Monday, 23 November 2020

ಡಿಸೆಂಬರ್ 16, 2020 ಬುಧವಾರ

 ಡಿಸೆಂಬರ್ 16, 2020 ಬುಧವಾರ                        [ನೇರಳೆ]
ಮೊದಲ ವಾಚನ: ಯೆಶಾ45.6-8, 18, 21-25
ಕೀರ್ತನೆ 85:8-9, 10-11, 12-13. ಶ್ಲೋಕ.ಯೆಶಾಯ 45:8
ವರ್ಷಿಸಲಿ ಸದ್ಧರ್ಮವನು ಆಕಾಶ ಮಂಡಲ
ಸುರಿಸಲಿ ಅದನ್ನು ಗಗನ ಮಂಡಲ.
ಶುಭಸಂದೇಶ: ಲೂಕ 7.19-23
==================

ಮೊದಲನೇ ವಾಚನ
ಯೆಶಾ45.6-8, 18, 21-25
6 : ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು;
7 : ಬೆಳಕಿಗೂ ಕತ್ತಲಿಗೂ ನಾನೆ ಸೃಷ್ಟಿಕರ್ತನೆಂದು ಸುಖದುಃಖಗಳಿಗೆ ಕಾರಣಕರ್ತನೆಂದು ಸಕಲವನು ನಡೆಸುವ ಸರ್ವೇಶ್ವರ ನಾನೇ ಎಂದು.
8 : ವರ್ಷಿಸಲಿ ಸದ್ಧರ್ಮವನು ಆಕಾಶಮಂಡಲ ಸುರಿಸಲಿ ಮೇಲಿಂದ ಅದನ್ನು ಆ ಗಗನಮಂಡಲ; ಅಂಕುರಿಸಲಿ ಜೀವೋದ್ಧಾರವನು ಭೂಮಂಡಲ ಬೆಳೆಯಲಿ ಅದರೊಡನೆಯೇ ಸದ್ಧರ್ಮದ ಫಲ, ಸರ್ವೇಶ್ವರನಾದ ನಾನೇ ಕರ್ತ ಇದಕ್ಕೆಲ್ಲ.” ಸರ್ವೇಶ್ವರ ಸೃಷ್ಟಿಗೂ ಇತಿಹಾಸಕ್ಕೂ ಕರ್ತ
18 : ಕೇಳಿ, ಆಕಾಶಮಂಡಲವನ್ನು ಸೃಷ್ಟಿಸಿದ ಸರ್ವೇಶ್ವರನ ಮಾತನ್ನು: ಭೂಲೋಕವನು ನಿರ್ಮಿಸಿ, ರೂಪಿಸಿ, ಸ್ಥಾಪಿಸಿದ ದೇವರು ಆತನು. ಅದನ್ನು ಶೂನ್ಯಸ್ಥಾನವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದವನು ಆತನು. ಅಂಥವನು ಇಂತೆನ್ನುತ್ತಾನೆ: “ಸರ್ವೇಶ್ವರ ನಾನೇ; ನಾನಲ್ಲದೆ ಇನ್ನಾರೂ ಇಲ್ಲ.
21 : ಹೇಳಿ, ನ್ಯಾಯಸ್ಥಾನಕ್ಕೆ ಬಂದು ನಿಮ್ಮ ವಾದವನ್ನು ಮಂಡಿಸಿ; ನಿಮ್ಮ ದೇವರುಗಳು ತಮ್ಮತಮ್ಮೊಳಗೆ ಪರ್ಯಾಲೋಚಿಸಿ ನೋಡಲಿ. ಪ್ರಾರಂಭದಿಂದಲೂ ಈ ವಿಷಯವನ್ನು ಪ್ರಕಟಿಸಿದವರು ಯಾರು? ಅದು ನಡೆಯುವುದಕ್ಕೆ ಮುಂಚೆಯೇ ತಿಳಿಸಿದವನು ನಾನಲ್ಲದೆ ಇನ್ಯಾರು? ನನ್ನ ಹೊರತು ಇನ್ನು ಯಾವ ದೇವರೂ ಇಲ್ಲ; ನಾನಲ್ಲದೆ ಸತ್ಯಸ್ವರೂಪವನು, ಉದ್ಧಾರಕನು ಆದ ದೇವನಿಲ್ಲವೇ ಇಲ್ಲ.
22 : “ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ.
