ಡಿಸೆಂಬರ್ 20, 2020 ಭಾನುವಾರ [ನೇರಳೆ]
ಆಗಮನಕಾಲದ 4ನೇ ಭಾನುವಾರ (ವರ್ಷ ಬಿ)
ಮೊದಲ ವಾಚನ: 2 ಸಮು 7.1-5, 8-12, 14, 16
ಕೀರ್ತನೆ 89: 1-2, 3-4, 26, 29, ಶ್ಲೋಕ.1
ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು
ಎರಡನೇ ವಾಚನ: ರೋಮನರಿಗೆ 16.25-27
ಶುಭಸಂದೇಶ: ಲೂಕ 1.26-38
==================
ಮೊದಲನೇ ವಾಚನ
2 ಸಮು 7.1-5, 8-12, 14, 16
1 : ಸರ್ವೇಶ್ವರನ ಅನುಗ್ರಹದಿಂದ ಸುತಮುತ್ತ ಇದ್ದ ವೈರಿಗಳ ಭಯ ನಿಂತುಹೋಯಿತು. ದಾವೀದನು. ನೆಮ್ಮದಿಯಿಂದ ಅರಮನೆಯಲ್ಲಿ ವಾಸಿಸುತ್ತಿದ್ದನು.
2 : ಒಂದು ದಿನ ಅವನು ಪ್ರವಾದಿ ನಾತಾನನಿಗೆ, “ನೋಡು, ನಾನು ವಾಸಮಾಡುತ್ತಿರುವುದು ದೇವದಾರು ಮರದಿಂದ ಮಾಡಿದ ಅರಮನೆಯಲ್ಲಿ; ಆದರೆ ದೇವರ ಮಂಜೂಷ ಇರುವುದು ಬಟ್ಟೆಯ ಗುಡಾರದಲ್ಲಿ!” ಎಂದನು.
3 : ಅದಕ್ಕೆ ನಾತಾನನು ಸಮ್ಮತಿಸಿ, “ನಿಮಗೆ ಮನಸ್ಸಿದ್ದಂತೆ ಮಾಡಿ; ಸರ್ವೇಶ್ವರ ನಿಮ್ಮೊಡನೆ ಇದ್ದಾರೆ,” ಎಂದನು.
4 : ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು:
5 : ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ?
8 : “ಇದಲ್ಲದೆ, ನೀನು ನನ್ನ ದಾಸ ದಾವೀದನಿಗೆ ಹೇಳು, ಸರ್ವಶಕ್ತ ಸರ್ವೇಶ್ವರನಾದ ನಾನೇ ಹೀಗೆ ಹೇಳಿದೆಯೆಂದು ತಿಳಿಸು: ‘ಕುರಿಗಳ ಹಿಂದೆ ತಿರುಗಾಡುತ್ತಿದ್ದ ನಿನ್ನನ್ನು ಅಡವಿಯಿಂದ ಆಯ್ದುಕೊಂಡು ನನ್ನ ಪ್ರಜೆ ಇಸ್ರಯೇಲರ ಮೇಲೆ ನಾಯಕನನ್ನಾಗಿ ನೇಮಿಸಿದೆ.
9 : ನೀನು ಹೋದ ಕಡೆಯೆಲ್ಲಾ ನಿನ್ನ ಸಂಗಡ ಇದ್ದೆ. ನಿನ್ನ ಶತ್ರುಗಳನ್ನೆಲ್ಲ ನಿನ್ನ ಕಣ್ಮುಂದೆಯೆ ಸದೆಬಡಿದೆ. ಜಗದ ಮಹಾತ್ಮರ ಹೆಸರಿನಂತೆ ನಿನ್ನ ಹೆಸರನ್ನು ಪ್ರಸಿದ್ಧಗೊಳಿಸುವೆನು
10 : ನನ್ನ ಪ್ರಜೆ ಇಸ್ರಯೇಲರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಇನ್ನು ಮೇಲೆ ಅವರು ಯಾವ ಭಯವೂ ಇಲ್ಲದೆ ವಾಸಿಸುವರು.
