Sunday, 22 November 2020

ಸೆಪ್ಟೆಂಬರ್ 18, 2020 ಶುಕ್ರವಾರ

 ಸೆಪ್ಟೆಂಬರ್ 18, 2020 ಶುಕ್ರವಾರ                        [ಹಸಿರು]
ಮೊದಲ ವಾಚನ: 1 ಕೊರಿಂಥಿಯರಿಗೆ 15.12-20
ಕೀರ್ತನೆ 17:1, 6-7, 8, 15. ಶ್ಲೋಕ.15
ಪ್ರಭೂ, ನಿನ್ನ ಮುಖದರ್ಶನದಿಂದ 
ನಾನು ಎಚ್ಚೆತ್ತು ತೃಪ್ತನಾಗುವೆನು
ಶುಭಸಂದೇಶ: ಲೂಕ 8.1-3
==================
1 ಕೊರಿಂಥಿಯರಿಗೆ 15.12-20
12 : ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದರು ಎಂದು ನಾವು ಸಾರುತ್ತಿರುವಲ್ಲಿ, ಸತ್ತವರು ಪುನರುತ್ಥಾನರಾಗುವುದಿಲ್ಲ ಎಂದು ನಿಮ್ಮಲ್ಲಿ ಕೆಲವರು ವಾದಿಸುವುದು ಹೇಗೆ?
13 : ಸತ್ತವರಿಗೆ ಪುನರುತ್ಥಾನ ಇಲ್ಲವೆಂಬುದು ನಿಜವಾದರೆ ಕ್ರಿಸ್ತಯೇಸು ಪುನರುತ್ಥಾನ ಹೊಂದಲಿಲ್ಲ ಎಂದ ಹಾಗಾಯಿತು
14 : ಕ್ರಿಸ್ತಯೇಸು ಪುನರುತ್ಥಾನರಾಗಲಿಲ್ಲ ಎಂದರೆ ನಮ್ಮ ಬೋಧನೆ ಬರಿದು; ನಿಮ್ಮ ವಿಶ್ವಾಸವೂ ಬರಿದು.
15 : ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂಬುದು ನಿಜವಾದರೆ ದೇವರು ಕ್ರಿಸ್ತಯೇಸುವನ್ನು ಪುನರುತ್ಥಾನಗೊಳಿಸಿಲ್ಲ ಎಂದಂತಾಯಿತು. ದೇವರು ಕ್ರಿಸ್ತಯೇಸುವನ್ನು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆ ಎಂದು ಸಾಕ್ಷಿ ಹೇಳಿದ ನಾವು ಆಗ ದೇವರ ಬಗ್ಗೆಯೇ ಸುಳ್ಳುಸಾಕ್ಷಿ ಹೇಳಿದಂತಾಯಿತು.
16 : ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದರೆ ಕ್ರಿಸ್ತಯೇಸುವು ಪುನರುತ್ಥಾನ ಹೊಂದಲಿಲ್ಲ ಎಂದಂತಾಯಿತು.
17 : ಕ್ರಿಸ್ತಯೇಸುವೇ ಪುನರುತ್ಥಾನ ಹೊಂದಿಲ್ಲ ಎಂದಮೇಲೆ ನಿಮ್ಮ ವಿಶ್ವಾಸವೇ ನಿರರ್ಥಕ; ಮತ್ತು ನೀವಿನ್ನೂ ನಿಮ್ಮ ಪಾಪಗಳಲ್ಲಿಯೇ ಮುಳುಗಿದ್ದೀರಿ;
18 : ಅಷ್ಟೇ ಅಲ್ಲದೆ, ಕ್ರಿಸ್ತಯೇಸುವಿನಲ್ಲಿ ಮೃತರಾದವರೆಲ್ಲರೂ ವಿನಾಶವಾದರು.
19 : ಕ್ರಿಸ್ತಯೇಸುವಿನಲ್ಲಿ ನಮಗಿರುವ ನಂಬಿಕೆ ಕೇವಲ ಬದುಕಿಗೆ ಸೀಮಿತವಾಗಿದ್ದರೆ ಜಗತ್ತಿನಲ್ಲಿ ನಮಗಿಂತ ನಿರ್ಭಾಗ್ಯರು ಬೇರೆ ಯಾರೂ ಇಲ್ಲ.
20 : ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.
=======
ಕೀರ್ತನೆ 17:1, 6-7, 8, 15. ಶ್ಲೋಕ.15
ಪ್ರಭೂ, ನಿನ್ನ ಮುಖದರ್ಶನದಿಂದ 
ನಾನು ಎಚ್ಚೆತ್ತು ತೃಪ್ತನಾಗುವೆನು
