ಅಕ್ಟೋಬರ್ 18, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 29ನೇ ಭಾನುವಾರ
ಮೊದಲ ವಾಚನ: ಯೆಶಾಯ 45.1, 4-6
ಕೀರ್ತನೆ 96:1, 3, 4-5, 7-8, 9-10. ಶ್ಲೋಕ.7
ಶಕ್ತಿಸಾಮಥ್ರ್ಯ ಪ್ರಭುವಿನದೆ ಎಂದು ಜಗದರಾಷ್ಟ್ರಗಳು ಘನಪಡಿಸಲಿ
ಎರಡನೇ ವಾಚನ: 1 ಥೆಸಲೋನಿಯರಿಗೆ 1.1-5
ಶುಭಸಂದೇಶ: ಮತ್ತಾಯ 22.15-21
-------------------------
ಸಂತ ಲೂಕ, ಶುಭಸಂದೇಶಕರ್ತ
==================
ಮೊದಲನೇ ವಾಚನ
ಯೆಶಾಯ 45.1, 4-6
1 : ಇಂತೆಂದರು ಸರ್ವೇಶ್ವರ ತಾನು ಅಭಿಷೇಕಿಸಿದ ಕೋರೆಷನಿಗೆ “ರಾಷ್ಟ್ರಗಳನ್ನು ನೀ ಸದೆಬಡಿಯುವಂತೆ ರಾಜಮಹಾರಾಜರನು ನಿಶ್ಯಸ್ತ್ರರನ್ನಾಗಿ ಮಾಡುವಂತೆ ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನು ತೆರೆಯುವಂತೆ ನಾನಿನ್ನ ಕೈಹಿಡಿದು ನಡೆಸುವೆನು ಮುಂದೆ.
4 : ನನ್ನ ಸೇವಕನಾದ ಯಕೋಬನ ನಿಮಿತ್ತ ನಾನು ಆರಿಸಿಕೊಂಡ ಇಸ್ರಯೇಲಿನ ನಿಮಿತ್ತ ನನ್ನ ಅರಿವೇ ಇಲ್ಲದ ನಿನ್ನನು ಹೆಸರುಹಿಡಿದು ಕರೆದಿರುವೆನು, ಬಿರುದಿತ್ತು ಸನ್ಮಾನಿಸಿರುವೆನು.
5 : ಸರ್ವೇಶ್ವರ ನಾನಲ್ಲದೆ ಬೇರಾರು ಅಲ್ಲ ನನ್ನ ಹೊರತು ಯಾವ ದೇವರು ಇಲ್ಲ. ನೀನು ನನ್ನನು ಅರಿಯದವನಾಗಿರುವೆ ಆದರೂ ನಿನ್ನನ್ನು ಶಸ್ತ್ರಧಾರಿಯಾಗಿಸುವೆ.
6 : ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು;
===================
ಕೀರ್ತನೆ
ಕೀರ್ತನೆ 96:1, 3, 4-5, 7-8, 9-10. ಶ್ಲೋಕ.7
ಶಕ್ತಿಸಾಮಥ್ರ್ಯ ಪ್ರಭುವಿನದೆ ಎಂದು
ಜಗದರಾಷ್ಟ್ರಗಳು ಘನಪಡಿಸಲಿ
1 : ಹೊಸಗೀತೆಯನು
ಹಾಡಿರಿ ಪ್ರಭುವಿಗೆ /
ವಿಶ್ವವೆಲ್ಲವು ಹಾಡಲಿ
ಆತನಿಗೆ //
3 : ಪ್ರಸಿದ್ಧಪಡಿಸಿರಿ ಆತನ
ಘನತೆಯನು ರಾಷ್ಟ್ರಗಳಿಗೆ |
ಆತನದ್ಭುತ ಕಾರ್ಯಗಳನು
ಸಕಲ ಜನಾಂಗಗಳಿಗೆ ||
4 : ಏಕೆನೆ ಮಹಾತ್ಮನು ಪ್ರಭು,
ಬಲು ಸ್ತುತ್ಯರ್ಹನು |
ಸಕಲ ದೇವರುಗಳಿಗಿಂತಲೂ
ಘನ ಗಂಭೀರನು ||
5 : ಶೂನ್ಯ ಪ್ರತಿಮೆಗಳು
ಅನ್ಯರಾಷ್ಟ್ರಗಳ ದೇವರುಗಳೆಲ್ಲ |
ಪ್ರಭುವಿನಿಂದಲೇ ಉಂಟಾಯಿತು
ಆಕಾಶ ಮಂಡಲವೆಲ್ಲ ||
7 : ಶಕ್ತಿಸಾಮಥ್ರ್ಯ
ಪ್ರಭುವಿನದೇ ಎಂದು |
ಜಗದ ರಾಷ್ಟ್ರಗಳು ಘನಪಡಿಸಲಿ
ಆತನನು ಎಂದೆಂದು ||