11 : ಪೂರ್ವಕಾಲದಲ್ಲಿ ನಾನು ನನ್ನ ಜನರಿಗೆ ನ್ಯಾಯಸ್ಥಾಪಕರನ್ನು ನೇಮಿಸಿದೆ. ಅಲ್ಲಿಂದೀಚಿಗೆ ಇಸ್ರಯೇಲರು ಶೋಷಣೆಗೆ ಗುರಿಯಾದರು. ಆದರೆ ಇನ್ನು ಮೇಲೆ ಆಗದು. ನೀನು ಶತ್ರುಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಅದು ಮಾತ್ರ ಅಲ್ಲ, ಸರ್ವೇಶ್ವರನಾದ ನಾನು ನಿನಗಾಗಿ ಒಂದು ಮನೆತನವನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ.
12 : ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.
14 : ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು.
16 : ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”
===================
ಕೀರ್ತನೆ
ಕೀರ್ತನೆ 89: 1-2, 3-4, 26, 29, ಶ್ಲೋಕ.1
ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು
1 : ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು /
ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು //
2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ /
ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
3 : ನೀನೆಂದೆ, “ನಾನರಿಸಿದವನೊಡನೆ ಮಾಡಿರುವೆ ಒಪ್ಪಂದ /
ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ : //
4 : “ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು /
ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”//
26 : ‘ನನಗೆ ಪಿತ, ದೈವ, ದುರ್ಗ, ಉದ್ಧಾರಕ, ನೀನು’/
ಇಂತೆಂದೇ ನನ್ನನು ಸಂಬೋಧಿಸುವನವನು //
29 : ಉಳಿಸುವೆನು ಅವನ ಸಂತಾನವನು ನಿರಂತರವಾಗಿ /
ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
===================
ಎರಡನೇ ವಾಚನ
ರೋಮನರಿಗೆ 16.25-27
25 : ಅನಾದಿಯಿಂದಲೂ ಗುಪ್ತವಾಗಿದ್ದ ರಹಸ್ಯವು ಈಗ ಪ್ರಕಟವಾಗಿದೆ. ಶಾಶ್ವತ ದೇವರ ಆಜ್ಞೆಯ ಮೇರೆಗೆ ಅನ್ಯಧರ್ಮಿಯರೂ ವಿಧೇಯರಾಗಿ ವಿಶ್ವಾಸಿಸುವಂತೆ ಪ್ರವಾದನಾ ಗ್ರಂಥಗಳ ಮೂಲಕ ಆ ರಹಸ್ಯವನ್ನು ಈಗ ಅವರಿಗೆ ತಿಳಿಸಲಾಗುತ್ತಿದೆ.
26 : ಇದನ್ನು ಬೆಳಕಿಗೆ ತರುವ ನನ್ನ ಸಂದೇಶದ ಮೂಲಕ ಮತ್ತು ಯೇಸುಕ್ರಿಸ್ತರನ್ನು ಕುರಿತ ಬೋಧನೆಯ ಮೂಲಕ ದೇವರು ನಿಮ್ಮನ್ನು ವಿಶ್ವಾಸದಲ್ಲಿ ದೃಢಪಡಿಸಲು ಶಕ್ತರು.
27 : ಜ್ಞಾನಾಂಬುದಿಯಾದ ಆ ಏಕೈಕ ದೇವರಿಗೆ ಯೇಸುಕ್ರಿಸ್ತರ ಮುಖಾಂತರ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್.
===================
ಲೂಕ 1.26-38
26 : ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು.
27 : ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ.
28 : ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು.
29 : ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು.
30 : ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ;
31 : ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು;
32 : ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು.
33 : ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು.
34 : ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು.
35 : ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು.
36 : ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ.
37 : ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು.
38 : ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.
