Sunday, 22 November 2020

ಸೆಪ್ಟೆಂಬರ್ 29, 2020 ಮಂಗಳವಾರ

 ಸೆಪ್ಟೆಂಬರ್ 29, 2020 ಮಂಗಳವಾರ                        [ಬಿಳಿ]
ಸಂತರಾದ ಮಿಖಯೇಲ್, ಗಬ್ರಿಯೇಲ್ ಮತ್ತು ರಫಯೇಲ್, ಪ್ರಧಾನ ದೂತರು
ಮೊದಲ ವಾಚನ: ದಾನಿ 7.9-10, 13-14 
(ಪರ್ಯಾಯ) ಪ್ರಕಟನ 12.7-12 
ಕೀರ್ತನೆ 138:1-5. ಶ್ಲೋಕ.1
ಹೃದಯಪೂರ್ವಕ ವಂದನೆ ಪ್ರಭೂ ನಿನಗೆ, 
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ
ಶುಭಸಂದೇಶ: ಯೊವಾನ್ನ 1.47-51
==================
ಮೊದಲನೇ ವಾಚನ
ದಾನಿ 7.9-10, 13-14
9 : ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.
10 : ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು.
13 : ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು.
14 : ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!
==================
ಕೀರ್ತನೆ 
ಕೀರ್ತನೆ 138:1-5. ಶ್ಲೋಕ.1
ಹೃದಯಪೂರ್ವಕ ವಂದನೆ ಪ್ರಭೂ ನಿನಗೆ, 
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ
1 : ಹೃದಯಪೂರ್ವಕ ವಂದನೆ ಪ್ರಭು ನಿನಗೆ / 
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ //
2 : ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ / 
ನಿನ್ನ ಪ್ರೀತಿಸತ್ಯತೆಗಳ, ನಾಮ ನುಡಿಗಳ ಮಹತ್ವದ ಪ್ರಯುಕ್ತ //   
    