8 : ಆತನ ನಾಮಕೆ ತನ್ನಿ
ಘನತೆಗೌರವವನು |
ಆತನ ಮಂದಿರಕೆ ಬನ್ನಿ
ಕಾಣಿಕೆ ಹೊತ್ತು ||
9 : ಪ್ರಭುವಿಗೆ ಮಣಿಯಿರಿ
ಪವಿತ್ರ ವಸ್ತ್ರಧಾರಿಗಳಂತೆ |
ಅಂಜಿಕೆಯಿಂದ ನಡುಗಲಿ
ಜಗವಿಡೀ ಆತನ ಮುಂದೆ ||
10 : ಪ್ರಭು ರಾಜನೆಂದು
ಸಾರಿರಿ ರಾಷ್ಟ್ರಗಳಿಗೆ |
ಕದಲದ ಸ್ಥಿರತೆಯನು
ಇತ್ತಿಹನು ಧರೆಗೆ |
ನ್ಯಾಯವಾದ ತೀರ್ಪು
ಕೊಡುವನು ಜನಾಂಗಕೆ ||
==================
ಎರಡನೇ ವಾಚನ
1 ಥೆಸಲೋನಿಯರಿಗೆ 1: 1 - 5
1 : ಪಿತನಾದ ದೇವರ ಹಾಗೂ ಪ್ರಭುವಾದ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿರುವ ಥೆಸಲೋನಿಕದ ಸಭೆಯವರಿಗೆ ಪೌಲ, ಸಿಲ್ವಾನ ಹಾಗೂ ತಿಮೊಥೇಯ ಇವರು ಬರೆಯುವ ಪತ್ರ. ದೈವಾನುಗ್ರಹವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ !
2 : ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ನಿರಂತರ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
3 : ವಿಶ್ವಾಸಭರಿತವಾದ ನಿಮ್ಮ ಕಾರ್ಯವನ್ನೂ ಪ್ರೀತಿಪೂರಿತವಾದ ನಿಮ್ಮ ದುಡಿಮೆಯನ್ನೂ ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ಅಚಲ ನಿರೀಕ್ಷೆಯನ್ನೂ ತಂದೆಯಾದ ದೇವರ ಸನ್ನಿಧಿಯಲ್ಲಿ ಜ್ಞಾಪಿಸಿಕೊಳ್ಳುತ್ತೇವೆ.
4 : ಸಹೋದರರೇ, ನೀವು ದೇವರಿಗೆ ಪ್ರಿಯರು; ದೇವರಿಂದಲೇ ಆಯ್ಕೆಗೊಂಡವರು ಎಂದು ನಾವು ಬಲ್ಲೆವು.
5 : ನಮ್ಮ ಶುಭಸಂದೇಶ ಕೇವಲ ಬಾಯಿ ಮಾತಿನದಲ್ಲ; ಅದು ಶಕ್ತಿಪೂರ್ಣವಾಗಿ ಪವಿತ್ರಾತ್ಮರ ಸಮೇತವಾಗಿ ಪೂರ್ಣ ಪ್ರಮಾಣದಿಂದ ಬಂದದ್ದು. ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ.
==========
ಶುಭಸಂದೇಶ
ಮತ್ತಾಯ 22.15-21
15 : ಅನಂತರ ಫರಿಸಾಯರು ಒಟ್ಟುಗೂಡಿ ಯೇಸುವನ್ನು ಹೇಗೆ ಮಾತಿನಲ್ಲಿ ಸಿಲುಕಿಸುವುದೆಂದು ಸಮಾಲೋಚನೆ ಮಾಡಿಕೊಂಡರು.
16 : ತಮ್ಮ ಶಿಷ್ಯರನ್ನು ಹೆರೋದನ ಪಕ್ಷದ ಕೆಲವರ ಸಮೇತ ಸ್ವಾಮಿಯ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು; ಎಂದೇ, ಸ್ಥಾನಮಾನಗಳಿಗೆ ಮಣಿಯದವರು. ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತಿದೆ.