===================
ಚಿಂತನೆ
ಆಗಮನಕಾಲದ 4ನೇ ಭಾನುವಾರ
ಪೀಠಿಕೆ
ಹುಲು ಮಾನವರಾದ ನಾವು ಬಲಹೀನರು. ನಾವು ಕಷ್ಟಸಂಕಷ್ಟಗಳಿಗೆ ಸಿಲುಕಿದಾಗ, ಅಸಹಾಯಕ ಸ್ಥಿತಿಯನ್ನು ತಲುಪಿದಾಗ ನಮ್ಮ ನಿಶ್ಯಕ್ತಿಯ, ಬಲಹೀನತೆಯ ಅರಿವು ನಮಗಾಗುತ್ತದೆ. ನಮ್ಮ ಜೀವನದಲ್ಲಿ ನಾವು ಹೆಸರಾಂತ, ಪ್ರಭಾವಶಾಲಿ ಬುದ್ಧಿಜೀವಿ, ಶ್ರೇಷ್ಠ ಆಡಳಿತಗಾರರಾದರೂ ಕೆಲವೊಮ್ಮೆ ತಂತ್ರಕುತಂತ್ರಗಳಿಗೆ ಬಲಿಯಾಗಬಹುದು. ಆದರೆ ಪ್ರಭು ಯೇಸು ನಮ್ಮ ಜೊತೆ ಇದ್ದಾರೆ, ಅವರ ಅನುಗ್ರಹ ನಮ್ಮನ್ನು ಕಾಪಾಡುತ್ತದೆ ಎಂಬ ಸತ್ಯವನ್ನು ನಂಬಬೇಕು ಇದರ ಬದಲು ನಮ್ಮ ಸಮಸ್ಯೆಗಳೇ ನಮಗೆ ದೊಡ್ಡವು ಎಂಬ ಯೋಚನೆಗಳಿಗೆಯೇ ನಮ್ಮ ಗಮನವನ್ನು ನಾವು ಹರಿಯಬಿಡಬೇಕೆ?. ಸಮಸ್ಯೆಗಳು ನಮ್ಮನ್ನು ಅಲುಗಿಸಿ ದೇವರ ಪ್ರಸನ್ನತೆಯಿಂದ ದೂರತಳ್ಳಬಹುದು ಆಗಲೇ ದೇವರು ನಮ್ಮನ್ನು ಪರಿಪಾಲಿಸುವುದಿಲ್ಲ ಎಂಬ ಭಾವನೆಗಳನ್ನು ನಮ್ಮಲ್ಲಿ ಬಿತ್ತಬಹುದು. ಏಕೆಂದರೆ ಇಂತಹ ಘಟನೆಗಳು ಹಲವಾರು ಶ್ರೇಷ್ಠ ವ್ಯಕ್ತಿಗಳ ಜೀವನದಲ್ಲಿಯೂ ಆಗಿದ್ದನ್ನು ನಾವು ಕಾಣುತ್ತೇವೆ. ಆದರೆ ದೇವರ ಆಶ್ರಯದಲ್ಲಿ ಅವರ ಅನುಗ್ರಹದಲ್ಲಿ ನಾವೆಲ್ಲರೂ ಸುರಕ್ಷಿತರು ಎಂಬ ಸತ್ಯವನ್ನು ಇಂದಿನ ಆರಾಧನಾ ವಿಧಿಯಲ್ಲಿ ನಾವು ಮನಗಾಣಬೇಕಾಗಿದೆ. ದೇವರ ಅನುಗ್ರಹ ಸದಾ ನಮ್ಮ ಮೇಲಿದೆ. ಆದರೆ ಈ ಅನುಗ್ರಹವು ನಮ್ಮ ಜೀವನದಲ್ಲಿ ಫಲಪ್ರದವಾಗಬೇಕಾದರೆ ನಮ್ಮ ಪ್ರಯತ್ನವನ್ನು ನಾವು ಮಾಡಬೇಕು ಆಗ ಮಾತ್ರ ನಾವು ಅಬಲತೆಯ ಕ್ಷಣಗಳಿಗೆ ಬಲಿಯಾಗದಂತೆ ಎಚ್ಚರವಹಿಸಬಹುದು.
