ಅಕ್ಟೋಬರ್ 19, 2020 ಸೋಮವಾರ [ಹಸಿರು]
ಶಿಸಂತ ಜಾನ್ ದಿ ಬ್ರೆಬಫ್ ಮತ್ತು ಸಂತ ಐಸಕ್ ಜೋಗ್ಸ್
ಯಾಜಕರು ಮತ್ತು ಸಂಗಡಿಗರು, ರಕ್ತಸಾಕ್ಷಿಗಳು (ಐಚ್ಛಿಕ ಸ್ಮರಣೆ)
ಶಿಲುಬೆಯ ಸಂತ ಪೌಲ, ಯಾಜಕ
ಮೊದಲ ವಾಚನ: ಎಫೆಸದವರಿಗೆ 2.1-10
ಕೀರ್ತನೆ 100:1-4. ಶ್ಲೋಕ.3
ಪ್ರಭುವಿನ ಜನ, ಆತನೇ ಮೇಯಿಸುವ ಕುರಿಗಳು ನಾವು
ಶುಭಸಂದೇಶ: ಲೂಕ 12.13-21
==================
ಮೊದಲನೇ ವಾಚನ
ಎಫೆಸದವರಿಗೆ 2.1-10
1 : ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಹಿಂದೊಮ್ಮೆ ನೀವು ಆಧ್ಯಾತ್ಮಿಕವಾಗಿ ಮೃತರಾಗಿದ್ದಿರಿ.
2 : ಆಗ ನೀವು ಲೋಕದ ರೀತಿನೀತಿಗಳನ್ನು ಅನುಸರಿಸಿ ಬಾಳಿದಿರಿ. ವಾಯುಮಂಡಲದಲ್ಲಿನ ಅಶರೀರ ಶಕ್ತಿಗಳ ಅಧಿಪತಿಗೆ ಅಧೀನರಾಗಿದ್ದಿರಿ. ದುಷ್ಕರ್ಮಿಗಳನ್ನು ಪ್ರಚೋದಿಸುತ್ತಲಿರುವ ದುರಾತ್ಮನಿಗೆ ವಿಧೇಯರಾಗಿದ್ದಿರಿ.
3 : ವಾಸ್ತವವಾಗಿ ಹಿಂದೊಮ್ಮೆ ನಾವೆಲ್ಲರು ಸಹ ಹಾಗೆಯೇ ಇದ್ದೆವು. ಶಾರೀರಿಕ ಆಶೆಆಮಿಷಗಳಿಗೆ ತುತ್ತಾಗಿದ್ದೆವು; ಮಾನಸಿಕ ಹಾಗೂ ಶಾರೀರಿಕ ದುರಿಚ್ಛೆಗಳನ್ನೇ ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೈವಕೋಪಕ್ಕೆ ಗುರಿಯಾಗಿದ್ದೆವು.
4 : ಆದರೆ ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ,
5 : ನಮ್ಮ ಅಪರಾಧಗಳ ನಿಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತಯೇಸುವಿನೊಡನೆ ಜೀವಂತರನ್ನಾಗಿ ಮಾಡಿದರು (ದೈವಾನುಗ್ರಹದಿಂದಲೇ ನೀವೀಗ ಜೀವೋದ್ಧಾರ ಹೊಂದಿದ್ದೀರಿ).
6 : ಯೇಸುಕ್ರಿಸ್ತರೊಡನೆ ನಮ್ಮನ್ನೂ ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮಂಡಿಸುವ ಅವಕಾಶ ಮಾಡಿಕೊಟ್ಟರು.
7 : ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮಂತಿಕೆಯನ್ನು ಮುಂದಣ ಯುಗಗಳಲ್ಲಿ ತಿಳಿಯಪಡಿಸುವುದೇ ಅವರ ಉದ್ದೇಶವಾಗಿತ್ತು.
8 : ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ.
9 : ಇದು ಮಾನವರ ಪುಣ್ಯಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿಂದ ಯಾರೂ ಹೆಮ್ಮೆಪಡಲು ಆಸ್ಪದವಿಲ್ಲ.
