Sunday, 22 November 2020

ಸೆಪ್ಟೆಂಬರ್ 24, 2020 ಗುರುವಾರ

 ಸೆಪ್ಟೆಂಬರ್ 24, 2020 ಗುರುವಾರ                        [ಹಸಿರು]
ಧನ್ಯ ಎಮಿಲಿ ತವೆರ್ನಿಯರ್ ಗಮೆಲಿನ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಉಪದೇಶಕ 1.2-11
ಕೀರ್ತನೆ 90: 3-4, 5-6, 12-13, 14, 17. ಶ್ಲೋಕ.1
ಪ್ರಭೂ, ತಲಾತಲಾಂತರಕೂ ಶ್ರೀನಿವಾಸ ನೀನೆಮಗೆ
ಶುಭಸಂದೇಶ: ಲೂಕ 9.7-9
==================
ಮೊದಲನೇ ವಾಚನ
ಉಪದೇಶಕ 1.2-11
2 : ಉಪದೇಶಕನು ಹೇಳುವುದನ್ನು ಕೇಳಿ: ವ್ಯರ್ಥಗಳಲ್ಲಿ ವ್ಯರ್ಥ, ವ್ಯರ್ಥವೇ ವ್ಯರ್ಥ, ಎಲ್ಲವೂ ವ್ಯರ್ಥ!
3 : ಈ ಲೋಕದಲ್ಲಿ ಮನುಷ್ಯನು ಪಡುವ ಎಲ್ಲಾ ಪ್ರಯಾಸದಿಂದ ಅವನಿಗೆ ದೊರಕುವ ಲಾಭವಾದರೂ ಏನು?
4 : ಒಂದು ಸಂತತಿ ಗತಿಸುತ್ತದೆ, ಮತ್ತೊಂದು ಸಂತತಿ ಬರುತ್ತದೆ, ಭೂಮಿಯಾದರೋ ಶಾಶ್ವತವಾಗಿ ನಿಲ್ಲುತ್ತದೆ.
5 : ಸೂರ್ಯನು ಮೂಡುತ್ತಾನೆ, ಸೂರ್ಯನು ಮುಳುಗುತ್ತಾನೆ, ತಾನು ಹೊರಟ ಸ್ಥಳಕ್ಕೆ ಮರಳಿ ಓಡುತ್ತಾನೆ.
6 : ಗಾಳಿ ದಕ್ಷಿಣಕ್ಕೆ ಬೀಸುತ್ತದೆ, ಉತ್ತರದ ಕಡೆಗೆ ತಿರುಗುತ್ತದೆ, ಸುತ್ತುತ್ತಾ ಸುತ್ತುತ್ತಾ ಹೋಗಿ ಹಿಂತಿರುಗಿ ಬರುತ್ತದೆ.
7 : ನದಿಗಳು ಹರಿದು ಸಮುದ್ರವನ್ನು ಸೇರುತ್ತವೆ, ಆದರೂ ಸಮುದ್ರವು ತುಂಬುವುದಿಲ್ಲ, ಅವು ಎಲ್ಲಿಂದ ಹರಿದು ಬರುತ್ತವೋ ಅಲ್ಲಿಗೆ ಹಿಂತಿರುಗಿ ಹೋಗುತ್ತವೆ.
8 : ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ.
9 : ಮನುಷ್ಯನಿಂದ ವಿವರಿಸಲಾಗದಷ್ಟು ಎಲ್ಲವೂ ನೀರಸ. ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಎಷ್ಟು ಕೇಳಿದರೂ ಕಿವಿಗೆ ದಣಿವಿಲ್ಲ.
10 : ಇಗೋ, ಹೊಸದು ಎನಿಸುಕೊಳ್ಳುವ ವಸ್ತು ಇದ್ದರೂ ಅದು ನಮಗಿಂತ ಮುಂಚೆಯೇ ಪುರಾತನ ಕಾಲದಲ್ಲೇ ಇದ್ದುದು.
11 : ಹಿಂದಿನ ಕಾಲದವರ ಜ್ಞಾಪಕವು ಇಂದಿನವರಿಗಿಲ್ಲ. ಮುಂದಿನ ಕಾಲದವರ ಜ್ಞಾಪಕವು ಅವರಿಗಿಂತ ಮುಂದೆ ಬರುವವರಿಗೆ ಇರುವುದಿಲ್ಲ.
===================
ಕೀರ್ತನೆ 
ಕೀರ್ತನೆ 90: 3-4, 5-6, 12-13, 14, 17. ಶ್ಲೋಕ.1
ಪ್ರಭೂ, ತಲಾತಲಾಂತರಕೂ ಶ್ರೀನಿವಾಸ ನೀನೆಮಗೆ
3 : ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ /
 ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ ಎನ್ನುತಿಹೆ //
4 : ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ / 
ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ //
5 ಮನುಜರು ನೀ ಹರಿದೋಡಿಸುವ ಹೊಯಿಲು / 
