ಸೆಪ್ಟೆಂಬರ್ 26, 2020 ಶನಿವಾರ [ಹಸಿರು]
ಸಂತ ಕಾಸ್ಮಸ್ ಮತ್ತು ದಮಿಯಾನ್, ರಕ್ತ ಸಾಕ್ಷಿಗಳು
ಮೊದಲ ವಾಚನ: ಉಪದೇಶಕ 11:9- 12:8
ಕೀರ್ತನೆ 90: 3-4, 5-6, 12-13, 14, 17. ಶ್ಲೋಕ.1
ಪ್ರಭೂ, ತಲಾತಲಾಂತರಕೂ ಶ್ರೀನಿವಾಸ ನೀನೆಮಗೆ
ಶುಭಸಂದೇಶ: ಲೂಕ 9.43-45
==================
ಮೊದಲ ವಾಚನ
ಉಪದೇಶಕ 11:9- 12:8
9 : ಆದರೆ ಈ ಎಲ್ಲ ವಿಷಯಗಳಲ್ಲಿ ದೇವರು ನಿನ್ನನ್ನು ನ್ಯಾಯ ವಿಚಾರಣೆಗೆ ಗುರಿಮಾಡುವರೆಂಬುದನ್ನು ಮನದಲ್ಲಿಡು.
10 : ನಿನ್ನ ಹೃದಯದಿಂದ ವ್ಯಥೆಯನ್ನೂ ನಿನ್ನ ದೇಹದಿಂದ ಯಾತನೆಯನ್ನೂ ದೂರಮಾಡು. ಯೌವನವೂ ಪ್ರಾಯವೂ ಬೇಗ ಮಾಯವಾಗುವುವು.
1 : ಆದುದರಿಂದ ಯೌವನದಲ್ಲಿ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸಿಕೊ. ಕಷ್ಟಕರವಾದ ದಿನಗಳು ಬರುವುದಕ್ಕೆ ಮುನ್ನ, ಜೀವನ ಬೇಸರವಾಗಿದೆ ಎಂದು ನೀನು ಹೇಳುವುದಕ್ಕೆ ಮುಂಚೆ ಆತನನ್ನು ಸ್ಮರಿಸು.
2 : ಆ ಕಷ್ಟಕರವಾದ ದಿನಗಳಲ್ಲಿ ಸೂರ್ಯಚಂದ್ರನಕ್ಷತ್ರಗಳೂ ನಿನಗೆ ಮೊಬ್ಬಾಗುವುವು. ಮಳೆಯಾದ ಮೇಲೂ ಮೋಡಗಳು ಮತ್ತೆ ಬರುವುವು;
3 : ಬಲಿಷ್ಠವಾಗಿದ್ದ ನಿನ್ನ ಕಾಲುಗಳು ಬಗ್ಗುವುವು; ಹಲ್ಲುಗಳು ಉದುರಿ ಅಗಿಯುವ ಕೆಲಸ ನಿಲ್ಲುವುದು; ಕಿಟಕಿಗಳಂಥ ಕಣ್ಣುಗಳು ಮಂಕಾಗುವುವು.
4 : ಕಿವಿಗಳು ಮಂದವಾಗಿ ಹಾದಿಬೀದಿಗಳ ಶಬ್ದವು ಕೇಳಿಸವು. ಬೀಸುವ ಶಬ್ದವು ತಗ್ಗಿ ಹಕ್ಕಿಯ ಶಬ್ದಗಳಷ್ಟು ಕಿರಿಯದಾಗುವುದು; ಬೀಸುವವರ ಹಾಡೆಲ್ಲಾ ಕುಗ್ಗಿ ಹೋಗುವುದು;
5 : ದಾರಿಯಲ್ಲಿ ನಡೆವುದು ಅಪಾಯಕರವಾಗಿರುವುದು; ಹೂ ಬಿಟ್ಟ ಬಾದಾಮಿ ಮರದಂತೆ ತಲೆಗೂದಲು ನರೆತುಬಿಡುವುದು, ಮಿಡತೆಯು ಕೂಡ ಭಾರವಾಗುವುದು; ಆಸೆ ಕುಂದಿಹೋಗುವುದು. ನಿನ್ನ ನಿತ್ಯಗೃಹಕ್ಕೆ ತೆರಳಿರುವೆ, ಗೋಳಾಟದವರು ಬೀದಿಯಲ್ಲಿ ಕಾಣಿಸಿಕೊಳ್ಳುವರು,
6 : ಬೆಳ್ಳಿಯ ಸರ ಕಿತ್ತುಹೋಗುವುದು, ಚಿನ್ನದಬಟ್ಟಲು ಜಜ್ಜಿ ಹೋಗುವುದು; ಮಡಕೆ ಬುಗ್ಗೆಯ ಹತ್ತಿರವೆ ಒಡೆಯುವುದು, ಬಾವಿಯ ರಾಟೆ ಮುರಿಯುವುದು.
7 : ಮಣ್ಣಿನ ದೇಹ ತನ್ನ ಭೂಮಿಗೆ ಸೇರಿ ಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು, (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ).
