Sunday, 22 November 2020

ಸೆಪ್ಟೆಂಬರ್ 27, 2020 ಭಾನುವಾರ

 ಸೆಪ್ಟೆಂಬರ್ 27, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 26ನೇ ಭಾನುವಾರ
ಮೊದಲ ವಾಚನ: ಯೆಜೆಕಿಯೇಲ 18.25-28
ಕೀರ್ತನೆ 25: 4-5, 6-9. ಶ್ಲೋಕ.6
ನೆನಸಿಕೋ ಪ್ರಭೂ, ನಿನ್ನ ನಿನ್ನ ನಿರಂತರ ಕರುಣೆಯನು
ಎರಡನೇ ವಾಚನ: ಫಿಲಿಪ್ಪಿಯರಿಗೆ 2.1-11
ಶುಭಸಂದೇಶ: ಮತ್ತಾಯ 21.28-32
----------------------------
ಸಂತ ವಿನ್ಸೆಂಟ್ ಡಿ ಪಾಲ್, ಯಾಜಕ
==================
ಮೊದಲನೇ ವಾಚನ
 ಯೆಜೆಕಿಯೇಲ 18.25-28
25 : “ಆದರೆ ನೀವು, ‘ಸರ್ವೇಶ್ವರನ ಕ್ರಮ ಸರಿಯಲ್ಲ’ ಎಂದು ಹೇಳುತ್ತಿದ್ದೀರಿ; ಇಸ್ರಯೇಲ್ ವಂಶದವರೇ, ನನ್ನ ಕ್ರಮವು ಸರಿಯಲ್ಲವೆ? ನಿಮ್ಮ ಕ್ರಮವೇ ಸರಿಯಲ್ಲವಷ್ಟೆ.
26 : ಶಿಷ್ಟನು ತನ್ನ ಶಿಷ್ಟತನವನ್ನು ಬಿಟ್ಟು ಅಧರ್ಮದಿಂದಲೇ ಸಾಯಬೇಕಾಯಿತು.
27 : ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
28 : ಅವನು ಯೋಚಿಸಿ, ತಾನು ಮಾಡುತ್ತಿದ್ದ ಅಪರಾಧಗಳನ್ನೆಲ್ಲಾ ಬಿಟ್ಟದ್ದರಿಂದ ಸಾಯನು, ಖಂಡಿತ ಜೀವಿಸುವನು.
===================
ಕೀರ್ತನೆ 
ಕೀರ್ತನೆ 25: 4-5, 6-9. ಶ್ಲೋಕ.6
ನೆನಸಿಕೋ ಪ್ರಭೂ, ನಿನ್ನ ನಿನ್ನ ನಿರಂತರ ಕರುಣೆಯನು
4 : ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು / 
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು //
5 : ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ / 
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ //
6 : ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು / 
ಆದಿಯಿಂದ ನೀ ತೋರಿದಚಲ ಪ್ರೀತಿಯನು //
7 : ಯೌವನದೆನ್ನ ಪಾಪ ಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ / 
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ //
8 : ತ್ಯಸ್ವರೂಪನು, ದಯಾವಂತನು ಪ್ರಭು / 
ದಾರಿತಪ್ಪಿದವರಿಗೆ ಬೋಧಕನು ವಿಭು //
9 : ದೀನರನು ನಡೆಸುವನು ತನ್ನ ವಿಧಿಗನುಸಾರ / 
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ //
===================
ಎರಡನೇ ವಾಚನ 
ಫಿಲಿಪ್ಪಿಯರಿಗೆ 2.1-11
1 : ಕ್ರಿಸ್ತಯೇಸುವಿನಲ್ಲಿ ನಿಮಗೆ ಉತ್ಸಾಹ, ಉತ್ತೇಜನ, ಪ್ರೀತಿ, ಪ್ರೇರಣೆ, ಪವಿತ್ರಾತ್ಮ ಅವರ ಅನ್ಯೋನ್ಯತೆ, ದೀನದಯಾಳತೆ ಇರುವುದಾದರೆ ಐಕಮತ್ಯದಿಂದ ಬಾಳಿರಿ.
