Thursday, 26 November 2020

ಅಕ್ಟೋಬರ್ 16, 2020 ಶುಕ್ರವಾರ

 ಅಕ್ಟೋಬರ್ 16, 2020 ಶುಕ್ರವಾರ                        [ಹಸಿರು]

ಸಂತ ಹೆಡ್ವಿಗ್, ಧಾರ್ಮಿಕ ವ್ಯಕ್ತಿ (ಸ್ಮರಣೆ)

ಸಂತ ಮಾರ್ಗರೆಟ್ ಮೇರಿ ಅಲಕೊಕ್, ಕನ್ಯೆ (ಐಚ್ಛಿಕ ಸ್ಮರಣೆ)

ಪುನೀತ ಆಗಸ್ಟಿನ್ ತೇವರಾಪರಂಬಿಲ್, ಯಾಜಕ

ಮೊದಲ ವಾಚನ: ಎಫೆಸದವರಿಗೆ 1.11-14

ಕೀರ್ತನೆ 33:1-2, 4-5, 12-13 ಶ್ಲೋಕ.12

ಸಜ್ಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಲೂಕ 12.1-7

==================

ಮೊದಲನೇ ವಾಚನ

ಎಫೆಸದವರಿಗೆ 1.11-14

11 : ದೈವಯೋಜನೆಯಂತೆಯೇ ಸಕಲವೂ ಸಂಭವಿಸುತ್ತದೆ. ದೇವರು ಆದಿಯಲ್ಲೇ ಸಂಕಲ್ಪಸಿದ್ದಂತೆ ತಮ್ಮ ಚಿತ್ತಕ್ಕನುಗುಣವಾಗಿ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಮ್ಮನ್ನು ತಮ್ಮವರನ್ನಾಗಿ ಆರಿಸಿಕೊಂಡರು.

12 : ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.

13 : ನೀವು ಸಹ ಸತ್ಯವಾಕ್ಯವನ್ನು ಅಂದರೆ, ನಿಮಗೆ ಜೀವೋದ್ದಾರವನ್ನೀಯುವ ಶುಭಸಂದೇಶವನ್ನು ಕೇಳಿ ಯೇಸುಕ್ರಿಸ್ತರಲ್ಲಿ ವಿಶ್ವಾಸ ಇಟ್ಟಿರಿ. ದೇವರು ವಾಗ್ದಾನಮಾಡಿದ ಪವಿತ್ರಾತ್ಮ ಅವರಿಂದ ಮುದ್ರಿತರಾದಿರಿ.

14 : ಹೀಗೆ ದೇವರಿಗೆ ಸೇರಿದವರು ವಿಮೋಚನೆ ಹೊಂದಿ ಸ್ವರ್ಗೀಯ ಸ್ವಾಸ್ಥ್ಯಕ್ಕೆ ಬಾಧ್ಯರಾಗಲು ಆ ಪವಿತ್ರಾತ್ಮರೇ ಆಧಾರ. ಈ ಕಾರಣ ದೇವರಿಗೆ ಮಹಿಮೆ ಸಲ್ಲಲಿ.

===================

ಶುಭಸಂದೇಶ

==========

ಲೂಕ 12.1-7

1 : ಇಷ್ಟರಲ್ಲೇ, ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, “ಫರಿಸಾಯರ ‘ಹುಳಿ ಹಿಟ್ಟಿನ’ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ.

2 : ಮುಚ್ಚಯಮರೆಯಾಗಿರುವುದೆಲ್ಲಾ ಬಟ್ಟ ಬಯಲಾಗುವುದು; ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು.

3 : ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು; ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು,” ಎಂದರು.

4 : “ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ: ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು.

5 : ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ: ಸತ್ತ ಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿ ಹೇಳುತ್ತೇನೆ.

6 : “ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ.

7 : ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು ಎಂದರು.

===================

ಚಿಂತನೆ

ಬದುಕಿನ ಜಂಜಾಟಗಳೇ ಹೀಗೆ, ಯಾವುದನ್ನೋ ಸಾಬೀತು ಪಡಿಸಲು, ಯಾರದ್ದೋ ಮನವೊಲಿಸಲು, ಹತ್ತಾರು ಮಾತಿನೊಳಗೆ ನೂರಾರು ವೇಷಧಾರಿಗಳಾಗುತ್ತೇವೆ. ಇಷ್ಟವಿಲ್ಲದಿದ್ದರೂ, ಕಡೇಪಕ್ಷ ಅನಿವಾರ್ಯಕ್ಕಾದರೂ ನಾವಲ್ಲದ್ದನ್ನು ನಾವೆಂದೋ, ನಾವಿರುವುದನ್ನು ಅಲ್ಲಗಳೆದೋ ಬೀಸುವ ದೊಣ್ಣೆಯ ಪೆಟ್ಟಿನಿಂದ ತಪ್ಪಿಸಿಕೊಳ್ಳುತ್ತೇವೆ.  

