ಅಕ್ಟೋಬರ್ 27, 2020 ಮಂಗಳವಾರ [ಹಸಿರು]
ಮೊದಲ ವಾಚನ: ಎಫೆಸದವರಿಗೆ 5.22-33
ಕೀರ್ತನೆ 128: 1-5. ಶ್ಲೋಕ.4
ಹೊಂದುವನು ಆಶೀರ್ವಾದವನು
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು
ಶುಭಸಂದೇಶ: ಲೂಕ 13.18-21
==================
ಮೊದಲನೇ ವಾಚನ
ಎಫೆಸದವರಿಗೆ 5.22-33
22 : ಮಹಿಳೆಯರೇ, ನೀವು ಪ್ರಭುವಿಗೆ ಹೇಗೋ ಹಾಗೆ ನಿಮ್ಮ ನಿಮ್ಮ ಪತಿಯರಿಗೆ ವಿಧೇಯರಾಗಿರಿ.
23 : ಕ್ರಿಸ್ತಯೇಸು ಧರ್ಮಸಭೆಯೆಂಬ ದೇಹಕ್ಕೆ ಶಿರಸ್ಸಾಗಿರುವ ಹಾಗೆಯೇ, ಪತಿಯಾದವನು ತನ್ನ ಪತ್ನಿಗೆ ಶಿರಸ್ಸಾಗಿರುತ್ತಾನೆ. ಕ್ರಿಸ್ತಯೇಸುವೇ ಧರ್ಮಸಭೆಯ ಉದ್ಧಾರಕ.
24 : ಧರ್ಮಸಭೆ ಕ್ರಿಸ್ತಯೇಸುವಿನ ಆಡಳಿತಕ್ಕೆ ಒಳಪಟ್ಟಿರುವಂತೆ ಪತ್ನಿಯೂ ಸಹ ಎಲ್ಲಾ ವಿಷಯಗಳಲ್ಲೂ ತನ್ನ ಪತಿಯ ಆಡಳಿತಕ್ಕೆ ಒಳಪಟ್ಟಿರಬೇಕು.
25 : ಪುರುಷರೇ, ಕ್ರಿಸ್ತಯೇಸು ಧರ್ಮಸಭೆಯನ್ನು ಪ್ರೀತಿಸಿದ ಪ್ರಕಾರ ನಿಮ್ಮ ನಿಮ್ಮ ಪತ್ನಿಯರನ್ನು ಪ್ರೀತಿಸಿರಿ. ಧರ್ಮಸಭೆಯನ್ನು ಪಾವನಗೊಳಿಸುವುದಕ್ಕಾಗಿ ಕ್ರಿಸ್ತಯೇಸು ತಮ್ಮ ಪ್ರಾಣವನ್ನೇ ಕೊಟ್ಟರು.
26 : ವಾಕ್ಯೋಪದೇಶದಿಂದಲೂ ಜಲಸ್ನಾನದಿಂದಲೂ ಅದನ್ನು ಶುದ್ಧೀಕರಿಸಿದರು.
27 : ಧರ್ಮಸಭೆ ಕಳಂಕಕಲ್ಮಷವಾಗಲಿ, ಸುಕ್ಕು ಬೊಕ್ಕೆಯಾಗಲಿ ಇಲ್ಲದ ಸೌಂದರ್ಯವತಿಯಾಗಿ ತಮಗೆ ಅರ್ಪಿಸಿಕೊಳ್ಳುವಂತೆ ಹೀಗೆ ಮಾಡಿದರು.
28 : ಹಾಗೆಯೇ ಪುರುಷನು ಸಹ ತನ್ನ ಶರೀರವನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನು ಪ್ರೀತಿಸಲಿ. ತನ್ನ ಪತ್ನಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ.