2 : ನಿಮ್ಮೆಲ್ಲರಲ್ಲಿ ಒಂದೇ ಮನಸ್ಸು, ಒಂದೇ ಪ್ರೀತಿ ಇರಲಿ. ನಿಮ್ಮ ಗುರಿಧ್ಯೇಯಗಳು ಒಂದೇ ಆಗಿರಲಿ. ಆಗ ನನ್ನ ಸಂತೋಷವು ಸಂಪೂರ್ಣಗೊಳ್ಳುವುದು.
3 : ಸ್ವಾರ್ಥ ಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ.
4 : ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ.
5 : ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ:
6 : ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ.
7 : ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ.
8 : ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ.
9 : ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು.
10 : ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು.
11 : ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.
ಶುಭಸಂದೇಶ
ಮತ್ತಾಯ 21.28-32
28 : “ಈ ಬಗ್ಗೆ ನಿಮಗೇನು ಅನಿಸುತ್ತದೆ? ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, ‘ಮಗನೇ, ಈ ಹೊತ್ತು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದ.
29 : ಅದಕ್ಕೆ ಅವನು, ‘ನಾನು ಹೋಗುವುದಿಲ್ಲ’ ಎಂದು ಉತ್ತರವಿತ್ತ. ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ.
30 : ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ. ಅವನು, ‘ಇಗೋ, ಹೋಗುತ್ತೇನಪ್ಪಾ’ ಎಂದು ಹೇಳಿದ. ಆದರೆ ಹೋಗಲೇ ಇಲ್ಲ.
31 : ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು?” ಎಂದು ಯೇಸು ಕೇಳಿದರು. “ಮೊದಲನೆಯ ಮಗನೇ,” ಎಂದು ಉತ್ತರಿಸಿದರು ಅವರು. ಆಗ ಯೇಸುಸ್ವಾಮಿ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.
32 : ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು. ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪ ಪಡಲಿಲ್ಲ, ಯೊವಾನ್ನನನ್ನು ನಂಬಲೂ ಇಲ್ಲ.
ಚಿಂತನೆ
ಸಾಧಾರಣ ಕಾಲದ 26ನೇ ಭಾನುವಾರ
ವಿಧೇಯತೆ ನಮ್ಮ ಆದ್ಯತೆ
ವಿಧೇಯತೆ ಎಂಬುದು ಎಲ್ಲಾ ತ್ಯಾಗಗಳಲ್ಲೂ ಶ್ರೇಷ್ಠ.  ವಿಧೇಯತೆಯಿಂದ ಮಾನವ ತನ್ನನ್ನೇ ತಗ್ಗಿಸಿಕೊಳ್ಳುತ್ತಾನೆ ಎಂದೇ ಅವನನ್ನು ದೇವರು ಉನ್ನತಿಗೇರಿಸುವರು. ನೀತಿವಂತರೆನಿಸಿಕೊಳ್ಳುವವರೆಲ್ಲರೂ ವಿಧೇಯರಾಗಿ ನಡೆದುಕೊಳ್ಳುವುದಿಲ್ಲ. ಅವರು ವಿಧೇಯತೆಯಿಂದ ಜೀವನ ಸಾಗಿಸಿದರೆ ಮಾತ್ರ ಸಾಕ್ಷಾತ್ಕಾರದ ಬಾಳ್ವೆ ಅವರಿಗೆ ದೊರಕುವುದು. ಆದರೆ ಅನೀತಿವಂತರೆನಿಸಿಕೊಂಡವರು ತಮ್ಮ ಮಾರ್ಗಗಳನ್ನು ಸರಿಪಡಿಸಿಕೊಂಡು ಜೀವಿಸಿದರೆ ಮಾತ್ರ ಪರಮೋನ್ನತಿಗೆ ಪಾತ್ರರಾಗುವರು. ಕ್ರೈಸ್ತರಾದ ನಾವು ನೀತಿವಂತರೆನಿಸಿಕೊಂಡು ನಮ್ಮ ಜೀವನದ ಮಾರ್ಗಗಳನ್ನು ಸರಿಪಡಿಸಿಕೊಳ್ಳುತ್ತಾ ಪ್ರಭುವನ್ನು ಹಿಂಬಾಲಿಸಲು ಈ ಬಲಿ ಪೂಜೆಯು ನಮಗೆಲ್ಲರಿಗೂ ನೆರವಾಗಲಿ.
