ಡಿಸೆಂಬರ್ 23, 2020 ಬುಧವಾರ [ನೇರಳೆ]
ಕೆಂಟಿಯದ ಸಂತ ಜಾನ್ , ಯಾಜಕ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಮಲಾಕಿ 3.1-4; 4.5-6
ಕೀರ್ತನೆ 25:4-5, 8-9, 10, 14; ಶ್ಲೋಕ.ಲೂಕ 21:28
ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ
ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು
ಶುಭಸಂದೇಶ: ಲೂಕ 1.57-66
==================
ಮೊದಲನೇ ವಾಚನ
ಮಲಾಕಿ 3.1-4; 4.5-6
1 : ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.”
2 : “ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು?
3 : ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು.
4 : ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.”
5 : “ಇಗೋ, ಸರ್ವೇಶ್ವರಸ್ವಾಮಿಯ ಆಗ ಮನದ ಭಯಂಕರ ಮಹಾದಿನ ಬರುವುದಕ್ಕೆ ಮುಂಚೆ ಪ್ರವಾದಿ ಎಲೀಯನನ್ನು ನಿಮ್ಮಲ್ಲಿಗೆ ಕಳುಹಿಸುವೆನು.
6 : ನಾನು ಬಂದು ಲೋಕವನ್ನು ಶಪಿಸಿ ನಾಶಗೊಳಿಸದಂತೆ ಆತನು ಹೆತ್ತವರ ಮನಸ್ಸನ್ನು ಮಕ್ಕಳ ಕಡೆಗೂ, ಮಕ್ಕಳ ಮನಸ್ಸನ್ನು ಹೆತ್ತವರ ಕಡೆಗೂ ಒಲಿಸಿ ಅವರನ್ನು ಒಂದಾಗಿಸುವನು.”
===================
ಕೀರ್ತನೆ
ಕೀರ್ತನೆ 25:4-5, 8-9, 10, 14; ಶ್ಲೋಕ.ಲೂಕ 21:28
ಶ್ಲೋಕ: ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ
ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು||
4 : ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು /
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು //
5 : ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ /
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ //
8 : ತ್ಯಸ್ವರೂಪನು, ದಯಾವಂತನು ಪ್ರಭು /
ದಾರಿತಪ್ಪಿದವರಿಗೆ ಬೋಧಕನು ವಿಭು //
9 : ದೀನರನು ನಡೆಸುವನು ತನ್ನ ವಿಧಿಗನುಸಾರ /
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ //
10 : ಪ್ರಭುವಿನೊಪ್ಪಂದಗಳ ಪಾಲಕರಿಗೆ
ಆತನ ಮಾರ್ಗಗಳು ಸನ್ನುತ / ಆತನ
ವಿಧಿ ನಿಬಂಧನೆಗಳ ಪರಿಪಾಲಕರಿಗೆ
ಅವುಗಳು ಸುಪ್ರೀತ //
14 : ಪ್ರಭುವಿನ ಮೈತ್ರಿ,ಭಯಭಕುತಿಯುಳ್ಳವರಿಗೆ//
ಅಂತವರಿಗೆ ವ್ಯಕ್ತ ಆತನ ಒಡಂಬಡಿಕೆ//
===================
ಶುಭಸಂದೇಶ
ಲೂಕ 1.57-66
57 : ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವಿತ್ತಳು.
58 : ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು.
59 : ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು.
60 : ಆದರೆ ಮಗುವಿನ ತಾಯಿ, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು.
61 : ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಈ ಹೆಸರು ಇಲ್ಲವಲ್ಲಾ,” ಎಂದು ಹೇಳಿ,
62 : “ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?” ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು.
63 : ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, ‘ಇವನ ಹೆಸರು ಯೊವಾನ್ನ’ ಎಂದು ಬರೆದನು. ಎಲ್ಲರೂ ಬೆರಗಾದರು.
64 : ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು.
65 : ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಈ ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು.
66 : ಕೇಳಿದವರೆಲ್ಲರೂ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಆ ಮಗುವಿನ ಮೇಲಿತ್ತು.
===================
ಚಿಂತನೆ
ಹುಟ್ಟುವ ಪ್ರತಿಯೊಂದು ಮಗು ಈ ಜಗತ್ತಿಗೆ ಒಂದು ಸಂದೇಶದೊಂದಿಗೆ ಬರುತ್ತದೆ, ದೇವರು ಜಗತ್ತನ್ನು ಇನ್ನೂ ಪ್ರೀತಿಸುತ್ತಾರೆಂಬಂತೆ. ಯೊವಾನ್ನನ ಜನನವು ಜಕಾರೀಯ ಮತ್ತು ಎಲಿಜಬೇತಳಲ್ಲಿ ಒಂದು ಅದ್ಭುತವನ್ನೇ ಮಾಡಿತು. ಮುಪ್ಪಿನಲ್ಲಿ ಮಗುವನ್ನು ಕರುಣಿಸಿದ ದೇವರಿಗೆ ವಂದನೆಯನ್ನು ಸಲ್ಲಿಸಲು ಮತ್ತು ದೇವರ ಕರುಣೆಯನ್ನು ಆಚರಿಸಲು ಸಂಬಂಧಿಕರೆಲ್ಲರೂ ಸೇರಿದ್ದರು. ಎಂಟನೆಯ ದಿನ ಮಗುವಿಗೆ ಸುನ್ನತಿ ಮಾಡಿ `ಯೊವಾನ್ನ’ ಎಂದು ನಾಮಕರಣ ಮಾಡಿದರು. `ಯೊವಾನ್ನ’ ಎಂದರೆ `ದೇವರು ಕೃಪಾಪೂರ್ಣನು’ (God is gracious) ಎಂದರ್ಥ. ಪಾಲೆಸ್ತೀನಿನ ಸುತ್ತಮುತ್ತಲಿನ ಅನೇಕ ದೇಶಗಳಲ್ಲಿ ಸುನ್ನತಿ ಮಾಡುವುದು ವಾಡಿಕೆ. ಆದರೆ ಯೆಹೂದ್ಯರಿಗೆ ಇದೊಂದು ಧಾರ್ಮಿಕ ವಿಧಿಯಾಗಿತ್ತು. ಏಕೆಂದರೆ ಸುನ್ನತಿ ಮಾಡಿಕೊಳ್ಳುವುದರ ಮೂಲಕ ಒರ್ವನು `ದೇವ ಪ್ರಜೆ’ಯ ಸದಸ್ಯನಾಗುತ್ತಿದ್ದನು, `ಅಬ್ರಹಾಮನ ಸಂತತಿ’ ಎನಿಸಿ ಕೊಳ್ಳುತ್ತಿದ್ದನು (ಆದಿ 17:12) ಯೆಹೂದ್ಯರು ಸುನ್ನತಿಯ ಮೂಲಕವೇ ದೇವರ ಸಕಲ ವಾಗ್ದಾನಗಳಿಗೆ ಬಾಧ್ಯಸ್ಥರಾಗುತ್ತಿದ್ದರು.
===================
No comments:
Post a Comment