3 : ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು / 
ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು //
4 : ನಿನ್ನ ಗುಣಗಾನ ಮಾಳ್ಪರು ಪ್ರಭು, ಭೂರಾಜರೆಲ್ಲರು / 
ಏಕೆನೆ, ನೀ ಉಸುರಿದ ನುಡಿಗಳನು ಕೇಳ್ವರವರೆಲ್ಲರು // 
5 : ಪ್ರಭುವಿನ ಮಹಿಮೆಯು ಮಹೋನ್ನತ ಎನ್ನುವರು / 
ಆತನ ಮಾರ್ಗಗಳನು ಹಾಡಿ ಹರಸುವರು //
==================
ಯೊವಾನ್ನ 1.47-51
47 : ತಮ್ಮ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡ ಯೇಸು, “ಇಗೋ ನೋಡಿ, ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,” ಎಂದು ನುಡಿದರು.
48 : ನತಾನಿಯೇಲನು, “ನನ್ನ ಪರಿಚಯ ನಿಮಗೆ ಹೇಗಾಯಿತು?” ಎಂದು ಕೇಳಲು ಯೇಸು, “ಫಿಲಿಪ್ಪನು ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,” ಎಂದು ಉತ್ತರ ಕೊಟ್ಟರು.
49 : ಅದಕ್ಕೆ ನತಾನಿಯೇಲನು “ಗುರುದೇವಾ, ದೇವರ ಪುತ್ರ ನೀವೇ; ಇಸ್ರಯೇಲರ ಅರಸ ನೀವೇ,” ಎಂದನು.
50 : ಆಗ ಯೇಸು, “ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆ ಎಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದುವುಗಳನ್ನು ನೀನು ಕಾಣುವೆ,” ಎಂದು ನುಡಿದರು.
51 ತಮ್ಮ ಮಾತನ್ನು ಮುಂದುವರಿಸುತ್ತಾ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,” ಎಂದು ಹೇಳಿದರು.
===================
ಚಿಂತನೆ
ಇಂದಿನ ಶುಭಸಂದೇಶದಲ್ಲಿ ಯೇಸು ನತಾನಿಯೇಲನನ್ನು ಕಂಡು ‘ಕಪಟವಿಲ್ಲದ ಇಸ್ರಯೇಲ’ ಎಂದು ಸಂಬೋಧಿಸುತ್ತಾರೆ. ಕಪಟವಿಲ್ಲದ್ದು ಎಂದರೆ ಮೋಸ, ಸಂಚು, ಕುತಂತ್ರವಿಲ್ಲದ ಶುದ್ಧ ನಿರ್ಮಲ ಭಾವನೆ.   
ಪ್ರವಾದಿಗಳು ಪ್ರವಚಿಸಿದ ವ್ಯಕ್ತಿ ನಜರೇತಿನ ಯೇಸುವೇ ಎಂದು ಫಿಲಿಪ್ಪನ ಬಾಯಿಂದ ಕೇಳಿದ ನತಾನಿಯೇಲ, ‘ನಜರೇತಿನಿಂದೇನಾದರೂ ಒಳ್ಳೆಯದು ಬರುವುದುಂಟೇ?', ಎಂದು ಕೇಳಿದ ಪ್ರಶ್ನೆ ಹೊರನೋಟಕ್ಕೆ ಆಕ್ಷೇಪಣೆಯಾದರೂ, ಯಾವುದೇ ಇಸ್ರಾಯೇಲಿನವರಲ್ಲಿ ಸಹಜವಾಗಿ ಮೂಡಿ ಬರುವ ಸಂದೇಹವಾಗಿತ್ತು. ಇದು ಆತ ತನ್ನ ಮುಗ್ಧತೆಯಲ್ಲಿ ಮತ್ತಷ್ಟು ವ್ಯಕ್ತವಾಗಿ ತೋಡಿಕೊಳ್ಳಲು ತೋರಿದ ತವಕವಾಗಿತ್ತೇ ವಿನಾ ಯೇಸುವನ್ನು ನಿರಾಕರಿಸುವಂಹದ್ದಲ್ಲ.  ಬಹುಶಃ ಆತನ ನಿಷ್ಕಲ್ಮಷತೆಯನ್ನು ಕುರಿತೇ ಆತನನ್ನು ಯೇಸು ‘ಕಪಟವಿಲ್ಲದ ಇಸ್ರಯೇಲ’ ಎಂದು ಗುರುತಿಸುತ್ತಾರೆ. ಶುಭಸಂದೇಶದ ಮುಂದುವರೆದ ಭಾಗದಲ್ಲಿ ಇದಕ್ಕೂ ಮಿಗಿಲಾದವುಗಳನ್ನಲ್ಲದೇ, ಸ್ವರ್ಗವನ್ನು, ದೂತಗಣಗಳನ್ನು ಕಾಣುವೆ ಎಂದು ಆಶ್ವಾಸಿಸಿ, ‘ನಿರ್ಮಲ ಹೃದಯಿಗಳು ದೇವರನ್ನು ಕಾಣುವರು’ ಎಂಬ ಅಷ್ಟಭಾಗ್ಯಗಳಲ್ಲೊಂದನ್ನು ನೆನಪಿಸುತ್ತಾರೆ.
 ತಾಯಿ ಧರ್ಮಸಭೆ ಇಂದು ಮೂರು ಪ್ರಧಾನದೂತರ ಹಬ್ಬವನ್ನು ಆಚರಿಸುತ್ತದೆ. ಗಾಬ್ರಿಯೇಲ್ ದೂತ (ದೈವ ಸಂದೇಶಗಾರ) ಮೈಕಲ್ ದೂತ (ದೈವ ಸಂರಕ್ಷಕ) ರಫಾಯೇಲ ದೂತ (ದೈವ ಚಿಕಿತ್ಸಕ) – ಅಸಂಖ್ಯ ದೈವದೂತಗಣಗಳಲ್ಲಿ ವಿಭಿನ್ನರೂ, ಪ್ರಧಾನರೂ ಎನಿಸುವ ಈ ಮೂವರು ದೇವರ ಸ್ತುತಿಕಾರ್ಯದ ಜೊತೆಗೆ ಅವರ ಚಿತ್ತವನ್ನು ಇಹಲೋಕಕ್ಕೆ ತರುವವರೂ ಅಹುದು. 
ಪ್ರಧಾನದೂತರಂತೆ ನಾವು ಸಹ ದೇವರವಾಕ್ಯವನ್ನು ಇತರರಿಗೆ ಸಾರುವ, ಒಳ್ಳೆಯ ಕೆಲಸಕಾರ್ಯಗಳಿಂದ ಕೆಟ್ಟತನವನ್ನು ದೂರಮಾಡುವ ಹಾಗೂ ಅಗತ್ಯವಿದ್ದವರ ನೆರವಿಗೆ ಧಾವಿಸುವ ಮನಸ್ಸುಳ್ಳವರಾಗೋಣ; ನಮ್ಮ ಭಕ್ತಿ ಜೀವನದ ಮೂಲಕ ದೇವರನ್ನು ಸದಾ ಸುತ್ತಿಸಿ ಕೊಂಡಾಡೋಣ. 
===================

No comments:

Post a Comment