ಮೊದಲನೆಯ ವಾಚನ - ಯೆಜಕೀಯೇಲ 18:25-28
========================
ಹಿಬ್ರೀಯರು ತಮ್ಮ ಪೂರ್ವಜರ ಪಾಪದೋಷಗಳು ಅಳಿಯದೇ ಎಂದಿಗೂ ಉಳಿಯುವವು ಮತ್ತು ದೇವರು ಅವರ ವಂಶಜರನ್ನು ಇದಕ್ಕಾಗಿ ಶಿಕ್ಷೆಗೆ ಒಳಪಡಿಸುತ್ತಾರೆ ಎಂದು ನಂಬುತ್ತಿದ್ದುದರಿಂದ ಈ ಮನೋಭಾವನೆಯನ್ನು ಯೆಜಕಿಯಲ್ ಪ್ರವಾದಿ ಅಲ್ಲಗಳೆಯುತ್ತಾರೆ.ಹೀಗೆ ಜನರು ದೇವರ ಮಾರ್ಗಗಳು ಅನ್ಯಾಯದಿಂದ ತುಂಬಿವೆ ಎಂದು ದೂರುವುದನ್ನು ಬಿಟ್ಟು ತಮ್ಮ ಮಾರ್ಗಗಳನ್ನು ಬದಲಾಯಿಸಿಕೊಂಡು ದೇವರಿಗೆ ವಿಧೇಯರಾಗಿರಬೇಕೆಂದು ಆದೇಶಿಸುವುದನ್ನು  ಇಂದಿನ ಮೊದಲನೆಯ ವಾಚನದಲ್ಲಿ ಆಲಿಸುತ್ತೇವೆ. 
ಎರಡನೆಯ ವಾಚನ - ಫಿಲಿಪ್ಪಿ 2:1-11
=========================
ಸಂತ ಪೌಲರು ಫಿಲಿಪ್ಪಿಯರಿಗೆ ಬರೆದ ಪತ್ರದಲ್ಲಿ ದೀನನಾಗಿದ್ದ ಯೇಸುವಿನ ಗುಣಗಾನ ಮಾಡುತ್ತಾ ದೇವಸ್ವರೂಪಿ ತಾನಾಗಿದ್ದರೂ ದೇವ ಪದವಿಗೆ ಅಂಟಿಕೊಳ್ಳದೆ ವಿನಯ ಮತ್ತು ವಿಧೇಯತೆಗಳನ್ನು ಶಿಲುಬೆಯ ಮರಣದ ಪರಿಯಂತ ತೋರ್ಪಡಿಸಿ ಪರಮೋನ್ನತಿಗೇರಿದರು ಎಂಬ ಸಂದೇಶವನ್ನು ಆತ್ಮೀಯತೆಯಿಂದ ಹೇಳುವುದನ್ನು ಇಂದಿನ ಎರಡನೆಯ ವಾಚನದಲ್ಲಿ ಆಲಿಸುತ್ತೇವೆ.