ಆದರೆ ಎಲ್ಲವನ್ನೂ ಬಲ್ಲ ದೇವರೊಂದಿಗೆ  ಈ  ಕಣ್ಣಾಮುಚ್ಚಾಲೆಯಾಟ  ನಡೆಯದು. ಕಾರಣ ದೇವರಿಗೆ ಬೇಕಿರುವುದು ನಮ್ಮ ನೈಜತೆ. 

ನಮ್ಮನ್ನು ಅರಿಯದ ಜನರಿಗೆ ನಾವು ಸಲ್ಲುವವರೆನಿಸಲು ಮುಖವಾಡಗಳನ್ನು ತೋರಿಸುವ ನಾವು ದೇವರ ಮುಂದೆ ಬೆತ್ತಲೆ ಎಂಬುದನ್ನು ಮರೆಯಬಾರದು. ದೇವರು ಪರಮಜ್ಞಾನಿ, ಎಲ್ಲವನ್ನು, ಎಲ್ಲರನ್ನು, ಎಲ್ಲದರ, ಎಲ್ಲರೊಳಗಿನ ಉದ್ದೇಶವನ್ನೂ ಅರಿತವನೇ ಆತ. ಬದುಕಿನ ಮುಂದಿನ ಹಾದಿ, ತಿರುವುಗಳ ಬಗೆಗೆ ನಮಗಿರುವ ಭಯ ಆತಂಕಗಳನ್ನು ದೇವಾಲಯದ ಕಾಣಿಕೆ. ಬೊಕ್ಕಸದೊಳಗೊಂದು ಕಾಸು ಹಾಕಿ ಸುಮ್ಮನಾಗಿಸಲಾಗುವುದಿಲ್ಲ. ನೂರಾರು ಪುಣ್ಯಕ್ಷೇತ್ರಗಳಿಗೆ ಭೇಟಿಯಿತ್ತು ಮುಂಬರುವ ಸಮರಗಳನ್ನು ಶಮನಗೊಳಿಸಲಾಗುವುದಿಲ್ಲ. ಬದಲಿಗೆ ದೇವರಿಗೆ ಬೇಕಾದದ್ದು ನಮ್ಮ ಸಂಪೂರ್ಣ ಶರಣಾಗತಿ; ಇಲ್ಲದನ್ನು ಒಪ್ಪುವ, ಇರುವುದನ್ನು ಅಪ್ಪುವ ಒಂದು ಬಗೆಯ ಆತ್ಮತೃಪ್ತಿ; ನಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದಾದ ನಾಳೆಗಳ ಬಗೆಗಿನ ನಮ್ಮ ಯೋಚನೆಯನ್ನು, ನಾಳೆಗಳಿಗೇನೂ ಕೂಡಿಡದ ಗುಬ್ಬಚ್ಚಿಗಳ ಸಂತಸ, ಹುಲುಸಾಗಿ ಬೆಳೆಯುವ ಬಯಲಿನ ಹಸಿರು, ಇವುಗಳಿಂದ ನೋಡಿ ಕಲಿಯುವ ತೆರೆದ ಮನಸ್ಸು. ಇದುವೇ ಇಂದಿನ ಶುಭಸಂದೇಶ ನಾವು ಕಲಿಯುವಂತೆ ಪ್ರೇರಿಸುವುದು.

ಆದ್ದರಿಂದ ನಮ್ಮನ್ನು ದೇವರಿಂದ ದೂರವಾಗಿಸುವುದಕ್ಕಾಗಿ ಮಾತ್ರ ಭಯಪಡೋಣ; ಮಿಕ್ಕಿದ್ದನ್ನು ದೇವರಿಗೆ ಬಿಟ್ಟು, ಆತನ ಸುರಕ್ಷತೆಯ ಕರಗಳಲ್ಲಿ ವಿರಮಿಸುತ್ತಾ ಬದುಕೋಣ.

===================

No comments:

Post a Comment