Sunday, 22 November 2020

ಸೆಪ್ಟೆಂಬರ್ 23, 2020 ಬುಧವಾರ

 ಸೆಪ್ಟೆಂಬರ್ 23, 2020 ಬುಧವಾರ                        [ಬಿಳಿ]
ಪಿಯೆತ್ರೆಲ್ಚಿನದ  ಸಂತ ಪಯಸ್ (ಪಾದ್ರೆ ಪಿಯೋ), ಯಾಜಕ (ಸ್ಮರಣೆ)
ಮೊದಲ ವಾಚನ: ಜ್ಞಾನೋಕ್ತಿ 30.5-9
ಕೀರ್ತನೆ 119: 29, 72, 80, 101, 104, 163. ಶ್ಲೋಕ.105
ನಿನ್ನ ವಾಕ್ಯ ನನ್ನ ಕಾಲಿನ ನಡೆಗೆ ಕೈದೀಪ
ಶುಭಸಂದೇಶ: ಲೂಕ 9.1-6
==================
  ಮೊದಲನೇ ವಾಚನ
ಜ್ಞಾನೋಕ್ತಿ 30.5-9
5 : ದೇವರ ಒಂದೊಂದು ಮಾತೂ ಪರಿಶುದ್ಧ; ಆತನೇ ಶರಣರ ಖೇಡ್ಯ;
6 : ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಇಲ್ಲವಾದರೆ ಆತ ನಿನ್ನನ್ನು ಖಂಡಿಸಿಯಾನು, ನೀನು ಸುಳ್ಳುಗಾರನಾಗಿ ತೋರಿಬಂದೀಯೆ!
7 : ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ: ನಿರಾಕರಿಸಬೇಡ, ನಾನು ಸಾಯುವುದರೊಳಗೆ ಅವುಗಳನ್ನು ಅನುಗ್ರಹಿಸು:
8 : ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು.
9 : ಎಲ್ಲವೂ ಇದ್ದರೆ “ಸರ್ವೇಶ್ವರನು ಯಾರು?” ಎಂದು ನಿನ್ನನ್ನೆ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.
===================
ಕೀರ್ತನೆ 119: 29, 72, 80, 101, 104, 163. ಶ್ಲೋಕ.105
ನಿನ್ನ ವಾಕ್ಯ ನನ್ನ ಕಾಲಿನ ನಡೆಗೆ ಕೈದೀಪ
29 : ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ / 
ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ //
72 : ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ / 
ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ //
89 : ಹೇ ಪ್ರಭು, ನಿನ್ನ ವಾಕ್ಯ ಶಾಶ್ವತ / 
ಪರಲೋಕದಲಿ ಅದು ಚಿರ ಶಾಶ್ವತ //
101 : ನಿನ್ನ ವಾಕ್ಯವನು ಅನುಸರಿಸುವ ಧ್ಯೇಯದಿಂದ / 
ನನ್ನ ಹೆಜ್ಜೆಗಳನು ತಡೆದೆನು ದುರ್ಮಾರ್ಗದಿಂದ //
104 : ವಿವೇಕಿಯಾದೆನು ನಿನ್ನ ನಿಯಮಗಳ ಮೂಲಕ / 
ದ್ವೇಷಿಸುತಿಹೆನು ಪ್ರತಿಯೊಂದು ಮಿಥ್ಯಾ ಮಾರ್ಗ //
163 : ಹಿಡಿಸದು ಎನಗೆ ಮಿಥ್ಯವಾದುದು, ಅದು ಎನಗೆ ಅಸಹ್ಯ / 
ನಿನ್ನ ಧರ್ಮಶಾಸ್ತ್ರವಾದರೋ ನನಗೆ ಸುಪ್ರಿಯ //
===================
ಶುಭಸಂದೇಶ
ಲೂಕ 9.1-6
1 : ಯೇಸುಸ್ವಾಮಿ ಹನ್ನೆರಡು ಮಂದಿ ಪ್ರೇಷಿತರನ್ನು ಒಟ್ಟಿಗೆ ಕರೆದು ಎಲ್ಲ ದೆವ್ವಗಳನ್ನು ಬಿಡಿಸಲೂ ರೋಗ ನಿವಾರಣೆಮಾಡಲೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು.
2 : ಅನಂತರ ದೇವರ ಸಾಮ್ರಾಜ್ಯವನ್ನು ಕುರಿತು ಬೋಧಿಸುವುದಕ್ಕೂ ರೋಗಿಗಳನ್ನು ಗುಣಪಡಿಸುವುದಕ್ಕೂ ಅವರನ್ನು ಕಳುಹಿಸಿದರು.
3 : ಕಳುಹಿಸುವಾಗ ಅವರಿಗೆ ಇಂತೆಂದರು, “ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ; ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಡ. ಎರಡು ಅಂಗಿಗಳೂ ಬೇಕಾಗಿಲ್ಲ.
4 : ಯಾವ ಮನೆಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೋ ಆ ಮನೆಯಲ್ಲೇ ತಂಗಿರಿ. ಅಲ್ಲಿಂದಲೇ ಮುಂದಕ್ಕೆ ಸಾಗಿರಿ.
5 : ಯಾವ ಊರಿನವರಾದರೂ ನಿಮ್ಮನ್ನು ಸ್ವಾಗತಿಸದೆ ಹೋದಲ್ಲಿ, ನೀವು ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ,” ಎಂದರು.
6 : ಪ್ರೇಷಿತರು ಹೊರಟು ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಶುಭಸಂದೇಶವನ್ನು ಬೋಧಿಸಿದರು; ರೋಗಿಗಳನ್ನು ಗುಣಪಡಿಸಿದರು. 
===================
ಚಿಂತನೆ
ಕ್ರೈಸ್ತರ ಮೊದಲ ಕರ್ತವ್ಯ ಶುಭ ಸಂದೇಶವನ್ನು ಸಾರುವುದು. ಅಂದರೆ ಕ್ರಿಸ್ತರು ಭೋಧಿಸಿದ ಸ್ವರ್ಗ ಸಾಮ್ರಾಜ್ಯವನ್ನು ಇತರರಿಗೆ ಬೋಧಿಸುವುದು. ಯೇಸುಕ್ರಿಸ್ತರು ಹನ್ನೆರಡು ಮಂದಿ ಶಿಷ್ಯರನ್ನು ಕಳುಹಿಸುತ್ತಾ ದೆವ್ವಗಳನ್ನು ಬಿಡಿಸಲು, ರೋಗ ನಿವಾರಣೆ ಮಾಡಲು ಅವರಿಗೆ ಶಕ್ತಿಯನ್ನೂ ಅಧಿಕಾರವನ್ನೂ ನೀಡುತ್ತಾರೆ. ಶುಭಸಂದೇಶದ ಕಾರ್ಯದಲ್ಲಿ ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಾರೆ.
ಶುಭಸಂದೇಶ ಸಾರುವವನು ಏನನ್ನೂ ತೆಗೆದುಕೊಂಡೂ ಹೋಗದೆ ದೇವರ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಬೇಕೆಂದು ಹೇಳುತ್ತಾರೆ. ಸಂತ ಪೌಲರಂತೆ, ಯೇಸುವಿನ ಪ್ರೇಷಿತರಂತೆ ಸದಾ ಶುಭಸಂದೇಶ ಕಾರ್ಯದಲ್ಲಿ ನಮ್ಮನ್ನೆ ನಾನು   ತೊಡಗಿಸಿಕೊಳ್ಳಬೇಕು.
==================="

No comments:

Post a Comment