Tuesday, 24 November 2020

ಡಿಸೆಂಬರ್ 19, 2020 ಶನಿವಾರ

 ಡಿಸೆಂಬರ್ 19, 2020 ಶನಿವಾರ                        [ನೇರಳೆ]
ಮೊದಲ ವಾಚನ: ನ್ಯಾಯಸ್ಥಾಪಕ 13.2-7, 24-25
ಕೀರ್ತನೆ 71: 3-4, 5-6, 16-17 ಶ್ಲೋಕ.8 
ನಿನ್ನ ಗುಣಗಾನ ನನ್ನ ಬಾಯ್ತುಂಬ
ನಿನ್ನ ಘೋಷಣೆ ನನಗೆ ದಿನದಾದ್ಯಂತ
ಶುಭಸಂದೇಶ: ಲೂಕ 1.5-25
==================
ಹಿಬ್ರಿ 10: 37
ಇನ್ನು ಅಲ್ಪ, ಅತ್ಯಲ್ಪ ಕಾಲದಲ್ಲೇ ಬರುವಾತನು ಬಂದೇ ಬರುವನು, 
ವಿಳಂಬಮಾಡನು. ನಮ್ಮ ಉದ್ದಾರಕನು ಅವನೇ. 
ನಾಡಿನ ಎಲ್ಲೆಡೆಗಳಲ್ಲಿ ಇನ್ನು ಮೇಲೆ ಭೀತಿಗೆ ಎಡೆಯಿರುವುದಿಲ್ಲ. 
====================
ಮೊದಲನೇ ವಾಚನ
ನ್ಯಾಯಸ್ಥಾಪಕ 13.2-7, 24-25
2 : ಚೊರ್ಗಾ ಎಂಬ ಊರಲ್ಲಿ ದಾನ್ ಕುಲದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ.
3 : ಒಂದಾನೊಂದು ದಿನ ಸರ್ವೇಶ್ವರನ ದೂತ ಆಕೆಗೆ ಪ್ರತ್ಯಕ್ಷನಾಗಿ, “ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭ ವತಿಯಾಗಿ ಒಬ್ಬ ಮಗನನ್ನು ಹೆರುವೆ.
4 : ಈ ಕಾರಣ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡದಿರು;
5 : ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು. ಅವನು ಹುಟ್ಟಿನಿಂದ ದೇವರಿಗೆ ಪ್ರತಿಷ್ಠಿತನಾಗುವನು. ಅವನು ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವುದಕ್ಕೆ ಪ್ರಾರಂಭಿಸುವನು,” ಎಂದನು.
6 : ತರುವಾಯ ಆ ಸ್ತ್ರೀ ತನ್ನ ಗಂಡನ ಬಳಿಗೆ ಹೋಗಿ, “ಒಬ್ಬ ದೇವಪುರುಷ ನನ್ನ ಹತ್ತಿರ ಬಂದಿದ್ದನು. ಅವನ ರೂಪ ದೇವದೂತನ ರೂಪದಂತೆ ಘನಗಂಭೀರವಾಗಿತ್ತು. ‘ಎಲ್ಲಿಂದ ಬಂದಿರಿ?’ ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ.
7 : ಆದರೆ ಆತ ನನಗೆ, ‘ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆದ್ದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಮಗು ಹುಟ್ಟಿದಂದಿನಿಂದ ಸಾಯುವವರೆಗೆ ಪ್ರತಿಷ್ಠಿತ ನಾಗಿರುವನು,’ ಎಂದು ಹೇಳಿದನು,” ಎಂದಳು.
24 : ಆ ಮಹಿಳೆ ಒಬ್ಬ ಮಗನನ್ನು ಹೆತ್ತು ಅವನಿಗೆ ‘ಸಂಸೋನ’ ಎಂದು ಹೆಸರಿಟ್ಟಳು. ಹುಡುಗ ಬೆಳೆದು ದೊಡ್ಡವನಾದ. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು.
25 : ಇದಲ್ಲದೆ, ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಸರ್ವೇಶ್ವರನ ಆತ್ಮ ಅವನನ್ನು ಚೇತನಗೊಳಿಸತೊಡಗಿತು.