ಮೊದಲ ವಾಚನ: 2 ಸಮು 7.1-5, 8-12, 14, 16
===============================
ಇಂದಿನ ಮೊದಲನೆಯ ವಾಚನದಲ್ಲಿ ದೇವರ ಅನುಗ್ರಹ ಹೇಗೆ ದಾವೀದನನ್ನು ಪ್ರಬಲ ಅರಸನನ್ನಾಗಿ ಆಯ್ದುಕೊಂಡು ತಮ್ಮ ಪ್ರಜೆಗಳನ್ನು ಪರಿಪಾಲಿಸಿತು ಎಂಬುದನ್ನು ನಾವು ನೋಡುತ್ತೇವೆ. ಸರ್ವೇಶ್ವರ ಸ್ವಾಮಿಯ ಅನುಗ್ರಹ ದಾವೀದನೊಂದಿಗಿದ್ದು ಆತನಲ್ಲಿ ಬಲ ತುಂಬಿತು ಮಾತ್ರವಲ್ಲ ಅವನ ಮನೆತನವನ್ನೂ ಅರಸುತನವನ್ನೂ ಸ್ಥಿರವಾಗಿಸಿತು ಹೀಗೆಯೇ ಅವನ ಸಿಂಹಾಸನವನ್ನು ಶಾಶ್ವತಗೊಳಿಸಿತು.
ಎರಡನೇ ವಾಚನ: ರೋಮನರಿಗೆ 16.25-27
=====================
ಇಂದಿನ ಎರಡನೆಯ ವಾಚನದಲ್ಲಿ ದೇವರ ಅನುಗ್ರಹಭರಿತ ವಾಕ್ಯ ಕ್ರಿಯಾತ್ಮಕವಾದುದು, ಪರಿಣಾಮಕಾರಿಯಾದುದು ಹಾಗೂ ಪರಿವರ್ತನೆಯನ್ನು ತರುವಂಥದ್ದು ಎಂಬುದನ್ನು ನಾವು ನೋಡುತ್ತೇವೆ. ಅವರ ವಾಕ್ಯ ಹೇಗೆ ಅನ್ಯಧರ್ಮೀಯರನ್ನೂ ವಿಧೇಯರನ್ನಾಗಿ ಮಾಡಿ ಅವರೂ ದೇವರನ್ನು ವಿಶ್ವಾಸಿಸುವಂತೆ ಮಾಡಲು ಹಾಗೂ ವಿಶ್ವಾಸಿಸುವವರನ್ನು ಇನ್ನೂ ವಿಶ್ವಾಸದಲ್ಲಿ ದೃಢಪಡಿಸಲು ಶಕ್ತಿಯಲ್ಲದು ಎಂಬುದನ್ನು ನಾವು ಅರ್ಥಮಾಡಕೊಳ್ಳಬಹುದು. ಹಾಗೆ ಜೀವಿಸಲು ನಮಗೆಲ್ಲ ಆತ್ಮಸ್ಥೈರ್ಯ ತುಂಬುವುದು.
