Tuesday, 24 November 2020

ಡಿಸೆಂಬರ್ 22, 2020 ಮಂಗಳವಾರ

 ಡಿಸೆಂಬರ್ 22, 2020 ಮಂಗಳವಾರ                        [ನೇರಳೆ]
ಮೊದಲ ವಾಚನ: 1 ಸಮು 1.24-28
ಕೀರ್ತನೆ 1 ಸಮು2:1, 4-5, 6-7, 8, ಶ್ಲೋಕ.1
ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ
ಶುಭಸಂದೇಶ: ಲೂಕ 1.46-56
==================
ಮೊದಲನೇ ವಾಚನ
1 ಸಮು 1.24-28
24 : ಅನಂತರ ಆಕೆ ಮಗನನ್ನು ಶಿಲೋವಿನಲ್ಲಿದ್ದ ಸರ್ವೇಶ್ವರನ ಮಂದಿರಕ್ಕೆ ತಂದಳು. ಅವನು ಇನ್ನೂ ಚಿಕ್ಕವನು ಆಗಿದ್ದನು. ಜೊತೆಗೆ ಅವರು ಮೂರು ವರ್ಷದ ಹೋರಿಯೊಂದನ್ನು, ಹತ್ತು ಕಿಲೋಗ್ರಾಂ ಹಿಟ್ಟನ್ನು ಹಾಗು ಒಂದು ತಿತ್ತಿ ದ್ರಾಕ್ಷಾರಸವನ್ನೂ ತಂದಿದ್ದರು.
25 : ಆ ಹೋರಿಯನ್ನು ಬಲಿದಾನ ಮಾಡಿದ ಮೇಲೆ ಮಗುವನ್ನು ಏಲಿಯ ಬಳಿಗೆ ತರಲಾಯಿತು.
26 : ಹನ್ನಳು ಏಲಿಗೆ, “ಸ್ವಾವಿೂ, ನಿಮ್ಮ ಜೀವದಾಣೆ, ಹಿಂದೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡುತ್ತಾ ಇಲ್ಲಿ ನಿಮ್ಮ ಹತ್ತಿರ ನಿಂತಿದ್ದ ಮಹಿಳೆ ನಾನೇ.
27 : ಸರ್ವೇಶ್ವರ ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ.
28 : ಇವನನ್ನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟಿದ್ದೇನೆ. ಬದುಕಿರುವ ತನಕ ಇವನು ಅವರಿಗೇ ಪ್ರತಿಷ್ಠಿತನು,” ಎಂದು ಹೇಳಿದಳು. ಬಳಿಕ ಅವರು ಸರ್ವೇಶ್ವರ ಸ್ವಾಮಿಯನ್ನು ಆರಾಧಿಸಿದರು.
===================
ಕೀರ್ತನೆ 
1 ಸಮು2:1, 4-5, 6-7, 8, ಶ್ಲೋಕ.1
ಶ್ಲೋಕ: ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ||
1 : “ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ 
      ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ 
      ನನಗಿದೆ ಶತ್ರುಗಳನ್ನೂ ಧಿಕ್ಕರಿಸುವ ಶಕ್ತಿ 
      ನನಗಿತ್ತಿರುವನಾ ಸಂತಸದಾಯಕ ಮುಕ್ತಿ.||
4 : ಮುರಿದು ಬಿದ್ದಿವೆ ಶೂರರ ಬಿಲ್ಲುಬಾಣಗಳು
     ದುರ್ಬಲರಾದರೋ ಶೌರ್ಯದ ನಡುಕಟ್ಟಿ ನಿಂತಿಹರು.||
5 : ಉಂಡು ಸುಖದಿಂದಿರುವರು ಹಸಿವು ಗೊಂಡವರು
     ಹೊಟ್ಟೆಗಾಗಿ ಕೂಲಿಮಾಡುತ್ತಿಹರು ತೃಪ್ತರಿದ್ದವರು.
     ಬಂಜೆ ಹೆರುವಳು ಆರೇಳು ಮಕ್ಕಳನು 