17 : ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆಕೊಡುವುದು ಧರ್ಮಸಮ್ಮತವೋ ಅಲ್ಲವೋ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುವಿರಾ?” ಎಂದು ಕೇಳಿದರು.
18 : ಯೇಸು ಅವರ ಕುತಂತ್ರವನ್ನು ಅರಿತುಕೊಂಡು, “ಕಪಟಿಗಳೇ, ನನ್ನನ್ನೇಕೆ ಪರೀಕ್ಷಿಸುತ್ತೀರಿ?
19 : ತೆರಿಗೆಗೆಂದು ಕೊಡಬೇಕಾದ ನಾಣ್ಯವನ್ನು ತೋರಿಸಿ,” ಎಂದರು. ಅವರೊಂದು ನಾಣ್ಯವನ್ನು ತಂದುಕೊಟ್ಟರು.
20 : ಆಗ ಯೇಸು, “ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು.
21 : ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು. “ಹಾಗಾದರೆ, ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಯೇಸು ಉತ್ತರಕೊಟ್ಟರು.
===================
ಚಿಂತನೆ
ಜಾಗತಿಕ ಧರ್ಮಪ್ರಚಾರದ ಭಾನುವಾರ
“ಧರ್ಮ ಪ್ರಚಾರ ಕಾರ್ಯ ಮಿಶನರಿಗಳಿಗೆ ಮಾತ್ರ ಸೀಮಿತವಾದುದಲ್ಲ ಪ್ರತಿಯೊಬ್ಬ ಕ್ರೈಸ್ತಭಕ್ತರ ಜವಾಬ್ದಾರಿಯಾಗಿದೆ”
ಪ್ರತಿವರ್ಷ ಧರ್ಮಪ್ರಚಾರದ ಬರುತ್ತದೆ, ಭಾನುವಾರ ಬಂದು ಹೋಗುತ್ತದೆ. ಆದರೆ ನಮ್ಮ ಜವಾಬ್ದಾರಿಯ ಬಗ್ಗೆ ನಮ್ಮಲ್ಲಿ ಅರಿವು ಮೂಡದಿದ್ದರೆ ಈ ಆಚರಣೆ ವ್ಯರ್ಥ.
“ಹೋಗಿ, ಇಡೀ ಲೋಕಕ್ಕೆ ಶುಭಸಂದೇಶವನ್ನು ಸಾರಿರಿ” ಎಂಬ ಕರೆಯೋಲೆಯು ನಮ್ಮನ್ನು ಯೇಸುವಿನಿಂದ ದೂರವಿರುವವರತ್ತ ಹೋಗಿ ದೇವರ ಪ್ರೀತಿಯ ಬಗ್ಗೆ ಅವರಿಗೆ ಪರಿಚಯ ನೀಡಲು ಆಹ್ವಾನವಾಗಿದೆ. ಜಗದ್ಗುರು ಫ್ರಾನ್ಸಿಸ್ ಹೇಳುವಂತೆ “ನಾವು ಯೇಸುವಿನ ಶಿಷ್ಯರು ಮಾತ್ರವಲ್ಲ, ಮಿಶನರಿ ಶಿಷ್ಯರು”
ದೈವ ಅನುಭವವನ್ನು ಪಡೆದ ನಾವು ಅದನ್ನು ಪಸರಿಸದೆ ಸುಮ್ಮನಿರಲು ಸಾಧ್ಯವಿಲ್ಲ. ಅದೇ ನಮ್ಮ ಧರ್ಮಪ್ರಚಾರಕ್ಕೆ ಪ್ರೇರಣೆ ಹಾಗೂ ಜವಾಬ್ದಾರಿ.