ಶುಭಸಂದೇಶ - ಮತ್ತಾಯ 21:28-32
=========================
ಪ್ರಭು ಕ್ರಿಸ್ತರು ತಮ್ಮ ಶಿಷ್ಯರನ್ನುದ್ದೇಶಿಸಿ ಸಾಮತಿಗಳ ಮೂಲಕ ಉಪದೇಶಿಸಿರುವುದರಿಂದ ಶಿಷ್ಯರಿಗೆ ತುಂಬಾ ಸರಳವಾಗಿ ಸುಲಭವಾಗಿ ಅರ್ಥವಾಗುತ್ತಿತ್ತು ಮಾತ್ರವಲ್ಲ ಪ್ರಭುವಿನ ವಿರೋಧಿಗಳು ಕೂಡ ಸಾಮತಿಗಳ ಮೂಲಕ ಹೇಳಿದ ಸಂದೇಶವನ್ನು ಆರ್ಥ ಮಾಡಿಕೊಂಡು ತಮ್ಮ ಜೀವನ ಬದಲಾಯಿಸಿಕೊಂಡ ಪ್ರಸಂಗಗಳು  ಇಲ್ಲದಿಲ್ಲ. ಇಂತಹ ಅನೇಕ ಉದಾರಣೆಗಳನ್ನು ನಾವು ನೋಡುವುದಾದರೆ 2 ಸಮು 22:1 ‘ನಾತಾನನು ದಾವೀದನಿಗೆ ತನ್ನ ತಪ್ಪಿನ ಅರಿವನ್ನು ಮಾಡಿಸಿ, ದಾವೀದನು ಸರ್ವೇಶ್ವರನನ್ನು ಸ್ತುತಿಸುವಂತಾಯಿತು’. ಮತ್ತು 2 ಸಮು 14:2 ‘ತೆಕೋವದಿಂದ ಬಂದ ಮಹಿಳೆ ದಾವೀದನು ಶೋಕ ವಸ್ತ್ರಗಳನ್ನು ಧರಿಸಿಕೊಳ್ಳುವುದರ ಬಗ್ಗೆ ತಿಳಿಸುತ್ತಾಳೆ’. ಇಂತಹ ಪರಿವರ್ತನೆ ಮಾಡುವ ಸಾಮತಿಗಳು ಪಾಪಿಗಳು  ತಮ್ಮನ್ನು ತಾವೇ ತಪ್ಪಿತಸ್ಥರೆಣಿಸಿಕೊಳ್ಳುವಂತೆ ಮಾಡುತ್ತವೆ. ಅದನ್ನೆ ಪ್ರಭು ಯೇಸು ಮತ್ತಾಯ 21:28 “ ಈ ಬಗ್ಗೆ ನಿಮಗೇನೆನಿಸುತ್ತದೆ ?” ಎಂದು ಕೇಳುತ್ತಾರೆ.
1.        ಈ ಸಾಮತಿಯಲ್ಲಿ ಇಬ್ಬರು ಮಕ್ಕಳು ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸ ಮಾಡಲು ಕರೆಯನ್ನು ಪಡೆದವರು. ಆದರೂ ದೇವರ ದೃಷ್ಠಿಯಲ್ಲಿ ಸುಂಕದವರು ಮತ್ತು ವೇಶ್ಯರಿಗಿಂತಲೂ ಕನಿಷ್ಠನೆನಿಸಿಕೊಂಡ.
2.        ಈ ಸಾಮತಿಯು ಎರಡು ರೀತಿಯ ವ್ಯಕ್ತಿಗಳನ್ನು ಸೂಚಿಸುತ್ತದೆ. ಮೊದಲನೆಯವರು ವಾಗ್ದಾನ ಮಾಡದಿದ್ದರೂ ಕೆಲಸವನ್ನು ಮಾಡಿ ಮುಗಿಸಿದವರು. (ಮೊದಲನೆಯ ಮಗನನ್ನು ಹೋಲುತ್ತಾರೆ) ಎರಡನೆಯವರು ವಾಗ್ದಾನ ಮಾಡಿಯೂ ಅದನ್ನು ಪಾಲಿಸದವರು (ಎರಡನೆಯ ಮಗನನ್ನು ಹೋಲುತ್ತಾರೆ)
3.        ಇಬ್ಬರೂ ಮಕ್ಕಳು ತಂದೆಗೆ ಶೋಭೆಯನ್ನೂ, ಸಂತೋಷವನ್ನೂ ತರಬೇಕಿತ್ತು. ಆದರೂ ಮೊದಲನೆಯ ಮಗ ತನ್ನತಪ್ಪಿಗೆ ಪಶ್ಚಾತ್ತಾಪ ಪಟ್ಟು ಕೊನೆಗಾದರೂ ತಂದೆಯ ಆಜ್ಞೆಗೆ ವಿಧೇಯತೆಯನ್ನೂ  ಗೌರವವನ್ನೂ ತೋರಿಸಿದ.