23 : ಪ್ರತಿಯೊಬ್ಬರು ಮೊಣಕಾಲೂರುವರು ನನಗೆ ಎಲ್ಲರು ನಾನೇ ದೇವರೆಂದು ಮಾಡುವರು ಪ್ರತಿಜ್ಞೆ. ಆ ನುಡಿ ಹೊರಟಿದೆ ನನ್ನ ಸತ್ಯದ ಬಾಯಿಂದ ಅದನ್ನು ಹಿಂತೆಗೆಯೆನು ನನ್ನ ಮೇಲಿಟ್ಟ ಆಣೆಯಿಂದ.
24 : “ಜೀವೋದ್ಧಾರವು, ಶಕ್ತಿಯು ಸರ್ವೇಶ್ವರನಲ್ಲಿ ಮಾತ್ರ ಉಂಟು ಆತನ ವಿರೋಧಿಗಳೆಲ್ಲರೂ ಆತನನ್ನೇ ಮರೆಹೋಗುವರು ನಾಚಿಕೆಪಟ್ಟು.
25 : ಪಡೆವರು ಇಸ್ರಯೇಲಿನ ವಂಶಜರೆಲ್ಲರು ಸರ್ವೇಶ್ವರನಲ್ಲೇ ಜೀವೋದ್ಧಾರವನು, ಆನಂದವನು.”
===================
ಕೀರ್ತನೆ 
ಕೀರ್ತನೆ 85:8-9, 10-11, 12-13. ಶ್ಲೋಕ.ಯೆಶಾಯ 45:8
ವರ್ಷಿಸಲಿ ಸದ್ಧರ್ಮವನು ಆಕಾಶ ಮಂಡಲ
ಸುರಿಸಲಿ ಅದನ್ನು ಗಗನ ಮಂಡಲ.
8 : ನಾ ಕೇಳುತ್ತಿರುವೆನು, ಪ್ರಭು ಹೇಳುವುದನು / 
ತನ್ನ ಜನರಿಗಾತ ನುಡಿವುದು ಶಾಂತಿಯನು / 
ಇನ್ನಾದರು ತೊರೆಯೋಣ ಮೂರ್ಖತೆಯನು //
9 : ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ / 
ಇದರಿಂದಾತನ ಮಹಿಮೆ ನಾಡಿಲ್ಲಿರುವುದು ನಿರುತ //
10 : ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು / 
ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು //
11 : ಸತ್ಯತೆಯು ಹುಟ್ಟುವುದು ಭೂಮಿಯಿಂದ / 
ನೀತಿಯು ದೃಷ್ಟಿಸುವುದು ಗಗನದಿಂದ //
12 : ಪ್ರಭು ಕೊಟ್ಟೇ ತೀರುವನು ಒಳಿತನು / 
ನಮ್ಮ ನಾಡು ನೀಡುವುದು ಬೆಳೆಯನು //
13 : ನಡೆವುದು ಪ್ರಭುವಿನ ಮುಂದೆ ನೀತಿ / 
ಮಾಡುವುದು ಆತನ ಹೆಜ್ಜೆಗೆ ಹಾದಿ //
===================
ಶುಭಸಂದೇಶ
ಲೂಕ 7.19-23
19 : ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, “ಬರಬೇಕಾದವರು ನೀವೋ ಅಥವಾ ಬೇರೊಬ್ಬರಿಗಾಗಿ ನಾವು ಎದುರು ನೋಡಬೇಕೋ?” ಎಂದು ಯೇಸುಸ್ವಾಮಿಯನ್ನು ಕೇಳಲು ಅವರ ಬಳಿಗೆ ಕಳುಹಿಸಿದನು.
20 : ಆ ಶಿಷ್ಯರು ಯೇಸುವಿನ ಬಳಿಗೆ ಬಂದು, ಬರಬೇಕಾದವರು ನೀವೋ ಅಥವಾ ನಾವು ಬೇರೊಬ್ಬರನ್ನು ಎದುರು ನೋಡಬೇಕೊ ಎಂದು ವಿಚಾರಿಸಲು ಸ್ನಾನಿಕ ಯೊವಾನ್ನ ನಮ್ಮನ್ನು ತಮ್ಮ ಬಳಿಗೆ ಕಳುಹಿಸಿದ್ದಾರೆ,” ಎಂದರು.