     ಒಬ್ಬಂಟಿಗಳಾಗಿರುವಳು ಮಕ್ಕಳಿವೆ ಎಂದವಳು||
6 : ಜೀವ ಕೊಡುವವನು, 
     ತೆಗೆದುಕೊಳ್ಳುವವನು ಆ ಸರ್ವೇಶ್ವರನೇ |
     ಪಾತಾಳಕ್ಕಿಳಿಸುವವನು, 
     ಮೇಲಕ್ಕೆಳೆದುಕೊಳ್ಳುವವನು ಆತನೇ||
7 : ಬಡತನ, ಸಿರಿತನ ಕೊಡುವವನು ಆ ಸರ್ವೇಶ್ವರನೇ 
     ತಗ್ಗಿಸುವವನು, ಹೆಚ್ಚಿಸುವವನು ಆತನೇ.
8 : ಎತ್ತುವನಾತ ದೀನರನು ಧೂಳಿಂದ,
     ದರಿದ್ರರನು ತಿಪ್ಪೆಯಿಂದ. 
     ಕುಳ್ಳರಿಸುವನವರನು ಅಧಿಪತಿಗಳ ಸಮೇತ
    ಅನುಗ್ರಹಿಸುವನು ಹಕ್ಕಾಗಿ ಆ        ಮಹಿಮಾಸನ.
    ಕಾರಣ-ಭೂಮಿಯ ಆಧಾರ ಸ್ತಂಭಗಳು ಸರ್ವೇಶ್ವರನವೇ
   ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ||.
===================
ಶುಭಸಂದೇಶ
ಚಿಂತನೆ
ಮಾತೆ ಮರಿಯಳ ದೀನತೆಯನ್ನು ಅಭಿವ್ಯಕ್ತಿಸುವ ಸ್ತುತಿಗೀತೆ ಇಂದಿನ ಶುಭಸಂದೇಶದ ಭಾಗವಾಗಿದೆ.  ಮರಿಯಳು ಈ ಸ್ತುತಿಗೀತೆಯಲ್ಲಿ ಕೊಂಡಾಡಿರುವುದು ದೇವರ ಅಮೋಘ ಪ್ರೀತಿಯನ್ನು ಮತ್ತು ಔದಾರ್ಯವನ್ನೇ ಹೊರತು ತನ್ನ ಉನ್ನತಿಯನ್ನಲ್ಲ. 
ತಗ್ಗಿರುವ ಪ್ರದೇಶ ಸದಾ ಹಸಿರಿನಿಂದ ಕೂಡಿರುತ್ತದೆ, ನೀರು ಓಡುವುದೂ ತಗ್ಗುದಾರಿಗಳನ್ನು ಹುಡುಕಿಕೊಂಡೇ. ವರಗಳು ಅಪೇಕ್ಷಿಸದೆಯೂ ಸಿಗುವುದು ವಿನಯ, ದೀನತೆಯುಳ್ಳವರಿಗೆ ಮಾತ್ರ.  ಅಂತಹ ದೀನತೆಯಿಂದ ಶ್ರೇಷ್ಠ ವರಕ್ಕೆ ಪಾತ್ರದಾರಿಯಾದವಳು ಮರಿಯ. ಲೋಕೋದ್ಧಾರಕನನ್ನು ಎದುರುನೋಡುತ್ತಿದ್ದರೂ ಆತನಿಗೆ ತಾಯಿಯಾಗುವ ಅಮೋಘ ಸೌಭಾಗ್ಯ ತನ್ನದಾಗುವುದೆಂದು ಆಕೆ ಕಿಂಚಿತ್ತೂ ಎಣಿಸಿರಲಿಲ್ಲವೇನೋ. ಆದರೆ ದೈವತ್ವವನ್ನು ಸದಾ ತನ್ನ ಕಣ್ಣ ಮುಂದಿರಿಸಿ ಬಾಳುವವರಿಗೆ ಅದು ಸಾಧ್ಯವೆಂದು ಆಕೆ ತೋರಿಸುತ್ತಾಳೆ.  ಮಾನವಕೋಟಿಯಲ್ಲಿ ತನಗೆ ಸಿಕ್ಕ ಶ್ರೇಷ್ಠ ವರದಾನದ ಅರಿವಿನಿಂದ ತನ್ನ ಸಹೋದರಿ ಸಮಾನ ಎಲಿಜಬೇತಳನ್ನು ಆರೈಕೆ ಮಾಡಲು ಧಾವಿಸುವ ಆಕೆಯ ಸನ್ನದ್ಧತೆ, ನಾವು ಬೆಳೆದಷ್ಟೂ ಅಗತ್ಯವಿರುವವರಿಗೆ ಸನಿಹವಿರಬೇಕೆಂಬುದನ್ನು ಕಲಿಸುತ್ತದೆ. ಮರಿಯಳಂತೆ ನಮಗೆ ದೇವರು ನೀಡಿರುವ ವರದಾನಗಳಿಗೆ ಕೃತಜ್ಞರಾಗಿ, ಪರರಿಗೂ ನಮ್ಮ ಸಹಾಯ ನೀಡುತ್ತಾ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸಲು ಪ್ರಯತ್ನಿಸೋಣ.
===================

No comments:

Post a Comment