4.        ಪೋಷಕರು ಮಕ್ಕಳನ್ನು ಸೋಮಾರಿಗಳಾಗಿ ಬೆಳೆಸಬಾರದು ಎಂಬ ಸಂದೇಶ ಇಲ್ಲಿ ವೇದ್ಯವಾಗುತ್ತದೆ. ಪ್ರಲಾಪ 3:27 ರಲ್ಲಿ ತಿಳಿಸುವಂತೆ ‘ಯೌವನದಿಂದಲೇ ನೊಗ ಹೊತ್ತರೆ ಮಾನವನಿಗೆ ಅದು ಹಿತಕರ’. ‘ಮಗನೇ ಈ ಹೊತ್ತು ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸ ಮಾಡು’. ತಂದೆಯ ಈ ಆಜ್ಞೆ ಪಾಲಿಸಿದವರಿಗೆ ತಂದೆಯ ಪ್ರೀತಿ, ಕರುಣೆ ಲಭ್ಯವಾಗಲಿದೆ. 
5.        ಈ ಸಾಮತಿಯಲ್ಲಿ ಯೆಹೂದ್ಯರು, ಫರಿಸಾಯರು, ಸದ್ದುಕಾಯರು, ದೇವರಿಗೆ ವಿಧೇಯರಾಗಿ ನಡೆಯಬೇಕಾದವರು ನುಡಿದಂತೆ ನಡೆದುಕೊಳ್ಳದೇ ಅವಿಧೇಯರಾದರು.  ಆದರೆ ಸುಂಕದವರು ವೇಶ್ಯಾವಾಟಿಕೆಯವರು ಮೊದಲಲ್ಲಿಅಡ್ಡದಾರಿಯಲ್ಲಿ  ನಡೆದುಕೊಂಡರಾದರೂ ಆಮೇಲೆ ದೇವರ ಹಾದಿಯನ್ನು ಹಿಡಿದು ನಡೆದರು. 
ಕ್ರೈಸ್ತರಾದ ನಾವು ಕೇವಲ ಪ್ರಭುವನ್ನು ಹಿಂಬಾಲಿಸುತ್ತೇವೆ ಎಂದು ಹೇಳಿಕೊಂಡರೆ ಸಾಲದು ಬದಲಾಗಿ ಅದನ್ನು ಕಾರ್ಯರೂಪದಲ್ಲಿ ತೋರ್ಪಡಿಸಬೇಕು.  ಕ್ರೈಸ್ತರ ಜೀವನ ವಿಧೇಯತೆಯ ಮೇಲೆ ಅವಲಂಬಿತ.  ಕಾರಣ ಪ್ರಭು ಯೇಸುಕ್ರಿಸ್ತರು ವಿಧೆಯತೆಯನ್ನು ನಮಗೆ ತೋರಿಸಿದ ಮಹಾನ್ ಚೇತನ. ಫರಿಸಾಯರ, ಸದ್ದುಕಾಯರ ಮತ್ತು ಧರ್ಮಶಾಸ್ತ್ರಿಗಳ ಧರ್ಮನಿಷ್ಠೆಗಿಂತ ಪ್ರಭುವಿನ ಮಾರ್ಗವನ್ನು ಅನುಷ್ಠಾನಕ್ಕೆ ತರುವವರೇ ಧನ್ಯರು. ಕೀರ್ತನೆ 10:4 “ಸೊಕ್ಕೇರಿದ ಮುಖದವನು ಪ್ರಭುವನ್ನು ಅರಸುವುದಿಲ್ಲ. ಅವನ ಮನದೊಳಿದೆಂದೇ ಭಾವನೆ, ‘ದೇವರೇ ಇಲ್ಲ’.” ನಾವು ದೇವರಿಗೆ ವಿಧೇಯರೋ? ಅವಿಧೇಯರೋ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಹುಡುಕುವ ಮನಸ್ಸು ಮತ್ತು ಹೃದಯವನ್ನು ದೇವರು ನಮಗೆ ನೀಡಲಿ ಎಂದು ಪ್ರಾರ್ಥಿಸೋಣ.
====================
ಚಿಂತನೆ – ಫಾ ಸ್ಟೀವನ್ ಡಿ’ಸಾ, ಶಿವಮೊಗ್ಗ ಧರ್ಮಾಕ್ಷೇತ್ರ
=====================

No comments:

Post a Comment