===================
ಕೀರ್ತನೆ 
ಕೀರ್ತನೆ 71: 3-4, 5-6, 16-17 ಶ್ಲೋಕ.8 
ನಿನ್ನ ಗುಣಗಾನ ನನ್ನ ಬಾಯ್ತುಂಬ
ನಿನ್ನ ಘೋಷಣೆ ನನಗೆ ದಿನದಾದ್ಯಂತ
3 : ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು / 
ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು //
4 : ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ / 
ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ //
5 : ಸ್ವಾಮಿ ದೇವಾ, ನೀನೇ ನನ್ನ ಭರವಸೆ /
 ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ //
6 : ಹುಟ್ಟಿನಿಂದಲೆ ನಾ ನಿನಗಂಟಿ ಕೊಂಡಿರುವೆನಯ್ಯಾ / 
ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ / 
ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ //
16 : ಸ್ವಾಮಿ ದೇವಾ, ಸ್ಮರಿಸುವೆನು ನಿನ್ನ ಮಹತ್ಕಾರ್ಯಗಳನೆ / 
ಪ್ರಕಟಪಡಿಸುವೆನು ನಿನ್ನೊಬ್ಬನ ನ್ಯಾಯನೀತಿಯನೆ //
17 : ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ?/ 
ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ //
===================
ಶುಭಸಂದೇಶ
ಲೂಕ 1.5-25
5 : ಜುದೇಯ ಪ್ರಾಂತ್ಯದ ಅರಸನಾಗಿದ್ದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಪತ್ನಿಯ ಹೆಸರು ಎಲಿಜಬೇತ್. ಇವಳೂ ಆರೋನನ ಯಾಜಕವಂಶಕ್ಕೆ ಸೇರಿದವಳು.
6 : ದಂಪತಿಗಳಿಬ್ಬರೂ ದೇವರ ದೃಷ್ಟಿಯಲ್ಲಿ ಭಯಭಕ್ತಿಯುಳ್ಳವರಾಗಿದ್ದರು; ಸರ್ವೇಶ್ವರನ ವಿಧಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದರು.
7 : ಎಲಿಜಬೇತಳು ಬಂಜೆ ಆದುದರಿಂದ ಅವರಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅವರಿಬ್ಬರೂ ಮುದುಕರಾಗಿದ್ದರು.
8 : ಒಮ್ಮೆ ತನ್ನ ವರ್ಗದ ಸರದಿ ಬಂದಾಗ ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕ ವಿಧಿಯನ್ನು ನೆರವೇರಿಸುತ್ತಿದ್ದನು.
9 : ಮಹಾದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಧೂಪಾರತಿಯನ್ನು ಅರ್ಪಿಸುವ ಸರದಿಗೆ, ಯಾಜಕರ ಸಂಪ್ರದಾಯದ ಪ್ರಕಾರ, ಚೀಟು ಹಾಕಿದಾಗ ಅದು ಜಕರೀಯನ ಪಾಲಿಗೆ ಬಂದಿತು. ಅಂತೆಯೇ, ಅವನು ಧೂಪಾರತಿಯನ್ನು ಅರ್ಪಿಸುತ್ತಿದ್ದಾಗ
10 : ಭಕ್ತಸಮೂಹವು ಹೊರಗೆನಿಂತು ಪ್ರಾರ್ಥನೆ ಮಾಡುತ್ತಿತ್ತು.
11 : ಆಗ ಧೂಪಪೀಠದ ಬಲಗಡೆ ಅವನಿಗೆ ದೇವದೂತನೊಬ್ಬನು ಪ್ರತ್ಯಕ್ಷನಾದನು.
12 : ಅವನನ್ನು ಕಾಣುತ್ತಲೇ ತತ್ತರಗೊಂಡ ಜಕರೀಯನು ಭಯಭ್ರಾಂತನಾದನು.