ಇರುಳಿನ ಕನಸು, ಹಗಲಿನ ಗರಿಹುಲ್ಲು //
6 : ಚಿಗುರಿ ಹೂಬಿಡುವುದದು ಬೆಳಗಿನಲಿ / 
ಸೊರಗಿ ತರಗಾಗುವುದು ಬೈಗಿನಲಿ //
12 : ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು / 
ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು //
13 : ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ?/ 
ನಿನ್ನೀ ಸೇವಕರ ಮೇಲಿರಲಿ ಮರುಕ //
14 : ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ / 
ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ //
17 : ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲಿರಲಿ / 
ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ / 
ಅಹುದು, ನಮ್ಮ ಕಾರ್ಯಗಳೆಲ್ಲಾ ಸಫಲವಾಗಲಿ //
===================
ಶುಭಸಂದೇಶ
ಲೂಕ 9.7-9
7 : ನಡೆಯುತ್ತಿದ್ದ ಎಲ್ಲ ಸಂಗತಿಗಳು ಸಾಮಂತ ರಾಜ ಹೆರೋದನ ಕಿವಿಗೆ ಬಿದ್ದುವು. ಅವನ ಮನಸ್ಸು ಕಳವಳಗೊಂಡಿತ್ತು. ಏಕೆಂದರೆ, ‘ಯೊವಾನ್ನನು ಮರಳಿ ಜೀವಂತನಾಗಿ ಎದ್ದಿದ್ದಾನೆ’ ಎಂದು ಕೆಲವರೂ,
8 : ‘ಎಲೀಯನು ಪುನಃ ಕಾಣಿಸಿಕೊಂಡಿದ್ದಾನೆ’, ಎಂದು ಇನ್ನು ಕೆಲವರೂ, ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ,’ ಎಂದು ಮತ್ತೆ ಕೆಲವರೂ ಹೇಳುತ್ತಿದ್ದರು.
9 : ಹೆರೋದನಾದರೋ, ‘ಯೊವಾನ್ನನೇ ! ಅವನನ್ನು ನಾನೇ ಶಿರಚ್ಛೇದನ ಮಾಡಿಸಿದೆನಲ್ಲಾ; ಮತ್ತೆ ಇವನಾರು? ಇವನ ಬಗ್ಗೆ ಇಂಥಾ ವಿಷಯಗಳನ್ನೆಲ್ಲ ಕೇಳುತ್ತಾ ಇರುವೆನಲ್ಲಾ!’ ಎಂದುಕೊಂಡು, ಯೇಸುವನ್ನು ನೋಡಲು ಅವಕಾಶ ಹುಡುಕುತ್ತಿದ್ದನು.
===================
ಚಿಂತನೆ
ಯೇಸುವಿನ ಆದ್ಭುತ ಕಾರ್ಯಗಳನ್ನೊ, ಸೂಚಕ ಕಾರ್ಯಗಳೊ. ಪ್ರವಾದನಾಕಾರ್ಯಗಳನ್ನೊ ಕೇಳಿದ ಹೆರೋದರಸ ಕಳವಳಗೊಳ್ಳುತ್ತಾನೆ. ಈತ ತನ್ನ ಸಹೋದರ ಫಿಲಿಪ್ಪನ ಹೆಂಡತಿಯನ್ನು ಇಟ್ಟುಕೊಂಡುದರಿಂದ, ಅದನ್ನು ವಿರೋಧಿಸಿದ ಪ್ರವಾದಿ ಸ್ನಾಪಕ ಯೊವಾನ್ನರನ್ನು ಸೆರೆಹಿಡಿದು ಕೊಲ್ಲಲು ಅಪ್ಪಣೆಯಿತ್ತಿದ್ದ ನೀಚ. ಈಗ ಯೇಸುವಿನ ಕಾರ್ಯಗಳನ್ನು ಕಂಡು ಸ್ನಾಪಕ ಯೊವಾನ್ನನೇ ಮರಳಿ ಬಂದಿರುಬಹುದೆಂದು ಭಯಪಡುತ್ತಾನೆ. ಯೇಸುವನ್ನು ನೋಡಲು ಆಶಿಸುತ್ತಾನೆ. ಯಾವಾಗ ಮನುಷ್ಯ ತಪ್ಪು ಮಾಡುತ್ತಾನೆಯೋ, ಆಗ ಆತನ ಮನಸ್ಸು ಮಾಡಿದ್ದ ತಪ್ಪಿನ ಪ್ರಜ್ಞೆಯಿಂದ ಆತನನನ್ನು ಯಾವಾಗಲು ಕಾಡುತ್ತಿರುತ್ತದೆ. ಆದ್ದರಿಂದ ನಾವಾದರೂಒಳ್ಳೆಯವರಾಗಿ ಬಾಳಬೇಕು, ಸ್ವರ್ಗವನ್ನು ಪಡೆಯಬೇಕು.
===================

No comments:

Post a Comment