29 : ಸ್ವಂತ ಶರೀರವನ್ನು ಯಾರೂ ಎಂದೂ ದ್ವೇಷಿಸುವುದಿಲ್ಲ, ಬದಲಿಗೆ ಅದನ್ನು ಪೋಷಿಸಿ ಪಾಲನೆ ಮಾಡುತ್ತಾನೆ. ಧರ್ಮಸಭೆಯನ್ನು ಸಹ ಕ್ರಿಸ್ತಯೇಸು ಹೀಗೆಯೇ ಕಾಪಾಡುತ್ತಾರೆ.
30 : ನಾವು ಆ ಸಭೆಯ ಅಂಗಗಳು.
31 : ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “ಈ ಕಾರಣದಿಂದ ಪುರುಷನಾದವನು ತನ್ನ ತಂದೆ ತಾಯನ್ನು ಬಿಟ್ಟು ತನ್ನ ಪತ್ನಿಯೊಡನೆ ಒಂದುಗೂಡುವನು ಮತ್ತು ಅವರಿಬ್ಬರೂ ಒಂದೇ ಶರೀರವಾಗಿರುವರು.”
32 : ಈ ಗಹನವಾದ ರಹಸ್ಯವು ಯೇಸುಕ್ರಿಸ್ತರಿಗೂ ಧರ್ಮಸಭೆಗೂ ಇರುವ ಸಂಬಂಧವನ್ನು ಸೂಚಿಸುತ್ತದೆ ಎಂಬುದೇ ನನ್ನ ಅಭಿಪ್ರಾಯ.
33 : ಆದರೆ ಇದು ನಿಮಗೂ ಅನ್ವಯಿಸುತ್ತದೆ. ಪ್ರತಿಯೊಬ್ಬ ಪುರುಷನು ತನ್ನನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನೂ ಪ್ರೀತಿಸಲಿ ಮತ್ತು ಪ್ರತಿಯೊಬ್ಬ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ ಗೌರವದಿಂದ ನಡೆದುಕೊಳ್ಳಲಿ.
================
ಕೀರ್ತನೆ
ಕೀರ್ತನೆ 128: 1-5. ಶ್ಲೋಕ.4
ಹೊಂದುವನು ಆಶೀರ್ವಾದವನು
ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು
1 : ಧನ್ಯನು, ಪ್ರಭುವಿನಲಿ
ಭಯಭಕ್ತಿಯುಳ್ಳವನು /
ಧನ್ಯನು, ಆತನ ಮಾರ್ಗಗಳಲೇ
ನಡೆಯುವವನು //
2 : ನಿನ್ನ ಕೈಕೆಸರಾದರೆ ಬಾಯಿ
ಮೊಸರಾಗುವುದು /
ಧನ್ಯನಾಗುವೆ ನೀನು;
ನಿನಗೆ ಶುಭವಾಗುವುದು //
3 : ಇರುವಳು ನಿನ್ನ ಪತ್ನಿ ಮನೆಯಲ್ಲಿ
ಫಲಭರಿತ ದ್ರಾಕ್ಷಾಲತೆಯಂತೆ /
ಕೂರುವರು ನಿನ್ನ ಮಕ್ಕಳು
ಊಟದ ಪಂಕ್ತಿಯಲಿ
ಓಲಿವ್ ಸಸಿಗಳಂತೆ //
4 : ಹೊಂದುವನು
ಅಂತಹ ಆಶೀರ್ವಾದವನು /
ಪ್ರಭುವಿನಲಿ
ಭಯಭಕ್ತಿಯುಳ್ಳವನು //
5 : ಸಿಯೋನಿನಲ್ಲಿರುವ ಪ್ರಭು
ನಿನ್ನನು ಆಶೀರ್ವದಿಸಲಿ /
ಜೆರುಸಲೇಮಿನ ಏಳ್ಗೆಯನು
ಕಾಣು ಇಡೀ ಜೀವಮಾನದಲಿ //
===================
ಶುಭಸಂದೇಶ
ಲೂಕ 13.18-21
18 : ಆಗ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ?