ಶುಭಸಂದೇಶ: ಲೂಕ 1.26-38
===================
ಇಂದಿನ ಶುಭಸಂದೇಶದಲ್ಲಿ ದೇವರ ಅನುಗ್ರಹದ ದಿವ್ಯ ವಾರ್ತೆ ಇಂದು ಪ್ರಭು ಯೇಸುವಿನ ಮುಖಾಂತರ ಮಾನವ ರೂಪ ತಾಳುವುದನ್ನು ಕಾಣುತ್ತೇವೆ ಹಾಗೂ ದೇವರ ಈ ಅನುಗ್ರಹದಿಂದ ಮರಿಯಮ್ಮನವರು ದೇವರ ತಾಯಿಯಾಗುವ ಸೌಭಾಗ್ಯವನ್ನು ತಮ್ಮದಾಗಿಸಿಕೊಂಡು ದೇವರ ಯೋಜನೆಗೆ ತಮ್ಮ ಸಂಪೂರ್ಣ ಸಮ್ಮತಿಯನ್ನು ಸೂಚಿಸುವುದರ ಮೂಲಕ, ಮನುಕುಲದ ರಕ್ಷಣಾ ಚರಿತ್ರೆಯ ನಿಜ ನಾಯಕರಾದರು ಎಂಬುದನ್ನು ನಾವು ನೋಡುತ್ತೇವೆ.
ಪ್ರಿಯರೇ, ಅನಾದಿಕಾಲದಿಂದಲೂ ನಮ್ಮ ಸಮಾಜದಲ್ಲಿ ಲಿಂಗಸಂಬಂಧಗಳನ್ನು ಪುರುಷರ ಪರವಾಗಿ, ಪುರುಷ ಪ್ರಧಾನವಾಗಿ ರೂಪಿಸಿಕೊಂಡು ಬರಲಾಗಿದೆ. ಭಾರತೀಯ ಪರಂಪರೆಯಲ್ಲೂ ಅದು ಮೂಲತಃ ಲಿಂಗ ತಾರತಮ್ಯ ಮೌಲ್ಯದ್ದಾಗಿದೆ. ಈ ಮೌಲ್ಯವು ಸಮಾಜದ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ಅದು ಎಷ್ಟು ಗಟ್ಟಿಯಾಗಿ ಸಮಾಜದಲ್ಲಿ ನೆಲೆಯೂರಿದೆಯೆಂದರೆ, ಅದು ಇಂದಿಗೂ ಸಮಾಜವನ್ನು ಕಾಡುತ್ತಿದೆ ಇದಕ್ಕೆ ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧದ ವಿರುದ್ಧ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪಿನ ಬಗ್ಗೆ ಮೂಲಭೂತವಾದಿಗಳು ನಡೆಸಿರುವ ಪ್ರತಿಭಟನೆಯೇ ಸಾಕ್ಷಿಯಾಗಿದೆ. ಈ ಪುರುಷಶಾಯಿ ಮೌಲ್ಯವು 21 ನೆಯ ಶತಮಾನದಲ್ಲಿಯೇ ಇಷ್ಟೊಂದು ಪ್ರಬಲವಾಗಿರಬೇಕಾದರೆ, ಅದು ಯೇಸುವಿನ ಕಾಲದಲ್ಲಿ ಎಷ್ಟು ಗಟ್ಟಿಯಾಗಿರಬೇಡ! ಇಂದಿನ ಶುಭಸಂದೇಶದಲ್ಲಿ ದೇವರೇ ಒಂದು ಹೆಣ್ಣಿನ ಗರ್ಭದ ಮೂಲಕ ಜನಿಸಲು ಒಬ್ಬ ಸಾಮಾನ್ಯ ಹೆಣ್ಣಾದ ಮರಿಯಳನ್ನು ಆರಿಸಿಕೊಳ್ಳುತ್ತಾರೆ. ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು, ಏರಿಸಿರುವನು ಉನ್ನತಿಗೆ ದೀನದಲಿತರನು (ಲೂಕ 1:52). ಈ ಒಂದು ದೈವಭರಿತ ಘಟನೆಯನ್ನು ಯಾವ ವೈದ್ಯನೂ ಒಪ್ಪಿಕೊಳ್ಳುವುದಿಲ್ಲ. ಯಾವ ಪುರುಷನ ಸಂಸರ್ಗವಿಲ್ಲದೆ ಮರಿಯ ದೇವಪುತ್ರನಿಗೆ ಜನ್ಮನೀಡುತ್ತಾಳೆ. ಒಂದು ದೃಷ್ಟಿಕೋನದಿಂದ ನೋಡಿದರೆ, ಇದೊಂದು ವಿಶೇಷವಾದ ಭಾಗ್ಯ ಏಕೆಂದರೆ ದೇವರ ತಾಯಿಯಾಗುವ ಸೌಭಾಗ್ಯ ಯಾರಿಗೂ ಸಿಗುವುದಿಲ್ಲ. ಆದರೆ ಯೆಹೂದ್ಯರ ನಿಯಮದ ಪ್ರಕಾರ ನೋಡಿದರೆ ಮರಿಯಳಿಗೆ ಅವಮಾನದ ಸಂಗತಿ. ಏಕೆಂದರೆ ಮದುವೆಯ ಮುಂಚೆ ಗರ್ಭಧರಿಸುವುದು ಕಾನೂನು ಬಾಹಿರ. ಆದರೂ ಮರಿಯಾ ದೇವದೂತರ ಸಂದೇಶಕ್ಕೆ ತಲೆಬಾಗಿ ಒಪ್ಪಿಗೆಯನ್ನು ಸೂಚಿಸುತ್ತಾಳೆ. ನಮ್ಮ ಜೀವನದಲ್ಲೂ ಅನೇಕ ಸಮಸ್ಯೆಗಳು ಎದುರಾಗಬಹುದು. ಹಲವು ಬಾರಿ ನಮ್ಮ ಸಂಕಟಗಳಿಗೆ ಸಮಂಜಸ ಉತ್ತರ ಸಿಗದೆ ಹೋಗಬಹುದು. ಆ ಕ್ಷಣದಲ್ಲಿ ನನ್ನ ಪ್ರತಿಕ್ರಿಯೆ ಏನು? ದೇವರ ಅನುಗ್ರಹದಿಂದ ದೂರಹೋಗುತ್ತೇನೆಯೇ ಅಥವಾ ಅವರ ಅನುಗ್ರಹಕ್ಕೆ ಶಿರಬಾಗಿ ದೇವರ ಅನುಗ್ರಹದ ಜೊತೆಗೆ ನನ್ನ ಪ್ರಯತ್ನವನ್ನು ಸೇರಿಸಿ ಅವರಲ್ಲಿ ನನ್ನ ವಿಶ್ವಾಸವನ್ನು ಬಲಪಡಿಸಿಕೊಳ್ಳುತ್ತೇನೆಯೇ?
ಇಂದಿನ ಮಂಗಳವಾರ್ತೆಯ ಶುಭಸಂದೇಶವು ಎಲ್ಲಾ ಮಹಿಳೆಯರಲ್ಲಿ ಧೈರ್ಯವನ್ನು ತುಂಬುವ ಹಾಗೂ ದೇವರ ಅನುಗ್ರಹವನ್ನು ಕೋರುವ ಸಂದೇಶವಾಗಿದೆ. ಆದ್ದರಿಂದ ಇಂದು ಎಲ್ಲಾ ಮಹಿಳೆಯರಿಗಾಗಿ ನಾವು ಪ್ರಾರ್ಥಿಸೋಣ. ಹೆಣ್ಣಿನ ಶೋಷಣೆ, ಅತ್ಯಾಚಾರ, ಅಸಮಾನತೆ, ಅಸ್ಪೃಶ್ಯತೆ, ದಬ್ಬಾಳಿಕೆ ನಿಲ್ಲಿಸಿ ಸಹಬಾಳ್ವೆ, ಪರಸ್ವರ ಗೌರವ, ಘನತೆ, ಸಮಾನತೆ ಕಾಪಾಡಿಕೊಳ್ಳುವ ವರಕ್ಕಾಗಿ ಪ್ರಾರ್ಥಿಸೋಣ.
=======================
ಚಿಂತನೆ – ಫಾ ಬರ್ತೊಲೊಮ್ ಎಸ್ ಜೆ
========================
No comments:
Post a Comment