10 : ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದ್ದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ.
===================
ಕೀರ್ತನೆ
ಕೀರ್ತನೆ 100:1-4. ಶ್ಲೋಕ.3
ಪ್ರಭುವಿನ ಜನ, ಆತನೇ
ಮೇಯಿಸುವ ಕುರಿಗಳು ನಾವು
1 : ಭೂನಿವಾಸಿಗಳೇ,
ಜಯಘೋಷಮಾಡಿ ಪ್ರಭುವಿಗೆ /
2 : ಅತಿ ಸಂತೋಷದಿಂದ
ಸೇವೆ ಮಾಡಿ ಆತನಿಗೆ /
ಹಾಡುತ, ಪಾಡುತ,
ಬನ್ನಿ ಆತನ ಸನ್ನಿಧಿಗೆ //
3 : ಪ್ರಭುವೇ ದೇವರೆಂಬುದನು
ಮರೆತುಬಿಡಬೇಡಿ ನೀವು /
ನಮ್ಮ ಸೃಷ್ಟಿಕರ್ತ ಆತನು,
ಆತನವರು ನಾವು /
ಆತನ ಜನ, ಆತನೆ
ಮೇಯಿಸುವ ಕುರಿಗಳು, ನಾವು //
4 : ಆತನ ಗೃಹದ್ವಾರವನು
ಪ್ರವೇಶಿಸಿ ಧನ್ಯವಾದದೊಂದಿಗೆ /
ಆತನ ಆವರಣದಲಿ ನಿಲ್ಲಿರಿ
ಸ್ತುತಿಸ್ತೋತ್ರಗಳೊಂದಿಗೆ /
ಆತನ ನಾಮವನು ಕೊಂಡಾಡಿ
ಉಪಕಾರಸ್ಮರಣೆಯೊಂದಿಗೆ //
5 : ಹೌದು, ಪ್ರಭುವೆನಿತೋ
ಒಳ್ಳೆಯವನು /
ಇರುವುದಾತನ ಪ್ರೀತಿ
ಯುಗಯುಗಕು /
ಆತನ ಸತ್ಯತೆ
ತಲತಲಾಂತರಕು //
==========
ಶುಭಸಂದೇಶ
ಲೂಕ 12.13-21
13 : ಜನಸಮೂಹದಿಂದ ಒಬ್ಬನು, “ಬೋಧಕರೇ, ನಮ್ಮ ಪಿತ್ರಾರ್ಜಿತ ಸೊತ್ತನ್ನು ನನಗೆ ಭಾಗಮಾಡಿ ಕೊಡುವಂತೆ ನನ್ನ ಸೋದರನಿಗೆ ಹೇಳಿ,” ಎಂದು ಕೇಳಿಕೊಂಡನು.
14 : ಅದಕ್ಕೆ ಯೇಸು, “ಏನಯ್ಯಾ, ನಿಮ್ಮಿಬ್ಬರ ನ್ಯಾಯತೀರಿಸುವುದಕ್ಕೂ ನಿಮ್ಮ ಸ್ವತ್ತನ್ನು ಭಾಗಮಾಡಿಕೊಡುವುದಕ್ಕೂ ನನ್ನನ್ನು ನೇಮಿಸಿದವರು ಯಾರು?” ಎಂದು ಮರುಪ್ರಶ್ನೆ ಹಾಕಿದರು.
15 : ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು.
16 : ಅನಂತರ ಅವರಿಗೆ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಅವನ ಭೂಮಿ ಒಮ್ಮೆ ಸಮೃದ್ಧಿಯಾದ ಬೆಳೆಕೊಟ್ಟಿತು.