19 : ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆ ಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಮಾಡತೊಡಗಿದವು,” ಎಂದರು. ಹುಳಿಹಿಟ್ಟಿನ ಸಾಮತಿ (ಮತ್ತಾ. 13.33)
20 : ಪುನಃ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ,
21 : ಅದು ಹುಳಿಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
ಚಿಂತನೆ
ಯೇಸು ಸ್ವರ್ಗಸಾಮ್ರಾಜ್ಯದ ಆರಂಭದ ಕುರಿತು ಈ ಸಾಮತಿಯ ಮೂಲಕ ತಿಳಿಸುತ್ತಾರೆ. ಗಲಿಲೇಯ ಸರೋವರದ ಸುತ್ತಮುತ್ತ ಬೋಧನೆ, ಆತ್ಮೋದ್ದಾರದ ಕೆಲಸ ಪ್ರಾರಂಭಿಸಿದ ಯೇಸುವಿನ ಕಾರ್ಯಗಳು ಪ್ರಾರಂಭದಲ್ಲಿ ಚಿಕ್ಕದಾಗಿ ಕಂಡರೂ ಮುಂದಿನ ದಿನಗಳಲ್ಲಿ ಅದರ ವ್ಯಾಪ್ತಿ, ಗಾತ್ರ ಹೆಮ್ಮರವಾಗಿ ಬೆಳೆಯಲಿದೆ ಎನ್ನುತ್ತಾರೆ. ಸಾಸಿವೆ ಗಿಡವನ್ನು ನಾವುಕಂಡಿಲ್ಲ. ಆದರೆ ಪ್ಯಾಲೆಸ್ತೀನಿನ ಸಾಸಿವೆಗಿಡವು ಸುಮಾರು ಹತ್ತು ಹನ್ನೆರಡು ಅಡಿಗಳ ಎತ್ತರಕ್ಕೆ ಬೆಳೆಯುತ್ತಿತ್ತ. ಸಾಸಿವೆಕಾಳನ್ನು ತಿನ್ನಲೂ ನಾನಾ ರೀತಿಯ ಪಕ್ಷಿಗಳು ಬರುತ್ತಿದ್ದವು. ಈ ಸಾಮತಿಯ ಮೂಲಕ ಯೇಸು ಸ್ಥಾಪಿಸಲಿದ್ದ ಸ್ವರ್ಗ ಸಾಮ್ರಾಜ್ಯವು ಕೇವಲ ಒಂದು ವರ್ಗದ, ಜಾತಿಯವರಿಗೆ ಮೀಸಲಿಲ್ಲ. ನಾನಾ ರೀತಿಯ ಪಕ್ಷಿಗಳು ಒಂದೇ ಮರದಲ್ಲಿ ವಾಸಿಸುವಂತೆ ಎಲ್ಲಾ ವರ್ಗದವರಿಗೂ, ಧರ್ಮದವರಿಗೂ ಸೇರಿದ್ದು ಎಂದು ತಿಳಿಸಲಿಚ್ಚಿಸುತ್ತಾರೆ. ದೊಡ್ಡ ವಿಷಯಗಳು ಪ್ರಾರಂಭವಾಗುವುದು ಸಣ್ಣ ವಿಷಯಗಳಿಂದಲೇ ಪ್ಯಾಲಿಸ್ತೀನ್ ನಾಡಿನಲ್ಲಿ ಸ್ಥಾಪಿಸಿದ ಸಾಮ್ರಾಜ್ಯವು ಇಂದು ಜಗತ್ತಿನಾದ್ಯಾಂತ ಹಬ್ಬಿಕೊಂಡಿರುವುದನ್ನು ನೋಡಿದಾಗ ಈ ಸಾಮತಿಯ ಸತ್ಯ ಅರಿವಾಗುತ್ತದೆ.
===================
No comments:
Post a Comment