8 : “ವ್ಯರ್ಥವೇ ವ್ಯರ್ಥ ! ಸಮಸ್ತವೂ ವ್ಯರ್ಥ! !” ಎನ್ನುತ್ತಾನೆ ಉಪದೇಶಕ.
===================
ಕೀರ್ತನೆ
ಕೀರ್ತನೆ 90: 3-4, 5-6, 12-13, 14, 17. ಶ್ಲೋಕ.1
ಪ್ರಭೂ, ತಲಾತಲಾಂತರಕೂ ಶ್ರೀನಿವಾಸ ನೀನೆಮಗೆ
3 : ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ /
‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ’ ಎನ್ನುತಿಹೆ //
4 : ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ /
ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ //
5 ಮನುಜರು ನೀ ಹರಿದೋಡಿಸುವ ಹೊಯಿಲು I
ಇರುಳಿನ ಕನಸು, ಹಗಲಿನ ಗರಿಹುಲ್ಲು II
6 : ಚಿಗುರಿ ಹೂಬಿಡುವುದದು ಬೆಳಗಿನಲಿ /
ಸೊರಗಿ ತರಗಾಗುವುದು ಬೈಗಿನಲಿ //
12 : ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು /
ಈ ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು //
13 : ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ?/
ನಿನ್ನೀ ಸೇವಕರ ಮೇಲಿರಲಿ ಮರುಕ //
14 : ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ /
ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ //
17 : ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲಿರಲಿ /
ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ /
ಅಹುದು, ನಮ್ಮ ಕಾರ್ಯಗಳೆಲ್ಲಾ ಸಫಲವಾಗಲಿ //
===================
ಶುಭಸಂದೇಶ
ಲೂಕ 9.43-45
43 : ದೇವರ ಮಹತ್ವವನ್ನು ಕಂಡ ಎಲ್ಲರೂ ಆಶ್ಚರ್ಯಚಕಿತರಾದರು. ಯೇಸುವಿನ ಮರಣದ ಮತ್ತೊಂದು ಮುನ್ಸೂಚನೆ (ಮತ್ತಾ. 17.22-23; ಮಾರ್ಕ 9.30-32) ಯೇಸುಸ್ವಾಮಿ ಮಾಡಿದ ಸಕಲ ಮಹತ್ಕಾರ್ಯಗಳನ್ನು ಕುರಿತು ಜನರೆಲ್ಲರೂ ಸೋಜಿಗಪಡುತ್ತಿರುವಲ್ಲಿ, ಶಿಷ್ಯರಿಗೆ,
44 : “ಈ ನನ್ನ ಮಾತು ನಿಮ್ಮ ಕಿವಿಗೆ ಇಳಿಯಲಿ. ಅದೇನೆಂದರೆ: “ನರಪುತ್ರನು ಜನರ ವಶಕ್ಕೆ ಒಪ್ಪಿಸಲ್ಪಡಲಿದ್ದಾನೆ,” ಎಂದರು.
45 : ಯೇಸು ಹೇಳಿದ ಈ ಮಾತನ್ನು ಶಿಷ್ಯರು ಗ್ರಹಿಸಿಕೊಳ್ಳಲಿಲ್ಲ; ಒಗಟಿನ ಹಾಗೆ ಇದ್ದುದರಿಂದ ಅರ್ಥಮಾಡಿಕೊಳ್ಳಲಿಲ್ಲ. ಅದನ್ನು ಕುರಿತು ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು.
==================
ಚಿಂತನೆ
ಯೇಸು ಇಂದಿನ ಶುಭಸಂದೇಶದಲ್ಲಿ ತನ್ನ ಮರಣದ ಬಗ್ಗೆ ಮುನ್ಸೂಚನೆಯನ್ನು ನೀಡುತ್ತಾರೆ. ಪ್ರಭುಯೇಸುಕ್ರಿಸ್ತರು ಬಂದಿದ್ದು ಪಾಪಿ ಮಾನವರಿಗಾಗಿ ಶಿಲುಬೆಯ ಮರಣವನ್ನು ಅನುಭವಿಸಿ ರಕ್ಷಣೆಯನ್ನು ಕೊಡಲು ತನ್ನ ಜೀವನದ ಗುರಿ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು.. ಅದನ್ನೇ ತನ್ನ ಶಿಷ್ಯರಿಗೆ ತಿಳಿಯಪಡಿಸುತ್ತಾರೆ. ಆದರೆ ಆ ಶಿಷ್ಯರು ಅವರ ಮಾತನ್ನು ಗ್ರಹಿಸಿಕೊಳ್ಳಲಾಗಲಿಲ್ಲ. ಯೇಸುವನ್ನು ಕೇಳುವುದಕ್ಕೂ ಅವರು ಅಂಜಿದರು. ಎಂದೇ ಶಿಲುಬೆಯ ಮರಣದ ನಂತರ ಆ ಮಾತನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ನಮ್ಮ ಮರಣದ ಬಗ್ಗೆ ಏನೊ ಮಾತು ಅಂದರೆ ನಮಗೆಷ್ಟು ನೋವಾಗುತ್ತದೆ. ಆದರೆ ಕ್ರಿಸ್ತರಂತೆ ನಾವು ಎಲ್ಲವನ್ನು ಎದುರಿಸಬೇಕು.
===================
No comments:
Post a Comment