13 : ದೂತನು ಅವನಿಗೆ, “ಜಕರೀಯಾ, ಭಯಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ. ನಿನ್ನ ಪತ್ನಿ ಎಲಿಜಬೇತಳಲ್ಲಿ ನಿನಗೆ ಒಂದು ಗಂಡು ಮಗು ಹುಟ್ಟುವುದು. ನೀನು ಅವನಿಗೆ ‘ಯೊವಾನ್ನ’ ಎಂದು ನಾಮಕರಣ ಮಾಡಬೇಕು.
14 : ಆ ಮಗುವಿನ ಜನನವು ನಿಮಗೆ ಹರ್ಷಾನಂದವನ್ನು ಉಂಟುಮಾಡುವುದು; ಬಹು ಜನಕ್ಕೆ ಸಂತಸವನ್ನು ತರುವುದು.
15 : ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಸೇವಿಸನು; ತಾಯಿಯ ಉದರದಿಂದಲೇ ಪವಿತ್ರಾತ್ಮಭರಿತನಾಗುವನು.
16 : ಇಸ್ರಯೇಲರಲ್ಲಿ ಅನೇಕರನ್ನು ಅವರ ದೇವರಾದ ಸರ್ವೇಶ್ವರನ ಕಡೆಗೆ ಮರಳಿ ತಿರುಗಿಸುವನು.
17 : ಎಲೀಯನಂತೆ ಶಕ್ತಿಪ್ರಭಾವಗಳಿಂದ ಕೂಡಿದವನಾಗಿ ಪ್ರಭುವಿನ ಮುಂದೂತನಾಗುವನು. ತಂದೆ ಮಕ್ಕಳನ್ನು ಪುನಃ ಒಂದಾಗಿಸುವನು. ಸತ್ಪುರುಷರ ಸನ್ಮಾರ್ಗಕ್ಕೆ ಅವಿಧೇಯರು ಹಿಂದಿರುಗುವಂತೆ ಮಾಡುವನು. ಹೀಗಾಗಿ ಪ್ರಭುವಿಗೆ ಯೋಗ್ಯ ಪ್ರಜೆಯನ್ನು ಸಿದ್ಧಗೊಳಿಸುವನು,” ಎಂದನು.
18 : ಅದಕ್ಕೆ ಜಕರೀಯನು, “ಈ ಮಾತು ನಿಜವಾಗುವುದೆಂದು ನಾನು ತಿಳಿಯುವುದಾದರೂ ಹೇಗೆ? ನಾನೋ ಮುದುಕ; ನನ್ನ ಪತ್ನಿಗೂ ಮುಪ್ಪು,” ಎಂದನು.
19 : ಆಗ ದೇವದೂತನು, “ನಾನು ದೇವರ ಸನ್ನಿಧಿಯಲ್ಲಿ ಸೇವೆಮಾಡುವ ಗಬ್ರಿಯೇಲನು; ಈ ಶುಭಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ದೇವರ ಅಪ್ಪಣೆಯ ಪ್ರಕಾರ ಬಂದವನು.
20 : ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು. ಆದರೆ ನೀನು ಅದನ್ನು ನಂಬದೆ ಹೋದ ಕಾರಣ ಅದೆಲ್ಲಾ ಈಡೇರುವ ತನಕ ಮಾತನಾಡಲಾಗದೆ ಮೂಕನಾಗಿರುವೆ,” ಎಂದನು.
21 : ಇತ್ತ ಭಕ್ತಜನರು ಜಕರೀಯನಿಗಾಗಿ ಎದುರು ನೋಡುತ್ತಾ ದೇವಾಲಯದಲ್ಲಿ ಅವನು ಇಷ್ಟು ತಡಮಾಡಲು ಕಾರಣವೇನಿರಬಹುದೆಂದು ಆಶ್ಚರ್ಯಪಡುತ್ತಿದ್ದರು.