17 : ಆಗ ಅವನು, ‘ನನ್ನ ಬೆಳೆಯನ್ನೆಲ್ಲಾ ತುಂಬಿಡಲು ಸ್ಥಳವಿಲ್ಲವಲ್ಲಾ, ಏನು ಮಾಡಲಿ?’ ಎಂದು ತನ್ನಲ್ಲೇ ಆಲೋಚಿಸುತ್ತಾ,
18 : ಹೌದು, ಹೀಗೆ ಮಾಡುತ್ತೇನೆ: ಇರುವ ಕಣಜಗಳನ್ನು ಕಿತ್ತುಹಾಕಿಸಿ, ಇನ್ನೂ ದೊಡ್ಡವುಗಳನ್ನು ಕಟ್ಟಿಸುತ್ತೇನೆ. ಅಲ್ಲಿ ನನ್ನ ಎಲ್ಲಾ ದವಸ ಧಾನ್ಯಗಳನ್ನೂ ಸರಕು ಸಾಮಗ್ರಿಗಳನ್ನೂ ತುಂಬಿಸಿಡುತ್ತೇನೆ.
19 : ಅಲ್ಲದೆ, “ಎಲೈ ಮನವೇ, ಅನೇಕ ವರ್ಷಗಳಿಗೆ ಬೇಕಾದಷ್ಟು ಸರಕು ಬಿದ್ದಿದೆ; ಆರಾಮವಾಗಿರು. ತಿನ್ನು, ಕುಡಿ, ಸುಖಪಡು ಎಂದು ಹೇಳಿಕೊಳ್ಳುತ್ತೇನೆ”, ಎಂದುಕೊಂಡ.
20 : ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧ ಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು.
21 : “ತನಗೋಸ್ಕರ ಸಂಪತ್ತನ್ನು ಶೇಖರಿಸಿಟ್ಟುಕೊಂಡು ದೇವರ ದೃಷ್ಟಿಯಲ್ಲಿ ಧನಿಕನಲ್ಲದವನು ಇವನಿಗೆ ಸಮಾನನು,” ಎಂದರು ಯೇಸು.
===================
ಚಿಂತನೆ
ಯಾವ ಆಸ್ತಿ ಶಾಶ್ವತವಾದದ್ದು, ಯಾವುದು ನಶ್ವರ? ಭೂಮಿಯ ಮೇಲೆ ಸಂಪಾದಿಸಿದ ಆಸ್ತಿಯೇ ಅಥವಾ ಸ್ವರ್ಗದಲ್ಲೇ ? ಪ್ರತಿಯೊಬ್ಬರೂ ತಮ್ಮನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯಿದು. ಆದರೂ, ಅಳಿದು ಹೋಗುವ, ನಶಿಸಿಹೋಗುವ ಆಸ್ತಿಗಾಗಿಯೇ ಎಲ್ಲರೂ ಹೋರಾಡುತ್ತಿರುವುದು, ಅನೇಕ ಬಾರಿ ಈ ಹೋರಾಟದಲ್ಲಿ ವಂಚನೆ, ಮೋಸ, ಅನ್ಯಾಯ ಇರಬಹುದು. ಈ ಮೋಸ, ವಂಚನೆ ಸ್ವರ್ಗದಲ್ಲಿ ಗೆಲ್ಲಲಾರದು ಎಂಬುದನ್ನು ಅರಿಯಲು ನಾವು ಮರೆಯುತ್ತೇವೆ. ದೇವರು ಕೊಟ್ಟಿದ್ದು ಬಚ್ಚಿಡುವುದಕ್ಕಲ್ಲ, ಪರರ ಸಹಾಯಕ್ಕೆ ಧನಿಕ ಸ್ವಾರ್ಥಿಯಾಗಿದ್ದ, ಲೌಕಿಕತೆಯಲ್ಲಿ ಮುಳುಗಿದ್ದ. `ತಿನ್ನು, ಕುಡಿ, ಸುಖಪಡು’ ಎಂದುಕೊಂಡ, ಸುಖಪಡಲು ಸಂಪತ್ತು, ಆಸ್ತಿಯಿದೆ ಆದರೇ ಅವನೇ ಇಲ್ಲವಾದ.
===================
No comments:
Post a Comment