ಸೆಪ್ಟೆಂಬರ್ 30, 2020 ಬುಧವಾರ [ಬಿಳಿ]
ಸಂತ ಜೆರೋಮ್, ಯಾಜಕ ಮತ್ತು ಧರ್ಮಸಭೆಯ ಪಂಡಿತ (ಸ್ಮರಣೆ)
ಮೊದಲ ವಾಚನ: ಯೋಬ 9.1-12, 14-16
ಕೀರ್ತನೆ 88:9-14. ಶ್ಲೋಕ.2
ಓ ಪ್ರಭೂ, ನನ್ನ ಕೂಗು ನಿನ್ನ ಕಿವಿಗೆ ಬೀಳಲಿ
ಶುಭಸಂದೇಶ: ಲೂಕ 9.57-62
===============
ಮೊದಲನೇ ವಾಚನ
ಯೋಬ 9.1-12, 14-16
1 : ಅದಕ್ಕೆ ಯೋಬನು ಉತ್ತರಿಸುತ್ತಾ ಹೀಗೆಂದನು:
2 : “ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು?
3 : ಯಾರಾದರೂ ಆತನೊಡನೆ ವಾದಿಸಲು ಇಷ್ಟಪಟ್ಟರೂ ಆತನ ಸಹಸ್ರ ಪ್ರಶ್ನೆಗಳೊಂದಕ್ಕೂ ಉತ್ತರಿಸಲಾಗದು.
4 : ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.
5 : ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ.
6 : ಅದರ ಸ್ಥಾನದಿಂದ ಭೂಮಿಯನೆ ಕದಲಿಸುತ್ತಾನೆ ಅದರ ಸ್ತಂಭಗಳು ನಡುಗುವಂತೆ ಮಾಡುತ್ತಾನೆ.
7 : ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನೂ ಉದಯಿಸನು ಮುದ್ರೆಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು.
8 : ಆಕಾಶಮಂಡಲವನ್ನು ಹರಡಿದವನು ದೇವರೇ ಕಡಲಿನ ತರಂಗಗಳನ್ನು ಮೆಟ್ಟಿದವನು ಆತನೊಬ್ಬನೇ.
9 : ದಕ್ಷಿಣದ ನಕ್ಷತ್ರಗ್ರಹಗಳನೂ ಸಪ್ತರ್ಷಿ ಮಂಡಲವನೂ ಮೃಗಶಿರವನ್ನೂ ಕೃತ್ತಿಕೆಯನೂ ನಿರ್ಮಿಸಿದವನು ಆತನೇ.
10 : ಅಪ್ರತಿಮ ಮಹಾಕಾರ್ಯಗಳನ್ನು ಎಸಗಿರುವನು ಅಸಂಖ್ಯ ಅದ್ಭುತಕರ ಪವಾಡಗಳನು ಮಾಡಿರುವನು.
11 : ಇಗೋ, ಪಕ್ಕದಲ್ಲೇ ಆತ ದಾಟಿಹೋದರೂ ಕಾಣಿಸನು ನನ್ನ ಮುಂದುಗಡೆಯೇ ಹಾದು ಹೋದರೂ ತಿಳಿಯದು.
12 : ಕಿತ್ತುಕೊಂಡು ಹೋಗುವ ಆತನಿಗೆ ಅಡ್ಡಿಮಾಡುವವರಾರು? ‘ಏನು ಮಾಡುತ್ತಿರುವೆ?’ ಎಂದು ಆತನನ್ನು ಕೇಳುವವರಾರು?
14 : ದೇವರೊಂದಿಗೆ ವಾದಿಸಲು ನಾನು ಅಶಕ್ತನು ಆತನಿಗೆ ತಕ್ಕ ಉತ್ತರ ಕೊಡಲು ನಾನೆಷ್ಟರವನು!
15 : ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು ನನ್ನ ನ್ಯಾಯಾಧೀಶನಲ್ಲಿ ದಯೆಯನು ಕೋರುವೆನು.
16 : ನಾನು ಕರೆದಾಗ ಓಗೊಟ್ಟಿದ್ದರೂ ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು ನಂಬುತ್ತಿರಲಿಲ್ಲ.