ಧರ್ಮಪ್ರಚಾರ ಎಂದರೇನು ? ಪೋಪ್ ಜಗದ್ಗುರು 6ನೇ ಪಾವ್ಲರು ಹೇಳುವಂತೆ “ ಕ್ರಿಸ್ತರು ಪ್ರಥಮ ಸುವಾರ್ತೆ ಪ್ರಚಾರಕರು ಆದರು” ಅದರ ಅರ್ಥ ಯೇಸು ಪಿತದೇವನಿಂದ ಪಡೆದ ಆಜ್ಞೆಯ ಪ್ರಕಾರ ತನ್ನ ಶುಭಸಂದೇಶ ಪ್ರಚಾರ ಕಾಯಕವನ್ನು ಆರಂಭಿಸಿ ತನ್ನ ಪಿತನ ಕಾಯಕದಲ್ಲಿ ಭಾಗಿಯಾದರು, ತದನಂತರ ಯೇಸು ಆ ಕಾಯಕವನ್ನು ಮುಂದುವರಿಸಲು 12ಮಂದಿ ಶಿಷ್ಯರನ್ನು ಆಯ್ದರು. ಪಂಚಾಶತಮದಿನ ಶಿಷ್ಯರು ಪ್ರೇರಿತಗೊಂಡ ನಂತರ ಅವರು ಧರ್ಮಪ್ರಚಾರಕ್ಕೆ ತಮ್ಮ ಸರ್ವಸ್ವವನ್ನು ಮುಡಿಪಿಟ್ಟರು. ಶಿಷ್ಯರು ಆರಂಭಿಸಿದ ಕಾಯಕವನ್ನು ಇಂದು ನಾವು ಮುಂದುವರೆಸಿದಾಗ ನಾವು ಕೂಡ ಪರಮ ತ್ರಿತ್ವದ ಕಾಯಕದಲ್ಲಿ ಭಾಗಿಯಾಗುತ್ತೇವೆ.
ಧರ್ಮಪ್ರಚಾರ ಹೇಗೆ ಮಾಡಬೇಕು?
ಸಂತ ಫ್ರಾನ್ಸಿಸ್ ಅಸಿಸಿಯವರ ಪ್ರಕಾರ “ನಾವು ಯಾವಾಗಲೂ ಶುಭಸಂದೇಶವನ್ನು ಸಾರುವವರಾಗಬೇಕು. ಅಗತ್ಯ ಬಿದ್ದಲ್ಲಿ ಮಾತ್ರ ಮಾತುಗಳನ್ನು ಬಳಸಬೇಕು” ಎನ್ನುತ್ತಾರೆ. ಅಂದರೆ ಬೈಬಲನ್ನು ಬಳಸದಿದ್ದರೂ ನಮ್ಮ ಜೀವನಶೈಲಿಯ ಮೂಲಕ ಶುಭಸಂದೇಶ ಪ್ರಚಾರಮಾಡಲು ಸಾಧ್ಯವಿದೆ ಎಂದು ಅರ್ಥ.
ಧರ್ಮ ಪ್ರಚಾರ ಎಲ್ಲಿಂದ ಆರಂಭಗೊಳ್ಳಬೇಕು?
ಇತರರಿಗೆ ಹೋಗಿ ಸುಭಸಂದೇಶ ಸಾರುವ ಮೊದಲು ನಮ್ಮ ಜೀವನದಲ್ಲಿ ಶುಭಸಂದೇಶದ ಮೌಲ್ಯಗಳು ರೂಢೀಕೃತಗೊಳ್ಳಬೇಕು. ನಾವು ಪ್ರತಿಯೊಬ್ಬರೂ ಶುಭಸಂದೇಶದಲ್ಲಿ ವಿಲೀನವಾದರೆ ನಮ್ಮ ಕುಟುಂಬ ಶುಭಸಂದೇಶದ ದೇಗುಲವಾಗಿರುತ್ತದೆ. ಒಂದು ಕುಟುಂಬ ಒಂದು ಧರ್ಮಕೇಂದ್ರವಾದಲ್ಲಿ ಆ ಧರ್ಮಕೇಂದ್ರ ಇಡೀ ಧರ್ಮಕ್ಷೇತ್ರವನ್ನು ಬದಲಾಯಿಸಲು ಸಾಧ್ಯ.
ಅದೇ ರೀತಿ ನಾವು ಕೆಲಸಮಾಡುವ ಸ್ಥಳದಲ್ಲಿ , ಭೇಟಿಯಾಗುವ ವ್ಯಕ್ತಿಗಳ ಜೊತೆ ನಮ್ಮ ಮೌಲ್ಯಾಧಾರಿತ ಜೀವನದ ಮೂಲಕ ಸಾಕ್ಷಿಗಳಾಗಿ ಶುಭಸಂದೇಶವನ್ನು ನಾವು ಸಾರಬಹುದು. ಮದರ್ ತೆರೆಸಾ, ಸಂತ ರಾಣಿ ಮರಿಯಾ, ಕಂದಮಾಲ್ನ ರಕ್ತಸಾಕ್ಷಿಗಳು ದೃಢತೆ, ಸೇವೆ, ಮೌಲ್ಯಭರಿತ ಜೀವನದ ಮೂಲಕ ಧರ್ಮಪ್ರಚಾರ ಮಾಡಿದ್ದಾರೆ. ಎನ್ನುವುದರಲ್ಲಿ ಎರಡು ಮಾತಿಲ್ಲ.