21 : ಅದೇ ಸಮಯದಲ್ಲಿ ಯೇಸು ರೋಗರುಜಿನಗಳಿಂದ ನರಳುತ್ತಿದ್ದ ಹಾಗೂ ದೆವ್ವ ಹಿಡಿದಿದ್ದ ಅನೇಕರನ್ನು ಗುಣಪಡಿಸುತ್ತಿದ್ದರು ಮತ್ತು ಹಲವು ಮಂದಿ ಕುರುಡರಿಗೆ ದೃಷ್ಟಿಯನ್ನು ದಯಪಾಲಿಸುತ್ತಿದ್ದರು.
22 : ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಕಂಡದ್ದನ್ನೂ ಕೇಳಿದ್ದನ್ನೂ ಯೊವಾನ್ನನಿಗೆ ಹೋಗಿ ತಿಳಿಸಿರಿ: ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ.
23 : ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು,” ಎಂದು ಹೇಳಿ ಕಳುಹಿಸಿದರು.
===================
ಚಿಂತನೆ
ಯೇಸು ಯಾರೆಂಬುದು ಹಲವರಲ್ಲಿದ್ದ ಪ್ರಶ್ನೆ. ಕಳೆದ ಮೂರು ವರ್ಷಗಳಲ್ಲಿ ಈತ ದಾವೀದ ಕುವರ, ಯೆಹೂದ್ಯರ ಅರಸನೆಂದು ಕರೆಯಲ್ಪಟ್ಟವ. ಆದರೆ ಕೋಟೆಕೊತ್ತಲೆ, ಅರಮನೆ, ರಾಜಸೇವಕರು, ಕಿರೀಟ, ರಾಜದಂಡಗಳ ಬದಲಿಗೆ ಹಾದಿ ಬೀದಿಗಳಲ್ಲಿ ಕುಂಟರು, ಕುರುಡರು, ಕಿವಿಡರುಗಳಿಗೆ ಶಾರೀರಿಕ ಸ್ವಾಸ್ಥ್ಯ ನೀಡುತ್ತಾ, ಸತ್ತವರನ್ನು ಎಬ್ಬಿಸುತ್ತಾ, ಪಾಪಿಗಳ ಸ್ನೇಹಿತನಾಗಿದ್ದವ. ಈತ ಪ್ರವಾದಿಯೋ ಅಥವಾ ಬರಬೇಕಾಗಿದ್ದ ಲೋಕೋದ್ಧಾರಕನೋ ಎಂಬುದು ಇತರ ಯೆಹೂದ್ಯರಂತೆ ಸ್ನಾಪಕ ಯೊವಾನ್ನನಿಗೂ ಇದ್ದ ಗೊಂದಲವಾಗಿತ್ತು. ಇದ್ದ ಗೊಂದಲವನ್ನು ನಿವಾರಿಸಲು ಯೇಸು ತನ್ನ ಶಿಷ್ಯರನ್ನು ಕಳುಹಿಸಿದ ಯೊವಾನ್ನನಿಗೆ ಪ್ರತ್ಯುತ್ತರ ನೀಡಿದ್ದು ಕೇವಲ ಅಹುದು ಅಲ್ಲ ಎಂಬ ಹೇಳಿಕೆಯಿಂದಲ್ಲ ಬದಲಿಗೆ ತನ್ನ ಕಾರ್ಯಗಳ ಸಾಕ್ಷಿಯಿಂದ. 
ನಾವು ಯಾರೆಂಬುದನ್ನು ಕೇವಲ ನಮ್ಮ ಮಾತಿನಿಂದ ಸಮರ್ಥಿಸಲು ಪ್ರಯತ್ನಿಸುವ ನಮಗೆ ಯೇಸುವಿನ ಕಾರ್ಯಗಳು ಪಾಠಗಳಾಗಿವೆ. ನಮ್ಮನ್ನು, ನಮ್ಮ ವ್ಯಕ್ತಿತ್ವವನ್ನು ನಮ್ಮ ಕೆಲಸಗಳು ನಿರ್ಧರಿಸುತ್ತವೆಯೇ ವಿನಾ ಬರೇ ನಮ್ಮ ಮಾತುಗಳಲ್ಲ. ಇನ್ನಾದರೂ ನಮ್ಮ ಕಾರ್ಯಗಳಲ್ಲಿ, ನಮ್ಮ ಕರ್ತವ್ಯಗಳಲ್ಲಿ ನಿಷ್ಠರಾಗಿರೋಣ. 
===================

No comments:

Post a Comment