===================
ಕೀರ್ತನೆ
ಕೀರ್ತನೆ 88:09-14. ಶ್ಲೋಕ.2
ಓ ಪ್ರಭೂ, ನನ್ನ ಕೂಗು ನಿನ್ನ ಕಿವಿಗೆ ಬೀಳಲಿ
9 : ರಕ್ಷಿಸುವನು ಪ್ರಭು ಪರದೇಶಿಗಳನು /
ಆದರಿಸುವನು ಅನಾಥರನು, ವಿಧವೆಯರನು /
ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು //
10 : ಮೃತರು ನಿನ್ನದ್ಭುತಗಳನು ಮೆಚ್ಚುವುದುಂಟೆ /
ಸತ್ತ ಜನರೆದ್ದು ನಿನ್ನ ಸ್ತುತಿಸುವುದುಂಟೆ?//
11 : ಸಾರುವುದುಂಟೆ ಸಮಾಧಿಯಲಿ ನಿನ್ನ ಕೃಪೆಯನು?/
ಅಧೋಲೋಕದಲಿ ನಿನ್ನ ಪ್ರಾಮಾಣಿಕತೆಯನು?//
12 : ತಿಳಿವರೆ ನಿನ್ನ ಪವಾಡಗಳನು ಇರುಳ ನಿಶೆಯೊಳು?/
ನಿನ್ನ ನ್ಯಾಯ ನೀತಿಯನು ಮರೆವಾ ಲೋಕದೊಳು?//
13 : ನಾನಾದರೋ ಪ್ರಭೂ, ಮೊರೆಯಿಡುವೆ ನಿನಗೆ /
ಉದಯದಲೆ ಸೇರುವುದೆನ್ನ ಜಪ ನಿನ್ನ ಸನ್ನಿಧಿಗೆ //
14 : ಪ್ರಭು, ನನ್ನ ತಳ್ಳಿಬಿಟ್ಟೆಯೇಕೆ?/
ಮುಖವನು ತಿರುಗಿಸಿಕೊಂಡೆಯೇಕೆ?//
===================
ಶುಭಸಂದೇಶ
ಲೂಕ 9.57-62
57 : ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಯೇಸುವಿಗೆ, “ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ,” ಎಂದನು.
58 : ಯೇಸು ಅವನಿಗೆ, “ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ,” ಎಂದರು.
59 : ಇನ್ನೊಬ್ಬನಿಗೆ ಯೇಸು, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದಾಗ ಅವನು, “ಸ್ವಾವಿೂ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸುವ ತನಕ ಸಮಯಕೊಡಿ,” ಎಂದನು.
60 : ಅವನಿಗೆ ಯೇಸು, “ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ, ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು,” ಎಂದು ಹೇಳಿದರು.
61 : ಮತ್ತೊಬ್ಬನು, “ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆ ಆಗಬೇಕು,” ಎಂದನು.
62 ಯೇಸು ಅವನನ್ನು ನೋಡಿ, “ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ,” ಎಂದರು.
===================
ಚಿಂತನೆ
ಪೂರ್ಣ ಹೃದಯದಿಂದ ಪೂರ್ಣ ಮನಸಿನಿಂದ ಕ್ರಿಸ್ತನನ್ನು ಪ್ರಿತಿಸುವವನು ಆತನ ಶಿಷ್ಯನಾಗಲು ಯೋಗ್ಯನು. ಈ ಲೋಕದ ಸುಖ, ಸಂಪತ್ತು, ಐಶ್ವರ್ಯದಲ್ಲಿ ಅತಿಯಾದ ಆಸೆಯನ್ನು ಹೊಂದಿದವನಿಗೆ ಕ್ರಿಸ್ತನನ್ನು ಅನುಕರಿಸಲು ಸಾಧ್ಯವಿಲ್ಲ. ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿ ಕ್ರಿಸ್ತನಿಗಾಗಿ ತನ್ನೆಲ್ಲವನ್ನೂ ತ್ಯಜಿಸಿ ಕ್ರಿಸ್ತಮಾರ್ಗದಲ್ಲಿ ನಡೆಯುವವನು ಕ್ರಿಸ್ತನ ಪರಮ ಶಿಷ್ಯ.
==================="
No comments:
Post a Comment