ಕೇವಲ ಬೈಬಲನ್ನು ಕೈಯಲ್ಲಿ ತೆಗೆದುಕೊಂಡು ಹೋದರೆ ಮಾತ್ರ ಧರ್ಮಪ್ರಚಾರ ಸಾಧ್ಯ ಎಂಬುದನ್ನು ನಾವೇಕೆ ನಂಬಬೇಕು? ಅದು ಒಂದು ವಿಧಾನ ಅಷ್ಟೇ. ನಮ್ಮ ಜೀವನ ಮೂಲಕವೇ ಧರ್ಮಪ್ರಚಾರವಾಗಬೇಕು.
ಹಾಗಾದರೆ ವೈಯಕ್ತಿಕವಾಗಿ ಶುಭಸಂದೇಶವಾಗುವುದು ಹೇಗೆ?
ಯೇಸು ಹೇಳಿರುವಂತೆ ನಾವು ಜಗತ್ತಿಗೆ ಉಪ್ಪು ಮತ್ತು ಬೆಳಕು ಆಗಲು ಪ್ರಯತ್ನಿಸಿದಾಗ ಜನರು ನಮ್ಮಲ್ಲಿ ಯೇಸುವಿನ ಮೌಲ್ಯಗಳನ್ನು ನೋಡಿ ನಮ್ಮ ದೇವರನ್ನು ಆರಾಧಿಸಲು ಮುಂದಾಗುತ್ತಾರೆ. ಸ್ವಾರ್ಥ, ಅಸೂಯೆ, ದ್ವೇಷ, ಮತ್ಸರಗಳಿಂದ ದೂರವಿದ್ದು ಪ್ರಾಮಾಣಿಕತೆ, ದಯೆ, ಸಹಕಾರ, ಸಹಬಾಳ್ವೆ, ಸೇವೆಗಳ ಪ್ರತೀಕಗಳಾದಾಗ ತಾನೆ ನಾವು ಕ್ರಿಸ್ತನನ್ನು ಸಾರುವವರಾಗುವೆವು. ಹೀಗೆ ಮಾಡಲು ಪ್ರಯತ್ನಿಸಿದಾಗ ದೈವ ಚಿತ್ತದಂತೆ ನಮ್ಮ ಜೀವನ ಪರಿವರ್ತಿತಗೊಳ್ಳುತ್ತದೆ ಜೊತೆಗೆ ಇತರರ ಪರಿವರ್ತನೆಗೆ ಆಧಾರ ಸ್ತಂಭವಾಗಿಯೂ ಮಾರ್ಪಾಡಾಗುತ್ತದೆ.
ಆದ್ದರಿಂದ ಧರ್ಮಪ್ರಚಾರ ಕಾಯಕದಲ್ಲಿ ತೊಡಗುವ ಮೊದಲು ನಾವೇ ಶುಭಸಂದೇಶ ಬದ್ಧರಾಗಿ ಜೀವಿಸಲು ಪ್ರಯತ್ನಿಸೋಣ, ಇತರರಿಗೂ ಮಾರ್ಗದರ್ಶಿಗಳಾಗಿ ಬಾಳಿ ಶುಭಸಂದೇಶಕ್ಕೆ ಧರ್ಮಪ್ರಚಾರಕ್ಕೆ ನಮ್ಮ ಸಹಾಯ ಹಸ್ತ ನೀಡೋಣ; ಧರ್ಮಪ್ರಚಾರ ಕಾಯಕದಲ್ಲಿ ಉತ್ಸಹಭರಿತರಾಗಿ ಮಿಶನರಿ ಶಿಷ್ಯರಾಗೋಣ.
========================
ಚಿಂತನೆ - ಫಾ ಲ್ಯಾನ್ಸಿ ಫೆರ್ನಾಂಡಿಸ್ ಎಸ್ ಜೆ
==========================
No comments:
Post a Comment