ಧರಿದ್ದೇವೆ. ಆದರೆ ನಮ್ಮಲ್ಲಿ ಕಣ್ಣೀರು ಸುರಿಸಿ, ಅಂಗಲಾಚಿ ಬೇಡಲು ಬಂದವರನ್ನು ಅಸಹನೆಯಿಂದ ಕಡೆಗಣಿಸುತ್ತೇವೆ.
ಕೋಪ, ದ್ವೇಷ ಹಾಗೂ ಸೇಡು ಅಶಾಂತಿಗೆ ಎಡೆಕೊಡುತ್ತವೆ. ಇದರಿಂದ ಹೊರ ಬರಲು ಒಂದೇ ಹಾದಿ. ಕ್ಷಮೆ , ಕ್ಷಮಿಸಿದರೆ ಶಾಂತಿ ಲಭ್ಯ. ಕ್ಷಮಿಸಿದಾಗ ನಮ್ಮ ಮನಸ್ಸು ಸ್ಥಿರವಾಗುತ್ತದೆ. ಜೀವನ ಭಾರ ಹಗುರವಾಗುತ್ತದೆ. ಕುಟುಂಬದಲ್ಲಿ ನಾವು ಸಂತೋಷಕ್ಕೆ ಹಾಗೂ ಆನಂದದ ಜೀವನಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಪ್ರಭುಕ್ರಿಸ್ತರು ಕೂಡ ತನ್ನ ಜೀವನ ಪರ್ಯಂತ ಕ್ಷಮಿಸುತ್ತಲೇ ಬಂದರು. ಅವರು ಶಿಲುಬೆ ಮೇಲೆ ಮಡಿಯುವಾಗ , `ಪಿತನೇ ಇವರನ್ನು ಕ್ಷಮಿಸಿ ; ತಾವೇನು ಮಾಡುತ್ತಿರುವರೆಂದು ಅವರು ಅರಿಯರು’ (ಲೂಕ 23, 24) ಎಂದು ಪ್ರಾರ್ಥಿಸಿದರು.
ಕ್ರಿಸ್ತರ ಪ್ರೇರಣೆಯಿಂದ ನಾವು ಸದಾ ಕ್ಷಮಿಸುವ ಕ್ರೈಸ್ತರಾಗಲು ಪ್ರಯತ್ನಿಸೋಣ.
==========================
ಚಿಂತನೆ – ಫಾ ಮಾರ್ಸೆಲ್ ರೊಢ್ರಿಗಸ್ ಎಸ್. ಜೆ
==========================
No comments:
Post a Comment