1 : ಲಕ್ಷ್ಯವಿಡು, ಓ ಪ್ರಭು, ಎನ್ನ ನ್ಯಾಯವಾದ ಮೊರೆಗೆ / 
ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ //
6 : ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ / 
ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ //
7 : ಶರಣರನು ಶತ್ರುವಿನಿಂದ ಸಂರಕ್ಷಿಸುವಾತ ನೀನಯ್ಯಾ / 
ಭುಜಬಲವನು ಪ್ರಯೋಗಿಸಿ ಕಾಪಾಡುವಾತ ನೀನಯ್ಯಾ / 
ನಿನ್ನಚಲ ಪ್ರೀತಿಯನ್ನಚ್ಚರಿಯಿಂದ ತೋರ್ಪಡಿಸಯ್ಯಾ //
8 : ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ / 
ಸುತ್ತುವರೆದಿರುವ ಪ್ರಾಣ ವೈರಿಗಳಿಂದ  //
15 : ಸತ್ಯಸಂಧನಾದ ನಾನೊ ಸೇರುವೆ ನಿನ್ನ ಸಾನ್ನಿಧ್ಯವನು / 
ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು //
===================
ಶುಭಸಂದೇಶ
ಲೂಕ 8.1-3
1 : ತರುವಾಯ ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರ ಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು.
2 : ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು,
3 : ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರಮಾಡುತ್ತಿದ್ದರು. ಬಿತ್ತುವವನ ಸಾಮತಿ (ಮತ್ತಾ. 13.1-9; ಮಾರ್ಕ 4.1-9)
============
ಚಿಂತನೆ
"ದೇವರ ರಕ್ಷಣಾ ಚರಿತ್ರೆಯಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ. ಮಹಿಳೆಯರು ಮೃದು ಸ್ವಭಾವದವರು ಎಲ್ಲಿಯಾದರೂ ಪ್ರಾರ್ಥನಾ ಕೂಟವಿದ್ದರೆ, ಬಲಿಪೂಜೆ ಇದ್ದರೆ ಹೆಚ್ಚಾಗಿ ಸೇರುವವರೇ ಮಹಿಳೆಯರು.
ಯೇಸುಸ್ವಾಮಿಗೂ  ಅನೇಕ ಮಹಿಳೆಯರು ಸಹಾಯಮಾಡುತ್ತಿದ್ದರು. ಅನೇಕ ಮಹಿಳೆಯರು ತಮ್ಮಲ್ಲಿದ್ದ ಶ್ರೀಮಂತಿಕೆ ಮತ್ತು ಸಂಪತ್ತಿನಿಂದ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು. ಮಹಿಳೆಯರಲ್ಲಿ ಮಾತೃ ಹೃದಯವಿರುವುದರಿಂದ ದೇವರ ಕೆಲಸಕಾರ್ಯಗಳಲ್ಲಿ ತಮ್ಮನ್ನೆ ತೊಡಗಿಸಿಕೊಳ್ಳುತ್ತಾರೆ. ಇಂತಹ ಮಹಿಳೆಯರನ್ನು ಗೌರವಿಸಿ ಅವರಿಗೆ ಸ್ಥಾನಮಾನ ಕಲ್ಪಿಸಿದಲ್ಲಿ ಧರ್ಮಸಭೆ ಇನ್ನಷ್ಟು ಮುನ್ನಡೆ ಮತ್ತು ಸೇವಾ ಕಾರ್ಯ ಸಾಧಿಸುವುದರಲ್ಲಿ ಸಂಶಯವಿಲ್ಲ.
==================="

No comments:

Post a Comment