22 : ಅಷ್ಟರಲ್ಲಿ ಜಕರೀಯನು ಹೊರಗೆ ಬಂದು ಮಾತನಾಡಲೆತ್ನಿಸಿದರೂ ಅವನ ಬಾಯಿಂದ ಮಾತೇ ಹೊರಡಲಿಲ್ಲ. ಬರೀ ಕೈಸನ್ನೆ ಮಾಡುತ್ತಿದ್ದ ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನ ಆಗಿರಬೇಕೆಂದು ಜನರು ಅರಿತುಕೊಂಡರು. ಅಂದಿನಿಂದ ಅವನು ಮೂಕನಾಗಿಯೇ ಇದ್ದನು.
23 : ತನ್ನ ಯಾಜಕ ಸೇವಾ ಸರದಿಯು ಮುಗಿದ ನಂತರ ಜಕರೀಯನು ಮನೆಗೆ ಹಿಂದಿರುಗಿ ಹೋದನು.
24 : ಕೆಲವು ದಿನಗಳಾದ ಬಳಿಕ ಅವನ ಪತ್ನಿ ಎಲಿಜಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು. ‘
25 : ‘ಕಟ್ಟಕಡೆಗೆ ಸರ್ವೇಶ್ವರ ನನಗೆ ಕರುಣೆ ತೋರಿದ್ದಾರೆ; ಜನರ ನಡುವೆ ನನಗಿದ್ದ ಅವಮಾನವನ್ನು ತೊಲಗಿಸಿದ್ದಾರೆ,’ ಎಂದುಕೊಳ್ಳುತ್ತಿದ್ದಳು.
===================
ಚಿಂತನೆ
ಎಲಿಜಬೇತ್ ಮತ್ತು ಜಕರೀಯ ದಂಪತಿಗಳು ಭಯಭಕ್ತಿಯುಳ್ಳವರಾಗಿದ್ದು ಧಾರ್ಮಿಕ ವಿಷಯಗಳಲ್ಲಿ ಅತ್ಯಂತ ಶ್ರದ್ದೆಯಿಂದ ತಮ್ಮ ಬದುಕನ್ನು ಸಾಗಿಸುತ್ತಿದ್ದರು. ದೇವರ ಆರಾಧನೆ ಮತ್ತು ಪ್ರಾರ್ಥನೆ ತಮ್ಮ ಪ್ರಥಮ ಕರ್ತವ್ಯವೆಂದು ಎಣಿಸಿ, ದೇವರ ನಿಯಮಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದರು. ಇದಕ್ಕೆ ಪ್ರತಿಫಲವೋ ಎಂಬಂತೆ ತಮ್ಮ ಮುಪ್ಪಿನಲ್ಲಿ   ದೇವರು ಇವರಿಗೆ ಪುತ್ರವನ್ನಿತ್ತು  ಸಂತಾನ ಭಾಗ್ಯವನ್ನು ಕರುಣಿಸುತ್ತಾರೆ.
 
ಜಕರೀಯನು ಪ್ರಾರಂಭದಲ್ಲಿ ದೇವ ದೂತನ ಸಂದೇಶವನ್ನು ಸಂಶಯಿಸಿದ ಇದಕ್ಕಾಗಿ  ಕೆಲವು ದಿನ ಮಾತನಾಡಲಾರದೆ ಮೂಕನಾದ. ಜಕರೀಯನು ಒಬ್ಬ ಯಾಜಕ. ಯಾಜಕನಾಗಿ ಆತ ದೇವರ ಮಹತ್ಕಾರ್ಯಗಳನ್ನು ಹಳೆ ಒಡಂಬಡಿಕೆಯಲ್ಲಿ ಓದಿ ತಿಳಿದಿದ್ದ. ದೇವರ ಶಕ್ತಿ ಬಲ್ಲವನಾಗಿದ್ದೂ ವಿಶ್ವಾಸಿಸಲು ವಿಫಲನಾದ. ಜಕರಿಯನಂತೆ ಸಂಶಯಕ್ಕೆ ಎಡೆಕೊಡದೆ ನಾವು ಅಚಲ ವಿಶ್ವಾಸದಿಂದ ಜೀವಿಸುತ್ತಾ ದೇವರ ಅನುಗ್ರಹಕ್ಕೆ ಪಾತ್ರರಾಗೋಣ.
===================

No comments:

Post a Comment